ಭಾನುವಾರ, ನವೆಂಬರ್ 9, 2025

ಭದ್ರಾವತಿಯಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪರಿಪೂರ್ಣ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ತಾಲೂಕಿನ ಬಿ.ಆರ್.ಪಿ ಕರಾವಳಿ ಆಸ್ಪತ್ರೆ ಸಮೀಪದ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಸರ್ಕಾರದ ಪಂಚ ಗ್ಯಾರಂಟಿ ಪ್ರಾಧಿಕಾರದ ಸಮಿತಿ ಸಭಾ ಕಾರ್ಯಕ್ರಮ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
    ಭದ್ರಾವತಿ: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು. 
    ಅವರು ಭಾನುವಾರ ತಾಲೂಕಿನ ಬಿ.ಆರ್.ಪಿ ಕರಾವಳಿ ಆಸ್ಪತ್ರೆ ಸಮೀಪದ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಸರ್ಕಾರದ ಪಂಚ ಗ್ಯಾರಂಟಿ ಪ್ರಾಧಿಕಾರದ ಸಮಿತಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  
    ಭಾಗ್ಯಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಯಾವುದೇ ಬಾಕಿ ಉಳಿಸಿಕೊಳ್ಳದೆ ಸಮರ್ಪಕವಾಗಿ ಅವರ ಖಾತೆಗಳಿಗೆ ಹಣ ಜಮಾ ಮಾಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಗುರಿ ಸಾಧಿಸಲಾಗುವುದು. ಉಳಿದಂತೆ ಶಕ್ತಿ ಯೋಜನೆಯನ್ನು ಬಹುತೇಕ ಮಹಿಳೆಯರು ಸದ್ಬಳಕೆ ಮಾಡಿಕೊಂಡಿದ್ದು, ಈ ಯೋಜನೆಯಲ್ಲೂ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ. ಅಲ್ಲದೆ ಯೋಜನೆಗೆ ವ್ಯಯವಾಗಿರುವ ಸುಮಾರು ೩೦೦ ಕೋ.ರು. ಅನುದಾನ ಸಹ ಸರ್ಕಾರದಿಂದ ಬಿಡುಗಡೆ ಮಾಡಿಸಲಾಗಿದೆ ಎಂದರು. 
    ಸುಮಾರು ೫೭ ಕೋ.ರು. ವೆಚ್ಚದಲ್ಲಿ ಈ ವ್ಯಾಪ್ತಿಯಲ್ಲಿ ಬರುವ ಸಿಂಗನಮನೆ, ನೆಲ್ಲಿಸರ, ಮಾಳೇನಹಳ್ಳಿ, ಗೋಣಿಬೀಡು, ಹುಣಸೇಕಟ್ಟೆ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕೆರೆಗಳನ್ನು ನಿರ್ಮಾಣಮಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದರು.
    ಕಾರ್ಯಕ್ರಮದಲ್ಲಿ ಪ್ರಮುಖರಾದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್. ಮಣೆಶೇಖರ್, ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಸಿಂಗನಮನೆ ಗ್ರಾಮ ಪಂಚಾಯಿತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳು, ಪ್ರಿಯಾಂಕ ಗಣೇಶ್, ಮಾಲಾಗೌಡ ಹಾಗು ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು. 

ಎಲ್. ಸಂದೀಪರಿಗೆ ಡಾಕ್ಟರೇಟ್ ಪದವಿ

ಎಲ್. ಸಂದೀಪ 
    ಭದ್ರಾವತಿ : ಚಿತ್ರದುರ್ಗ ತಾಲೂಕಿನ ಚೌಲಿಹಳ್ಳಿ ಗ್ರಾಮದ ಎಲ್. ಸಂದೀಪರವರು ಮಂಡಿಸಿದ್ದ `ಶಿಕ್ಷಕರ ಶಿಕ್ಷಣ ಸಂಸ್ಥೆಗಳ ಸಾಂಸ್ಥಿಕ ವಾತಾವರಣ, ಪ್ರಶಿಕ್ಷಕರ ವೃತ್ತಿ ನೈತಿಕತೆ ಮತ್ತು ಪ್ರಶಿಕ್ಷಕರ-ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಸಂಬಂಧಗಳ ಅಧ್ಯಯನ' ವಿಷಯ ಕುರಿತ ಸಂಶೋಧನಾ ವರದಿಗೆ ಕುವೆಂಪು ವಿಶ್ವ ವಿದ್ಯಾಲಯದ ಡಾಕ್ಟರೇಟ್(ಪಿಎಚ್‌ಡಿ) ಪದವಿ ಲಭಿಸಿದೆ. 
    ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ತಜ್ಞರಾದ ಪ್ರೊ. ಜಗನ್ನಾಥ್ ಕೆ. ಡಾಂಗೆ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ವರದಿ ಮಂಡಿಸಿದ್ದರು. ಸಂದೀಪರವರು  ಕೂಲಿ ಕಾರ್ಮಿಕರಾದ ಲೋಕೇಶ್ವರಪ್ಪ-ತಿಪ್ಪಮ್ಮ ದಂಪತಿ ಪುತ್ರರಾಗಿದ್ದಾರೆ. ಇವರು ಬಡತನದ ನಡುವೆಯೂ ಗಟ್ಟಿಯಾದ ಕನಸು, ದುಡಿಮೆ ಮತ್ತು ಅಧ್ಯಯನಶೀಲತೆಯನ್ನು ಜೀವವೈಖರಿಯಾಗಿಸಿಕೊಂಡಿದ್ದರು.
    ಇವರ ಈ ಸಾಧನೆಗೆ ಸ್ನಾತಕೋತ್ತರ ಶಿಕ್ಷಣಶಾಸ್ತ್ರ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರು, ಪ್ರಾಧ್ಯಾಪಕರು, ಸಿಬ್ಬಂದಿವರ್ಗ, ಕುಟುಂಬದವರು ಮತ್ತು ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.