ಮಂಗಳವಾರ, ನವೆಂಬರ್ 11, 2025

ಪೌರಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುವುದು ಸಮಾಜದ ಕರ್ತವ್ಯ: ಡಾ:ಟಿ.ನರೇಂದ್ರಭಟ್

ಭದ್ರಾವತಿಯಲ್ಲಿ ಲಯನ್ಸ್ ಕ್ಲಬ್ ಶುಗರ್‌ಟೌನ್ ಹಾಗು ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ಶುಗರ್‌ಟೌನ್ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ನಗರಸಭೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಲಯನ್ಸ್ ಕ್ಲಬ್ ಶುಗರ್‌ಟೌನ್ ಸಂಸ್ಥಾಪಕ ಅಧ್ಯಕ್ಷ, ಹಿರಿಯ ವೈದ್ಯ ಡಾ.ಟಿ ನರೇಂದ್ರಭಟ್ ಉದ್ಘಾಟಿಸಿದರು.
    ಭದ್ರಾವತಿ: ಊರನ್ನು ಸ್ವಚ್ಚಗೊಳಿಸಿ ನಮ್ಮೆಲ್ಲರ ಆರೋಗ್ಯ ಕಾಪಾಡುತ್ತಿರುವ ಪೌರಕಾರ್ಮಿಕರಿಗೆ ನಾವೆಲ್ಲರೂ ಎಂದೆಂದಿಗೂ ಚಿರಋಣಿಗಳಾಗಿರಬೇಕು. ಅವರ ಸಂಕಷ್ಟಗಳಿಗೆ ಸ್ಪಂದಿಸುವುದು ಸಮಾಜದ ಕರ್ತವ್ಯ ಎಂದು ನಗರದ ಲಯನ್ಸ್ ಕ್ಲಬ್ ಶುಗರ್‌ಟೌನ್ ಸಂಸ್ಥಾಪಕ ಅಧ್ಯಕ್ಷ, ಹಿರಿಯ ವೈದ್ಯ ಡಾ.ಟಿ ನರೇಂದ್ರಭಟ್ ಹೇಳಿದರು.
    ಅವರು ಮಂಗಳವಾರ ನಗರದ ಲಯನ್ಸ್ ಕ್ಲಬ್ ಶುಗರ್‌ಟೌನ್ ಹಾಗು ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ಶುಗರ್‌ಟೌನ್ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ನಗರಸಭೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ಪೌರಕಾರ್ಮಿಕರು ಕೇವಲ ಒಂದೇ ಒಂದು ದಿನ ಸ್ವಚ್ಛತಾ ಕಾರ್ಯ ಮಾಡದಿದ್ದರೆ ಊರು ಗಬ್ಬು ನಾರುತ್ತದೆ. ಸಮಾಜದಲ್ಲಿ ಇಂತಹವರ ಆರೋಗ್ಯ ಕಾಪಾಡುವುದು ಅತಿಮುಖ್ಯವಾಗಿದೆ.  ಅಲ್ಲದೆ ಪೌರಕಾರ್ಮಿಕರಿಗೆ ಹೆಚ್ಚಿನ ಆರೋಗ್ಯ ಸಮಸ್ಯೆಗಳಿದ್ದು, ಹೆಚ್ಚಿನ ಆರೋಗ್ಯ ಸೇವೆ ಲಭಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ ಅವರು ನಮ್ಮೊಂದಿಗೆ ಚರ್ಚಿಸಿ "ಸ್ಪಂದನ" ಹೆಸರಿನಲ್ಲಿ ಆರಂಭಿಸಿದ ಆರೋಗ್ಯ ಶಿಬಿರ ಇಂದಿಗೂ ಮುಂದುವರೆಯುತ್ತಿರುವುದು ಸಂತಸ ತಂದಿದೆ ಎಂದರು.  
    ಪೌರಕಾರ್ಮಿಕರು ತಮ್ಮ ಕುಟುಂಬ ಹಾಗೂ ಮಕ್ಕಳ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಮುಂದಿನ ದಿನಗಳಲ್ಲಿ ನಗರದಲ್ಲಿರುವ ಕೊಳಚೆ ಪ್ರದೇಶಗಳನ್ನು ದತ್ತು ತೆಗೆದುಕೊಂಡು ಸಮಾಜಮುಖಿ ಆರೋಗ್ಯ ಸೇವಾ ಕಾರ್ಯ ನಡೆಸಬೇಕಾಗಿದೆ ಎಂದರು.
    ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್ ಮಾತನಾಡಿ, ಪೌರಕಾರ್ಮಿಕರಿಂದ ನಾವೆಲ್ಲರೂ ಆರೋಗ್ಯವಂತರಾಗಿದ್ದೇವೆ. ಅವರೇ ನಮ್ಮೆಲ್ಲರ ವೈದ್ಯರು. ಅವರನ್ನು ನಾವು ಪ್ರೀತಿಯಿಂದ ಗೌರವಿಸಬೇಕು. ಸಮಾಜದ ಎಲ್ಲರೂ ಅವರ ನೆರವಿಗೆ ಮುಂದಾಗಬೇಕೆಂದರು.
    ಕ್ಲಬ್ ಅಧ್ಯಕ್ಷ, ದಂತ ವೈದ್ಯ ಅಧ್ಯಕ್ಷ ಡಾ. ಗುರುರಾಜ್ ಮಾತನಾಡಿ, ಪೌರಕಾರ್ಮಿಕರು ಆರೋಗ್ಯ ಹದಗೆಟ್ಟಾಗ ಎಷ್ಟೇ ಒತ್ತಡವಿದ್ದರೂ ತಕ್ಷಣ ತಾತ್ಸಾರ ಮಾಡದೆ ಚಿಕಿತ್ಸೆ ಪಡೆದುಕೊಳ್ಳಬೇಕು. ಹಲ್ಲುಗಳಿಗೆ ಹೆಚ್ಚು ಗಮನಹರಿಸಿ ಆಹಾರವನ್ನು ಜಗಿದು ತನ್ನಬೇಕೆಂದರು.
     ಪೌರಾಯುಕ್ತ ಕೆ.ಎನ್ ಹೇಮಂತ್ ಅವರು ಮಾತನಾಡಿ, ಶೇರು ಮಾರುಕಟ್ಟೆಯ ದೊರೆ ಪ್ರಪಂಚವನ್ನೇ ಬೆರಗಾಗಿಸಿದ್ದ ರಾಕೇಶ್ ಜುಂಜನ್ ವಾಲಾ ೫ ಸಾವಿರ ಕೋಟಿ ರು. ಆಸ್ತಿಯ ಒಡೆಯನಾಗಿದ್ದರೂ ಆರೋಗ್ಯದೆಡೆ ನಿರ್ಲಕ್ಷ ತಾಳಿದ್ದರಿಂದ ತನ್ನ ಕಾಲುಗಳನ್ನು ಕಳೆದುಕೊಂಡ. ವ್ಯಾಪಾರದ ಜೊತೆಗೆ ಆರೋಗ್ಯಕ್ಕೆ ಒತ್ತು ನೀಡಿದ್ದರೆ ನನ್ನ ಆರೋಗ್ಯ ಹದಗೆಡುತ್ತಿರಲಿಲ್ಲ. ಇನ್ನು ೨೦ ವರ್ಷ ಚೆನ್ನಾಗಿ ಬಾಳಬಹುದಿತ್ತೆಂದು ಆತನೇ ಹೇಳಿದ್ದಾನೆ. ಇದು ಪೌರ ಕಾರ್ಮಿಕರು ಮತ್ತು ಸಮಾಜದ ಎಲ್ಲರೂ ಅರಿತು ದುಶ್ಚಟಗಳಿಂದ ದೂರವಾದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.
     ವೇದಿಕೆಯಲ್ಲಿ ನಗರಸಭೆ ಸದಸ್ಯ ಆನೆಕೊಪ್ಪ ಬಿ. ಬಸವರಾಜ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಲಯನ್ಸ್ ಕ್ಲಬ್ ಶುಗರ್‌ಟೌನ್ ಪ್ರಮುಖರಾದ ಅನಂತ ಕೃಷ್ಣಾ ನಾಯಕ್, ಡಾ. ಪರಿಮಳ, ಡಾ.ಪವಿತ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಚನ್ನಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪರಿಸರ ಅಭಿಯಂತರ ಪ್ರಭಾಕರ್ ನಿರೂಪಿಸಿ, ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ ವಂದಿಸಿದರು.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ