ಸೋಮವಾರ, ನವೆಂಬರ್ 3, 2025

ಮನೆ ಮಾಲೀಕನ ಜೊತೆಗೆ ಪ್ರಾಣ ಬಿಟ್ಟ ಶ್ವಾನ..!

ಮನೆ ಮಾಲೀಕ ಸಾವಿನ ಸುದ್ದಿ ತಿಳಿದು ನಾಯಿ ಕೂಡ ಪ್ರಾಣ ಬಿಟ್ಟಿರುವಂತಹ ಹೃದಯ ವಿದ್ರಾವಕ ಘಟನೆ ಭದ್ರಾವತಿ ನಗರದಲ್ಲಿ ನಡೆದಿದೆ. 
    ಭದ್ರಾವತಿ: ಮೂಕ ಪ್ರಾಣಿಗಳು ಸಹ ಮನುಷ್ಯನ ನೋವುಗಳಿಗೆ ಸ್ಪಂದಿಸುತ್ತವೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಮನೆ ಮಾಲೀಕ ಸಾವಿನ ಸುದ್ದಿ ತಿಳಿದು ನಾಯಿ ಕೂಡ ಪ್ರಾಣ ಬಿಟ್ಟಿರುವಂತಹ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಿಕಿಗೆ ಬಂದಿದೆ.
    ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ಜಿಂಕ್ ಲೈನ್ ನಿವಾಸಿ ಲಾರೆನ್ಸ್(೬೧) ಎಂಬುವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇವರ ಮೃತದೇಹ ಮನೆಗೆ ತರಲಾಗಿತ್ತು. ನೆಚ್ಚಿನ ಮಾಲೀಕ ಸಾವನ್ನಪ್ಪಿ, ಶವವಾಗಿ ಮಲಗಿರುವುದನ್ನು ಕಂಡ ನಾಯಿ ತೀವ್ರ ನೊಂದುಕೊಂಡಿದೆ. ಮಾಲೀಕ ಲಾರೆನ್ಸ್ ಶವದ ಪಕ್ಕದಲ್ಲೇ ಮಲಗಿ ತೀವ್ರ ದುಖ ವ್ಯಕ್ತಪಡಿಸಿದ ಶ್ವಾನವು, ಅಲ್ಲೇ ಅಂತಿಮ ಉಸಿರೆಳೆದಿದೆ. ಗುರುವಾರದಂದು ಲಾರೆನ್ಸ್ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಅವರೊಟ್ಟಿಗೆ ಸಾವನ್ನಪ್ಪಿದ ಶ್ವಾನದ ಮೃತದೇಹವನ್ನು ಮನೆಯ ಹಿಂಭಾಗದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ. 
    ಇದರೊಂದಿಗೆ ಮನುಷ್ಯರ ಜೊತೆ ಮೂಕ ಪ್ರಾಣಿಗಳು ಸಹ ಬಿಟ್ಟಿರಲಾರದ ಸಂಬಂಧ ಹೊಂದಿರುತ್ತವೆ. ಅದರಲ್ಲೂ ಅವರೊಂದಿಗೆ ಸದಸ್ಯರಂತೆಯೇ ಬದುಕುತ್ತಿರುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 

ಕ್ರೈಸ್ತರಿಂದ ಮೃತರ ಸ್ಮರಣೆ

ವಿಶ್ವದಾದ್ಯಂತ ಕ್ರೈಸ್ತರು ನ.೨ರಂದು ಮೃತರ ಸ್ಮರಣ ದಿನವನ್ನಾಗಿ ಆಚರಿಸಿದ್ದು, ಪ್ರತಿ ವರ್ಷದಂತೆ ಈ ವರ್ಷ ಸಹ ಭಾನುವಾರ ಭದ್ರಾವತಿ ನಗರದ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ಮೃತರ ಸ್ಮರಣೆ ಆಚರಿಸಲಾಯಿತು. 
    ಭದ್ರಾವತಿ : ವಿಶ್ವದಾದ್ಯಂತ ಕ್ರೈಸ್ತರು ನ.೨ರಂದು ಮೃತರ ಸ್ಮರಣ ದಿನವನ್ನಾಗಿ ಆಚರಿಸಿದ್ದು, ಪ್ರತಿ ವರ್ಷದಂತೆ ಈ ವರ್ಷ ಸಹ ಭಾನುವಾರ ನಗರದ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ಮೃತರ ಸ್ಮರಣೆ ಆಚರಿಸಲಾಯಿತು. 
    ಮೃತರು ತಮ್ಮ ಕುಟುಂಬಸ್ಥರ ಸಮಾಧಿಯನ್ನು ಸ್ವಚ್ಛಗೊಳಿಸಿ, ಸುಣ್ಣ-ಬಣ್ಣ ಬಳಿದು, ಹೂವಿನ ಅಲಂಕಾರದೊಂದಿಗೆ ಮೊಂಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಲಾಯಿತು.  ಸಂಜೆ ೪ ಗಂಟೆಗೆ ಸಮಾಧಿಯ ಆವರಣದಲ್ಲಿ ಹಿರಿಯೂರಿನ ಗುರು ಅಭ್ಯರ್ಥಿಗಳ ಕೇಂದ್ರದ ನಿರ್ದೇಶಕರಾದ ಫಾದರ್ ಸಂತೋಷ್ ಪೆರೇರಾ ರವರಿಂದ ಪೂಜಾ ವಿಧಿ- ವಿಧಾನಗಳು ನೆರವೇರಿದವು. 
    ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಗುರುಗಳಾದ ಫಾದರ್ ಸ್ಟೀವನ್ ಡೇಸಾ, ನ್ಯೂಟೌನ್ ಧರ್ಮ ಕೇಂದ್ರದ ಗುರುಗಳಾದ ಫಾದರ್ ಲ್ಯಾನ್ಸಿ ಡಿಸೋಜ, ಕಾಗದನಗರ ಕಾರ್ಮಿಕರ ಸಂತ ಜೋಸೆಫ್‌ರ ದೇವಾಲಯದ ಧರ್ಮ ಗುರುಗಳಾದ ಫಾದರ್ ಡೊಮಿನಿಕ್ ಕ್ರಿಸ್ತರಾಜ್, ಡಾನ್ ಬೊಸ್ಕೊ ಸಂಸ್ಥೆಯ ನಿರ್ದೇಶಕರಾದ ಫಾದರ್ ಡೈಸನ್, ಧರ್ಮಭಗಿನಿಯರು, ನಗರದ ವಿವಿಧ ದೇವಾಲಯಗಳಿಂದ ಆಗಮಿಸಿದ ಭಕ್ತಾದಿಗಳು ಪಾಲ್ಗೊಂಡಿದ್ದರು.

ಎನ್. ಯಶವಂತ್ ರಾವ್‌ಗೆ ಡಾಕ್ಟರೇಟ್ ಪದವಿ

ಎನ್. ಯಶವಂತ್ ರಾವ್
    ಭದ್ರಾವತಿ : ಶಿವಮೊಗ್ಗ ಬೊಮ್ಮನಕಟ್ಟೆ ನಿವಾಸಿ ಎನ್. ಯಶವಂತ್ ರಾವ್‌ರವರು ಮಂಡಿಸಿರುವ `ಕಂಪೆಟೆನ್ಸಿ ಮ್ಯಾಪಿಂಗ್ ಇನ್ ಸೆಲೆಕ್ಟೆಡ್ ಇನಾರ್ಫಾಮೇಷನ್ ಟೆಕ್ನೋಲಾಜಿ ಕಂಪನೀಸ್ ಇನ್ ಕರ್ನಾಟಕ-ಎ ಸ್ಟಡಿ' ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿದೆ. 
    ಕುವೆಂಪು ವಿ.ವಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ಹಿರೇಮಣಿ ನಾಯ್ಕ್‌ರವರ ಮಾರ್ಗದರ್ಶನದಲ್ಲಿ ಯಶವಂತ್ ರಾವ್‌ರವರು ಪ್ರಬಂಧ ಮಂಡಿಸಿದ್ದರು. ಇವರು ಶಿವಮೊಗ್ಗ ಬೊಮ್ಮನಕಟ್ಟೆ ಜಿ. ನಾರಾಯಣ ರಾವ್ ಮತ್ತು ಇಂದ್ರಬಾಯಿ ದಂಪತಿ ಪುತ್ರರಾಗಿದ್ದಾರೆ. 

ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ೨ನೇ ಬಾರಿಗೆ ತಳ್ಳಿಕಟ್ಟೆ ಎಚ್. ಲೋಕೇಶ್, ಉಪಾಧ್ಯಕ್ಷರಾಗಿ ಡಿ. ಶಿವಶಂಕರ್ ಆಯ್ಕೆ

ಭದ್ರಾವತಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಅಧ್ಯಕ್ಷರಾದ ಎರಡನೇ ಬಾರಿಗೆ ತಳ್ಳಿಕಟ್ಟೆ ಎಚ್. ಲೋಕೇಶಪ್ಪ ಆಯ್ಕೆಯಾಗಿದ್ದಾರೆ. 
    ಭದ್ರಾವತಿ : ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಅಧ್ಯಕ್ಷರಾದ ಎರಡನೇ ಬಾರಿಗೆ ತಳ್ಳಿಕಟ್ಟೆ ಎಚ್. ಲೋಕೇಶಪ್ಪ ಆಯ್ಕೆಯಾಗಿದ್ದಾರೆ. 
    ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ಬಾರಂದೂರು ಕ್ಷೇತ್ರದ ಡಿ. ಶಿವಶಂಕರ್ ಆಯ್ಕೆಯಾಗಿದ್ದಾರೆ. ನಿರ್ದೇಶಕರಾದ ಬಿ.ಕೆ ಶಿವಕುಮಾರ್,  ಜಯನಗರ ಕ್ಷೇತ್ರದ ರವೀಂದ್ರನಾಯ್ಡು, ಕೆಂಚೇನಹಳ್ಳಿ ಕ್ಷೇತ್ರದ ಸುರೇಶ್, ಭದ್ರಾವತಿ ಕ್ಷೇತ್ರದ ಬಿ.ಟಿ ನಾಗರಾಜ್, ಮಾರಶೆಟ್ಟಿಹಳ್ಳಿ ಕ್ಷೇತ್ರದ ಕೆ. ಶ್ರೀನಿವಾಸ್, ಅಗಸನಹಳ್ಳಿ ಕ್ಷೇತ್ರದ ಕೃಷ್ಣಪ್ಪ, ಕೊಮಾರನಹಳ್ಳಿ ಕ್ಷೇತ್ರದ ಸತ್ಯನಾರಾಯಣರಾವ್, ತಡಸ ಕ್ಷೇತ್ರದ ಖಲೀಂ ಉಲ್ಲಾ, ತಳ್ಳಿಕಟ್ಟೆ ಕ್ಷೇತ್ರದ ಓ.ಎನ್ ರತ್ನಮ್ಮ ಹಾಗು ಭದ್ರಾವತಿ ಕ್ಷೇತ್ರದ ವಿನೋದಬಾಯಿ ಉಪಸ್ಥಿತರಿದ್ದರು. 
    ಇತ್ತೀಚೆಗೆ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಚೇತರಾಗಿದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ. 

ಬಿಪಿಎಲ್ ಸಂಘದಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ

ಭದ್ರಾವತಿ ನಗರಸಭೆ ವಾರ್ಡ್ ನಂ.೨೬ರ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಪ್ರಜಾ ವಿಮೋಚನಾ ಸಂಘ(ಬಿಪಿಎಲ್)ದಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೭೦ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
    ಭದ್ರಾವತಿ : ನಗರಸಭೆ ವಾರ್ಡ್ ನಂ.೨೬ರ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಪ್ರಜಾ ವಿಮೋಚನಾ ಸಂಘ(ಬಿಪಿಎಲ್)ದಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೭೦ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. 
    ನಗರಸಭೆ ಮಾಜಿ ಸದಸ್ಯ ಪ್ರಾನ್ಸಿಸ್ ತಾಯಿ ಭುವನೇಶ್ವರಿ ಮಾತೆಗೆ ಪೂಜೆ ಸಲ್ಲಿಸಿ ನಂತರ ಧ್ವಜಾರೋಹಣ ನೆರವೇರಿಸಿದರು. ಸಂಘದ ಗೌರವಾಧ್ಯಕ್ಷ ಎಸ್.ಕೆ ಸುಧೀಂದ್ರ, ಅಧ್ಯಕ್ಷ ಬಿ. ಜಗದೀಶ್.ಪ್ರಧಾನ ಕಾರ್ಯದರ್ಶಿ ಶ್ಯಾಮ್, ಉಪಾಧ್ಯಕ್ಷ ವಿಲಿಯಂ ಸಂಪತ್ ಕುಮಾರ್, ಡಿಎಸ್‌ಎಸ್ ಮುಖಂಡ ದಾಸ್, ಮುರಳಿ ಕೃಷ್ಣ, ಜ್ಯೋತಿ ಪ್ರಸಾದ್, ಪುರುಷೋತ್ತಮ, ಬಿ.ಆರ್ ಸುನಿಲ್ ಕುಮಾರ್, ಎಂ. ಯತೀಶ್, ನಿರಂಜನ್, ರಘು. ಪ್ರೀತಮ್ ಹಾಗೂ ಸಂಘದ ಸದಸ್ಯರು, ಸ್ಥಳೀಯರು ಪಾಲ್ಗೊಂಡಿದ್ದರು. 
    ಸಂಘದಿಂದ ಎಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ವಿವಿಧ ಚಟುವಟಿಕೆಗಳಲ್ಲಿ ನಿರಂತರವಾಗಿ ಸಕ್ರಿಯವಾಗಿರುವ ಸಂಘ ಈ ಭಾಗದಲ್ಲಿ ಗಮನ ಹೆಚ್ಚು ಸೆಳೆದಿದೆ. 

ಶನಿವಾರ, ನವೆಂಬರ್ 1, 2025

ಈ ಭೂಮಿ ನಮ್ಮದು ಎನ್ನುವುದು ಪ್ರತಿಯೊಬ್ಬ ಹಿಂದೂವಿನ ಅಸ್ಮಿತೆ : ಡಾ. ಕಲ್ಲಡ್ಕ ಪ್ರಭಾಕರ ಭಟ್

ಭದ್ರಾವತಿ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ) ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಮಂಥನ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ `ಸಂಘ ೧೦೦ ಮತ್ತು ಸಾಮರಸ್ಯ' ವಿಷಯ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಹಿರಿಯ ಕಾರ್ಯಕರ್ತ ಡಾ. ಕಲ್ಲಡ್ಕ ಪ್ರಭಾಕರ ಭಟ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ: ನಮ್ಮದು ಸಾಧು-ಸಂತರು ನೆಲಸಿದ ಭೂಮಿ, ಸಾವಿರಾರು ವರ್ಷಗಳ ಪರಂಪರೆ ಹೊಂದಿರುವ ಧರ್ಮ ನಮ್ಮದಾಗಿದೆ. ನಮಗೂ ಈ ಭೂಮಿಗೂ ಅವಿನಾಭಾವ ಸಂಬಂಧವಿದೆ. ಬಹುಸಂಖ್ಯಾತರೆಂಬ ಆಧಾರದಲ್ಲಿ ಈ ಭೂಮಿ ಹಿಂದೂಗಳದ್ದು ಎಂದು ಹೇಳಿಕೊಳ್ಳುವುದಲ್ಲ. ಬದಲಿಗೆ ಈ ಭೂಮಿ ನಮ್ಮದು ಎನ್ನುವುದು ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ಹಿಂದೂವಿನ ಅಸ್ಮಿತೆಯಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಹಿರಿಯ ಕಾರ್ಯಕರ್ತ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. 
    ಅವರು ಶನಿವಾರ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ) ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಮಂಥನ ವತಿಯಿಂದ ಆಯೋಜಿಸಲಾಗಿದ್ದ `ಸಂಘ ೧೦೦ ಮತ್ತು ಸಾಮರಸ್ಯ' ವಿಷಯ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಇಂದು ದೇಶದಲ್ಲಿ ಸಂಬಂಧಗಳನ್ನು ಕತ್ತರಿಸುವ ಕೆಲಸ ನಡೆಯುತ್ತಿದೆ. ನಾವೆಲ್ಲರೂ ಒಂದೇ ಮಾತರಂ ಎನ್ನುವುದು ದ್ರೋಹವಾಗುತ್ತಿದೆ. ಇಂದು ಎಲ್ಲದರಲ್ಲೂ ಬದಲಾವಣೆಗಳಾಗುತ್ತಿವೆ. ಆದರೆ ನಮ್ಮಲ್ಲಿನ ಅಸ್ಮಿತೆ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಈ ಭೂಮಿಯಲ್ಲಿ ಹುಟ್ಟಿರುವ ಹಿಂದೂಗಳು ನಾನು ಯಾರು ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ಎಲ್ಲಿಯವರೆಗೆ ನಮ್ಮಲ್ಲಿ ಗೊಂದಲಗಳು ಇರುತ್ತವೆಯೋ ಅಲ್ಲಿಯವರೆಗೂ ಸಂಘರ್ಷಗಳು ಇರುತ್ತವೆ ಎಂದರು.  
    ಈ ದೇಶದಲ್ಲಿ ಸಾವಿರಾರು ದೇವರುಗಳನ್ನು ನಾವುಗಳು ಆರಾಧಿಸುತ್ತೇವೆ. ಮುಸಲ್ಮಾನರು, ಕ್ರೈಸ್ತರು ಸೇರಿದಂತೆ ಇತರೆ ಧರ್ಮದವರು ಸಹ ಅವರ ಇಚ್ಛೆಯಂತೆ ಆರಾಧನೆ ಮಾಡಲಿ. ಆದರೆ ಈ ನೆಲದ ಧರ್ಮವನ್ನು, ನಮ್ಮ ಸಂಸ್ಕೃತಿ, ಭಾವನೆಗಳನ್ನು ಮೊದಲು ಗೌರವಿಸಲಿ. ನಾವು ನಮ್ಮ ಅಸ್ಮಿತೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ನಮ್ಮ ಹೋರಾಟ ಈ ನಿಟ್ಟಿನಲ್ಲಿಯೇ ನಡೆಯುತ್ತಿದೆ. ಸಂಘದ ತನ್ನ ೧೦೦ ವರ್ಷದ ಸಂಭ್ರಮಾಚರಣೆಯಲ್ಲಿ ಹಿಂದೂತ್ವ ನೆನಪಿಸುವ ಕೆಲಸ ಮಾಡುತ್ತಿದೆ ಎಂದರು. 
ಈ ದೇಶದಲ್ಲಿ ಬ್ರಿಟಿಷರು ನಮಗೆ ಸಿಹಿ ತಿನಿಸಿ ಗುಲಾಮಗಿರಿಗೆ ತಳ್ಳಿದರು. ಆ ದಾಸ್ಯದಿಂದ ಹೊರಬಂದು ನಮ್ಮದೇ ಆದ ಹೋರಾಟ ರೂಪಿಸಿಕೊಂಡು ಬರಲಾಯಿತು. ಆದರೆ ಸ್ವಾತಂತ್ರ್ಯದ ಚಳುವಳಿಯಲ್ಲಿ ಸಂಘದ ಪಾತ್ರ ಏನೆಂದು ಇದೀಗ ಪ್ರಶ್ನಿಸಲಾಗುತ್ತಿದೆ. ಇದಕ್ಕೂ ಮೊದಲು ಪ್ರಶ್ನಿಸುವವರು ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೆಚ್ಚಿನ ಅಧ್ಯಾಯನ ನಡೆಸಲಿ ಎಂದರು. 
೧೯೭೫ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ದೇಶವನ್ನು ಕತ್ತಲಿನಲ್ಲಿಟ್ಟಿದ್ದರು. ಇದರ ವಿರುದ್ಧ ಸಂಘ ನಡೆಸಿದ ಹೋರಾಟದ ಪರಿಣಾಮ ಭವಿಷ್ಯದ ರಾಜಕೀಯ ಚಿತ್ರಣ ಬದಲಾಯಿತು. ಇಂತಹ ಹಲವು ಹೋರಾಟಗಳನ್ನು ಸಂಘ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ನಮ್ಮ ಹೋರಾಟ ಯಾರ ವಿರುದ್ಧವೋ ಅಲ್ಲ. ವಿಶಾಲವಾದ ದೃಷ್ಟಿಕೋನ ಸಂಘ ಹೊಂದಿದೆ. ಇದು ಪ್ರೀತಿಯೊಂದಿಗೆ ಹೋರಾಟ ಮುನ್ನಡೆಸಿಕೊಂಡು ಬರುತ್ತಿದೆ ಎಂದರು. 
    ಪ್ರಸ್ತುತ ಹಿಂದೂ ಸಮಾಜ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಸಂಘದ ಜವಾಬ್ದಾರಿ ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಮುಂದಿನ ವಿಜಯದಶಮಿವರೆಗೂ ಸಾಮರಸ್ಯ ಜೀವನ, ಕುಟುಂಬ, ಪರಿಸರ, ಶಿಷ್ಟಾಚಾರ ಮತ್ತು ಸ್ವಾತಂತ್ರ್ಯ ಈ ಐದು ಪಂಚ ಪರಿವರ್ತನೆಗಳಿಗೆ ಸಂಘ ಕರೆ ನೀಡಿದೆ. ಇದಕ್ಕೆ ನಾವೆಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ ಎಂದರು. 
    ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಜನಸಂಖ್ಯೆಯನ್ನು ಅವಲಂಬಿಸಿದೆ. ಇದಕ್ಕೆ ಪೂರಕವಾಗಿ ಹಿಂದೂ ಸಮಾಜ ರೂಪುಗೊಳ್ಳಬೇಕಾಗಿದೆ. ಹಿಂದೂ ಸಮಾಜದ ಜನಸಂಖ್ಯೆ ಹೆಚ್ಚಾಗಬೇಕಾಗಿದೆ. ಅಲ್ಲದೆ ಹಿಂದೂ ಸಮಾಜ ಆರ್ಥಿಕ ಸದೃಢಗೊಳ್ಳಬೇಕಾಗಿದೆ. ನಾವೆಲ್ಲರೂ ವಿದೇಶ ವಸ್ತುಗಳ ಖರೀದಿ ಬದಲು ಸ್ವದೇಶಿ ವಸ್ತುಗಳನ್ನು ಖರೀದಿಸಿ ಈ ದೇಶದ ಸಂಪನ್ಮೂಲ ಇಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದರು. 
    ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್ ಉಪಸ್ಥಿತರಿದ್ದರು. ತರುಣಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರ್ ಉಪ್ಪಾರ ಸ್ವಾಗತಿಸಿ, ಕೀರ್ತಿ ಗುಜ್ಜಾರ್ ನಿರೂಪಿಸಿ, ಕೇಶವಮೂರ್ತಿ ವಂದಿಸಿದರು. 

ಕರವೇಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ

ಭದ್ರಾವತಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಜಿಲ್ಲಾಧ್ಯಕ್ಷ ಮುರಳಿಯವರ ನೇತೃತ್ವದಲ್ಲಿ ಈ ಬಾರಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 
    ಭದ್ರಾವತಿ:  ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಜಿಲ್ಲಾಧ್ಯಕ್ಷ ಮುರಳಿಯವರ ನೇತೃತ್ವದಲ್ಲಿ ಈ ಬಾರಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 
    ನಗರದ ಬೈಪಾಸ್ ರಸ್ತೆ, ಬಾರಂದೂರು ತಿರುವಿನಲ್ಲಿರುವ ಹಳ್ಳಿಮನೆ ಹೋಟೆಲ್ ಆವರಣದಲ್ಲಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಕಾರು ಹಾಗು ದ್ವಿಚಕ್ರ ವಾಹನಗಳಲ್ಲಿ ಜಾಥಾ ನಡೆಸಿ ತರೀಕೆರೆ ರಸ್ತೆ ಮೂಲಕ ಗಾಂಧಿ ವೃತ್ತ ತಲುಪಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. 
    ನಂತರ ಮಾಧವಚಾರ್ ವೃತ್ತ ಮೂಲಕ ಡಾ. ರಾಜಕುಮಾರ್ ರಸ್ತೆಯಲ್ಲಿ ಸಾಗಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಕ್ಷೇತ್ರದ ಅನ್ನದಾತ, ಶ್ರೇಷ್ಠ ತಂತ್ರಜ್ಞ ಸರ್.ಎಂ ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ,  ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಾಥಾ ಅಂತ್ಯಗೊಳಿಸಲಾಯಿತು. 
    ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಅನಿಲ್,  ತಾಲೂಕ ಅಧ್ಯಕ್ಷ ಆನಂದ್ ನಾಯ್ಡು, ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ಭಾನುಶ್ರೀ, ತಾಲೂಕು ಮಹಿಳಾ ಅಧ್ಯಕ್ಷೆ ಅನ್ನಪೂರ್ಣ, ಪರಮೇಶ್, ಹರೀಶ್, ಲೋಹಿತ್, ರುಕ್ಮಿಣಿ, ಸುಜಿತ್, ಅಮಿತ್, ಅನಿಲ್, ಲಕ್ಷ್ಮಮ್ಮ, ವೈಭವ್, ನಿಂಗಣ್ಣ ಸೇರಿದಂತೆ ಕರಾವೇ ಕಾರ್ಯಕರ್ತರು, ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.