ಬುಧವಾರ, ನವೆಂಬರ್ 5, 2025

ವಿಐಎಸ್‌ಎಲ್ ಕಾರ್ಖಾನೆ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಅನೂಪ್ ಕುಮಾರ್

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಬುಧವಾರ ಅನೂಪ್ ಕುಮಾರ್ ಅಧಿಕಾರ ವಹಿಸಿಕೊಂಡರು. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಬುಧವಾರ ಅನೂಪ್ ಕುಮಾರ್ ಅಧಿಕಾರ ವಹಿಸಿಕೊಂಡರು. 
    ಇದುವರೆಗೂ ಕಾರ್ಯಪಾಲಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಎಲ್. ಚಂದ್ವಾನಿಯವರು ೨೨ ಜೂನ್ ೨೦೨೨ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ನೂತನ ಕಾರ್ಯಪಾಲಕ ನಿರ್ದೇಶಕ ಅನೂಪ್ ಕುಮಾರ್ ೧೩ ಡಿಸೆಂಬರ್, ೧೯೬೬ರಲ್ಲಿ ಜನಿಸಿದ್ದು, ಬಿಎಸ್ಸಿ ಎಂಜಿನಿಯರಿಂಗ್ (ಲೋಹಶಾಸ್ತ್ರ) ಪದವೀಧರಾಗಿದ್ದಾರೆ. ಐಐಎಂ ಇಂದೋರ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪ್ರಮಾಣಪತ್ರ ಪಡೆದಿದ್ದಾರೆ.
    ಪಶ್ಚಿಮ ಬಂಗಾಳದ ಬರ್ನ್‌ಪುರದಲ್ಲಿರುವ ಐಐಎಸ್‌ಎಸ್‌ಸಿಓ ಸ್ಟೀಲ್ ಪ್ಲಾಂಟ್‌ನಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡರು. ಇವರು ೨೦೧೭ರಲ್ಲಿ ವ್ಯವಸ್ಥಾಪಕ ಮತ್ತು ೨೦೨೨ರಲ್ಲಿ ಕಾರ್ಯಪಾಲಕ ನಿರ್ದೇಶಕ (ಕೊಲಿಯರೀಸ್) ಹುದ್ದೆಗೆ ಮಂಬಡ್ತಿ ಪಡೆದರು. ಇವರು ಬ್ಲಾಸ್ಟ್‌ಫರ್ನೇಸ್‌ನಲ್ಲಿ ೧೭ ವರ್ಷಗಳ ಪರಿಣತಿ ಹೊಂದಿದ್ದಾರೆ. ಕಳೆದ ೩೪ ವರ್ಷಗಳಲ್ಲಿ ಇವರು ಉಕ್ಕು ಪ್ರಾಧಿಕಾರದ ಐಎಸ್‌ಪಿ, ಬರ್ನ್‌ಪುರ, ಬಿಎಸ್‌ಎಲ್, ಬೊಕಾರೋ, ಕೊಲಿಯರೀಸ್ ವಿಭಾಗ ಮತ್ತು ಸಿಸಿಎಸ್‌ಓ ಮತ್ತು ಸೈಲ್ ಸುರಕ್ಷತಾ ಸಂಸ್ಥೆಯೊಂದಿಗೆ ಕೆಲಸ ಮಾಡಿದ್ದಾರೆ.
    ಮೂಲಭೂತವಾಗಿ ಆಶಾವಾದಿಯಾಗಿರುವ ಇವರು ಪ್ರಾಯೋಗಿಕ ಮತ್ತು ಸಕಾರಾತ್ಮಕ ಮನೋಭಾವದವರು. ಇದೀಗ ಕಾರ್ಖಾನೆ ಸವಾಲನ್ನು ಎದುರಿಸುತ್ತಿದ್ದು, ಇಂತಹ ಸಂಕಷ್ಟದ ಸಮಯದಲ್ಲಿ ಸಮಯದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ತೀವ್ರ ಆಸಕ್ತಿ ಹೊಂದಿರುವ ಇವರು, ಕಾರ್ಖಾನೆಯ ಸಾಮರ್ಥ್ಯಗಳನ್ನು ಅಂದರೆ ವಿಶಾಲವಾದ ಉತ್ಪನ್ನ ಮಿಶ್ರಣ, ಉತ್ಪನ್ನಗಳ ಗುಣಮಟ್ಟ ಮತ್ತು ಅದರ ಹೆಚ್ಚು ಪ್ರತಿಭಾನ್ವಿತ ಮತ್ತು ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಲು ಬಯಸುತ್ತಾರೆ. ಕಾರ್ಖಾನೆಯ ಸುಧಾರಣೆಯ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಅಲ್ಲದೆ ಸವಾಲುಗಳು ಅವಕಾಶಗಳನ್ನು ಒದಗಿಸುತ್ತದೆ ಎಂದು ನಂಬಿದ್ದಾರೆ. ಈ ನಿಟ್ಟಿನಲ್ಲಿ ಸಾಮೂಹಿಕವಾಗಿ ಒಟ್ಟಾಗಿ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ಉಪಕ್ರಮಗಳೊಂದಿಗೆ ಹೊರಬರಲು ಕರೆ ನೀಡಿದ್ದಾರೆ. 
    ಕಾರ್ಖಾನೆಯ ಸಂಸ್ಥಾಪಕ, ವಾಸ್ತುಶಿಲ್ಪಿ, ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಬಗ್ಗೆ ಅಪಾರ ಗೌರವ ಹೊಂದಿರುವ ಇವರು, ಕಾರ್ಖಾನೆ ತನ್ನ ಹಿಂದಿನ ವೈಭವಕ್ಕೆ ಪುನರುಜ್ಜೀವನಗೊಳ್ಳಲು ಸಾಧ್ಯವಾಗುವಂತೆ, ಸಂಸ್ಥಾಪಕರ ಕನಸುಗಳು ಬೇಗನೆ ನನಸಾಗುವುದನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಸಕಾರಾತ್ಮಕವಾಗಿದ್ದಾರೆ.

ಇಬ್ಬರು ಕಳ್ಳರ ಬಂಧನ : ೫.೪೦ ಲಕ್ಷ ರು. ಮೌಲ್ಯದ ೧೪ ದ್ವಿಚಕ್ರ ವಾಹನಗಳು ವಶಕ್ಕೆ

ಹಳೇನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆ 

ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡಲಾಗಿದ್ದ ೧೪ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 
    ಭದ್ರಾವತಿ: ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡಲಾಗಿದ್ದ ೧೪ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 
    ಶಿವಮೊಗ್ಗ ಟಿಪ್ಪುನಗರದ ನಿವಾಸಿ ಶಾದಾಬ್ ಖಾನ್(೨೩) ಹಾಗೂ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕು, ನೆಲ್ಲೂರು ಗ್ರಾಮದ ನಿವಾಸಿ ಶಹಬಾಜ್ ಅಹ್ಮದ್(೨೪) ಇಬ್ಬರು ಕಳ್ಳರನ್ನು ಬಂಧಿಸಿ ಒಟ್ಟು ಅಂದಾಜು ೫.೪೦ ಲಕ್ಷ ರು. ಮೌಲ್ಯದ ಒಟ್ಟು ೧೪ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಇಬ್ಬರು ಕಳ್ಳರನ್ನು ಹಾಜರು ಪಡಿಸಲಾಗಿದೆ.
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಎ.ಜಿ ಕಾರಿಯಪ್ಪ ಮತ್ತು ರಮೇಶ್, ಉಪ ಪೊಲೀಸ್ ಅಧೀಕ್ಷಕ ಅರವಿಂದ್ ಹಾಗು ನಗರವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್‌ರವರ ಮಾರ್ಗದರ್ಶನದಲ್ಲಿ ಹಳೆನಗರ ಪೊಲೀಸ್ ಠಾಣೆ ಉಪ ನಿರೀಕ್ಷಕ ಸುನೀಲ್ ಬಿ ತೇಲಿರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಸಿಬ್ಬಂದಿಗಳಾದ ಹಾಲಪ್ಪ, ಚಿನ್ನಾನಾಯ್ಕ, ರಾಘವೇಂದ್ರ, ಮೌನೇಶ್, ಚಿಕ್ಕಪ್ಪ, ಉದಯ, ರಾಜು ಮತ್ತು ಪ್ರಫುಲ್ಲ  ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ಶ್ರೀಉತ್ತರಾದಿಮಠದಿಂದ ಉಕ್ಕಿನ ನಗರದಲ್ಲಿ ನ.೯ರವರೆಗೆ ಶ್ರೀಮನ್ನ್ಯಾಯಸುಧಾಮಂಗಳ ಮಹೋತ್ಸವ

ಶ್ರೀ ೧೦೦೮ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೮ನೇ ಪಾದುಕಾಮಹಾಸಮಾರಾಧನಾ ಮಹೋತ್ಸವ 
    ಭದ್ರಾವತಿ: ಅನೇಕ ಮಾಧ್ವಪೀಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರಿಂದ ೧೩ನೇ ಶ್ರೀಮನ್ನ್ಯಾಯಸುಧಾಮಂಗಳಮಹೋತ್ಸವ ಹಾಗೂ ಸುಧಾಮಂಡನಾಚಾರ್ಯರಾದ ಶ್ರೀ ೧೦೦೮ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೮ನೇ ಪಾದುಕಾಮಹಾಸಮಾರಾಧನಾ ಮಹೋತ್ಸವ ಜನ್ನಾಪುರ ಶ್ರೀಮಜ್ಜಯತೀರ್ಥ ಗುರುಸಾರ್ವಭೌಮರ ಹಾಗು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಮತ್ತು ಜಯಶ್ರೀ ವೃತ್ತದ ಮಹಿಳಾ ಸಮಾಜದ ಆವರಣದಲ್ಲಿ ನ.೯ರವರೆಗೆ ಒಟ್ಟು ೭ ದಿನಗಳ ಕಾಲ ಜಗದ್ಗುರು ಶ್ರೀಮನ್ಮದ್ವಾಚಾರ್ಯಮೂಲಮಹಾಸಂಸ್ಥಾನ ಶ್ರೀಉತ್ತರಾದಿಮಠದಿಂದ ಆಯೋಜಿಸಲಾಗಿದೆ. 
    ಪ್ರತಿದಿನ ಬೆಳಿಗ್ಗೆ ೬ ರಿಂದ ೮ರವರೆಗೆ ಶ್ರೀ ಮೂಲರಾಮದೇವರ ಸಂಸ್ಥಾನ ಪೂಜೆ ಹಾಗು ಉಪಸ್ಥಿತ ಪೀಠಾಧಿಪತಿಗಳಿಂದ ಸಂಸ್ಥಾನ ಪೂಜೆ, ೯ ರಿಂದ ಮಧ್ಯಾಹ್ನ ೧೨ರವರೆಗೆ ಪರೀಕ್ಷಾ ಹಾಗು ಅನುವಾದ, ೧೨.೩೦ ರಿಂದ ೨ರವರೆಗೆ ತೀರ್ಥಪ್ರಸಾದ ವಿನಿಯೋಗ, ೩ ರಿಂದ ರಾತ್ರಿ ೮ರವರೆಗೆ ಪರೀಕ್ಷಾ ಹಾಗು ಅನುವಾದ, ೮.೩೦ ರಿಂದ ೯ರವರೆಗೆ ಉಪಸ್ಥಿತ ಪೀಠಾಧಿಪತಿಗಳ ಅನುಗ್ರಹ ಸಂದೇಶಗಳು ಜರುಗಲಿವೆ. 
    ಅಲ್ಲದೆ ನ.೬ರಂದು ಪದ್ಯಮಾಲಾ ಮತ್ತು ೭ರಂದು ಸಂದ್ಯಾವಂದನೆ ಕಾರ್ಯಾಗಾರಗಳು ಹಾಗು ೬ರಂದು ಆಚಾರ್ಯರ ಗ್ರಂಥಗಳಿಗೆ ಶ್ರೀಟೀಕಾಚಾರ್ಯರ ಅಸಾಧಾರಣ ಕೊಡುಗೆ, ಮಾಧ್ವ ಸಮಾಜಕ್ಕೆ ಶ್ರೀಸತ್ಯಪ್ರಮೋದತೀರ್ಥರ ಕೊಡುಗೆ, ೭ ರಂದು ಶ್ರೀಸತ್ಯಪ್ರಮೋದತೀರ್ಥರು-ಜೀವನ ಮತ್ತು ಸಾಧನೆ, ಶ್ರೀಸತ್ಯಪ್ರಮೋದತೀರ್ಥರ ಶಿಷ್ಯವಾತ್ಸಲ್ಯ ಹಾಗು ೮ರಂದು ಪ್ರಮೋದವೈಭವ ವಿಶೇಷ ಉಪನ್ಯಾಸಗಳು ನಡೆಯಲಿವೆ. 
    ನ.೬ರಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥರು, ೭ರಂದು ಶಿರೂರು ಮಠದ ಶ್ರೀ ವೇದವರ್ಧನತೀರ್ಥರು ಮತ್ತು ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥರು ಹಾಗು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು ಮತ್ತು ೯ರಂದು ಭೀಮನಕಟ್ಟೆ ಮಠದ ಶ್ರೀರಘುವರೇಂದ್ರತೀರ್ಥರು ದಿವ್ಯ ಸಾನಿಧ್ಯವಹಿಸಿ ಅನುಗ್ರಹ ನೀಡಲಿದ್ದಾರೆ. 
೭ರಂದು ಶ್ರೀ ಸತ್ಯಪ್ರಮೋದತೀರ್ಥರ ಪಾದುಕಾ ಮಹಾಸಮರಾಧನೆ ನಡೆಯಲಿದೆ. ಅಂದು ಸಂಜೆ ೪.೩೦ಕ್ಕೆ ಸುಧಾ-ಸರ್ವಮೂಲಗ್ರಂಥಗಳ ಭವ್ಯ ಶೋಭಾಯಾತ್ರೆ ಜರುಗಲಿದೆ. 


ಸುಧಾ-ಸರ್ವಮೂಲಗ್ರಂಥಗಳ ಭವ್ಯ ಶೋಭಾಯಾತ್ರೆ
    ೯ರಂದು ಶ್ರೀಮನ್ನ್ಯಾಯಸುಧಾಮಂಗಳ ಮಹೋತ್ಸವ ಜರುಗಲಿದೆ. ಅಂದು ಬೆಳಿಗ್ಗೆ ೬ರಿಂದ ೮ರವರೆಗೆ ಶ್ರೀ ಮೂಲರಾಮದೇವರ ಸಂಸ್ಥಾನ ಪೂಜೆ, ೯ರಿಂದ ಶ್ರೀಗಳಿಂದ ಶ್ರೀಮನ್ನ್ಯಾಯಸುಧಾಮಂಗಳಾನುವಾದ ನಡೆಯಲಿದೆ. 
    ಮಹಾ ಸಮಾರಾಧನಾ ಸಂಪೂರ್ಣ ಸೇವೆ, ಉದಯಾಸ್ತಮಾನ ಸೇವೆ, ವಿಶೇಷ ಅನ್ನದಾನ ಸೇವೆ, ಸಾಮೂಹಿಕ ಬಿಕ್ಷಾ ಸೇವೆ, ಋಗ್ವದ ಸಂಹಿತ ಯಾಗ ಸೇವೆ, ಸಾಮೂಹಿಕ ಅನ್ನದಾನ ಸೇವೆ, ಸಾಮೂಹಿಕ ತೊಟ್ಟಿಲ ಪೂಜೆ  ಮತ್ತು ಶ್ರೀ ಗುರುಪಾದುಕಾ ಪೂಜೆ ಸೇರಿದಂತೆ ವಿವಿಧ ಸೇವೆಗಳು ಜರುಗಲಿವೆ. 
    ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಶ್ರೀಮನ್ನ್ಯಾಯಸುಧಾ ಮಂಗಳ ಮಹೋತ್ಸವ ಹಾಗೂ ಶ್ರೀ ೧೦೦೮ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೮ನೇ ಪಾದುಕಾ ಮಹಾಸಮಾರಾಧನಾ ಸಮಿತಿ ಕೋರಿದೆ. 

ವಿಐಎಸ್‌ಎಲ್‌ಗೆ ಸಂಜಯ್ ಘೋಡಾವತ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭೇಟಿ

ಕಾರ್ಖಾನೆ ಯಂತ್ರೋಪಕರಣಗಳ ಕುರಿತು ತಂತ್ರಜ್ಞರಿಂದ ಮಾಹಿತಿ 

ಮಹಾರಾಷ್ಟ್ರ ಕೊಲ್ಲಾಹಪುರದ ಸಂಜಯ್ ಘೋಡಾವತ್ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ೩೨ ವಿದ್ಯಾರ್ಥಿಗಳ ತಂಡ ಶೈಕ್ಷಣಿಕ ಮಾಹಿತಿಗಾಗಿ ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಭೇಟಿ ನೀಡಿತು. ಕಾರ್ಖಾನೆ ಯಂತ್ರೋಪಕರಣಗಳ ಕುರಿತು ತಂತ್ರಜ್ಞರಿಂದ ಮಾಹಿತಿ ಪಡೆದು ಸಂವಹನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. 
    ಭದ್ರಾವತಿ:  ಮಹಾರಾಷ್ಟ್ರ ಕೊಲ್ಲಾಹಪುರದ ಸಂಜಯ್ ಘೋಡಾವತ್ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ೩೨ ವಿದ್ಯಾರ್ಥಿಗಳ ತಂಡ ಶೈಕ್ಷಣಿಕ ಮಾಹಿತಿಗಾಗಿ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಭೇಟಿ ನೀಡಿತು. 
    ವಿದ್ಯಾರ್ಥಿಗಳು ಕೈಗಾರಿಕೆಗಳ ಕುರಿತು ಸಂವಹನ ಕಾರ್ಯಕ್ರಮದ ಭಾಗವಾಗಿ ಪ್ರೈಮರಿಮಿಲ್, ಬಾರ್ ಮಿಲ್, ಹೀಟ್ ಟ್ರೀಟ್‌ಮೆಂಟ್ ಶಾಪ್, ಫೋರ್ಜ್ ಪ್ಲಾಂಟ್ ಮತ್ತು ಮಿಶಿನ್ ಶಾಪ್ ಭೇಟಿನೀಡಿ ತಂತ್ರಜ್ಞರಿಂದ ಮಾಹಿತಿ ಪಡೆದರು. ನಂತರ ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದರು.
    ಸಂಜಯ್ ಘೋಡಾವತ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಅಧ್ಯಾಪಕರು ವಿದ್ಯಾರ್ಥಿಗಳಿಗೆ ಕಾರ್ಖಾನೆ ಯಂತ್ರೋಪಕರಣಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡುವ ಜೊತೆಗೆ ಮಾಹಿತಿ ನೀಡಿದ ಹಾಗು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ ಕಾರ್ಖಾನೆ ಆಡಳಿತ ಮಂಡಳಿ ಹಾಗು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 

ರಂಗಭೂಮಿ ಕಲಾವಿದ ಭಾನುಪ್ರಕಾಶ್‌ಗೆ `ಕರ್ನಾಟಕ ಕಲಾ ಕೇಸರಿ' ಪ್ರಶಸ್ತಿ

ಭದ್ರಾವತಿ ನಗರದ ನವೋದಯ ಕಲಾಸಂಘದ ಪ್ರತಿಭಾವಂತ ರಂಗಭೂಮಿ ಕಲಾವಿದ ಭಾನುಪ್ರಕಾಶ್ ಅವರಿಗೆ ಬೆಂಗಳೂರಿನ ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ `ಕರ್ನಾಟಕ ಕಲಾ ಕೇಸರಿ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಭದ್ರಾವತಿ : ನಗರದ ನವೋದಯ ಕಲಾಸಂಘದ ಪ್ರತಿಭಾವಂತ ರಂಗಭೂಮಿ ಕಲಾವಿದ ಭಾನುಪ್ರಕಾಶ್ ಅವರಿಗೆ ಬೆಂಗಳೂರಿನ ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ `ಕರ್ನಾಟಕ ಕಲಾ ಕೇಸರಿ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಭಾನುಪ್ರಕಾಶ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಭಾನುಪ್ರಕಾಶ್‌ರವರು ಹಲವಾರು ನಾಟಕಗಳಲ್ಲಿ ಅಭಿನಯಿಸಿ ತಮ್ಮ ಪ್ರತಿಭೆ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕಲೆ, ಸಂಸ್ಕೃತಿ ಹಾಗು ರಂಗಭೂಮಿ ಕ್ಷೇತ್ರಕ್ಕೆ ಇವರು ಸಲ್ಲಿಸಿರುವ ಸೇವೆ ಅನನ್ಯವಾಗಿದೆ. 
    ಭಾನುಪ್ರಕಾಶ್‌ರವರನ್ನು ನವೋದಯ ಕಲಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಐಎಸ್‌ಎಲ್ ಕಾರ್ಖಾನೆಯ ಕಾರ್ಮಿಕ ವರ್ಗದವರು ಹಾಗು ಇನ್ನಿತರ ಗಣ್ಯರು ಅಭಿನಂದಿಸಿದ್ದಾರೆ.  

ಮಂಗಳವಾರ, ನವೆಂಬರ್ 4, 2025

ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸದಿರಿ

ಮೆಸ್ಕಾಂ ಶಾಖಾ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಆಗ್ರಹ : ಮನವಿ 

ಭದ್ರಾವತಿ ನಗರದ ಜನ್ನಾಪುರ ಫಿಲ್ಟರ್‌ಶೆಡ್‌ನಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸದಿರುವಂತೆ ಆಗ್ರಹಿಸಿ ಮಂಗಳವಾರ ಉಂಬ್ಳೆಬೈಲು ರಸ್ತೆ, ಅಂಡರ್‌ಬ್ರಿಡ್ಜ್ ಸಮೀಪದಲ್ಲಿರುವ ಮೆಸ್ಕಾಂ ಶಾಖಾ ಕಛೇರಿ ಆವರಣದಲ್ಲಿ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬೀರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ನಗರದ ಜನ್ನಾಪುರ ಫಿಲ್ಟರ್‌ಶೆಡ್‌ನಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸದಿರುವಂತೆ ಆಗ್ರಹಿಸಿ ಮಂಗಳವಾರ ಉಂಬ್ಳೆಬೈಲು ರಸ್ತೆ, ಅಂಡರ್‌ಬ್ರಿಡ್ಜ್ ಸಮೀಪದಲ್ಲಿರುವ ಮೆಸ್ಕಾಂ ಶಾಖಾ ಕಛೇರಿ ಆವರಣದಲ್ಲಿ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬೀರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. 
    ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟ ಶಶಿಕುಮಾರ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರಮುಖರು ಮಾತನಾಡಿ, ಕೆಲವು ಪ್ರಭಾವಿಗಳು ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಸೇರಿದ ಜಾಗದಲ್ಲಿ ಅಂತರಘಟ್ಟಮ್ಮ ದೇವಸ್ಥಾನದ ಬಳಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದು, ಇದಕ್ಕೆ ಯಾವುದೇ ದಾಖಲಾತಿಗಳು ಇರುವುದಿಲ್ಲ. ಈ ಕಟ್ಟಡವನ್ನು ಕಾರ್ಖಾನೆ ಆಡಳಿತ ಮಂತಳಿ ತನ್ನ ಅಧೀನಕ್ಕೆ ತೆಗೆದುಕೊಂಡು ಕಟ್ಟಡ ನೆಲಸಮಗೊಳಿಸಬೇಕೆಂದ ಅಥವಾ ಕಟ್ಟಡವನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ನೀಡಬೇಕೆಂದು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಅನಧಿಕೃತ ಕಟ್ಟಡಕ್ಕೆ ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಬಾರದೆಂದು ಆಗ್ರಹಿಸಿದರು. 
    ಒಂದು ವೇಳೆ ನಮ್ಮ ಹೋರಾಟಕ್ಕೆ ಬೆಲೆಕೊಡದೆ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಲ್ಲಿ ತಮ್ಮ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು. 
    ಪ್ರತಿಭಟನೆಯಲ್ಲಿ ಮಹಾದೇವಿ, ಇಂದ್ರಮ್ಮ, ಪ್ರಕಾಶ್, ದಿವ್ಯಶ್ರೀ ಮತ್ತು ವೈ. ಶಶಿಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ವಿವಿಧ ವೃತ್ತಿಯ ಕಾರ್ಮಿಕರಿಗೆ ಸಲಕರಣೆಗಳ ಕಿಟ್ ವಿತರಣೆ

ಭದ್ರಾವತಿ ಕ್ಷೇತ್ರದಲ್ಲಿ ಕಾರ್ಮಿಕರು ಹೆಚ್ಚಾಗಿದ್ದು, ಅದರಲ್ಲೂ ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರಿಗೆ ಅಗತ್ಯವಿರುವ ಸಲಕರಣೆಗಳ ಸುಮಾರು ೪೦೦ ಕಿಟ್‌ಗಳನ್ನು ಕಾರ್ಮಿಕ ಇಲಾಖೆಯಿಂದ ಮಂಗಳವಾರ ವಿತರಿಸಲಾಯಿತು. 
    ಭದ್ರಾವತಿ : ಕ್ಷೇತ್ರದಲ್ಲಿ ಕಾರ್ಮಿಕರು ಹೆಚ್ಚಾಗಿದ್ದು, ಅದರಲ್ಲೂ ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರಿಗೆ ಅಗತ್ಯವಿರುವ ಸಲಕರಣೆಗಳ ಸುಮಾರು ೪೦೦ ಕಿಟ್‌ಗಳನ್ನು ಕಾರ್ಮಿಕ ಇಲಾಖೆಯಿಂದ ಮಂಗಳವಾರ ವಿತರಿಸಲಾಯಿತು. 
    ವಿದ್ಯುತ್ ಕೆಲಸಗಾರರು, ಮರ ಕೆತ್ತನೆ ಕೆಲಸಗಾರರು ಹಾಗು ಮೇಷನ್ ಸೇರಿದಂತೆ ಇನ್ನಿತರ ವೃತ್ತಿಗಳ ಕಾರ್ಮಿಕರಿಗೆ ಅಗತ್ಯವಿರುವ ಕಿಟ್‌ಗಳನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ತಮ್ಮ ಗೃಹ ಕಛೇರಿಯಲ್ಲಿ ವಿತರಿಸಿ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. 
    ಪ್ರಮುಖರಾದ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಉದ್ಯಮಿ ಬಿ.ಕೆ ಜಗನ್ನಾಥ್, ಕಾರ್ಮಿಕ ನಿರೀಕ್ಷಕ ರಕ್ಷಿತ್ ಹಾಗು ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.