ಎಎಸ್‌ಐ ಕರ್ತವ್ಯಕ್ಕೆ ಅಡ್ಡಿ, ವಿಡಿಯೋ ಚಿತ್ರೀಕರಣದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ
ಭದ್ರಾವತಿ : ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಬಿಡಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ನಗರಸಭೆ ವ್ಯಾಪ್ತಿಯ ಸುರಗಿತೋಪಿನಲ್ಲಿ ನಡೆದಿದೆ. ಈ ಸಂಬಂಧ ಎರಡು ಗುಂಪುಗಳ ವಿರುದ್ಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರಗಿತೋಪು ೪ನೇ ತಿರುವಿನ ರಸ್ತೆಯಲ್ಲಿ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿಯಿಂದ ಕಳೆದ ಸುಮಾರು ೫೦ ವರ್ಷಗಳಿಂದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದು, ಈ ಬಾರಿ ಸಹ ಪ್ರತಿಷ್ಠಾಪನೆ ಮಾಡಿ ಬುಧವಾರ ವಿಸರ್ಜನೆಗೆ ಮುಂದಾಗಿದ್ದಾರೆ. ಈ ಸಂಬಂಧ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯುತ್ತಿದ್ದಾಗ ರಾತ್ರಿ ಸುಮಾರು ೧೦.೩೦ರ ಸಮಯದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಕರ್ತವ್ಯದಲ್ಲಿದ್ದ ಪೇಪರ್‌ಟೌನ್ ಪೊಲೀಸ್ ಠಾಣೆ ಸಹಾಯಕ ಠಾಣಾ ನಿರೀಕ್ಷಕ ಕೃಷ್ಣಮೂರ್ತಿಯವರು ಗಲಾಟೆ ಬಿಡಿಸಲು ಮುಂದಾಗಿದ್ದಾರೆ. ಆದರೆ ಗಲಾಟೆಯಲ್ಲಿ ತೊಡಗಿದ್ದವರು ಇವರ ಬಟ್ಟೆ ಹರಿದು ಹಲ್ಲೆಗೆ ಯತ್ನಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ ಮೆರವಣಿಗೆ ವಿಡಿಯೋ ಚಿತ್ರೀಕರಣದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ ಅಜಿತ್ ಎಂಬುವರ ಮೇಲೆ ತೀವ್ರ ಹಲ್ಲೆ ನಡೆಸಲಾಗಿದ್ದು, ಇವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗುಂಪಿನಲ್ಲಿದ್ದ ಜೀವನ್ ಎಂಬಾತನ ಮೇಲೂ ತೀವ್ರ ಹಲ್ಲೆ ನಡೆಸಲಾಗಿದೆ. ಈತನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಸಹಾಯಕ ಠಾಣಾ ನಿರೀಕ್ಷಕ ಕೃಷ್ಣಮೂರ್ತಿ ಎರಡು ಗುಂಪುಗಳ ನಡುವೆ ಪ್ರಕರಣ ದಾಖಲಿಸಿದ್ದಾರೆ.
.jpg)