ಗುರುವಾರ, ಅಕ್ಟೋಬರ್ 30, 2025

ನ.೧ರಂದು `ಸಂಘ ೧೦೦ ಮತ್ತು ಸಾಮರಸ್ಯ'ಉಪನ್ಯಾಸ-ಸಂವಾದ



    ಭದ್ರಾವತಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಇದೀಗ ೧೦೦ ವರ್ಷ ಪೂರೈಸಿದ್ದು, ಈ ಹಿನ್ನಲೆಯಲ್ಲಿ ದೇಶಾದ್ಯಂತ ಹಲವಾರು ಕಾರ್ಯಕ್ರಮಗಳು ಜರುಗುತ್ತಿವೆ. ಇದಕ್ಕೆ ಪೂರಕವಾಗಿ ನಗರದ ಮಂಥನ ವತಿಯಿಂದ ನ.೧ರಂದು `ಸಂಘ ೧೦೦ ಮತ್ತು ಸಾಮರಸ್ಯ' ವಿಷಯ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಿದೆ. 
    ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ) ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ ೨.೩೦ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸಂಘದ ಹಿರಿಯ ಕಾರ್ಯಕರ್ತರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್‌ರವರು ತಮ್ಮ ಅನುಭವದ ನುಡಿಗಳನ್ನು ಹಂಚಿಕೊಳ್ಳಲಿದ್ದಾರೆ. ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್‌ರವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸಂಘ ಪರಿವಾರದ ಪ್ರಮುಖರು, ಕಾರ್ಯಕರ್ತರು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಪೊಲೀಸ್ ಇಲಾಖೆಯಿಂದ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು

ದೇಶದ ಮೊದಲ ಉಪ ಪ್ರಧಾನಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್‌ರವರ ಜನ್ಮದಿನಾಚರಣೆ ಅಂಗವಾಗಿ ಭದ್ರಾವತಿ ನಗರದ ವಿವಿಧ ಪೊಲೀಸ್ ಠಾಣೆಗಳ ವತಿಯಿಂದ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 
    ಭದ್ರಾವತಿ : ದೇಶದ ಮೊದಲ ಉಪ ಪ್ರಧಾನಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್‌ರವರ ಜನ್ಮದಿನಾಚರಣೆ ಅಂಗವಾಗಿ ನಗರದ ವಿವಿಧ ಪೊಲೀಸ್ ಠಾಣೆಗಳ ವತಿಯಿಂದ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 
    ಸರ್ದಾರ್ ವಲ್ಲಭಬಾಯ್ ಪಟೇಲ್‌ರವರ ಜನ್ಮದಿನ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ರಾಷ್ಟ್ರೀಯ ಭಾವೈಕ್ಯತೆಗೆ ಸಂಬಂಧಿಸಿದಂತೆ ಶಾಲಾ ಮಕ್ಕಳಿಗೆ ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ ಹಾಗು ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಯಿತು. 


    ನ್ಯೂಟೌನ್ ಪೊಲೀಸ್ ಠಾಣೆ ವತಿಯಿಂದ ಹುತ್ತಾ ಕಾಲೋನಿ ಸಹ್ಯಾದ್ರಿ ಪ್ರೌಢಶಾಲೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಠಾಣೆಯ ಉಪನಿರೀಕ್ಷಕ ರಮೇಶ್ ಸರ್ದಾರ್ ವಲ್ಲಭಬಾಯ್ ಪಟೇಲ್‌ರವರ ಕುರಿತು ಮಾಹಿತಿ ನೀಡಿದರು. ಠಾಣೆಯ ಸಿಬ್ಬಂದಿಗಳೊಂದಿಗೆ ಶಾಲೆಯ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಜಯಂತಿ ರತನ್ ನಿಧನ

ಜಯಂತಿ ರತನ್ 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಹಳೇನಗರ ಕೇಶವಪುರ ಬಡಾವಣೆ ನಿವಾಸಿ ಜಯಂತಿ ರತನ್(೬೪) ಗುರುವಾರ ಬೆಳಗಿನ ಜಾವ ನಿಧನ ಹೊಂದಿದರು. 
  ತಾಯಿ ಮತ್ತು ಪತಿ ಇದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಹೊಳೆಹೊನ್ನೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ಆರ್ಯವೈಶ್ಯ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

ಬುಧವಾರ, ಅಕ್ಟೋಬರ್ 29, 2025

೧೫೯ಕ್ಕೂ ಹೆಚ್ಚು ಕಾರ್ಮಿಕರಿಗೆ ಉಚಿತ ಹೃದಯ ತಪಾಸಣೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಬುಧವಾರ ವಿಐಎಸ್‌ಎಲ್ ಆಸ್ಪತ್ರೆ ಮತ್ತು ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಬುಧವಾರ ವಿಐಎಸ್‌ಎಲ್ ಆಸ್ಪತ್ರೆ ಮತ್ತು ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. 
    ಶಿಬಿರದಲ್ಲಿ ರಕ್ತದೊತ್ತಡ(ಬಿಪಿ) ತಪಾಸಣೆ, ಜಿಆರ್‌ಬಿಎಸ್(ಮಧುಮೇಹ) ತಪಾಸಣೆ, ೨ಡಿ ಏಕೋ, ಇಸಿಜಿ ತಪಾಸಣೆ ನಡೆಸಲಾಯಿತು. ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೃದಯ ತಜ್ಞರಾದ ಡಾ. ಭರತ್ ಗೌಡ ಮತ್ತು  ಡಾ.ಎಚ್.ಜೆ ಶಶಾಂಕ್ ವೈಧ್ಯಕೀಯ ಸಲಹೆ ನೀಡಿದರು. ಸಹಾಯಕರಾದ ರಂಜಿತ, ವೀಣಾ, ನಿತ್ಯ, ಗಣೇಶ್ ಮತ್ತು ಮಣಿಕಂಠ ಮತ್ತು  ವಿಐಎಎಲ್ ಆಸ್ಪತ್ರೆಯ ಅಲೆನ್ ಪಿಂಟೋ, ಪುಷ್ಪಲತಾ, ಜಿ. ಪ್ರಕಾಶ್, ಉಮೇಶ್, ರಮೇಶ್ ಮತ್ತು ಕಿರಿಯ ಅಧಿಕಾರಿ ಎಂ.ಎಲ್. ಯೋಗೀಶ್ ಉಚಿತ ತಪಾಸಣೆಗೆ ನೆರವಾದರು.
ವಿಐಎಸ್‌ಎಲ್‌ನ ಮಾನವ ಸಂಪನ್ಮೂಲ ಇಲಾಖೆ, ಆಸ್ಪತ್ರೆ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಗಳಿಂದ ಶಿಬಿರ ಸಂಯೋಜಿಸಲಾಗಿತ್ತು. 
    ವಿಐಎಸ್‌ಎಲ್ ಆಸ್ಪತ್ರೆ ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಡಾ. ಸುಜೀತ್ ಕುಮಾರ್ ಮತ್ತು ಹೆಚ್.ಆರ್ ಹಾಗು ಸಾರ್ವಜನಿಕ ಸಂಪರ್ಕ ಮಹಾಪ್ರಬಂಧಕ ಎಲ್. ಪ್ರವೀಣ್‌ಕುಮಾರ್ ಶಿಬಿರದ ಮೇಲುಸ್ತುವಾರಿ ವಹಿಸಿದ್ದರು. ೧೫೯ಕ್ಕೂ ಹೆಚ್ಚು ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಶಿಬಿರದ ಸದುಪಯೋಗ ಪಡೆದುಕೊಂಡರು.

ಡಾ. ಪುನೀತ್ ರಾಜಕುಮಾರ್ ಗುಣಗಳನ್ನು ಮೈಗೂಡಿಸಿಕೊಳ್ಳಿ : ಬಿ.ಎಸ್ ಗಣೇಶ್

೪ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ : ಗೀತಾ ಗಾಯನ, ಅನ್ನಸಂತರ್ಪಣೆ 

ಭದ್ರಾವತಿ ಹಳೇನಗರದ ತಾಲೂಕು ಪಂಚಾಯಿತಿ ಕಛೇರಿ ಸಮೀಪದ ಶ್ರೀ ಕನಕ ಆಟೋ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿವಂಗತ ಡಾ. ಪುನೀತ್ ರಾಜಕುಮಾರ್‌ರವರ ೪ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ಭದ್ರಾವತಿ: ಚಲನಚಿತ್ರ ನಟ, ಸಮಾಜ ಸೇವಕ ಕರ್ನಾಟಕ ರತ್ನ, ಪವರ್ ಸ್ಟಾರ್ ದಿವಂಗತ ಡಾ. ಪುನೀತ್ ರಾಜಕುಮಾರ್‌ರವರ ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಹೇಳಿದರು. 
    ಅವರು ಬುಧವಾರ ಹಳೇನಗರದ ತಾಲೂಕು ಪಂಚಾಯಿತಿ ಕಛೇರಿ ಸಮೀಪದ ಶ್ರೀ ಕನಕ ಆಟೋ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿವಂಗತ ಡಾ. ಪುನೀತ್ ರಾಜಕುಮಾರ್‌ರವರ ೪ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 


ಭದ್ರಾವತಿ ಹಳೇನಗರದ ತಾಲೂಕು ಪಂಚಾಯಿತಿ ಕಛೇರಿ ಸಮೀಪದ ಶ್ರೀ ಕನಕ ಆಟೋ ನಿಲ್ದಾಣದಲ್ಲಿ ದಿವಂಗತ ಡಾ. ಪುನೀತ್ ರಾಜಕುಮಾರ್‌ರವರ ೪ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. 
    ಪುನೀತ್ ರಾಜಕುಮಾರ್ ಒಬ್ಬ ಉತ್ತಮ ನಟ ಮಾತ್ರವಲ್ಲದೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಈ ನಾಡಿಗೆ ಆದರ್ಶಪ್ರಾಯರಾಗಿದ್ದಾರೆ. ಅವರಂತೆ ನಾವುಗಳು ಸಹ ಸಮಾಜಕ್ಕೆ ಸೇವೆ ಸಲ್ಲಿಸುವಂತವರಾಗಬೇಕೆಂದರು. 
    ಪ್ರತಿ ವರ್ಷದಂತೆ ಈ ಬಾರಿ ಸಹ ಪುಣ್ಯಸ್ಮರಣೆ ಅಂಗವಾಗಿ ಪುನೀತ್ ರಾಜಕುಮಾರ್‌ರವರ ಚಲನಚಿತ್ರ ಗೀತೆಗಳ ಗಾಯನ ಹಾಗು ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರೀ ಕನಕ ಆಟೋ ನಿಲ್ದಾಣದ ಅಧ್ಯಕ್ಷ ಸುರೇಶ್ ಹಾಗು ಪದಾಧಿಕಾರಿಗಳು, ಆಟೋ ಮಾಲೀಕರು, ಚಾಲಕರು, ಕೇಸರಿಪಡೆ ಅಧ್ಯಕ್ಷ ಗಿರೀಶ್, ಮಾಸ್ಟರ್ ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ನೂತನ ಡಾ. ಬಿ.ಆರ್ ಅಂಬೇಡ್ಕರ್ ಭವನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿ

ಗ್ರಾಮ ಸಭೆಗಳು ಸಮರ್ಪಕವಾಗಿ ನಡೆದು ಅರ್ಹರಿಗೆ ಸರ್ಕಾರಿ ಸೌಲಭ್ಯಗಳು ತಲುಪಲಿ 

ಭದ್ರಾವತಿ ನಗರದ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಭವನ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವಂತೆ ಆಗ್ರಹಿಸಿ ಹಾಗು ಗ್ರಾಮಸಭೆ ನಿರ್ಲಕ್ಷ್ಯ ಮತ್ತು ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಇರುವುದನ್ನು ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಅಂಬೇಡ್ಕರ್ ಭವನ ಮುಂಭಾಗ ಹಗಲು-ರಾತ್ರಿ ಪ್ರತಿಭಟನಾ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ. 
    ಭದ್ರಾವತಿ : ನಗರದ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಭವನ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವಂತೆ ಆಗ್ರಹಿಸಿ ಹಾಗು ಗ್ರಾಮಸಭೆ ನಿರ್ಲಕ್ಷ್ಯ ಮತ್ತು ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಇರುವುದನ್ನು ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಅಂಬೇಡ್ಕರ್ ಭವನ ಮುಂಭಾಗ ಹಗಲು-ರಾತ್ರಿ ಪ್ರತಿಭಟನಾ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ. 
    ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ಆರಂಭಗೊಂಡಿದ್ದು, ಹಲವು ದಶಕಗಳ ನಿರಂತರ ಹೋರಾಟದ ಫಲವಾಗಿ ನಗರದ ಹೃದಯ ಭಾಗವಾದ ಕನಕಮಂಟಪ ಮೈದಾನದ ಬಳಿ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ ಪಕ್ಕದ ಖಾಲಿ ಜಾಗದಲ್ಲಿ ೨೦೧೮ರಲ್ಲಿ ಶಂಕುಸ್ಥಾಪನೆಗೊಂಡು ಇದೀಗ ಪೂರ್ಣ ಪ್ರಮಾಣಕ್ಕೆ ತಲುಪಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ನಾಡಿನ ಎಲ್ಲಾ ಧರ್ಮದ, ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರರಾಗಿರುವ, ಬಡವರು, ಶೋಷಿತರ ಧ್ವನಿಯಾಗಿರುವ ಧೀಮಂತ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸುವ ಮೂಲಕ ಅಂಬೇಡ್ಕರ್‌ರವರನ್ನು ಗೌರವಿಸಬೇಕೆಂದು ಕೋರಲಾಯಿತು. 
    ತಾಲೂಕಿನ ಎಲ್ಲಾ ೩೩ ಗ್ರಾಮ ಪಂಚಾಯಿತಿಗಳಲ್ಲಿ ಸಮರ್ಪಕವಾಗಿ ಗ್ರಾಮಸಭೆಗಳನ್ನು ನಡೆಸುತ್ತಿಲ್ಲ. ಗ್ರಾಮಸಭೆಗಳ ಕುರಿತು ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಸರ್ಕಾರದ ಯೋಜನೆಗಳು ಬಡವರ್ಗದವರಿಗೆ ತಲುಪದೆ ಶ್ರೀಮಂತರ ಪಾಲಾಗುತ್ತಿವೆ. ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಗ್ರಾಮಸ್ಥರಿಗೆ ಸರಿಯಾಗಿ ಕಲ್ಪಿಸಿಕೊಡದೆ ನಿರ್ಲಕ್ಷ್ಯವಹಿಸಲಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಹ ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಅಲ್ಲದೆ ಭ್ರಷ್ಟಾಚಾರ ಸಹ ಕಂಡು ಬರುತ್ತಿದ್ದು, ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಲಾಯಿತು. 
    ತಕ್ಷಣ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ಕೈಗೊಳ್ಳುವ ಮೂಲಕ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು ಸಮರ್ಪಕವಾಗಿ ಗ್ರಾಮಸಭೆಗಳನ್ನು ನಡೆಸುವ ಮೂಲಕ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಿಬೇಕೆಂದು ಆಗ್ರಹಿಸಲಾಯಿತು. 
    ಪ್ರತಿಭಟನಾ ಧರಣಿ ಸತ್ಯಾಗ್ರಹದಲ್ಲಿ ಐ.ಎಲ್ ಅರುಣ್‌ಕುಮಾರ್, ಎಂ.ಎನ್ ಚಂದ್ರಶೇಖರ್, ಎಲ್. ಸಂಗಮ್ಮ, ರತ್ನಮ್ಮ, ವರಲಕ್ಷ್ಮಿ, ಲಕ್ಷ್ಮಮ್ಮ, ಸರೋಜ, ಶಾರದಮ್ಮ, ಗಂಗಮ್ಮ, ಜಯಮ್ಮ, ನಾಗರತ್ನಮ್ಮ, ನವೀನ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಎಚ್. ಲೋಕೇಶ್ ಹಂಪಯ್ಯ ನಿಧನ

ಎಚ್. ಲೋಕೇಶ್ ಹಂಪಯ್ಯ 
    ಭದ್ರಾವತಿ : ತಾಲೂಕಿನ ಕೆಂಚೇನಹಳ್ಳಿ ನಿವಾಸಿ, ಕೃಷಿಕ ಎಚ್. ಲೋಕೇಶ್ ಹಂಪಯ್ಯ(೫೮) ಮಂಗಳವಾರ ನಿಧನ ಹೊಂದಿದರು. 
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಕೆಂಚೇನಹಳ್ಳಿ ತೋಟದಲ್ಲಿ ಬುಧವಾರ ಬೆಳಿಗ್ಗೆ ನೆರವೇರಿತು. ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಕೆಂಚೇನಹಳ್ಳಿ ಎಸ್. ಕುಮಾರ್, ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ತಾಲೂಕು ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ, ಗ್ರಾಮದ ಮುಖಂಡ ಬಾರಂದೂರು ಶಾಂತಪ್ಪ ಸೇರಿದಂತೆ ಇನ್ನಿತರ ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಸಂತಾಪ ಸೂಚಿಸಿದರು.