ಶುಕ್ರವಾರ, ನವೆಂಬರ್ 14, 2025

ಗಮನ ಸೆಳೆದ ಅಂಗನವಾಡಿ ಕೇಂದ್ರಗಳ ಮಕ್ಕಳ ದಿನಾಚರಣೆ

ವೇಷ-ಭೂಷಣ ಪ್ರದರ್ಶನ, ಗರ್ಭಿಣಿ ಮಹಿಳೆಯರಿಗೆ ಸೀಮಂತ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕಾಗದನಗರ ೧, ೨, ೩ ಮತ್ತು ೪ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಒಗ್ಗೂಡಿ ಶುಕ್ರವಾರ ಮಕ್ಕಳ ದಿನಾಚರಣೆ ವಿಶಿಷ್ಟವಾಗಿ ಆಚರಿಸಲಾಯಿತು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಕಾಗದನಗರ ೧, ೨, ೩ ಮತ್ತು ೪ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಒಗ್ಗೂಡಿ ಶುಕ್ರವಾರ ಮಕ್ಕಳ ದಿನಾಚರಣೆ ವಿಶಿಷ್ಟವಾಗಿ ಆಚರಿಸುವ ಮೂಲಕ ಗಮನ ಸೆಳೆದರು. 
    ಕಾರ್ಯಕ್ರಮ ಉದ್ಘಾಟಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಈರಪ್ಪ ಮಾತನಾಡಿ, ಅಂಗನವಾಡಿ ಕೇಂದ್ರಗಳನ್ನು ಮತ್ತಷ್ಟು ಉನ್ನತ್ತೀಕರಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಬಹುಮುಖ್ಯವಾಗಿ ಮುಂದಿನ ವರ್ಷದಿಂದ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ(ಎಲ್‌ಕೆಜಿ ಮತ್ತು ಯುಕೆಜಿ) ಆರಂಭಿಸಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಬದಲು ಇಲ್ಲಿಯೇ ದಾಖಲಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. 
    ಸರ್ಕಾರ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇವುಗಳಲ್ಲಿ ಗೃಹಲಕ್ಷ್ಮಿ ಯೋಜನೆ ಬಹುಮುಖ್ಯವಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು. ಮಕ್ಕಳು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಸೇರಿದಂತೆ ಮಹಾನ್ ಆದರ್ಶ ವ್ಯಕ್ತಿಗಳ ರೀತಿ ಭವಿಷ್ಯದ ನಾಯಕರಾಗಿ ರೂಪುಗೊಳ್ಳಬೇಕೆಂದು ಕರೆ ನೀಡಿದರು.
    ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ವೇಷ-ಭೂಷಣ ಪ್ರದರ್ಶನ ಆಯೋಜಿಸಲಾಗಿತ್ತು. ಕಿತ್ತೂರು ರಾಣಿ ಚನ್ನಮ್ಮ, ಒನಕ್ಕೆ ಓಬವ್ವ, ಶ್ರೀ ರಾಘವೇಂದ್ರ ಸ್ವಾಮಿ, ಸಂಗೊಳ್ಳಿ ರಾಯಣ್ಣ, ಶಕುಂತಲ, ಸೈನಿಕ, ಪೊಲೀಸ್, ಚಿಟ್ಟೆ, ರೈತ ಸೇರಿದಂತೆ ಇನ್ನಿತರ ವೇಷಭೂಷಣಗಳೊಂದಿಗೆ ಮಕ್ಕಳು ಕಂಗೊಳಿಸಿದರು. ಅಲ್ಲದೆ ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ನೆರವೇರಿಸುವ ಮೂಲಕ ಗಮನ ಸೆಳೆಯಲಾಯಿತು. 
    ನಗರಸಭೆ ಸದಸ್ಯೆ ಜಯಶೀಲ ಸುರೇಶ್, ಆಶಾ ಕಾರ್ಯಕರ್ತೆಯರಾದ ನೀಲಾಂಬಿಕ, ಮಂಜುಳಾ, ಅಂಗನವಾಡಿ ಕಾರ್ಯಕರ್ತೆಯರಾದ ರಶ್ಮಿ, ಎಸ್. ಮೀನಾಕ್ಷಿ, ಬಿ.ಆರ್ ಲಲಿತ, ಪುಷ್ಪ, ಸಹಾಯಕಿಯರಾದ ರೂಪ, ಸುಧಾ ಮತ್ತು ಸವಿತಾ ಹಾಗು ಸುತ್ತಮುತ್ತಲ ವ್ಯಾಪ್ತಿ ಗರ್ಭಿಣಿ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. 
 

ಭದ್ರಾವತಿ ನಗರಸಭೆ ವ್ಯಾಪ್ತಿಯ ಕಾಗದನಗರ ೧, ೨, ೩ ಮತ್ತು ೪ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಒಗ್ಗೂಡಿ ಶುಕ್ರವಾರ ಮಕ್ಕಳ ದಿನಾಚರಣೆ ವಿಶಿಷ್ಟವಾಗಿ ಆಚರಿಸಲಾಯಿತು. ಗರ್ಭಿಣಿ ಮಹಿಳೆಯರಿಗೆ ಸೀಮಂತ ನೆರವೇರಿಸಲಾಯಿತು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ