ಶುಕ್ರವಾರ, ನವೆಂಬರ್ 7, 2025

ಗುತ್ತಿಗೆ ಕಾರ್ಮಿಕರ ಸಂಘಟನೆಯಿಂದ ನೂತನ ಕಾರ್ಯಪಾಲಕ ನಿರ್ದೇಶಕರ ಭೇಟಿ : ಚರ್ಚೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನೂತನ ಕಾರ್ಯಪಾಲಕ ನಿರ್ದೇಶಕ ಅನೂಪ್ ಕುಮಾರ್ ಅವರನ್ನು ಶುಕ್ರವಾರ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್(ಎಐಟಿಯುಸಿ) ಗುತ್ತಿಗೆ ಕಾರ್ಮಿಕರ ಸಂಘಟನೆಯಿಂದ ಭೇಟಿ ಮಾಡಿ ಚರ್ಚಿಸಲಾಯಿತು. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನೂತನ ಕಾರ್ಯಪಾಲಕ ನಿರ್ದೇಶಕ ಅನೂಪ್ ಕುಮಾರ್ ಅವರನ್ನು ಶುಕ್ರವಾರ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್(ಎಐಟಿಯುಸಿ) ಗುತ್ತಿಗೆ ಕಾರ್ಮಿಕರ ಸಂಘಟನೆಯಿಂದ ಭೇಟಿ ಮಾಡಿ ಚರ್ಚಿಸಲಾಯಿತು. 
    ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಕಾರ್ಯಕಾರಿ ಸಮಿತಿ ಸದಸ್ಯರನ್ನೊಳಗೊಂಡ ತಂಡ ಹೂಗುಚ್ಛ ನೀಡಿ ಸ್ವಾಗತಿಸುವ ಮೂಲಕ ಗುತ್ತಿಗೆ ಕಾರ್ಮಿಕರು ತಿಂಗಳ ಪೂರ್ತಿ ಕೆಲಸವಿಲ್ಲದೆ ಅಲ್ಪ ದಿನಗಳ ಕೆಲಸದಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಲಾಯಿತು. ಅಲ್ಲದೆ ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಹ ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳು ಬಗೆಹರಿಯುವ ವಿಶ್ವಾಸ ಅನೂಪ್ ಕುಮಾರ್ ಕಾರ್ಮಿಕರಿಗೆ ವ್ಯಕ್ತಪಡಿಸಿದರು. 
    ಸಂಘಟನೆ ಅಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷ ದೇವೇಂದ್ರ, ಪ್ರಧಾನ ಕಾರ್ಯದರ್ಶಿ ಸತೀಶ ಅರುಣಾಚಲ, ಕಾರ್ಯದರ್ಶಿ ಐಸಾಕ್ ಲಿಂಕನ್, ಖಜಾಂಚಿ ಶಿವನಾಗು ಮತ್ತು
    ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಲ್.ಆರ್ ನವೀನ, ಎಚ್. ಹರೀಶ್, ಮಂಜುನಾಥ್, ವೆಂಕಟೇಶ್ ಮತ್ತು ಬಿ.ಎಸ್ ಅರುಣ ತಂಡದಲ್ಲಿ ಉಪಸ್ಥಿತರಿದ್ದರು. 

ನೂತನ ಪೊಲೀಸ್ ಉಪಾಧೀಕ್ಷಕ ಪ್ರಕಾಶ ರಾಥೋಡ್

ಪ್ರಕಾಶ್ ರಾಥೋಡ್ 
    ಭದ್ರಾವತಿ:  ಇಲ್ಲಿನ ಪೊಲೀಸ್ ಉಪವಿಭಾಗದ ಉಪಾಧೀಕ್ಷಕ ಹುದ್ದೆಗೆ ಬೆಂಗಳೂರಿನ ಕೆಜೆ ಹಳ್ಳಿ ಉಪವಿಭಾಗದ ಎಸಿಪಿ ಪ್ರಕಾಶ ರಾಥೋಡ್ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. 
    ಈ ಹಿಂದೆ ಉಪಾಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಆರ್ ನಾಗರಾಜು ಅವರನ್ನು ಅ.೬ರಂದು ವರ್ಗಾವಣೆಗೊಳಿಸಲಾಗಿತ್ತು. ಪ್ರಭಾರಿ ಹುದ್ದೆಯನ್ನು ತೀರ್ಥಹಳ್ಳಿ ಪೊಲೀಸ್ ಉಪಾಧೀಕ್ಷಕರಾಗಿರುವ ಅರವಿಂದ ಎನ್. ಕಲಗುಜ್ಜಿ ಅವರಿಗೆ ವಹಿಸಲಾಗಿತ್ತು. ಇದೀಗ ಪ್ರಕಾಶ ರಾಥೋಡ್ ಅವರನ್ನು ಅಧಿಕೃತವಾಗಿ ನೇಮಕಗೊಳಿಸಿ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ. 
    ಪ್ರಕಾಶ್ ರಾಥೋಡ್ ಸಾಧನೆ : 
    ತನಿಖಾ ವಿಭಾಗದಲ್ಲಿ ಪ್ರಕಾಶ ರಾಥೋಡ್ ಉತ್ತಮ ಸಾಧನೆ ಮಾಡಿದ್ದಾರೆ.  ಇತ್ತೀಚೆಗೆ ಇವರಿಗೆ ಕೇಂದ್ರ ಗೃಹ ಸಚಿವರ ದಕ್ಷತಾ ಪದಕ ಲಭಿಸಿದೆ. ಈಚೆಗೆ ರಾಜ್ಯದ ಗಮನ ಸೆಳೆದಿದ್ದ ಬಿಕ್ಲು ಶಿವು ಕೊಲೆ ಪ್ರಕರಣ, ದಿವ್ಯ ಹಾಗರಗಿ ಪ್ರಕರಣದಲ್ಲಿ ಸಹ ಖಡಕ್ ಕಾರ್ಯಾಚರಣೆ ನಡೆಸಿದ್ದರು. ಇವರಿಗೆ ಕಳೆದ ೪ ದಿನಗಳ ಹಿಂದೆಯೇ ವರ್ಗಾವಣೆ ಆದೇಶ ಹೊರಡಿಸಲಾಗಿದ್ದು, ಇನ್ನೂ ಅಧಿಕಾರ ಸ್ವೀಕರಿಸಿಲ್ಲ. 

ನ.೮ರಂದು ಕನಕದಾಸರ ಜಯಂತಿ


    ಭದ್ರಾವತಿ : ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನ.೮ರಂದು ಬೆಳಿಗ್ಗೆ ೧೧ ಗಂಟೆಗೆ ಹರಿದಾಸ ಸಂತ, ದಾರ್ಶನಿಕ, ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮ ತಾಲೂಕು ಪಂಚಾಯಿತಿ ಕಛೇರಿ ಆವರಣದಲ್ಲಿ ನಡೆಯಲಿದೆ. 
    ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ ಉದ್ಘಾಟಿಸುವರು. 
    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ಜಿಲ್ಲಾ ಉಸ್ತುವಾರಿ ಸಚಿವರ ಎಸ್. ಮಧುಬಂಗಾರಪ್ಪ, ಸಂಸದ ಬಿ.ವೈ ರಾಘವೇಂದ್ರ, ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ವಿಧಾನ ಪರಿಷತ್ ಸದಸ್ಯರು, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಉಪಾಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಪರುಸಪ್ಪ ಕುರುಬರ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.  ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕ ಎಸ್.ವಿ ಶಶಿಕುಮಾರ್ ಉಪನ್ಯಾಸ ನೀಡಲಿದ್ದಾರೆ. 
    ನಗರಸಭೆ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗು ಚುನಾಯಿತ ಮತ್ತು ನಾಮನಿರ್ದೇಶಿತ ಸದಸ್ಯರು, ಸರ್ಕಾರಿ ಅಧಿಕಾರಿಗಳು, ನೌಕರರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.  ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕೋರಿದೆ. 

ಗುರುವಾರ, ನವೆಂಬರ್ 6, 2025

ಶ್ರೀ ಸತ್ಯ ಸಾಯಿ ಬಾಬಾರವರ ೧೦೦ನೇ ಜನ್ಮದಿನೋತ್ಸವ : ಪ್ರೇಮಯಾತ್ರೆ ಆಯೋಜನೆ

    ಭದ್ರಾವತಿ : ನಗರದ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶ್ರೀ ಸತ್ಯ ಸಾಯಿ ಸೇವಾ ಸಮಿತಿಯಿಂದ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೧೦೦ನೇ ಜನ್ಮದಿನೋತ್ಸವದ ಅಂಗವಾಗಿ ಪುಟ್ಟಪರ್ತಿಗೆ ಪ್ರೇಮಯಾತ್ರೆ ಆಯೋಜಿಸಲಾಗಿದೆ. 
    ನ.೧೩ರಂದು ರಾತ್ರಿ ೧೦ ಗಂಟೆಗೆ ನಗರದಿಂದ ಪ್ರಯಾಣ ಬೆಳೆಸಲಿದ್ದು, ನ.೧೬ರಂದು ಬೆಳಿಗ್ಗೆ ೧೧ ಗಂಟೆಗೆ ಪುಟ್ಟಪರ್ತಿಯಿಂದ ಹೊರಟು ರಾತ್ರಿ ೮ ಗಂಟೆಗೆ ನಗರಕ್ಕೆ ಹಿಂದಿರುಗಲಾಗುವುದು.  ಭಕ್ತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. 
    ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ ೯೧೪೧೬೪೨೪೩೨ ಅಥವಾ ೭೩೫೩೨೯೨೩೩೯ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಸಂಚಾಲಕ ಜಿ.ಪಿ ಪರಮೇಶ್ವರಪ್ಪ ತಿಳಿಸಿದ್ದಾರೆ. 

ಶಿಕ್ಷಕಿ ಡಿ.ಎಚ್ ಮಾಯಮ್ಮ ನಿಧನ

ಡಿ.ಎಚ್ ಮಾಯಮ್ಮ 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಸುರಗಿತೋಪು ನಿವಾಸಿ, ಶಿಕ್ಷಕಿ ಡಿ.ಎಚ್ ಮಾಯಮ್ಮ(೬೦) ಗುರುವಾರ ನಿಧನ ಹೊಂದಿದರು. 
    ಓರ್ವ ಪುತ್ರ, ಸೊಸೆ, ಸಹೋದರ, ಸಹೋದರಿಯರು  ಇದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಾಯಮ್ಮ ಸುಮಾರು ೧೮ ವರ್ಷಗಳ ಕಾಲ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರ್ಸರಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ನಿಧನಕ್ಕೆ ನಗರದ ಗಣ್ಯರು, ಶಿಕ್ಷಕ ವೃಂದದವರು ಸಂತಾಪ ಸೂಚಿಸಿದ್ದಾರೆ. 

ಸುರಗಿತೋಪಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ

ಎಎಸ್‌ಐ ಕರ್ತವ್ಯಕ್ಕೆ ಅಡ್ಡಿ, ವಿಡಿಯೋ ಚಿತ್ರೀಕರಣದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ 


    ಭದ್ರಾವತಿ : ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಬಿಡಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ನಗರಸಭೆ ವ್ಯಾಪ್ತಿಯ ಸುರಗಿತೋಪಿನಲ್ಲಿ ನಡೆದಿದೆ. ಈ ಸಂಬಂಧ ಎರಡು ಗುಂಪುಗಳ ವಿರುದ್ಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
    ಸುರಗಿತೋಪು ೪ನೇ ತಿರುವಿನ ರಸ್ತೆಯಲ್ಲಿ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿಯಿಂದ ಕಳೆದ ಸುಮಾರು ೫೦ ವರ್ಷಗಳಿಂದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದು, ಈ ಬಾರಿ ಸಹ ಪ್ರತಿಷ್ಠಾಪನೆ ಮಾಡಿ ಬುಧವಾರ ವಿಸರ್ಜನೆಗೆ ಮುಂದಾಗಿದ್ದಾರೆ. ಈ ಸಂಬಂಧ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯುತ್ತಿದ್ದಾಗ ರಾತ್ರಿ ಸುಮಾರು ೧೦.೩೦ರ ಸಮಯದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಕರ್ತವ್ಯದಲ್ಲಿದ್ದ ಪೇಪರ್‌ಟೌನ್ ಪೊಲೀಸ್ ಠಾಣೆ ಸಹಾಯಕ ಠಾಣಾ ನಿರೀಕ್ಷಕ ಕೃಷ್ಣಮೂರ್ತಿಯವರು ಗಲಾಟೆ ಬಿಡಿಸಲು ಮುಂದಾಗಿದ್ದಾರೆ. ಆದರೆ ಗಲಾಟೆಯಲ್ಲಿ ತೊಡಗಿದ್ದವರು ಇವರ ಬಟ್ಟೆ ಹರಿದು ಹಲ್ಲೆಗೆ ಯತ್ನಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. 
    ಅಲ್ಲದೆ ಮೆರವಣಿಗೆ ವಿಡಿಯೋ ಚಿತ್ರೀಕರಣದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ ಅಜಿತ್ ಎಂಬುವರ ಮೇಲೆ ತೀವ್ರ ಹಲ್ಲೆ ನಡೆಸಲಾಗಿದ್ದು, ಇವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗುಂಪಿನಲ್ಲಿದ್ದ ಜೀವನ್ ಎಂಬಾತನ ಮೇಲೂ ತೀವ್ರ ಹಲ್ಲೆ ನಡೆಸಲಾಗಿದೆ. ಈತನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಸಹಾಯಕ ಠಾಣಾ ನಿರೀಕ್ಷಕ ಕೃಷ್ಣಮೂರ್ತಿ ಎರಡು ಗುಂಪುಗಳ ನಡುವೆ ಪ್ರಕರಣ ದಾಖಲಿಸಿದ್ದಾರೆ. 

ನ.೯ರಂದು ಪಂಚ ಗ್ಯಾರಂಟಿ ಸಮಿತಿ ಸಭಾ ಕಾರ್ಯಕ್ರಮ

    ಭದ್ರಾವತಿ: ಸರ್ಕಾರದ ಪಂಚ ಗ್ಯಾರಂಟಿ ಪ್ರಾಧಿಕಾರದ ಸಮಿತಿ ಸಭಾ ಕಾರ್ಯಕ್ರಮ ನ.೯ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕಿನ ಬಿ.ಆರ್.ಪಿ ಕರಾವಳಿ ಆಸ್ಪತ್ರೆ ಸಮೀಪದ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ. 
    ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಸಮಗ್ರ ಮಾಹಿತಿ ನೀಡುವ ಜೊತೆಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜೊತೆ ಚರ್ಚೆ ನಡೆಯಲಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕೋರಿದ್ದಾರೆ.