ಶನಿವಾರ, ನವೆಂಬರ್ 1, 2025

ಈ ಭೂಮಿ ನಮ್ಮದು ಎನ್ನುವುದು ಪ್ರತಿಯೊಬ್ಬ ಹಿಂದೂವಿನ ಅಸ್ಮಿತೆ : ಡಾ. ಕಲ್ಲಡ್ಕ ಪ್ರಭಾಕರ ಭಟ್

ಭದ್ರಾವತಿ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ) ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಮಂಥನ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ `ಸಂಘ ೧೦೦ ಮತ್ತು ಸಾಮರಸ್ಯ' ವಿಷಯ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಹಿರಿಯ ಕಾರ್ಯಕರ್ತ ಡಾ. ಕಲ್ಲಡ್ಕ ಪ್ರಭಾಕರ ಭಟ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ: ನಮ್ಮದು ಸಾಧು-ಸಂತರು ನೆಲಸಿದ ಭೂಮಿ, ಸಾವಿರಾರು ವರ್ಷಗಳ ಪರಂಪರೆ ಹೊಂದಿರುವ ಧರ್ಮ ನಮ್ಮದಾಗಿದೆ. ನಮಗೂ ಈ ಭೂಮಿಗೂ ಅವಿನಾಭಾವ ಸಂಬಂಧವಿದೆ. ಬಹುಸಂಖ್ಯಾತರೆಂಬ ಆಧಾರದಲ್ಲಿ ಈ ಭೂಮಿ ಹಿಂದೂಗಳದ್ದು ಎಂದು ಹೇಳಿಕೊಳ್ಳುವುದಲ್ಲ. ಬದಲಿಗೆ ಈ ಭೂಮಿ ನಮ್ಮದು ಎನ್ನುವುದು ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ಹಿಂದೂವಿನ ಅಸ್ಮಿತೆಯಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಹಿರಿಯ ಕಾರ್ಯಕರ್ತ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. 
    ಅವರು ಶನಿವಾರ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ) ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಮಂಥನ ವತಿಯಿಂದ ಆಯೋಜಿಸಲಾಗಿದ್ದ `ಸಂಘ ೧೦೦ ಮತ್ತು ಸಾಮರಸ್ಯ' ವಿಷಯ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಇಂದು ದೇಶದಲ್ಲಿ ಸಂಬಂಧಗಳನ್ನು ಕತ್ತರಿಸುವ ಕೆಲಸ ನಡೆಯುತ್ತಿದೆ. ನಾವೆಲ್ಲರೂ ಒಂದೇ ಮಾತರಂ ಎನ್ನುವುದು ದ್ರೋಹವಾಗುತ್ತಿದೆ. ಇಂದು ಎಲ್ಲದರಲ್ಲೂ ಬದಲಾವಣೆಗಳಾಗುತ್ತಿವೆ. ಆದರೆ ನಮ್ಮಲ್ಲಿನ ಅಸ್ಮಿತೆ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಈ ಭೂಮಿಯಲ್ಲಿ ಹುಟ್ಟಿರುವ ಹಿಂದೂಗಳು ನಾನು ಯಾರು ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ಎಲ್ಲಿಯವರೆಗೆ ನಮ್ಮಲ್ಲಿ ಗೊಂದಲಗಳು ಇರುತ್ತವೆಯೋ ಅಲ್ಲಿಯವರೆಗೂ ಸಂಘರ್ಷಗಳು ಇರುತ್ತವೆ ಎಂದರು.  
    ಈ ದೇಶದಲ್ಲಿ ಸಾವಿರಾರು ದೇವರುಗಳನ್ನು ನಾವುಗಳು ಆರಾಧಿಸುತ್ತೇವೆ. ಮುಸಲ್ಮಾನರು, ಕ್ರೈಸ್ತರು ಸೇರಿದಂತೆ ಇತರೆ ಧರ್ಮದವರು ಸಹ ಅವರ ಇಚ್ಛೆಯಂತೆ ಆರಾಧನೆ ಮಾಡಲಿ. ಆದರೆ ಈ ನೆಲದ ಧರ್ಮವನ್ನು, ನಮ್ಮ ಸಂಸ್ಕೃತಿ, ಭಾವನೆಗಳನ್ನು ಮೊದಲು ಗೌರವಿಸಲಿ. ನಾವು ನಮ್ಮ ಅಸ್ಮಿತೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ನಮ್ಮ ಹೋರಾಟ ಈ ನಿಟ್ಟಿನಲ್ಲಿಯೇ ನಡೆಯುತ್ತಿದೆ. ಸಂಘದ ತನ್ನ ೧೦೦ ವರ್ಷದ ಸಂಭ್ರಮಾಚರಣೆಯಲ್ಲಿ ಹಿಂದೂತ್ವ ನೆನಪಿಸುವ ಕೆಲಸ ಮಾಡುತ್ತಿದೆ ಎಂದರು. 
ಈ ದೇಶದಲ್ಲಿ ಬ್ರಿಟಿಷರು ನಮಗೆ ಸಿಹಿ ತಿನಿಸಿ ಗುಲಾಮಗಿರಿಗೆ ತಳ್ಳಿದರು. ಆ ದಾಸ್ಯದಿಂದ ಹೊರಬಂದು ನಮ್ಮದೇ ಆದ ಹೋರಾಟ ರೂಪಿಸಿಕೊಂಡು ಬರಲಾಯಿತು. ಆದರೆ ಸ್ವಾತಂತ್ರ್ಯದ ಚಳುವಳಿಯಲ್ಲಿ ಸಂಘದ ಪಾತ್ರ ಏನೆಂದು ಇದೀಗ ಪ್ರಶ್ನಿಸಲಾಗುತ್ತಿದೆ. ಇದಕ್ಕೂ ಮೊದಲು ಪ್ರಶ್ನಿಸುವವರು ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೆಚ್ಚಿನ ಅಧ್ಯಾಯನ ನಡೆಸಲಿ ಎಂದರು. 
೧೯೭೫ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ದೇಶವನ್ನು ಕತ್ತಲಿನಲ್ಲಿಟ್ಟಿದ್ದರು. ಇದರ ವಿರುದ್ಧ ಸಂಘ ನಡೆಸಿದ ಹೋರಾಟದ ಪರಿಣಾಮ ಭವಿಷ್ಯದ ರಾಜಕೀಯ ಚಿತ್ರಣ ಬದಲಾಯಿತು. ಇಂತಹ ಹಲವು ಹೋರಾಟಗಳನ್ನು ಸಂಘ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ನಮ್ಮ ಹೋರಾಟ ಯಾರ ವಿರುದ್ಧವೋ ಅಲ್ಲ. ವಿಶಾಲವಾದ ದೃಷ್ಟಿಕೋನ ಸಂಘ ಹೊಂದಿದೆ. ಇದು ಪ್ರೀತಿಯೊಂದಿಗೆ ಹೋರಾಟ ಮುನ್ನಡೆಸಿಕೊಂಡು ಬರುತ್ತಿದೆ ಎಂದರು. 
    ಪ್ರಸ್ತುತ ಹಿಂದೂ ಸಮಾಜ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಸಂಘದ ಜವಾಬ್ದಾರಿ ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಮುಂದಿನ ವಿಜಯದಶಮಿವರೆಗೂ ಸಾಮರಸ್ಯ ಜೀವನ, ಕುಟುಂಬ, ಪರಿಸರ, ಶಿಷ್ಟಾಚಾರ ಮತ್ತು ಸ್ವಾತಂತ್ರ್ಯ ಈ ಐದು ಪಂಚ ಪರಿವರ್ತನೆಗಳಿಗೆ ಸಂಘ ಕರೆ ನೀಡಿದೆ. ಇದಕ್ಕೆ ನಾವೆಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ ಎಂದರು. 
    ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಜನಸಂಖ್ಯೆಯನ್ನು ಅವಲಂಬಿಸಿದೆ. ಇದಕ್ಕೆ ಪೂರಕವಾಗಿ ಹಿಂದೂ ಸಮಾಜ ರೂಪುಗೊಳ್ಳಬೇಕಾಗಿದೆ. ಹಿಂದೂ ಸಮಾಜದ ಜನಸಂಖ್ಯೆ ಹೆಚ್ಚಾಗಬೇಕಾಗಿದೆ. ಅಲ್ಲದೆ ಹಿಂದೂ ಸಮಾಜ ಆರ್ಥಿಕ ಸದೃಢಗೊಳ್ಳಬೇಕಾಗಿದೆ. ನಾವೆಲ್ಲರೂ ವಿದೇಶ ವಸ್ತುಗಳ ಖರೀದಿ ಬದಲು ಸ್ವದೇಶಿ ವಸ್ತುಗಳನ್ನು ಖರೀದಿಸಿ ಈ ದೇಶದ ಸಂಪನ್ಮೂಲ ಇಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದರು. 
    ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್ ಉಪಸ್ಥಿತರಿದ್ದರು. ತರುಣಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರ್ ಉಪ್ಪಾರ ಸ್ವಾಗತಿಸಿ, ಕೀರ್ತಿ ಗುಜ್ಜಾರ್ ನಿರೂಪಿಸಿ, ಕೇಶವಮೂರ್ತಿ ವಂದಿಸಿದರು. 

ಕರವೇಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ

ಭದ್ರಾವತಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಜಿಲ್ಲಾಧ್ಯಕ್ಷ ಮುರಳಿಯವರ ನೇತೃತ್ವದಲ್ಲಿ ಈ ಬಾರಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 
    ಭದ್ರಾವತಿ:  ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಜಿಲ್ಲಾಧ್ಯಕ್ಷ ಮುರಳಿಯವರ ನೇತೃತ್ವದಲ್ಲಿ ಈ ಬಾರಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 
    ನಗರದ ಬೈಪಾಸ್ ರಸ್ತೆ, ಬಾರಂದೂರು ತಿರುವಿನಲ್ಲಿರುವ ಹಳ್ಳಿಮನೆ ಹೋಟೆಲ್ ಆವರಣದಲ್ಲಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಕಾರು ಹಾಗು ದ್ವಿಚಕ್ರ ವಾಹನಗಳಲ್ಲಿ ಜಾಥಾ ನಡೆಸಿ ತರೀಕೆರೆ ರಸ್ತೆ ಮೂಲಕ ಗಾಂಧಿ ವೃತ್ತ ತಲುಪಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. 
    ನಂತರ ಮಾಧವಚಾರ್ ವೃತ್ತ ಮೂಲಕ ಡಾ. ರಾಜಕುಮಾರ್ ರಸ್ತೆಯಲ್ಲಿ ಸಾಗಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಕ್ಷೇತ್ರದ ಅನ್ನದಾತ, ಶ್ರೇಷ್ಠ ತಂತ್ರಜ್ಞ ಸರ್.ಎಂ ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ,  ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಾಥಾ ಅಂತ್ಯಗೊಳಿಸಲಾಯಿತು. 
    ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಅನಿಲ್,  ತಾಲೂಕ ಅಧ್ಯಕ್ಷ ಆನಂದ್ ನಾಯ್ಡು, ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ಭಾನುಶ್ರೀ, ತಾಲೂಕು ಮಹಿಳಾ ಅಧ್ಯಕ್ಷೆ ಅನ್ನಪೂರ್ಣ, ಪರಮೇಶ್, ಹರೀಶ್, ಲೋಹಿತ್, ರುಕ್ಮಿಣಿ, ಸುಜಿತ್, ಅಮಿತ್, ಅನಿಲ್, ಲಕ್ಷ್ಮಮ್ಮ, ವೈಭವ್, ನಿಂಗಣ್ಣ ಸೇರಿದಂತೆ ಕರಾವೇ ಕಾರ್ಯಕರ್ತರು, ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.

ಕಣ್ಮನ ಸೆಳೆದ ಆಟೋ ಚಾಲಕನ ಕನ್ನಡಾಭಿಮಾನ

ಭದ್ರಾವತಿ ಜನ್ನಾಪುರ ನಿವಾಸಿ, ಆಟೋ ಶಂಕರ್ ಎಂದೇ ಗುರುತಿಸಿಕೊಂಡಿರುವ ಚಾಲಕ ಶಂಕರಮೂರ್ತಿಯವರು ಈ ಬಾರಿ ಸಹ ತಮ್ಮ ಆಟೋಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶಿಷ್ಟವಾಗಿ ಅಲಂಕಾರ ಮಾಡುವ ಮೂಲಕ ಕನ್ನಡಾಭಿಮಾನ ಪ್ರದರ್ಶಿಸಿದ್ದಾರೆ. 
    ಭದ್ರಾವತಿ : ಆಟೋ ಚಾಲಕರೊಬ್ಬರು ಈ ಬಾರಿ ಸಹ ತಮ್ಮ ಆಟೋಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶಿಷ್ಟವಾಗಿ ಅಲಂಕಾರ ಮಾಡುವ ಮೂಲಕ ಕನ್ನಡಾಭಿಮಾನ ಪ್ರದರ್ಶಿಸಿದ್ದಾರೆ. 
    ಜನ್ನಾಪುರ ನಿವಾಸಿ, ಆಟೋ ಶಂಕರ್ ಎಂದೇ ಗುರುತಿಸಿಕೊಂಡಿರುವ ಚಾಲಕ ಶಂಕರಮೂರ್ತಿಯವರು ಕಳೆದ ವರ್ಷ ಸುಮಾರು ೩ ಲಕ್ಷ ರು. ವೆಚ್ಚದಲ್ಲಿ ಹೊಸ ಆಟೋ ಖರೀದಿಸಿದ್ದರು. ಆಟೋ ನಂಬಿ ಬದುಕು ಸಾಗಿಸುತ್ತಿರುವ ಇವರು ಕನ್ನಡಾಭಿಮಾನಿಯಾಗಿದ್ದು, ಹೊಸ ಆಟೋಗೆ ಕಳೆದ ಬಾರಿ ವಿಶೇಷವಾಗಿ ಅಲಂಕಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. 
    ಈ ಬಾರಿ ಮತ್ತಷ್ಟು ವಿಭಿನ್ನವಾಗಿ ಕರ್ನಾಟಕ ರತ್ನ, ಚಲನಚಿತ್ರ ನಟ, ಸಮಾಜ ಸೇವಕ, ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ರವರ ಪ್ರತಿಮೆಯನ್ನು ಆಟೋ ಮೇಲ್ಭಾಗದಲ್ಲಿರಿಸಿ, ಅದರ ಹಿಂಬದಿಯಲ್ಲಿ ಕರ್ನಾಟಕ ಭೂಪಟ ಇರಿಸಲಾಗಿದೆ. ಜೊತೆಗೆ ಬಣ್ಣ ಬಣ್ಣದ ಹೂವುಗಳಿಂದ,  ಕೆಂಪು ಮತ್ತು ಹಳದಿ ನಾಡದ್ವಜದಿಂದ ಅಲಂಕರಿಸಲಾಗಿದೆ. 
    ಅಲ್ಲದೆ ಆಟೋ ಮುಂಭಾಗದಲ್ಲಿ ಬೃಹತ್ ಗಾತ್ರದ ಕೆಂಪು ಮತ್ತು ಹಳದಿ ಬಣ್ಣದ ಮಾಲೆಯನ್ನು ಹಾಕಲಾಗಿದೆ. ಆಟೋ ತುಂಬಾ ಆಕರ್ಷಕವಾಗಿ ಕಂಗೊಳಿಸುತ್ತಿದ್ದು, ಸ್ನೇಹಿತರು, ಬಂಧು-ಬಳಗದವರು, ಪ್ರಯಾಣಿಕರು, ರಸ್ತೆಯಲ್ಲಿ ಸಂಚರಿಸುವವರು ಆಟೋ ಮುಂಭಾಗ ನಿಂತುಕೊಂಡು ತಮ್ಮ ಮೊಬೈಲ್‌ಗಳಲ್ಲಿ ಪೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ. 
    ಆಟೋ ಶಂಕರ್ ಪ್ರತಿಕ್ರಿಯಿಸಿ, ನಾನು ಅಪ್ಪಟ್ಟ ಕನ್ನಡದ ಅಭಿಮಾನಿಯಾಗಿದ್ದು, ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ನಾನೇ ಸ್ವಯಂ ಪ್ರೇರಣೆಯಿಂದ ಆಟೋ ವಿಶೇಷವಾಗಿ ಅಲಂಕರಿಸಿದ್ದೇನೆ. ಈ ಬಾರಿ ನನಗೆ ನನ್ನ ಕಾರ್ಯಕ್ಕೆ ಸ್ನೇಹಿತರೊಬ್ಬರು ಸಹ ಕೈಜೋಡಿಸಿದ್ದು, ಇದರಿಂದಾಗಿ ಈ ಬಾರಿ ಅಲಂಕಾರ ಇನ್ನೂ ಹೆಚ್ಚಿನ ಆಕರ್ಷಣೆಯಿಂದ ಕೂಡಿದೆ ಎಂದರು. 
    ಜನ್ನಾಪುರ ಹಾಗು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ದಿನವಿಡೀ ಈ ಆಟೋ ಸಂಚಾರ ಬಹುತೇಕ ಜನರಲ್ಲಿ ತಮ್ಮಲ್ಲಿನ ಕನ್ನಡದ ಅಸ್ಮಿತೆಯನ್ನು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ. ಸಾಮಾನ್ಯ ಆಟೋ ಚಾಲಕನ ಕನ್ನಡಾಭಿಮಾನಕ್ಕೆ ಒಂದು ನಮನವಿರಲಿ. 

ನ.೨ರಂದು ವರ್ಷಾವಾಸ ಪ್ರವಚನ ಮಾಲಿಕೆ ಸಮಾರೋಪ ಸಮಾರಂಭ

ಭದ್ರಾವತಿಯಲ್ಲಿ ಆಯೋಜಿಸಲಾಗಿರುವ ವರ್ಷಾವಾಸ ಪ್ರವಚನ ಮಾಲಿಕೆ ಸಮಾರೋಪ ಸಮಾರಂಭ ಕುರಿತು ಪತ್ರಕರ್ತ, ಉಪಾಸಕ ಸುರೇಶ್ ಮಾಹಿತಿ ನೀಡಿದರು. 
    ಭದ್ರಾವತಿ : ಭಾರತೀಯ ಬೌದ್ಧ ಮಹಾಸಭಾ ದಕ್ಷಿಣ(ಬಿಎಸ್‌ಐ) ಪುರುಷ ಮತ್ತು ಮಹಿಳಾ ವಿಭಾಗದ ವತಿಯಿಂದ ವರ್ಷಾವಾಸ ಪ್ರವಚನ ಮಾಲಿಕೆ ಸಮಾರೋಪ ಸಮಾರಂಭ ನ.೨ರಂದು ನಗರದ ಹೊಸನಂಜಾಪುರದಲ್ಲಿರುವ ಬೌದ್ಧ ವಿಹಾರದಲ್ಲಿ ಆಯೋಜಿಸಲಾಗಿದೆ ಎಂದು ಪತ್ರಕರ್ತ, ಉಪಾಸಕ ಸುರೇಶ್ ತಿಳಿಸಿದರು. 
    ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಬೆಳಿಗ್ಗೆ ೧೧ ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬೌದ್ಧ ಧರ್ಮದ ಕಮಲ ರತ್ನ ಭಂತೇಜಿ, ಬಳ್ಳಾರಿ ಮತ್ತು ಧಮ್ಮವೀರ ಭಂತೇಜಿ, ರೈಲ್ವೆ ಎಂಪ್ಲಾಯಿಸ್ ಬುದ್ದ ವಿಹಾರ, ಹುಬ್ಬಳ್ಳಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು. 
    ಉಪಾಸಕ ಸುರೇಶ್ ಅಧ್ಯಕ್ಷತೆ ವಹಿಸಲಿದ್ದು, ಬೆಂಳೂರಿನ ಧಮ್ಮ ಚಿಂತಕ ಶಿವರುದ್ರಪ್ಪ ಸಮಾರಂಭ ಉದ್ಘಾಟಿಸಲಿದ್ದಾರೆ. ಬಿಎಸ್‌ಐ ದಕ್ಷಿಣ ಉಪಾಧ್ಯಕ್ಷ ಮಹೇಂದ್ರ ಮಂಕಳೆ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. 
    ಮಾಲೂರು ಧಮ್ಮ ಚಿಂತಕಿ ಸಿ.ವೈ ರಾಧ, ಟಿನರಸೀಪುರ ಧಮ್ಮಾಚಾರಿ ಕೆ.ಎನ್ ಪ್ರಭುಸ್ವಾಮಿ, ಸಂಬುದ್ಧ ಧರ್ಮಾಂಕುರ ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸ್, ಡಿಎಸ್‌ಎಸ್ ಮುಖಂಡ ಸತ್ಯ ಭದ್ರಾವತಿ, ಸಿದ್ದಾರ್ಥ ಅಂಧರ ಕೇಂದ್ರ, ಅಧ್ಯಕ್ಷ ಶಿವಬಸಪ್ಪ, ಉಪಾಸಕ ರಾಜಶೇಖರ್, ತಮಿಳು ಆದಿ ದ್ರಾವಿಡ ಹಿತ ರಕ್ಷಣಾ ಸಮಿತಿ ನಿತ್ಯಾನಂದ, ವಿಜಯಪುರ ಡಿಎಸ್‌ಎಸ್ ಮುಖಂಡ ಮರಿಯಪ್ಪ ಹೆಬ್ಬಾಳ, ಮಂಗಳೂರಿನ ಬೌದ್ಧ ಉಪಾಸಕ ರಾಜಶೇಖರ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. 
    ಬೌದ್ಧ ಉಪಾಸಕ ಮತ್ತು ಉಪಾಸಕಿಯರಿಗೆ ಗೌರವ ಸಮರ್ಪಣೆ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು. 

ಕವಿ ಆಶಯದಂತೆ ಕನ್ನಡ ನಿತ್ಯೋತ್ಸವವಾಗಲಿ, ನೆಲ-ಜಲ-ಭಾಷೆ ಉಳಿವಿಗಾಗಿ ಹೋರಾಟ ನಿರಂತರವಾಗಿರಲಿ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ 


ಭದ್ರಾವತಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಹಳೇನಗರದ ಕನಕಮಂಟಪದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ನಾಡ ಧ್ವಜಾರೋರಹಣ ನೆರವೇರಿಸಿದರು. 
    ಭದ್ರಾವತಿ : ಕನ್ನಡ ನಾಡಿನ ನೆಲ-ಜಲ-ಭಾಷೆಯ ಮೇಲಿನ ಪ್ರೀತಿ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಕವಿ ಆಶಯದಂತೆ ಅದು ನಿತ್ಯೋತ್ಸವವಾಗಬೇಕು. ಈ ನಿಟ್ಟಿನಲ್ಲಿ ಕನ್ನಡಿಗರಾದ ನಾವುಗಳು ಮುನ್ನಡೆಯಬೇಕೆಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು. 
    ಅವರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ನಾಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 
    ನಮ್ಮ ಆಚರಣೆಗಳು ಕೇವಲ ಮೇಲ್ನೋಟಕ್ಕೆ ಸೀಮಿತವಾಗಬಾರದು. ನೆಲ-ಜಲ-ಭಾಷೆ ಮೇಲಿನ ಪ್ರೀತಿ ನಿರಂತರವಾಗಿರಬೇಕು. ನಮ್ಮ ನಾಡಿಗಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸುವ ಮೂಲಕ ಆವರ ದಾರಿಯಲ್ಲಿ ನಾವುಗಳು ಸಹ ಸಾಗಬೇಕು. ಆಗ ಮಾತ್ರ ಕನ್ನಡ ನೆಲ-ಜಲ-ಭಾಷೆ ಉಳಿಸಿಕೊಳ್ಳಲು ಸಾಧ್ಯ ಎಂದರು.
    ಎಂಪಿಎಂ ಆರಂಭಕ್ಕೆ ಕೇಂದ್ರ ಸರ್ಕಾರ ಎನ್‌ಓಸಿ ನೀಡಲಿ: 
    ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಹ ಹೆಚ್ಚಿನ ಅನುದಾನ ನೀಡುತ್ತಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಪುನರ್ ಆರಂಭಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರ ಕಾರ್ಖಾನೆಗೆ ಸೇರಿದ ಅರಣ್ಯ ಭೂಮಿಗೆ ಎನ್‌ಓಸಿ ನೀಡಬೇಕು. ಒಂದು ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಒಂದು ವೇಳೆ ಕಾರ್ಖಾನೆಗೆ ಎನ್‌ಓಸಿ ಲಭಿಸಿದ್ದಲ್ಲಿ ಕೇವಲ ೩ ತಿಂಗಳಲ್ಲಿ ಕಾರ್ಖಾನೆ ಪುನರ್ ಆರಂಬಿಸಲಾಗುವುದು. ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಲಭಿಸಲಿದೆ ಎಂದರು. 
    ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನಯನ್ನು ಕೇಂದ್ರ ಸರ್ಕಾರ ಇದೀಗ ಅಭಿವೃದ್ಧಿ ಪಡಿಸುವುದಾಗಿ ಹೇಳುತ್ತಿದ್ದು, ಆದರೆ ಇನ್ನೂ ಕಾರ್ಯಗತವಾಗಿಲ್ಲ. ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ತಕ್ಷಣ ಗಮನ ಹರಿಸಬೇಕು. ಕಾರ್ಖಾನೆ ಅಭಿವೃದ್ಧಿಗೊಳ್ಳುವುದನ್ನು ನಾವು ಸಹ ಸ್ವಾಗತಿಸುತ್ತೇವೆ ಎಂದರು. 
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಎನ್.ಕೆ ಹೇಮಂತ್, ತಹಸೀಲ್ದಾರ್ ಪರುಸಪ್ಪ ಕುರುಬರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ. ತಿಮ್ಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಕೃಷ್ಣ ಎಸ್. ಭಟ್, ಡಾ. ಡಿ. ನಾಗರಾಜ್ ಸೇರಿದಂತೆ ನಗರಸಭೆ ಚುನಾಯಿತ ಹಾಗು ನಾಮನಿರ್ದೇಶಿತ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಕಾರ್ಯಕ್ರಮಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಿಂದ ಕನಕಮಂಟಪ ಮೈದಾನದವರೆಗೂ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.