ಮಂಗಳವಾರ, ನವೆಂಬರ್ 4, 2025

ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸದಿರಿ

ಮೆಸ್ಕಾಂ ಶಾಖಾ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಆಗ್ರಹ : ಮನವಿ 

ಭದ್ರಾವತಿ ನಗರದ ಜನ್ನಾಪುರ ಫಿಲ್ಟರ್‌ಶೆಡ್‌ನಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸದಿರುವಂತೆ ಆಗ್ರಹಿಸಿ ಮಂಗಳವಾರ ಉಂಬ್ಳೆಬೈಲು ರಸ್ತೆ, ಅಂಡರ್‌ಬ್ರಿಡ್ಜ್ ಸಮೀಪದಲ್ಲಿರುವ ಮೆಸ್ಕಾಂ ಶಾಖಾ ಕಛೇರಿ ಆವರಣದಲ್ಲಿ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬೀರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ನಗರದ ಜನ್ನಾಪುರ ಫಿಲ್ಟರ್‌ಶೆಡ್‌ನಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸದಿರುವಂತೆ ಆಗ್ರಹಿಸಿ ಮಂಗಳವಾರ ಉಂಬ್ಳೆಬೈಲು ರಸ್ತೆ, ಅಂಡರ್‌ಬ್ರಿಡ್ಜ್ ಸಮೀಪದಲ್ಲಿರುವ ಮೆಸ್ಕಾಂ ಶಾಖಾ ಕಛೇರಿ ಆವರಣದಲ್ಲಿ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬೀರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. 
    ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟ ಶಶಿಕುಮಾರ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರಮುಖರು ಮಾತನಾಡಿ, ಕೆಲವು ಪ್ರಭಾವಿಗಳು ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಸೇರಿದ ಜಾಗದಲ್ಲಿ ಅಂತರಘಟ್ಟಮ್ಮ ದೇವಸ್ಥಾನದ ಬಳಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದು, ಇದಕ್ಕೆ ಯಾವುದೇ ದಾಖಲಾತಿಗಳು ಇರುವುದಿಲ್ಲ. ಈ ಕಟ್ಟಡವನ್ನು ಕಾರ್ಖಾನೆ ಆಡಳಿತ ಮಂತಳಿ ತನ್ನ ಅಧೀನಕ್ಕೆ ತೆಗೆದುಕೊಂಡು ಕಟ್ಟಡ ನೆಲಸಮಗೊಳಿಸಬೇಕೆಂದ ಅಥವಾ ಕಟ್ಟಡವನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ನೀಡಬೇಕೆಂದು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಅನಧಿಕೃತ ಕಟ್ಟಡಕ್ಕೆ ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಬಾರದೆಂದು ಆಗ್ರಹಿಸಿದರು. 
    ಒಂದು ವೇಳೆ ನಮ್ಮ ಹೋರಾಟಕ್ಕೆ ಬೆಲೆಕೊಡದೆ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಲ್ಲಿ ತಮ್ಮ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು. 
    ಪ್ರತಿಭಟನೆಯಲ್ಲಿ ಮಹಾದೇವಿ, ಇಂದ್ರಮ್ಮ, ಪ್ರಕಾಶ್, ದಿವ್ಯಶ್ರೀ ಮತ್ತು ವೈ. ಶಶಿಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ವಿವಿಧ ವೃತ್ತಿಯ ಕಾರ್ಮಿಕರಿಗೆ ಸಲಕರಣೆಗಳ ಕಿಟ್ ವಿತರಣೆ

ಭದ್ರಾವತಿ ಕ್ಷೇತ್ರದಲ್ಲಿ ಕಾರ್ಮಿಕರು ಹೆಚ್ಚಾಗಿದ್ದು, ಅದರಲ್ಲೂ ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರಿಗೆ ಅಗತ್ಯವಿರುವ ಸಲಕರಣೆಗಳ ಸುಮಾರು ೪೦೦ ಕಿಟ್‌ಗಳನ್ನು ಕಾರ್ಮಿಕ ಇಲಾಖೆಯಿಂದ ಮಂಗಳವಾರ ವಿತರಿಸಲಾಯಿತು. 
    ಭದ್ರಾವತಿ : ಕ್ಷೇತ್ರದಲ್ಲಿ ಕಾರ್ಮಿಕರು ಹೆಚ್ಚಾಗಿದ್ದು, ಅದರಲ್ಲೂ ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರಿಗೆ ಅಗತ್ಯವಿರುವ ಸಲಕರಣೆಗಳ ಸುಮಾರು ೪೦೦ ಕಿಟ್‌ಗಳನ್ನು ಕಾರ್ಮಿಕ ಇಲಾಖೆಯಿಂದ ಮಂಗಳವಾರ ವಿತರಿಸಲಾಯಿತು. 
    ವಿದ್ಯುತ್ ಕೆಲಸಗಾರರು, ಮರ ಕೆತ್ತನೆ ಕೆಲಸಗಾರರು ಹಾಗು ಮೇಷನ್ ಸೇರಿದಂತೆ ಇನ್ನಿತರ ವೃತ್ತಿಗಳ ಕಾರ್ಮಿಕರಿಗೆ ಅಗತ್ಯವಿರುವ ಕಿಟ್‌ಗಳನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ತಮ್ಮ ಗೃಹ ಕಛೇರಿಯಲ್ಲಿ ವಿತರಿಸಿ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. 
    ಪ್ರಮುಖರಾದ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಉದ್ಯಮಿ ಬಿ.ಕೆ ಜಗನ್ನಾಥ್, ಕಾರ್ಮಿಕ ನಿರೀಕ್ಷಕ ರಕ್ಷಿತ್ ಹಾಗು ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. 

ಕುಮರಿ ನಾರಾಯಣಪುರ ನಾಗರಾಜಣ್ಣ ನಿಧನ


ಕುಮರಿ ನಾರಾಯಣಪುರ ನಾಗರಾಜಣ್ಣ 
    ಭದ್ರಾವತಿ :  ತಾಲೂಕಿನ ಕುಮರಿ ನಾರಾಯಣಪುರ ಗ್ರಾಮದ ನಿವಾಸಿ, ಎಚ್.ಎಲ್.ಜಿ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದ ನಾಗರಾಜಣ್ಣ ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದರು. 
    ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಇದ್ದಾರೆ. ನಾಗರಾಜಣ್ಣ ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಧರ್ಮೇಗೌಡರವರ ಸಹೋದರಿಯ ಪತಿಯಾಗಿದ್ದಾರೆ. ಇವರ ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ ಗ್ರಾಮದಲ್ಲಿ ನಡೆಯಲಿದ್ದು, ಇವರ ನಿಧನಕ್ಕೆ ಧರ್ಮೇಗೌಡ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು, ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಸೋಮವಾರ, ನವೆಂಬರ್ 3, 2025

ಎರಡನೇ ಬಾರಿಗೆ ಆಯ್ಕೆಯಾದ ತಳ್ಳಿಕಟ್ಟೆ ಎಚ್. ಲೋಕೇಶಪ್ಪರಿಗೆ ಸನ್ಮಾನ

ಭದ್ರಾವತಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಅಧ್ಯಕ್ಷರಾದ ಎರಡನೇ ಬಾರಿಗೆ ಆಯ್ಕೆಯಾದ ತಳ್ಳಿಕಟ್ಟೆ ಎಚ್. ಲೋಕೇಶಪ್ಪ ಅವರನ್ನು ಸೋಮವಾರ ನ್ಯೂಟೌನ್ ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು
    ಭದ್ರಾವತಿ : ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಅಧ್ಯಕ್ಷರಾದ ಎರಡನೇ ಬಾರಿಗೆ ಆಯ್ಕೆಯಾದ ತಳ್ಳಿಕಟ್ಟೆ ಎಚ್. ಲೋಕೇಶಪ್ಪ ಅವರನ್ನು ಸೋಮವಾರ ನ್ಯೂಟೌನ್ ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಟ್ರಸ್ಟ್ ವತಿಯಿಂದ ಸನ್ಮಾನಿಸಿ ನೇರಳೆ ಸಸಿ ನೀಡಲಾಯಿತು. ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಪ್ರಸ್ತುತ ನಷ್ಟದಲ್ಲಿದ್ದು, ಅದರ ನಷ್ಟವನ್ನು ತೀರಿಸಿ ರೈತರ ಹಿತ ಕಾಪಾಡುವುದಾಗಿ ಲೋಕೇಶ್ ತಿಳಿಸಿದರು. 
    ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಪ್ರಜಾವಿಮೋಚನಾ ವಿಮೋಚನಾ ಸಂಘದ ಗೌರವಾಧ್ಯಕ್ಷ ಎಸ್.ಕೆ ಸುಧೀಂದ್ರ, ಪ್ರಧಾನ ಕಾರ್ಯದರ್ಶಿ ಶ್ಯಾಮ್, ಡಿಎಸ್‌ಎಸ್ ಮುಖಂಡ ದಾಸ್, ಕಾರ್ಮಿಕ ಮುಖಂಡ ಬಿ.ಆರ್ ಸುನೀಲ್ ಕುಮಾರ್, ಪತ್ರಕರ್ತ ಅನಂತಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಮನೆ ಮಾಲೀಕನ ಜೊತೆಗೆ ಪ್ರಾಣ ಬಿಟ್ಟ ಶ್ವಾನ..!

ಮನೆ ಮಾಲೀಕ ಸಾವಿನ ಸುದ್ದಿ ತಿಳಿದು ನಾಯಿ ಕೂಡ ಪ್ರಾಣ ಬಿಟ್ಟಿರುವಂತಹ ಹೃದಯ ವಿದ್ರಾವಕ ಘಟನೆ ಭದ್ರಾವತಿ ನಗರದಲ್ಲಿ ನಡೆದಿದೆ. 
    ಭದ್ರಾವತಿ: ಮೂಕ ಪ್ರಾಣಿಗಳು ಸಹ ಮನುಷ್ಯನ ನೋವುಗಳಿಗೆ ಸ್ಪಂದಿಸುತ್ತವೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಮನೆ ಮಾಲೀಕ ಸಾವಿನ ಸುದ್ದಿ ತಿಳಿದು ನಾಯಿ ಕೂಡ ಪ್ರಾಣ ಬಿಟ್ಟಿರುವಂತಹ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಿಕಿಗೆ ಬಂದಿದೆ.
    ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ಜಿಂಕ್ ಲೈನ್ ನಿವಾಸಿ ಲಾರೆನ್ಸ್(೬೧) ಎಂಬುವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇವರ ಮೃತದೇಹ ಮನೆಗೆ ತರಲಾಗಿತ್ತು. ನೆಚ್ಚಿನ ಮಾಲೀಕ ಸಾವನ್ನಪ್ಪಿ, ಶವವಾಗಿ ಮಲಗಿರುವುದನ್ನು ಕಂಡ ನಾಯಿ ತೀವ್ರ ನೊಂದುಕೊಂಡಿದೆ. ಮಾಲೀಕ ಲಾರೆನ್ಸ್ ಶವದ ಪಕ್ಕದಲ್ಲೇ ಮಲಗಿ ತೀವ್ರ ದುಖ ವ್ಯಕ್ತಪಡಿಸಿದ ಶ್ವಾನವು, ಅಲ್ಲೇ ಅಂತಿಮ ಉಸಿರೆಳೆದಿದೆ. ಗುರುವಾರದಂದು ಲಾರೆನ್ಸ್ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಅವರೊಟ್ಟಿಗೆ ಸಾವನ್ನಪ್ಪಿದ ಶ್ವಾನದ ಮೃತದೇಹವನ್ನು ಮನೆಯ ಹಿಂಭಾಗದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ. 
    ಇದರೊಂದಿಗೆ ಮನುಷ್ಯರ ಜೊತೆ ಮೂಕ ಪ್ರಾಣಿಗಳು ಸಹ ಬಿಟ್ಟಿರಲಾರದ ಸಂಬಂಧ ಹೊಂದಿರುತ್ತವೆ. ಅದರಲ್ಲೂ ಅವರೊಂದಿಗೆ ಸದಸ್ಯರಂತೆಯೇ ಬದುಕುತ್ತಿರುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 

ಕ್ರೈಸ್ತರಿಂದ ಮೃತರ ಸ್ಮರಣೆ

ವಿಶ್ವದಾದ್ಯಂತ ಕ್ರೈಸ್ತರು ನ.೨ರಂದು ಮೃತರ ಸ್ಮರಣ ದಿನವನ್ನಾಗಿ ಆಚರಿಸಿದ್ದು, ಪ್ರತಿ ವರ್ಷದಂತೆ ಈ ವರ್ಷ ಸಹ ಭಾನುವಾರ ಭದ್ರಾವತಿ ನಗರದ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ಮೃತರ ಸ್ಮರಣೆ ಆಚರಿಸಲಾಯಿತು. 
    ಭದ್ರಾವತಿ : ವಿಶ್ವದಾದ್ಯಂತ ಕ್ರೈಸ್ತರು ನ.೨ರಂದು ಮೃತರ ಸ್ಮರಣ ದಿನವನ್ನಾಗಿ ಆಚರಿಸಿದ್ದು, ಪ್ರತಿ ವರ್ಷದಂತೆ ಈ ವರ್ಷ ಸಹ ಭಾನುವಾರ ನಗರದ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ಮೃತರ ಸ್ಮರಣೆ ಆಚರಿಸಲಾಯಿತು. 
    ಮೃತರು ತಮ್ಮ ಕುಟುಂಬಸ್ಥರ ಸಮಾಧಿಯನ್ನು ಸ್ವಚ್ಛಗೊಳಿಸಿ, ಸುಣ್ಣ-ಬಣ್ಣ ಬಳಿದು, ಹೂವಿನ ಅಲಂಕಾರದೊಂದಿಗೆ ಮೊಂಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಲಾಯಿತು.  ಸಂಜೆ ೪ ಗಂಟೆಗೆ ಸಮಾಧಿಯ ಆವರಣದಲ್ಲಿ ಹಿರಿಯೂರಿನ ಗುರು ಅಭ್ಯರ್ಥಿಗಳ ಕೇಂದ್ರದ ನಿರ್ದೇಶಕರಾದ ಫಾದರ್ ಸಂತೋಷ್ ಪೆರೇರಾ ರವರಿಂದ ಪೂಜಾ ವಿಧಿ- ವಿಧಾನಗಳು ನೆರವೇರಿದವು. 
    ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಗುರುಗಳಾದ ಫಾದರ್ ಸ್ಟೀವನ್ ಡೇಸಾ, ನ್ಯೂಟೌನ್ ಧರ್ಮ ಕೇಂದ್ರದ ಗುರುಗಳಾದ ಫಾದರ್ ಲ್ಯಾನ್ಸಿ ಡಿಸೋಜ, ಕಾಗದನಗರ ಕಾರ್ಮಿಕರ ಸಂತ ಜೋಸೆಫ್‌ರ ದೇವಾಲಯದ ಧರ್ಮ ಗುರುಗಳಾದ ಫಾದರ್ ಡೊಮಿನಿಕ್ ಕ್ರಿಸ್ತರಾಜ್, ಡಾನ್ ಬೊಸ್ಕೊ ಸಂಸ್ಥೆಯ ನಿರ್ದೇಶಕರಾದ ಫಾದರ್ ಡೈಸನ್, ಧರ್ಮಭಗಿನಿಯರು, ನಗರದ ವಿವಿಧ ದೇವಾಲಯಗಳಿಂದ ಆಗಮಿಸಿದ ಭಕ್ತಾದಿಗಳು ಪಾಲ್ಗೊಂಡಿದ್ದರು.

ಎನ್. ಯಶವಂತ್ ರಾವ್‌ಗೆ ಡಾಕ್ಟರೇಟ್ ಪದವಿ

ಎನ್. ಯಶವಂತ್ ರಾವ್
    ಭದ್ರಾವತಿ : ಶಿವಮೊಗ್ಗ ಬೊಮ್ಮನಕಟ್ಟೆ ನಿವಾಸಿ ಎನ್. ಯಶವಂತ್ ರಾವ್‌ರವರು ಮಂಡಿಸಿರುವ `ಕಂಪೆಟೆನ್ಸಿ ಮ್ಯಾಪಿಂಗ್ ಇನ್ ಸೆಲೆಕ್ಟೆಡ್ ಇನಾರ್ಫಾಮೇಷನ್ ಟೆಕ್ನೋಲಾಜಿ ಕಂಪನೀಸ್ ಇನ್ ಕರ್ನಾಟಕ-ಎ ಸ್ಟಡಿ' ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿದೆ. 
    ಕುವೆಂಪು ವಿ.ವಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ಹಿರೇಮಣಿ ನಾಯ್ಕ್‌ರವರ ಮಾರ್ಗದರ್ಶನದಲ್ಲಿ ಯಶವಂತ್ ರಾವ್‌ರವರು ಪ್ರಬಂಧ ಮಂಡಿಸಿದ್ದರು. ಇವರು ಶಿವಮೊಗ್ಗ ಬೊಮ್ಮನಕಟ್ಟೆ ಜಿ. ನಾರಾಯಣ ರಾವ್ ಮತ್ತು ಇಂದ್ರಬಾಯಿ ದಂಪತಿ ಪುತ್ರರಾಗಿದ್ದಾರೆ.