ಶುಕ್ರವಾರ, ಅಕ್ಟೋಬರ್ 31, 2025

ಕಾಗದನಗರ ಕನ್ನಡ ಮಿತ್ರರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ದತೆ

ಸುಮಾರು ೪ ದಶಕಗಳ ಇತಿಹಾಸ ಹೊಂದಿರುವ ಭದ್ರಾವತಿ ಕಾಗದನಗರದ ಕನ್ನಡ ಮಿತ್ರರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ದತೆಗಳನ್ನು ನಡೆಸಲಾಗಿದೆ. 
    ಭದ್ರಾವತಿ : ಸುಮಾರು ೪ ದಶಕಗಳ ಇತಿಹಾಸ ಹೊಂದಿರುವ ಕಾಗದನಗರದ ಕನ್ನಡ ಮಿತ್ರರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ದತೆಗಳನ್ನು ನಡೆಸಲಾಗಿದೆ. 
    ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಕಾರ್ಮಿಕರು ಹಾಗು ಕುಟುಂಬ ವರ್ಗದವರು ಒಂದೆಡೆ ಸೇರಿ ಕನ್ನಡ ರಾಜ್ಯೋತ್ಸವ ಆಚರಿಸಲು ಮುಂದಾದ ಹಿನ್ನಲೆಯಲ್ಲಿ ಈ ಸಂಘ ಅಸ್ತಿತ್ವಕ್ಕೆ ಬಂದಿತು. ಈ ಹಿಂದೆ ಸುಮಾರು ೧ ತಿಂಗಳ ಕಾಲ ವಿವಿಧ ಕ್ರೀಡಾ ಸ್ಪರ್ಧೆಗಳು, ನಾಟಕ, ನೃತ್ಯ, ಆರ್ಕೇಸ್ಟ್ರಾ, ಚಲನಚಿತ್ರ ಪ್ರದರ್ಶನ ಸೇರಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದವು. ಒಂದು ರೀತಿಯ ವೈಭವ ಅನಾವರಣಗೊಳ್ಳುತ್ತಿತ್ತು. ಕಾರ್ಖಾನೆ ಅವನತಿ ದಾರಿ ಹಿಡಿದಂತೆ ಕಾರ್ಮಿಕರು ಹಾಗು ಕುಟುಂಬ ವರ್ಗದವರು ಬೇರೆಡೆಗೆ ವಲಸೆ ಹೋಗಲು ಆರಂಭಿಸುತ್ತಿದ್ದಂತೆ ಎಲ್ಲವೂ ಕ್ಷೀಣಿಸುತ್ತಾ ಬಂದಿದ್ದು, ಕಳೆದ ಸುಮಾರು ೧ ದಶಕದಿಂದ ಕಾರ್ಮಿಕರು, ಕುಟುಂಬ ವರ್ಗದವರಿಲ್ಲದೆ ಪಾಳು ಬಿದ್ದು, ಬಿಕೋ ಎನ್ನುತ್ತಿರುತ್ತಿರುವ ಸ್ಥಳದಲ್ಲಿ ಅಳಿದುಳಿದಿರುವ ನಿವೃತ್ತ ಕಾರ್ಮಿಕರು, ಕುಟುಂಬ ವರ್ಗದವರು ಹಾಗು ಸಮೀಪದ ನಿವಾಸಿಗಳು ಒಗ್ಗೂಡಿ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಕಾರ್ಖಾನೆಯ ಪುನಃ ಆರಂಭಗೊಂಡು ವೈಭವದ ದಿನಗಳನ್ನು ಮರಳಿ ನೋಡಲು ಎದುರು ನೋಡುತ್ತಿದ್ದಾರೆ. 
    ಮಯೂರ ಮಂಟಪದ ಮುಂಭಾಗ ನ.೧ರ ಬೆಳಿಗ್ಗೆ ೧೦ ಗಂಟೆಗೆ ಧ್ವಜಾರೋಹಣ ನಡೆಯಲಿದ್ದು,  ಎಂಪಿಂಎಂ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷರಾದ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ