ಗುರುವಾರ, ಅಕ್ಟೋಬರ್ 30, 2025

ಹಳೇನಗರ ಪೊಲೀಸ್ ಠಾಣೆ ರಸ್ತೆಯಲ್ಲಿ ಸಮ-ಬೆಸ ಸಂಖ್ಯೆಯ ವಾಹನ ನಿಲುಗಡೆ ಫಲಕ ಅಳವಡಿಕೆ

ಭದ್ರಾವತಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಐಐಎಫ್‌ಎಲ್ ಫೈನಾನ್ಸ್ ಸಹಕಾರದೊಂದಿಗೆ ಸಮ ಮತ್ತು ಬೆಸ ಸಂಖ್ಯೆಯ ವಾಹನ ನಿಲುಗಡೆ ಫಲಕಗಳನ್ನು ಅಳವಡಿಸಲಾಯಿತು. 
    ಭದ್ರಾವತಿ : ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಐಐಎಫ್‌ಎಲ್ ಫೈನಾನ್ಸ್ ಸಹಕಾರದೊಂದಿಗೆ ಸಮ ಮತ್ತು ಬೆಸ ಸಂಖ್ಯೆಯ ವಾಹನ ನಿಲುಗಡೆ ಫಲಕಗಳನ್ನು ಅಳವಡಿಸಲಾಯಿತು. 
    ಸಂಚಾರಿ ಪೊಲೀಸ್ ಠಾಣೆ ಉಪ ನಿರೀಕ್ಷಕ ಚಂದ್ರಶೇಖರ್ ನಾಯ್ಕರವರ ನೇತೃತ್ವದಲ್ಲಿ ಹಳೇನಗರ ಪೊಲೀಸ್ ಠಾಣೆ ರಸ್ತೆಯ ಎರಡು ಬದಿಯಲ್ಲೂ ಸಮ ಮತ್ತು ಬೆಸ ಸಂಖ್ಯೆಯ ಫಲಕಗಳನ್ನು ಅಳವಡಿಸಲಾಯಿತು. 
    ಈ ರಸ್ತೆಯಲ್ಲಿ ಪೊಲೀಸ್ ಠಾಣೆ, ಚಿನ್ನಾಬೆಳ್ಳಿ ಮಳಿಗೆಗಳು, ಜೈನ ಮಂದಿರ, ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಶ್ರೀ ಕಾಳಿಕಾಂಬ ದೇವಸ್ಥಾನ, ನಿವೃತ್ತ ಸರ್ಕಾರಿ ನೌಕರರ ಭವನ ಸೇರಿದಂತೆ ಇನ್ನಿತರ ಪ್ರಮುಖ ಸಂಘ-ಸಂಸ್ಥೆಗಳ ಕಛೇರಿಗಳು ಈ ರಸ್ತೆಯಲ್ಲಿವೆ. ಅಲ್ಲದೆ ಈ ರಸ್ತೆ ಬಸವೇಶ್ವರ ವೃತ್ತ, ಬ್ರಾಹ್ಮಣರ ಬೀದಿ, ಖಾಜಿಮೊಹಲ್ಲಾ ಸಂಪರ್ಕಿಸುತ್ತದೆ. ಈ ಹಿನ್ನಲೆಯಲ್ಲಿ  ಪ್ರತಿ ದಿನ ವಾಹನ ದಟ್ಟಣೆ ಅಧಿಕವಾಗಿದ್ದು, ಈ ನಡುವೆ ರಸ್ತೆಯಲ್ಲಿ ಎಲ್ಲಿಬೇಕೆಂದರಲ್ಲಿ ವಾಹನಗಳ ನಿಲುಗಡೆಯಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. 
    ಇದೀಗ ಸಮ ಮತ್ತು ಬೆಸ ಸಂಖ್ಯೆಯ ವಾಹನ ನಿಲುಗಡೆ ಫಲಕ ಅಳವಡಿಸಿದ್ದು, ವಾಹನ ದಟ್ಟಣೆ ನಿಯಂತ್ರಣಕ್ಕೆ ಬರುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. 

ನ.೧ರಂದು `ಸಂಘ ೧೦೦ ಮತ್ತು ಸಾಮರಸ್ಯ'ಉಪನ್ಯಾಸ-ಸಂವಾದ



    ಭದ್ರಾವತಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಇದೀಗ ೧೦೦ ವರ್ಷ ಪೂರೈಸಿದ್ದು, ಈ ಹಿನ್ನಲೆಯಲ್ಲಿ ದೇಶಾದ್ಯಂತ ಹಲವಾರು ಕಾರ್ಯಕ್ರಮಗಳು ಜರುಗುತ್ತಿವೆ. ಇದಕ್ಕೆ ಪೂರಕವಾಗಿ ನಗರದ ಮಂಥನ ವತಿಯಿಂದ ನ.೧ರಂದು `ಸಂಘ ೧೦೦ ಮತ್ತು ಸಾಮರಸ್ಯ' ವಿಷಯ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಿದೆ. 
    ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ) ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ ೨.೩೦ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸಂಘದ ಹಿರಿಯ ಕಾರ್ಯಕರ್ತರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್‌ರವರು ತಮ್ಮ ಅನುಭವದ ನುಡಿಗಳನ್ನು ಹಂಚಿಕೊಳ್ಳಲಿದ್ದಾರೆ. ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್‌ರವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸಂಘ ಪರಿವಾರದ ಪ್ರಮುಖರು, ಕಾರ್ಯಕರ್ತರು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಪೊಲೀಸ್ ಇಲಾಖೆಯಿಂದ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು

ದೇಶದ ಮೊದಲ ಉಪ ಪ್ರಧಾನಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್‌ರವರ ಜನ್ಮದಿನಾಚರಣೆ ಅಂಗವಾಗಿ ಭದ್ರಾವತಿ ನಗರದ ವಿವಿಧ ಪೊಲೀಸ್ ಠಾಣೆಗಳ ವತಿಯಿಂದ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 
    ಭದ್ರಾವತಿ : ದೇಶದ ಮೊದಲ ಉಪ ಪ್ರಧಾನಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್‌ರವರ ಜನ್ಮದಿನಾಚರಣೆ ಅಂಗವಾಗಿ ನಗರದ ವಿವಿಧ ಪೊಲೀಸ್ ಠಾಣೆಗಳ ವತಿಯಿಂದ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 
    ಸರ್ದಾರ್ ವಲ್ಲಭಬಾಯ್ ಪಟೇಲ್‌ರವರ ಜನ್ಮದಿನ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ರಾಷ್ಟ್ರೀಯ ಭಾವೈಕ್ಯತೆಗೆ ಸಂಬಂಧಿಸಿದಂತೆ ಶಾಲಾ ಮಕ್ಕಳಿಗೆ ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ ಹಾಗು ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಯಿತು. 


    ನ್ಯೂಟೌನ್ ಪೊಲೀಸ್ ಠಾಣೆ ವತಿಯಿಂದ ಹುತ್ತಾ ಕಾಲೋನಿ ಸಹ್ಯಾದ್ರಿ ಪ್ರೌಢಶಾಲೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಠಾಣೆಯ ಉಪನಿರೀಕ್ಷಕ ರಮೇಶ್ ಸರ್ದಾರ್ ವಲ್ಲಭಬಾಯ್ ಪಟೇಲ್‌ರವರ ಕುರಿತು ಮಾಹಿತಿ ನೀಡಿದರು. ಠಾಣೆಯ ಸಿಬ್ಬಂದಿಗಳೊಂದಿಗೆ ಶಾಲೆಯ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಜಯಂತಿ ರತನ್ ನಿಧನ

ಜಯಂತಿ ರತನ್ 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಹಳೇನಗರ ಕೇಶವಪುರ ಬಡಾವಣೆ ನಿವಾಸಿ ಜಯಂತಿ ರತನ್(೬೪) ಗುರುವಾರ ಬೆಳಗಿನ ಜಾವ ನಿಧನ ಹೊಂದಿದರು. 
  ತಾಯಿ ಮತ್ತು ಪತಿ ಇದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಹೊಳೆಹೊನ್ನೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ಆರ್ಯವೈಶ್ಯ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.