ಶುಕ್ರವಾರ, ಅಕ್ಟೋಬರ್ 31, 2025

ನ.೨ರಂದು ವಿದ್ಯುತ್ ವ್ಯತ್ಯಯ


    ಭದ್ರಾವತಿ : ಮೆಸ್ಕಾಂ ನಗರ ಉಪವಿಭಾಗ ಮಾಚೇನಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣೆ ಹಾಗು ಅಭಿವೃದ್ಧಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಘಟಕ-೫ರ ಶಾಖಾ ವ್ಯಾಪ್ತಿಯಲ್ಲಿ ನ.೨ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಶಿವರಾಮನಗರ, ವಿಶ್ವೇಶ್ವರಾಯ ನಗರ, ಜೇಡಿಕಟ್ಟೆ ಹೊಸೂರು, ಸಿರಿಯೂರು, ವೀರಾಪುರ, ಕಲ್ಲಹಳ್ಳಿ, ಸಂಕ್ಲೀಪುರ, ಹಾಗಲಮನೆ, ಹುಲಿರಾಮನಕೊಪ್ಪ, ಸಿರಿಯೂರು ತಾಂಡ, ಸಿರಿಯೂರು ಕ್ಯಾಂಪ್ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 

ಕಾಗದನಗರ ಕನ್ನಡ ಮಿತ್ರರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ದತೆ

ಸುಮಾರು ೪ ದಶಕಗಳ ಇತಿಹಾಸ ಹೊಂದಿರುವ ಭದ್ರಾವತಿ ಕಾಗದನಗರದ ಕನ್ನಡ ಮಿತ್ರರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ದತೆಗಳನ್ನು ನಡೆಸಲಾಗಿದೆ. 
    ಭದ್ರಾವತಿ : ಸುಮಾರು ೪ ದಶಕಗಳ ಇತಿಹಾಸ ಹೊಂದಿರುವ ಕಾಗದನಗರದ ಕನ್ನಡ ಮಿತ್ರರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ದತೆಗಳನ್ನು ನಡೆಸಲಾಗಿದೆ. 
    ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಕಾರ್ಮಿಕರು ಹಾಗು ಕುಟುಂಬ ವರ್ಗದವರು ಒಂದೆಡೆ ಸೇರಿ ಕನ್ನಡ ರಾಜ್ಯೋತ್ಸವ ಆಚರಿಸಲು ಮುಂದಾದ ಹಿನ್ನಲೆಯಲ್ಲಿ ಈ ಸಂಘ ಅಸ್ತಿತ್ವಕ್ಕೆ ಬಂದಿತು. ಈ ಹಿಂದೆ ಸುಮಾರು ೧ ತಿಂಗಳ ಕಾಲ ವಿವಿಧ ಕ್ರೀಡಾ ಸ್ಪರ್ಧೆಗಳು, ನಾಟಕ, ನೃತ್ಯ, ಆರ್ಕೇಸ್ಟ್ರಾ, ಚಲನಚಿತ್ರ ಪ್ರದರ್ಶನ ಸೇರಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದವು. ಒಂದು ರೀತಿಯ ವೈಭವ ಅನಾವರಣಗೊಳ್ಳುತ್ತಿತ್ತು. ಕಾರ್ಖಾನೆ ಅವನತಿ ದಾರಿ ಹಿಡಿದಂತೆ ಕಾರ್ಮಿಕರು ಹಾಗು ಕುಟುಂಬ ವರ್ಗದವರು ಬೇರೆಡೆಗೆ ವಲಸೆ ಹೋಗಲು ಆರಂಭಿಸುತ್ತಿದ್ದಂತೆ ಎಲ್ಲವೂ ಕ್ಷೀಣಿಸುತ್ತಾ ಬಂದಿದ್ದು, ಕಳೆದ ಸುಮಾರು ೧ ದಶಕದಿಂದ ಕಾರ್ಮಿಕರು, ಕುಟುಂಬ ವರ್ಗದವರಿಲ್ಲದೆ ಪಾಳು ಬಿದ್ದು, ಬಿಕೋ ಎನ್ನುತ್ತಿರುತ್ತಿರುವ ಸ್ಥಳದಲ್ಲಿ ಅಳಿದುಳಿದಿರುವ ನಿವೃತ್ತ ಕಾರ್ಮಿಕರು, ಕುಟುಂಬ ವರ್ಗದವರು ಹಾಗು ಸಮೀಪದ ನಿವಾಸಿಗಳು ಒಗ್ಗೂಡಿ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಕಾರ್ಖಾನೆಯ ಪುನಃ ಆರಂಭಗೊಂಡು ವೈಭವದ ದಿನಗಳನ್ನು ಮರಳಿ ನೋಡಲು ಎದುರು ನೋಡುತ್ತಿದ್ದಾರೆ. 
    ಮಯೂರ ಮಂಟಪದ ಮುಂಭಾಗ ನ.೧ರ ಬೆಳಿಗ್ಗೆ ೧೦ ಗಂಟೆಗೆ ಧ್ವಜಾರೋಹಣ ನಡೆಯಲಿದ್ದು,  ಎಂಪಿಂಎಂ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷರಾದ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ತಮಿಳು ಯುವಕರಿಂದ ಉಚಿತ ಬೆಳಗಿನ ಉಪಹಾರ ಸೇವಾ ಕಾರ್ಯ ಶ್ಲಾಘನೀಯ

ಸಂತೆ ಮೈದಾನದಲ್ಲಿ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಬಿ.ಕೆ ಸಂಗಮೇಶ್ವರ್ 

ಭದ್ರಾವತಿ ಹೊಸಮನೆ ಮುಖ್ಯರಸ್ತೆ, ಸಂತೆ ಮೈದಾನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತಮಿಳು ಯೂತ್ಸ್ ಅಸೋಸಿಯೇಷನ್ ನೂತನ ಕಟ್ಟಡ ಶುಕ್ರವಾರ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
    ಭದ್ರಾವತಿ : ತಮಿಳು ಸಮುದಾಯದವರು ಯಾರನ್ನು ಅವಲಂಬಿಸದೆ ತಮ್ಮ ಶ್ರಮದಿಂದ ಸ್ವಂತ ಬಲದ ಮೇಲೆ ಬದುಕು ಕಟ್ಟಿಕೊಳ್ಳುವ ಜನರಾಗಿದ್ದು, ಇಂತಹ ಸಮುದಾಯದವರು ಹಸಿದವರಿಗೆ ಉಚಿತವಾಗಿ ಬೆಳಗಿನ ಉಪಹಾರ ನೀಡುವ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು. 
    ಅವರು ಶುಕ್ರವಾರ ಹೊಸಮನೆ ಮುಖ್ಯರಸ್ತೆ, ಸಂತೆ ಮೈದಾನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತಮಿಳು ಯೂತ್ಸ್ ಅಸೋಸಿಯೇಷನ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ತಮಿಳು ಯುವಕರು ಒಗ್ಗೂಡಿಕೊಂಡು ೫೦೦ ದಿನಗಳ ಕಾಲ ನಿರಂತರವಾಗಿ ಸೇವೆ ಮುನ್ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು. 
    ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದರೂ ಸಹ ಕೆಲವರು ಟೀಕೆಗಳನ್ನು ಮಾಡುತ್ತಾರೆ. ಅವುಗಳಿಗೆ ತಲೆಕೆಡಿಸಿಕೊಳ್ಳದೆ ಎಲ್ಲರೂ ಒಗ್ಗಟ್ಟಾಗಿ ತಮ್ಮ ಸೇವೆ ಮುನ್ನಡೆಸಿಕೊಂಡು ಹೋಗಬೇಕು. ಅಲ್ಲದೆ ಎಲ್ಲಾ ರೀತಿಯ ಸಂಕಷ್ಟಗಳಿಗೂ ಸ್ಪಂದಿಸುವ ನಿಟ್ಟಿನಲ್ಲಿ ಯುವಕರು ಹೆಚ್ಚಿನ ಗಮನ ನೀಡಬೇಕು. ಸಮಾಜದಲ್ಲಿ ಒಳ್ಳೆಯ ಕೆಲಸಗಳಿಂದ ಭವಿಷ್ಯದಲ್ಲಿ ಒಳ್ಳೆಯ ಸ್ಥಾನ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಒಳ್ಳೆಯ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಲು ಬದ್ಧನಾಗಿದ್ದೇನೆ. ಸೇವಾ ಕಾರ್ಯಗಳಿಗೆ ನೆರವಾಗುವ ನಿಟ್ಟಿನಲ್ಲಿ ವೈಯಕ್ತಿಕವಾಗಿ ೨ ಲಕ್ಷ ರು. ನೆರವು ನೀಡುವುದಾಗಿ ಭರವಸೆ ನೀಡಿದರು. 
    ಹಿರಿಯ ಪತ್ರಕರ್ತ ಕಣ್ಣಪ್ಪ ಮಾತನಾಡಿ, ತಮಿಳರು ಎಂದರೆ ಶ್ರಮ ಜೀವಿಗಳು ಮತ್ತು ನಂಬಿಕೆಗೆ ಅರ್ಹರಾದವರು. ಶ್ರಮದ ಬದುಕಿನಲ್ಲೂ ಸಮಾಜದ ಎಲ್ಲರ ಏಳಿಗೆಗಾಗಿ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಾದರಿಯಾದವರು. ತಮಿಳು ಯುವಕರು ೫೦೦ ದಿನಗಳ ಕಾಲ ಬೆಳಗಿನ ಉಚಿತ ಉಪಹಾರ ಸೇವಾ ಕಾರ್ಯ ಯಶಸ್ವಿಯಾಗಿನಡೆಸಿರುವುದು ತಮಿಳು ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಇದಕ್ಕೆ ಪೂರಕವಾಗಿ ಎಲ್ಲಾ ರೀತಿಯ ಸಹಕಾರ ಶಾಸಕರು ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ತಮಿಳು ಸಮಾಜದವರು ಅವರಿಗೆ ಎಂದಿಗೂ ಕೃತಜ್ಞರಾಗಿದ್ದಾರೆ ಎಂದು.   


ಭದ್ರಾವತಿ ಹೊಸಮನೆ ಮುಖ್ಯರಸ್ತೆ, ಸಂತೆ ಮೈದಾನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತಮಿಳು ಯೂತ್ಸ್ ಅಸೋಸಿಯೇಷನ್ ನೂತನ ಕಟ್ಟಡ ಉದ್ಘಾಟನಾ ವೇದಿಕೆ ಕಾರ್ಯಕ್ರಮ ಶುಕ್ರವಾರ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
    ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಆಗಮುಡಿ ಮೊದಲಿಯಾರ್ ಸಮಾಜದ ತಾಲೂಕು ಅಧ್ಯಕ್ಷ ಕೆ. ಮಂಜುನಾಥ್, ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್, ಬಿಜೆಪಿ ಯುವ ಮುಖಂಡ ಮಂಗೋಟೆ ರುದ್ರೇಶ್ ಸೇರಿದಂತೆ ಇನ್ನಿತರರು ಮಾತನಾಡಿದರು.
ಸಂಘದ ಗೌರವಾಧ್ಯಕ್ಷ, ಯುವ ಮುಖಂಡ ಶಿವಕುಮಾರ್ ಮತ್ತು ಅಧ್ಯಕ್ಷ ಜಯಕುಮಾರ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ನಗರಸಭೆ ಸದಸ್ಯರಾದ ಅನುಸುಧಾ ಮೋಹನ್ ಪಳನಿ, ಬಸವರಾಜ್ ಬಿ. ಆನೇಕೊಪ್ಪ, ಕೆ. ಸುದೀಪ್‌ಕುಮಾರ್, ಟಿಪ್ಪುಸುಲ್ತಾನ್, ಉದ್ಯಮಿ ಎ. ಮಾಧು, ಸುರಕ್ಷಾ ಜೀವನಾ ಸೇವಾ ಟ್ರಸ್ಟ್‌ನ ಜ್ಯೋತಿ ಸೋಮಶೇಖರ್, ಸಂಜೀವಿನ ಹಿರಿಯ ನಾಗರಿಕರ ಆರೈಕೆ ಕೇಂದ್ರದ ಸವಿತಾ, ಸಿದ್ದಾರ್ಥ ಅಂಧರ ಕೇಂದ್ರದ ಶಿಬಬಸಪ್ಪ, ಕಾರ್ಮಿಕ ಮುಖಂಡ ವಿ. ವಿನೋದ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ತಮಿಳು ಯೂತ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ಸದಸ್ಯರು ಹಾಗು ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.