ಮಂಗಳವಾರ, ನವೆಂಬರ್ 4, 2025

ಕುಮರಿ ನಾರಾಯಣಪುರ ನಾಗರಾಜಣ್ಣ ನಿಧನ


ಕುಮರಿ ನಾರಾಯಣಪುರ ನಾಗರಾಜಣ್ಣ 
    ಭದ್ರಾವತಿ :  ತಾಲೂಕಿನ ಕುಮರಿ ನಾರಾಯಣಪುರ ಗ್ರಾಮದ ನಿವಾಸಿ, ಎಚ್.ಎಲ್.ಜಿ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದ ನಾಗರಾಜಣ್ಣ ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದರು. 
    ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಇದ್ದಾರೆ. ನಾಗರಾಜಣ್ಣ ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಧರ್ಮೇಗೌಡರವರ ಸಹೋದರಿಯ ಪತಿಯಾಗಿದ್ದಾರೆ. ಇವರ ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ ಗ್ರಾಮದಲ್ಲಿ ನಡೆಯಲಿದ್ದು, ಇವರ ನಿಧನಕ್ಕೆ ಧರ್ಮೇಗೌಡ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು, ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಸೋಮವಾರ, ನವೆಂಬರ್ 3, 2025

ಎರಡನೇ ಬಾರಿಗೆ ಆಯ್ಕೆಯಾದ ತಳ್ಳಿಕಟ್ಟೆ ಎಚ್. ಲೋಕೇಶಪ್ಪರಿಗೆ ಸನ್ಮಾನ

ಭದ್ರಾವತಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಅಧ್ಯಕ್ಷರಾದ ಎರಡನೇ ಬಾರಿಗೆ ಆಯ್ಕೆಯಾದ ತಳ್ಳಿಕಟ್ಟೆ ಎಚ್. ಲೋಕೇಶಪ್ಪ ಅವರನ್ನು ಸೋಮವಾರ ನ್ಯೂಟೌನ್ ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು
    ಭದ್ರಾವತಿ : ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಅಧ್ಯಕ್ಷರಾದ ಎರಡನೇ ಬಾರಿಗೆ ಆಯ್ಕೆಯಾದ ತಳ್ಳಿಕಟ್ಟೆ ಎಚ್. ಲೋಕೇಶಪ್ಪ ಅವರನ್ನು ಸೋಮವಾರ ನ್ಯೂಟೌನ್ ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಟ್ರಸ್ಟ್ ವತಿಯಿಂದ ಸನ್ಮಾನಿಸಿ ನೇರಳೆ ಸಸಿ ನೀಡಲಾಯಿತು. ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಪ್ರಸ್ತುತ ನಷ್ಟದಲ್ಲಿದ್ದು, ಅದರ ನಷ್ಟವನ್ನು ತೀರಿಸಿ ರೈತರ ಹಿತ ಕಾಪಾಡುವುದಾಗಿ ಲೋಕೇಶ್ ತಿಳಿಸಿದರು. 
    ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಪ್ರಜಾವಿಮೋಚನಾ ವಿಮೋಚನಾ ಸಂಘದ ಗೌರವಾಧ್ಯಕ್ಷ ಎಸ್.ಕೆ ಸುಧೀಂದ್ರ, ಪ್ರಧಾನ ಕಾರ್ಯದರ್ಶಿ ಶ್ಯಾಮ್, ಡಿಎಸ್‌ಎಸ್ ಮುಖಂಡ ದಾಸ್, ಕಾರ್ಮಿಕ ಮುಖಂಡ ಬಿ.ಆರ್ ಸುನೀಲ್ ಕುಮಾರ್, ಪತ್ರಕರ್ತ ಅನಂತಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಮನೆ ಮಾಲೀಕನ ಜೊತೆಗೆ ಪ್ರಾಣ ಬಿಟ್ಟ ಶ್ವಾನ..!

ಮನೆ ಮಾಲೀಕ ಸಾವಿನ ಸುದ್ದಿ ತಿಳಿದು ನಾಯಿ ಕೂಡ ಪ್ರಾಣ ಬಿಟ್ಟಿರುವಂತಹ ಹೃದಯ ವಿದ್ರಾವಕ ಘಟನೆ ಭದ್ರಾವತಿ ನಗರದಲ್ಲಿ ನಡೆದಿದೆ. 
    ಭದ್ರಾವತಿ: ಮೂಕ ಪ್ರಾಣಿಗಳು ಸಹ ಮನುಷ್ಯನ ನೋವುಗಳಿಗೆ ಸ್ಪಂದಿಸುತ್ತವೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಮನೆ ಮಾಲೀಕ ಸಾವಿನ ಸುದ್ದಿ ತಿಳಿದು ನಾಯಿ ಕೂಡ ಪ್ರಾಣ ಬಿಟ್ಟಿರುವಂತಹ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಿಕಿಗೆ ಬಂದಿದೆ.
    ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ಜಿಂಕ್ ಲೈನ್ ನಿವಾಸಿ ಲಾರೆನ್ಸ್(೬೧) ಎಂಬುವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇವರ ಮೃತದೇಹ ಮನೆಗೆ ತರಲಾಗಿತ್ತು. ನೆಚ್ಚಿನ ಮಾಲೀಕ ಸಾವನ್ನಪ್ಪಿ, ಶವವಾಗಿ ಮಲಗಿರುವುದನ್ನು ಕಂಡ ನಾಯಿ ತೀವ್ರ ನೊಂದುಕೊಂಡಿದೆ. ಮಾಲೀಕ ಲಾರೆನ್ಸ್ ಶವದ ಪಕ್ಕದಲ್ಲೇ ಮಲಗಿ ತೀವ್ರ ದುಖ ವ್ಯಕ್ತಪಡಿಸಿದ ಶ್ವಾನವು, ಅಲ್ಲೇ ಅಂತಿಮ ಉಸಿರೆಳೆದಿದೆ. ಗುರುವಾರದಂದು ಲಾರೆನ್ಸ್ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಅವರೊಟ್ಟಿಗೆ ಸಾವನ್ನಪ್ಪಿದ ಶ್ವಾನದ ಮೃತದೇಹವನ್ನು ಮನೆಯ ಹಿಂಭಾಗದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ. 
    ಇದರೊಂದಿಗೆ ಮನುಷ್ಯರ ಜೊತೆ ಮೂಕ ಪ್ರಾಣಿಗಳು ಸಹ ಬಿಟ್ಟಿರಲಾರದ ಸಂಬಂಧ ಹೊಂದಿರುತ್ತವೆ. ಅದರಲ್ಲೂ ಅವರೊಂದಿಗೆ ಸದಸ್ಯರಂತೆಯೇ ಬದುಕುತ್ತಿರುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 

ಕ್ರೈಸ್ತರಿಂದ ಮೃತರ ಸ್ಮರಣೆ

ವಿಶ್ವದಾದ್ಯಂತ ಕ್ರೈಸ್ತರು ನ.೨ರಂದು ಮೃತರ ಸ್ಮರಣ ದಿನವನ್ನಾಗಿ ಆಚರಿಸಿದ್ದು, ಪ್ರತಿ ವರ್ಷದಂತೆ ಈ ವರ್ಷ ಸಹ ಭಾನುವಾರ ಭದ್ರಾವತಿ ನಗರದ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ಮೃತರ ಸ್ಮರಣೆ ಆಚರಿಸಲಾಯಿತು. 
    ಭದ್ರಾವತಿ : ವಿಶ್ವದಾದ್ಯಂತ ಕ್ರೈಸ್ತರು ನ.೨ರಂದು ಮೃತರ ಸ್ಮರಣ ದಿನವನ್ನಾಗಿ ಆಚರಿಸಿದ್ದು, ಪ್ರತಿ ವರ್ಷದಂತೆ ಈ ವರ್ಷ ಸಹ ಭಾನುವಾರ ನಗರದ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ಮೃತರ ಸ್ಮರಣೆ ಆಚರಿಸಲಾಯಿತು. 
    ಮೃತರು ತಮ್ಮ ಕುಟುಂಬಸ್ಥರ ಸಮಾಧಿಯನ್ನು ಸ್ವಚ್ಛಗೊಳಿಸಿ, ಸುಣ್ಣ-ಬಣ್ಣ ಬಳಿದು, ಹೂವಿನ ಅಲಂಕಾರದೊಂದಿಗೆ ಮೊಂಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಲಾಯಿತು.  ಸಂಜೆ ೪ ಗಂಟೆಗೆ ಸಮಾಧಿಯ ಆವರಣದಲ್ಲಿ ಹಿರಿಯೂರಿನ ಗುರು ಅಭ್ಯರ್ಥಿಗಳ ಕೇಂದ್ರದ ನಿರ್ದೇಶಕರಾದ ಫಾದರ್ ಸಂತೋಷ್ ಪೆರೇರಾ ರವರಿಂದ ಪೂಜಾ ವಿಧಿ- ವಿಧಾನಗಳು ನೆರವೇರಿದವು. 
    ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಗುರುಗಳಾದ ಫಾದರ್ ಸ್ಟೀವನ್ ಡೇಸಾ, ನ್ಯೂಟೌನ್ ಧರ್ಮ ಕೇಂದ್ರದ ಗುರುಗಳಾದ ಫಾದರ್ ಲ್ಯಾನ್ಸಿ ಡಿಸೋಜ, ಕಾಗದನಗರ ಕಾರ್ಮಿಕರ ಸಂತ ಜೋಸೆಫ್‌ರ ದೇವಾಲಯದ ಧರ್ಮ ಗುರುಗಳಾದ ಫಾದರ್ ಡೊಮಿನಿಕ್ ಕ್ರಿಸ್ತರಾಜ್, ಡಾನ್ ಬೊಸ್ಕೊ ಸಂಸ್ಥೆಯ ನಿರ್ದೇಶಕರಾದ ಫಾದರ್ ಡೈಸನ್, ಧರ್ಮಭಗಿನಿಯರು, ನಗರದ ವಿವಿಧ ದೇವಾಲಯಗಳಿಂದ ಆಗಮಿಸಿದ ಭಕ್ತಾದಿಗಳು ಪಾಲ್ಗೊಂಡಿದ್ದರು.

ಎನ್. ಯಶವಂತ್ ರಾವ್‌ಗೆ ಡಾಕ್ಟರೇಟ್ ಪದವಿ

ಎನ್. ಯಶವಂತ್ ರಾವ್
    ಭದ್ರಾವತಿ : ಶಿವಮೊಗ್ಗ ಬೊಮ್ಮನಕಟ್ಟೆ ನಿವಾಸಿ ಎನ್. ಯಶವಂತ್ ರಾವ್‌ರವರು ಮಂಡಿಸಿರುವ `ಕಂಪೆಟೆನ್ಸಿ ಮ್ಯಾಪಿಂಗ್ ಇನ್ ಸೆಲೆಕ್ಟೆಡ್ ಇನಾರ್ಫಾಮೇಷನ್ ಟೆಕ್ನೋಲಾಜಿ ಕಂಪನೀಸ್ ಇನ್ ಕರ್ನಾಟಕ-ಎ ಸ್ಟಡಿ' ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿದೆ. 
    ಕುವೆಂಪು ವಿ.ವಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ಹಿರೇಮಣಿ ನಾಯ್ಕ್‌ರವರ ಮಾರ್ಗದರ್ಶನದಲ್ಲಿ ಯಶವಂತ್ ರಾವ್‌ರವರು ಪ್ರಬಂಧ ಮಂಡಿಸಿದ್ದರು. ಇವರು ಶಿವಮೊಗ್ಗ ಬೊಮ್ಮನಕಟ್ಟೆ ಜಿ. ನಾರಾಯಣ ರಾವ್ ಮತ್ತು ಇಂದ್ರಬಾಯಿ ದಂಪತಿ ಪುತ್ರರಾಗಿದ್ದಾರೆ. 

ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ೨ನೇ ಬಾರಿಗೆ ತಳ್ಳಿಕಟ್ಟೆ ಎಚ್. ಲೋಕೇಶ್, ಉಪಾಧ್ಯಕ್ಷರಾಗಿ ಡಿ. ಶಿವಶಂಕರ್ ಆಯ್ಕೆ

ಭದ್ರಾವತಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಅಧ್ಯಕ್ಷರಾದ ಎರಡನೇ ಬಾರಿಗೆ ತಳ್ಳಿಕಟ್ಟೆ ಎಚ್. ಲೋಕೇಶಪ್ಪ ಆಯ್ಕೆಯಾಗಿದ್ದಾರೆ. 
    ಭದ್ರಾವತಿ : ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಅಧ್ಯಕ್ಷರಾದ ಎರಡನೇ ಬಾರಿಗೆ ತಳ್ಳಿಕಟ್ಟೆ ಎಚ್. ಲೋಕೇಶಪ್ಪ ಆಯ್ಕೆಯಾಗಿದ್ದಾರೆ. 
    ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ಬಾರಂದೂರು ಕ್ಷೇತ್ರದ ಡಿ. ಶಿವಶಂಕರ್ ಆಯ್ಕೆಯಾಗಿದ್ದಾರೆ. ನಿರ್ದೇಶಕರಾದ ಬಿ.ಕೆ ಶಿವಕುಮಾರ್,  ಜಯನಗರ ಕ್ಷೇತ್ರದ ರವೀಂದ್ರನಾಯ್ಡು, ಕೆಂಚೇನಹಳ್ಳಿ ಕ್ಷೇತ್ರದ ಸುರೇಶ್, ಭದ್ರಾವತಿ ಕ್ಷೇತ್ರದ ಬಿ.ಟಿ ನಾಗರಾಜ್, ಮಾರಶೆಟ್ಟಿಹಳ್ಳಿ ಕ್ಷೇತ್ರದ ಕೆ. ಶ್ರೀನಿವಾಸ್, ಅಗಸನಹಳ್ಳಿ ಕ್ಷೇತ್ರದ ಕೃಷ್ಣಪ್ಪ, ಕೊಮಾರನಹಳ್ಳಿ ಕ್ಷೇತ್ರದ ಸತ್ಯನಾರಾಯಣರಾವ್, ತಡಸ ಕ್ಷೇತ್ರದ ಖಲೀಂ ಉಲ್ಲಾ, ತಳ್ಳಿಕಟ್ಟೆ ಕ್ಷೇತ್ರದ ಓ.ಎನ್ ರತ್ನಮ್ಮ ಹಾಗು ಭದ್ರಾವತಿ ಕ್ಷೇತ್ರದ ವಿನೋದಬಾಯಿ ಉಪಸ್ಥಿತರಿದ್ದರು. 
    ಇತ್ತೀಚೆಗೆ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಚೇತರಾಗಿದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ. 

ಬಿಪಿಎಲ್ ಸಂಘದಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ

ಭದ್ರಾವತಿ ನಗರಸಭೆ ವಾರ್ಡ್ ನಂ.೨೬ರ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಪ್ರಜಾ ವಿಮೋಚನಾ ಸಂಘ(ಬಿಪಿಎಲ್)ದಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೭೦ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
    ಭದ್ರಾವತಿ : ನಗರಸಭೆ ವಾರ್ಡ್ ನಂ.೨೬ರ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಪ್ರಜಾ ವಿಮೋಚನಾ ಸಂಘ(ಬಿಪಿಎಲ್)ದಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೭೦ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. 
    ನಗರಸಭೆ ಮಾಜಿ ಸದಸ್ಯ ಪ್ರಾನ್ಸಿಸ್ ತಾಯಿ ಭುವನೇಶ್ವರಿ ಮಾತೆಗೆ ಪೂಜೆ ಸಲ್ಲಿಸಿ ನಂತರ ಧ್ವಜಾರೋಹಣ ನೆರವೇರಿಸಿದರು. ಸಂಘದ ಗೌರವಾಧ್ಯಕ್ಷ ಎಸ್.ಕೆ ಸುಧೀಂದ್ರ, ಅಧ್ಯಕ್ಷ ಬಿ. ಜಗದೀಶ್.ಪ್ರಧಾನ ಕಾರ್ಯದರ್ಶಿ ಶ್ಯಾಮ್, ಉಪಾಧ್ಯಕ್ಷ ವಿಲಿಯಂ ಸಂಪತ್ ಕುಮಾರ್, ಡಿಎಸ್‌ಎಸ್ ಮುಖಂಡ ದಾಸ್, ಮುರಳಿ ಕೃಷ್ಣ, ಜ್ಯೋತಿ ಪ್ರಸಾದ್, ಪುರುಷೋತ್ತಮ, ಬಿ.ಆರ್ ಸುನಿಲ್ ಕುಮಾರ್, ಎಂ. ಯತೀಶ್, ನಿರಂಜನ್, ರಘು. ಪ್ರೀತಮ್ ಹಾಗೂ ಸಂಘದ ಸದಸ್ಯರು, ಸ್ಥಳೀಯರು ಪಾಲ್ಗೊಂಡಿದ್ದರು. 
    ಸಂಘದಿಂದ ಎಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ವಿವಿಧ ಚಟುವಟಿಕೆಗಳಲ್ಲಿ ನಿರಂತರವಾಗಿ ಸಕ್ರಿಯವಾಗಿರುವ ಸಂಘ ಈ ಭಾಗದಲ್ಲಿ ಗಮನ ಹೆಚ್ಚು ಸೆಳೆದಿದೆ.