ಬುಧವಾರ, ನವೆಂಬರ್ 12, 2025

ಅವ್ಯವಹಾರಕ್ಕೆ ಬೇಸತ್ತು ಗ್ರಾ.ಪಂ. ಸದಸ್ಯನಿಂದಲೇ ಹಗಲು-ರಾತ್ರಿ ಧರಣಿ ಸತ್ಯಾಗ್ರಹ..!



ಭದ್ರಾವತಿ ತಾಲೂಕಿನ ಅತಿದೊಡ್ಡ ಪಂಚಾಯಿತಿ ಸಿಂಗನಮನೆ ಗ್ರಾಮ ಪಂಚಾಯಿತಿ ಅವ್ಯವಹಾರ ಖಂಡಿಸಿ ಸದಸ್ಯ ಮಂಜುನಾಥ್ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಮಂಗಳವಾರದಿಂದ ಹಗಲು-ರಾತ್ರಿ ಧರಣಿ ನಡೆಸುತ್ತಿದ್ದು, ಆದರೆ ಇದುವರೆಗೂ ಯಾರು ಸಹ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಲು ಮುಂದಾಗಿಲ್ಲ. 
    ಭದ್ರಾವತಿ : ತಾಲೂಕಿನ ಅತಿದೊಡ್ಡ ಪಂಚಾಯಿತಿ ಸಿಂಗನಮನೆ ಗ್ರಾಮ ಪಂಚಾಯಿತಿ ಅವ್ಯವಹಾರ ಖಂಡಿಸಿ ಸದಸ್ಯ ಮಂಜುನಾಥ್ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಮಂಗಳವಾರದಿಂದ ಹಗಲು-ರಾತ್ರಿ ಧರಣಿ ನಡೆಸುತ್ತಿದ್ದು, ಆದರೆ ಇದುವರೆಗೂ ಯಾರು ಸಹ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಲು ಮುಂದಾಗಿಲ್ಲ. 
    ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಜಾಗ ಹಾಗು ಬಡಾವಣೆಗಳಲ್ಲಿ ಸಿಎ ನಿವೇಶಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಬೀದಿ ದೀಪಗಳ ಖರೀದಿಯಲ್ಲಿ ಹಾಗು ಕುಡಿಯುವ ನೀರಿನ ಕೊಳವೆಗಳ ದುರಸ್ತಿ ಕಾರ್ಯದಲ್ಲಿ ಅಕ್ರಮವೆಸಗಲಾಗಿದೆ ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಾಗು ೧೫ನೇ ಹಣಕಾಸು ವಾರ್ಷಿಕ ಲೆಕ್ಕ ಪರಿಶೋಧನೆಯಲ್ಲಿ ಅಕ್ರಮವೆಸಗಿದ್ದಾರೆಂದು  ಆರೋಪಿಸಿದ್ದಾರೆ.


    ಅಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿನಗರ ಗ್ರಾಮದಲ್ಲಿ ಕೆಲವು ದಿನಗಳಿಂದ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ. ಪಂಚಾಯಿತಿ ಅಧ್ಯಕ್ಷೆ ಮಂಜುಳಾರವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ವಾರ್ಡ್ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಸರಿಯಾಗಿ ಬಿಲ್ ಪಾವತಿಸಿಲ್ಲ. ಅಲ್ಲದೆ ಹೊಸದಾಗಿ ಯಾವುದೇ ಕಾಮಗಾರಿಗಳನ್ನು ಹಾಗು ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ ಎಂದು ದೂರಿದ್ದಾರೆ. 
    ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗದಕಾರಣ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಮಂಜುನಾಥ್ ಅಳಲು ತೋರ್ಪಡಿಸಿಕೊಂಡಿದ್ದಾರೆ.  

ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ವಿಜೃಂಭಣೆಯಿಂದ ಜರುಗಿದ ಆಶ್ಲೇಷ ಬಲಿ ಪೂಜೆ

ಪ್ರತಿ ವರ್ಷದಂತೆ ಈ ವರ್ಷ ಸಹ ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಆಶ್ಲೇಷ ಬಲಿ ಪೂಜೆ ಬುಧವಾರ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ: ಪ್ರತಿ ವರ್ಷದಂತೆ ಈ ವರ್ಷ ಸಹ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಆಶ್ಲೇಷ ಬಲಿ ಪೂಜೆ ಬುಧವಾರ ವಿಜೃಂಭಣೆಯಿಂದ ಜರುಗಿತು.
    ಬೆಳಗ್ಗೆ ನಿರ್ಮಾಲ್ಯ, ಪಂಚಾಮೃತ ಅಭಿಷೇಕ, ನಂತರ ಹೋಮ ಸೇರಿದಂತೆ ಇನ್ನಿತರ ಆಚರಣೆಗಳು ಜರುಗಿದವು. ಮಧ್ಯಾಹ್ನ ೧೨ ಗಂಟೆಗೆ ಆಶ್ಲೇಷ ಬಲಿ ಪೂಜೆ ನಡೆಯಿತು. ಪಂಡಿತರಾದ ಗೋಪಾಲಕೃಷ್ಣ ಆಚಾರ್ ಮತ್ತು ಅರ್ಚಕ ಪ್ರಮೋದ್ ಕುಮಾರ್ ನೇತೃತ್ವದ ತಂಡ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿತು. 
     ಗುರುರಾಜ ಸೇವಾ ಸಮಿತಿಯ ಅಧ್ಯಕ್ಷ ಮುರುಳಿಧರ್ ತಂತ್ರಿ, ಉಪಾಧ್ಯಕ್ಷರಾದ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಕೆ. ರಮಾಕಾಂತ, ನಿರಂಜನಾಚಾರ್ಯ ಹಾಗೂ ಪ್ರಧಾನ ಅರ್ಚಕ ಮಾಧುರಾವ್, ಸಮೀರಾಚಾರ್, ಸುಧೀಂದ್ರ ಮತ್ತು ಜಯತೀರ್ಥ ಸೇರಿದಂತೆ ಸಿದ್ದಾರೂಢನಗರ, ಕನಕನಗರ, ಹಳೇನಗರ, ಭೂತನಗುಡಿ, ಹೊಸಮನೆ, ಜನ್ನಾಪುರ, ನ್ಯೂಟೌನ್, ಹುತ್ತಾಕಾಲೋನಿ ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು.  

ಕೆಂಪು ಕೋಟೆ ಸಮೀಪ ಉಗ್ರರ ಬಾಂಬ್ ಸ್ಪೋಟಕ್ಕೆ ಯುವ ಕಾಂಗ್ರೆಸ್ ಖಂಡನೆ : ಪ್ರತಿಭಟನೆ

ಅಸಮರ್ಥ ಕೇಂದ್ರ ಗೃಹ ಸಚಿವ ವಜಾಗೊಳಿಸಿ, ದೇಶದ ಭದ್ರತೆ ಹೆಚ್ಚಿಸಿ ರಾಷ್ಟ್ರಪತಿಗೆ ಮನವಿ

ದೇಶದ ರಾಜಧಾನಿ ನವದೆಹಲಿಯ ಕೆಂಪು ಕೋಟೆ ಸಮೀಪ ಉಗ್ರರ ಬಾಂಬ್ ಸ್ಪೋಟ ಘಟನೆಯನ್ನು ಖಂಡಿಸಿ ಭದ್ರಾವತಿಯಲ್ಲಿ ಬುಧವಾರ ಯುವ ಕಾಂಗ್ರೆಸ್ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ : ದೇಶದ ಶಕ್ತಿಕೇಂದ್ರವಾಗಿರುವ ರಾಜಧಾನಿ ನವದೆಹಲಿಯ ಐತಿಹಾಸಿಕ ಸ್ಥಳ ಕೆಂಪು ಕೋಟೆ ಸಮೀಪ ಉಗ್ರರ ಬಾಂಬ್ ಸ್ಪೋಟಕ್ಕೆ ಅಮಾಯಕರು ಪ್ರಾಣ ಕಳೆದುಕೊಂಡಿದ್ದು, ಈ ಘಟನೆಯನ್ನು ಜಿಲ್ಲಾ ಯುವ ಕಾಂಗ್ರೆಸ್ ಖಂಡಿಸುತ್ತದೆ. ಅಲ್ಲದೆ ತಕ್ಷಣ ಅಸಮರ್ಥ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವ ಮೂಲಕ ದೇಶದೊಳಗೆ ಉಗ್ರರು ಪ್ರವೇಶಿಸದಂತೆ ರಕ್ಷಣಾ ವ್ಯವಸ್ಥೆ ಬಲಪಡಿಸಬೇಕೆಂದು ಆಗ್ರಹಿಸುತ್ತದೆ ಎಂದು ಯುವ ಕಾಂಗ್ರೆಸ್ ಮುಖಂಡರು ಹೇಳಿದರು. 
    ಕೆಂಪು ಕೋಟೆ ಸಮೀಪ ಉಗ್ರರ ಬಾಂಬ್ ಸ್ಪೋಟ ಘಟನೆ ಖಂಡಿಸಿ ಬುಧವಾರ ಯುವ ಕಾಂಗ್ರೆಸ್ ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಮುಖರಾದ ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮೊಹಮ್ಮದ್ ಶಫಿ, ನಗರ ಅಧ್ಯಕ್ಷ ಅಭಿಷೇಕ, ನಗರಸಭೆ ಸದಸ್ಯ ಚನ್ನಪ್ಪ, ಮುಖಂಡರಾದ ಎಸ್. ಮಂಜುನಾಥ್, ನದೀಮ್ ಬಾಷಾ, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಮುರುಗೇಶ್ ಸೇರಿದಂತೆ ಇನ್ನಿತರರು,  ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಉಗ್ರರ ಕೃತ್ಯಗಳು ಹೆಚ್ಚಾಗುತ್ತಿದ್ದು, ೧೪ ಫೆಬ್ರವರಿ ೨೦೧೯ರಂದು ಅತ್ಯಂತ ಬಿಗಿಭದ್ರತೆ ಇರುವ ಪ್ರದೇಶಕ್ಕೆ ಸುಮಾರು ೮೦೦ ಕೆ.ಜಿಗೂ ಅಧಿಕ ತೂಕದ ಗ್ರಾನೇಟ್‌ಗಳನ್ನು ತಂದು ಸೈನಿಕರ ವಾಹನ ಗುರಿಯಾಸಿ ದಾಳಿ ಮಾಡಲಾಗಿತ್ತು. ಈ ಘಟನೆಯಲ್ಲಿ ಸೈನಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಅಲ್ಲದೆ ೨೨ ಏಪ್ರಿಲ್ ೨೦೨೫ರಂದು ಕಾಶ್ಮೀರದ ಪಹಲ್ಗಾಮ್ ಉದ್ಯಾನವನದಲ್ಲಿ ಸುಮಾರು ೨೬ ಅಮಾಯಕ ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದರು. ಆದರೂ ಸಹ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರು. 
    ಈ ಕೃತ್ಯಗಳಿಗೆ ದೇಶದ ಭದ್ರತಾ ವೈಫಲ್ಯಗಳೇ ಕಾರಣಗಳಾಗಿವೆ. ಕೇಂದ್ರ ಸರ್ಕಾರ ದೇಶದ ನಾಗರಿಕರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗೃಹ ಸಚಿವ ಅಮಿತ್ ಶಾರವರು ಸಚಿವರಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆಂದು ದೂರಿದರು. 
    ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದು  ತಮ್ಮ ತಪ್ಪನ್ನು ಮರೆಮಾಚಲು ಯತ್ನಿಸುತ್ತಿದೆ. ಚುನಾವಣೆ ಸಂದರ್ಭದಲ್ಲಿಯೇ ಈ ರೀತಿ ಕೃತ್ಯಗಳು ನಡೆಯುತ್ತಿರುವುದು ಕೌತುಕವಾಗಿದ್ದು, ಕೆಂಪು ಕೋಟೆ ಸಮೀಪ ಉಗ್ರರ ಬಾಂಬ್ ಸ್ಪೋಟ ಘಟನೆಯನ್ನು ಪಾರದರ್ಶಕವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ರಾಷ್ಟ್ರಪತಿಗೆ ತಹಸೀಲ್ದಾರ್ ಮೂಲಕ ಮನವಿಸಲ್ಲಿಸಲಾಯಿತು. 
    ಯುವ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಮಸೂದ್, ಮಂಜುನಾಥ್ ಕೊಯ್ಲಿ, ರವಿ, ಇರ್ಫಾನ್, ಸನಾನ್, ಬಿ. ಗಂಗಾಧರ್, ಪ್ರಕಾಶ್ ರಾವ್, ಪಾರ್ವತಿ, ಕೆ. ರುಕ್ಮಿಣಿ, ಬೇಬಿ ಚಂದ್ರಶೇಖರ್, ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು.