ಗುರುವಾರ, ನವೆಂಬರ್ 6, 2025

ಶ್ರೀ ಸತ್ಯ ಸಾಯಿ ಬಾಬಾರವರ ೧೦೦ನೇ ಜನ್ಮದಿನೋತ್ಸವ : ಪ್ರೇಮಯಾತ್ರೆ ಆಯೋಜನೆ

    ಭದ್ರಾವತಿ : ನಗರದ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶ್ರೀ ಸತ್ಯ ಸಾಯಿ ಸೇವಾ ಸಮಿತಿಯಿಂದ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೧೦೦ನೇ ಜನ್ಮದಿನೋತ್ಸವದ ಅಂಗವಾಗಿ ಪುಟ್ಟಪರ್ತಿಗೆ ಪ್ರೇಮಯಾತ್ರೆ ಆಯೋಜಿಸಲಾಗಿದೆ. 
    ನ.೧೩ರಂದು ರಾತ್ರಿ ೧೦ ಗಂಟೆಗೆ ನಗರದಿಂದ ಪ್ರಯಾಣ ಬೆಳೆಸಲಿದ್ದು, ನ.೧೬ರಂದು ಬೆಳಿಗ್ಗೆ ೧೧ ಗಂಟೆಗೆ ಪುಟ್ಟಪರ್ತಿಯಿಂದ ಹೊರಟು ರಾತ್ರಿ ೮ ಗಂಟೆಗೆ ನಗರಕ್ಕೆ ಹಿಂದಿರುಗಲಾಗುವುದು.  ಭಕ್ತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. 
    ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ ೯೧೪೧೬೪೨೪೩೨ ಅಥವಾ ೭೩೫೩೨೯೨೩೩೯ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಸಂಚಾಲಕ ಜಿ.ಪಿ ಪರಮೇಶ್ವರಪ್ಪ ತಿಳಿಸಿದ್ದಾರೆ. 

ಶಿಕ್ಷಕಿ ಡಿ.ಎಚ್ ಮಾಯಮ್ಮ ನಿಧನ

ಡಿ.ಎಚ್ ಮಾಯಮ್ಮ 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಸುರಗಿತೋಪು ನಿವಾಸಿ, ಶಿಕ್ಷಕಿ ಡಿ.ಎಚ್ ಮಾಯಮ್ಮ(೬೦) ಗುರುವಾರ ನಿಧನ ಹೊಂದಿದರು. 
    ಓರ್ವ ಪುತ್ರ, ಸೊಸೆ, ಸಹೋದರ, ಸಹೋದರಿಯರು  ಇದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಾಯಮ್ಮ ಸುಮಾರು ೧೮ ವರ್ಷಗಳ ಕಾಲ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರ್ಸರಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ನಿಧನಕ್ಕೆ ನಗರದ ಗಣ್ಯರು, ಶಿಕ್ಷಕ ವೃಂದದವರು ಸಂತಾಪ ಸೂಚಿಸಿದ್ದಾರೆ. 

ಸುರಗಿತೋಪಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ

ಎಎಸ್‌ಐ ಕರ್ತವ್ಯಕ್ಕೆ ಅಡ್ಡಿ, ವಿಡಿಯೋ ಚಿತ್ರೀಕರಣದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ 


    ಭದ್ರಾವತಿ : ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಬಿಡಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ನಗರಸಭೆ ವ್ಯಾಪ್ತಿಯ ಸುರಗಿತೋಪಿನಲ್ಲಿ ನಡೆದಿದೆ. ಈ ಸಂಬಂಧ ಎರಡು ಗುಂಪುಗಳ ವಿರುದ್ಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
    ಸುರಗಿತೋಪು ೪ನೇ ತಿರುವಿನ ರಸ್ತೆಯಲ್ಲಿ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿಯಿಂದ ಕಳೆದ ಸುಮಾರು ೫೦ ವರ್ಷಗಳಿಂದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದು, ಈ ಬಾರಿ ಸಹ ಪ್ರತಿಷ್ಠಾಪನೆ ಮಾಡಿ ಬುಧವಾರ ವಿಸರ್ಜನೆಗೆ ಮುಂದಾಗಿದ್ದಾರೆ. ಈ ಸಂಬಂಧ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯುತ್ತಿದ್ದಾಗ ರಾತ್ರಿ ಸುಮಾರು ೧೦.೩೦ರ ಸಮಯದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಕರ್ತವ್ಯದಲ್ಲಿದ್ದ ಪೇಪರ್‌ಟೌನ್ ಪೊಲೀಸ್ ಠಾಣೆ ಸಹಾಯಕ ಠಾಣಾ ನಿರೀಕ್ಷಕ ಕೃಷ್ಣಮೂರ್ತಿಯವರು ಗಲಾಟೆ ಬಿಡಿಸಲು ಮುಂದಾಗಿದ್ದಾರೆ. ಆದರೆ ಗಲಾಟೆಯಲ್ಲಿ ತೊಡಗಿದ್ದವರು ಇವರ ಬಟ್ಟೆ ಹರಿದು ಹಲ್ಲೆಗೆ ಯತ್ನಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. 
    ಅಲ್ಲದೆ ಮೆರವಣಿಗೆ ವಿಡಿಯೋ ಚಿತ್ರೀಕರಣದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ ಅಜಿತ್ ಎಂಬುವರ ಮೇಲೆ ತೀವ್ರ ಹಲ್ಲೆ ನಡೆಸಲಾಗಿದ್ದು, ಇವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗುಂಪಿನಲ್ಲಿದ್ದ ಜೀವನ್ ಎಂಬಾತನ ಮೇಲೂ ತೀವ್ರ ಹಲ್ಲೆ ನಡೆಸಲಾಗಿದೆ. ಈತನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಸಹಾಯಕ ಠಾಣಾ ನಿರೀಕ್ಷಕ ಕೃಷ್ಣಮೂರ್ತಿ ಎರಡು ಗುಂಪುಗಳ ನಡುವೆ ಪ್ರಕರಣ ದಾಖಲಿಸಿದ್ದಾರೆ. 

ನ.೯ರಂದು ಪಂಚ ಗ್ಯಾರಂಟಿ ಸಮಿತಿ ಸಭಾ ಕಾರ್ಯಕ್ರಮ

    ಭದ್ರಾವತಿ: ಸರ್ಕಾರದ ಪಂಚ ಗ್ಯಾರಂಟಿ ಪ್ರಾಧಿಕಾರದ ಸಮಿತಿ ಸಭಾ ಕಾರ್ಯಕ್ರಮ ನ.೯ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕಿನ ಬಿ.ಆರ್.ಪಿ ಕರಾವಳಿ ಆಸ್ಪತ್ರೆ ಸಮೀಪದ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ. 
    ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಸಮಗ್ರ ಮಾಹಿತಿ ನೀಡುವ ಜೊತೆಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜೊತೆ ಚರ್ಚೆ ನಡೆಯಲಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕೋರಿದ್ದಾರೆ.

ಬುಧವಾರ, ನವೆಂಬರ್ 5, 2025

ವಿಐಎಸ್‌ಎಲ್ ಕಾರ್ಖಾನೆ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಅನೂಪ್ ಕುಮಾರ್

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಬುಧವಾರ ಅನೂಪ್ ಕುಮಾರ್ ಅಧಿಕಾರ ವಹಿಸಿಕೊಂಡರು. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಬುಧವಾರ ಅನೂಪ್ ಕುಮಾರ್ ಅಧಿಕಾರ ವಹಿಸಿಕೊಂಡರು. 
    ಇದುವರೆಗೂ ಕಾರ್ಯಪಾಲಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಎಲ್. ಚಂದ್ವಾನಿಯವರು ೨೨ ಜೂನ್ ೨೦೨೨ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ನೂತನ ಕಾರ್ಯಪಾಲಕ ನಿರ್ದೇಶಕ ಅನೂಪ್ ಕುಮಾರ್ ೧೩ ಡಿಸೆಂಬರ್, ೧೯೬೬ರಲ್ಲಿ ಜನಿಸಿದ್ದು, ಬಿಎಸ್ಸಿ ಎಂಜಿನಿಯರಿಂಗ್ (ಲೋಹಶಾಸ್ತ್ರ) ಪದವೀಧರಾಗಿದ್ದಾರೆ. ಐಐಎಂ ಇಂದೋರ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪ್ರಮಾಣಪತ್ರ ಪಡೆದಿದ್ದಾರೆ.
    ಪಶ್ಚಿಮ ಬಂಗಾಳದ ಬರ್ನ್‌ಪುರದಲ್ಲಿರುವ ಐಐಎಸ್‌ಎಸ್‌ಸಿಓ ಸ್ಟೀಲ್ ಪ್ಲಾಂಟ್‌ನಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡರು. ಇವರು ೨೦೧೭ರಲ್ಲಿ ವ್ಯವಸ್ಥಾಪಕ ಮತ್ತು ೨೦೨೨ರಲ್ಲಿ ಕಾರ್ಯಪಾಲಕ ನಿರ್ದೇಶಕ (ಕೊಲಿಯರೀಸ್) ಹುದ್ದೆಗೆ ಮಂಬಡ್ತಿ ಪಡೆದರು. ಇವರು ಬ್ಲಾಸ್ಟ್‌ಫರ್ನೇಸ್‌ನಲ್ಲಿ ೧೭ ವರ್ಷಗಳ ಪರಿಣತಿ ಹೊಂದಿದ್ದಾರೆ. ಕಳೆದ ೩೪ ವರ್ಷಗಳಲ್ಲಿ ಇವರು ಉಕ್ಕು ಪ್ರಾಧಿಕಾರದ ಐಎಸ್‌ಪಿ, ಬರ್ನ್‌ಪುರ, ಬಿಎಸ್‌ಎಲ್, ಬೊಕಾರೋ, ಕೊಲಿಯರೀಸ್ ವಿಭಾಗ ಮತ್ತು ಸಿಸಿಎಸ್‌ಓ ಮತ್ತು ಸೈಲ್ ಸುರಕ್ಷತಾ ಸಂಸ್ಥೆಯೊಂದಿಗೆ ಕೆಲಸ ಮಾಡಿದ್ದಾರೆ.
    ಮೂಲಭೂತವಾಗಿ ಆಶಾವಾದಿಯಾಗಿರುವ ಇವರು ಪ್ರಾಯೋಗಿಕ ಮತ್ತು ಸಕಾರಾತ್ಮಕ ಮನೋಭಾವದವರು. ಇದೀಗ ಕಾರ್ಖಾನೆ ಸವಾಲನ್ನು ಎದುರಿಸುತ್ತಿದ್ದು, ಇಂತಹ ಸಂಕಷ್ಟದ ಸಮಯದಲ್ಲಿ ಸಮಯದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ತೀವ್ರ ಆಸಕ್ತಿ ಹೊಂದಿರುವ ಇವರು, ಕಾರ್ಖಾನೆಯ ಸಾಮರ್ಥ್ಯಗಳನ್ನು ಅಂದರೆ ವಿಶಾಲವಾದ ಉತ್ಪನ್ನ ಮಿಶ್ರಣ, ಉತ್ಪನ್ನಗಳ ಗುಣಮಟ್ಟ ಮತ್ತು ಅದರ ಹೆಚ್ಚು ಪ್ರತಿಭಾನ್ವಿತ ಮತ್ತು ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಲು ಬಯಸುತ್ತಾರೆ. ಕಾರ್ಖಾನೆಯ ಸುಧಾರಣೆಯ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಅಲ್ಲದೆ ಸವಾಲುಗಳು ಅವಕಾಶಗಳನ್ನು ಒದಗಿಸುತ್ತದೆ ಎಂದು ನಂಬಿದ್ದಾರೆ. ಈ ನಿಟ್ಟಿನಲ್ಲಿ ಸಾಮೂಹಿಕವಾಗಿ ಒಟ್ಟಾಗಿ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ಉಪಕ್ರಮಗಳೊಂದಿಗೆ ಹೊರಬರಲು ಕರೆ ನೀಡಿದ್ದಾರೆ. 
    ಕಾರ್ಖಾನೆಯ ಸಂಸ್ಥಾಪಕ, ವಾಸ್ತುಶಿಲ್ಪಿ, ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಬಗ್ಗೆ ಅಪಾರ ಗೌರವ ಹೊಂದಿರುವ ಇವರು, ಕಾರ್ಖಾನೆ ತನ್ನ ಹಿಂದಿನ ವೈಭವಕ್ಕೆ ಪುನರುಜ್ಜೀವನಗೊಳ್ಳಲು ಸಾಧ್ಯವಾಗುವಂತೆ, ಸಂಸ್ಥಾಪಕರ ಕನಸುಗಳು ಬೇಗನೆ ನನಸಾಗುವುದನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಸಕಾರಾತ್ಮಕವಾಗಿದ್ದಾರೆ.

ಇಬ್ಬರು ಕಳ್ಳರ ಬಂಧನ : ೫.೪೦ ಲಕ್ಷ ರು. ಮೌಲ್ಯದ ೧೪ ದ್ವಿಚಕ್ರ ವಾಹನಗಳು ವಶಕ್ಕೆ

ಹಳೇನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆ 

ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡಲಾಗಿದ್ದ ೧೪ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 
    ಭದ್ರಾವತಿ: ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡಲಾಗಿದ್ದ ೧೪ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 
    ಶಿವಮೊಗ್ಗ ಟಿಪ್ಪುನಗರದ ನಿವಾಸಿ ಶಾದಾಬ್ ಖಾನ್(೨೩) ಹಾಗೂ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕು, ನೆಲ್ಲೂರು ಗ್ರಾಮದ ನಿವಾಸಿ ಶಹಬಾಜ್ ಅಹ್ಮದ್(೨೪) ಇಬ್ಬರು ಕಳ್ಳರನ್ನು ಬಂಧಿಸಿ ಒಟ್ಟು ಅಂದಾಜು ೫.೪೦ ಲಕ್ಷ ರು. ಮೌಲ್ಯದ ಒಟ್ಟು ೧೪ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಇಬ್ಬರು ಕಳ್ಳರನ್ನು ಹಾಜರು ಪಡಿಸಲಾಗಿದೆ.
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಎ.ಜಿ ಕಾರಿಯಪ್ಪ ಮತ್ತು ರಮೇಶ್, ಉಪ ಪೊಲೀಸ್ ಅಧೀಕ್ಷಕ ಅರವಿಂದ್ ಹಾಗು ನಗರವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್‌ರವರ ಮಾರ್ಗದರ್ಶನದಲ್ಲಿ ಹಳೆನಗರ ಪೊಲೀಸ್ ಠಾಣೆ ಉಪ ನಿರೀಕ್ಷಕ ಸುನೀಲ್ ಬಿ ತೇಲಿರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಸಿಬ್ಬಂದಿಗಳಾದ ಹಾಲಪ್ಪ, ಚಿನ್ನಾನಾಯ್ಕ, ರಾಘವೇಂದ್ರ, ಮೌನೇಶ್, ಚಿಕ್ಕಪ್ಪ, ಉದಯ, ರಾಜು ಮತ್ತು ಪ್ರಫುಲ್ಲ  ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ಶ್ರೀಉತ್ತರಾದಿಮಠದಿಂದ ಉಕ್ಕಿನ ನಗರದಲ್ಲಿ ನ.೯ರವರೆಗೆ ಶ್ರೀಮನ್ನ್ಯಾಯಸುಧಾಮಂಗಳ ಮಹೋತ್ಸವ

ಶ್ರೀ ೧೦೦೮ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೮ನೇ ಪಾದುಕಾಮಹಾಸಮಾರಾಧನಾ ಮಹೋತ್ಸವ 
    ಭದ್ರಾವತಿ: ಅನೇಕ ಮಾಧ್ವಪೀಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರಿಂದ ೧೩ನೇ ಶ್ರೀಮನ್ನ್ಯಾಯಸುಧಾಮಂಗಳಮಹೋತ್ಸವ ಹಾಗೂ ಸುಧಾಮಂಡನಾಚಾರ್ಯರಾದ ಶ್ರೀ ೧೦೦೮ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೮ನೇ ಪಾದುಕಾಮಹಾಸಮಾರಾಧನಾ ಮಹೋತ್ಸವ ಜನ್ನಾಪುರ ಶ್ರೀಮಜ್ಜಯತೀರ್ಥ ಗುರುಸಾರ್ವಭೌಮರ ಹಾಗು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಮತ್ತು ಜಯಶ್ರೀ ವೃತ್ತದ ಮಹಿಳಾ ಸಮಾಜದ ಆವರಣದಲ್ಲಿ ನ.೯ರವರೆಗೆ ಒಟ್ಟು ೭ ದಿನಗಳ ಕಾಲ ಜಗದ್ಗುರು ಶ್ರೀಮನ್ಮದ್ವಾಚಾರ್ಯಮೂಲಮಹಾಸಂಸ್ಥಾನ ಶ್ರೀಉತ್ತರಾದಿಮಠದಿಂದ ಆಯೋಜಿಸಲಾಗಿದೆ. 
    ಪ್ರತಿದಿನ ಬೆಳಿಗ್ಗೆ ೬ ರಿಂದ ೮ರವರೆಗೆ ಶ್ರೀ ಮೂಲರಾಮದೇವರ ಸಂಸ್ಥಾನ ಪೂಜೆ ಹಾಗು ಉಪಸ್ಥಿತ ಪೀಠಾಧಿಪತಿಗಳಿಂದ ಸಂಸ್ಥಾನ ಪೂಜೆ, ೯ ರಿಂದ ಮಧ್ಯಾಹ್ನ ೧೨ರವರೆಗೆ ಪರೀಕ್ಷಾ ಹಾಗು ಅನುವಾದ, ೧೨.೩೦ ರಿಂದ ೨ರವರೆಗೆ ತೀರ್ಥಪ್ರಸಾದ ವಿನಿಯೋಗ, ೩ ರಿಂದ ರಾತ್ರಿ ೮ರವರೆಗೆ ಪರೀಕ್ಷಾ ಹಾಗು ಅನುವಾದ, ೮.೩೦ ರಿಂದ ೯ರವರೆಗೆ ಉಪಸ್ಥಿತ ಪೀಠಾಧಿಪತಿಗಳ ಅನುಗ್ರಹ ಸಂದೇಶಗಳು ಜರುಗಲಿವೆ. 
    ಅಲ್ಲದೆ ನ.೬ರಂದು ಪದ್ಯಮಾಲಾ ಮತ್ತು ೭ರಂದು ಸಂದ್ಯಾವಂದನೆ ಕಾರ್ಯಾಗಾರಗಳು ಹಾಗು ೬ರಂದು ಆಚಾರ್ಯರ ಗ್ರಂಥಗಳಿಗೆ ಶ್ರೀಟೀಕಾಚಾರ್ಯರ ಅಸಾಧಾರಣ ಕೊಡುಗೆ, ಮಾಧ್ವ ಸಮಾಜಕ್ಕೆ ಶ್ರೀಸತ್ಯಪ್ರಮೋದತೀರ್ಥರ ಕೊಡುಗೆ, ೭ ರಂದು ಶ್ರೀಸತ್ಯಪ್ರಮೋದತೀರ್ಥರು-ಜೀವನ ಮತ್ತು ಸಾಧನೆ, ಶ್ರೀಸತ್ಯಪ್ರಮೋದತೀರ್ಥರ ಶಿಷ್ಯವಾತ್ಸಲ್ಯ ಹಾಗು ೮ರಂದು ಪ್ರಮೋದವೈಭವ ವಿಶೇಷ ಉಪನ್ಯಾಸಗಳು ನಡೆಯಲಿವೆ. 
    ನ.೬ರಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥರು, ೭ರಂದು ಶಿರೂರು ಮಠದ ಶ್ರೀ ವೇದವರ್ಧನತೀರ್ಥರು ಮತ್ತು ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥರು ಹಾಗು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು ಮತ್ತು ೯ರಂದು ಭೀಮನಕಟ್ಟೆ ಮಠದ ಶ್ರೀರಘುವರೇಂದ್ರತೀರ್ಥರು ದಿವ್ಯ ಸಾನಿಧ್ಯವಹಿಸಿ ಅನುಗ್ರಹ ನೀಡಲಿದ್ದಾರೆ. 
೭ರಂದು ಶ್ರೀ ಸತ್ಯಪ್ರಮೋದತೀರ್ಥರ ಪಾದುಕಾ ಮಹಾಸಮರಾಧನೆ ನಡೆಯಲಿದೆ. ಅಂದು ಸಂಜೆ ೪.೩೦ಕ್ಕೆ ಸುಧಾ-ಸರ್ವಮೂಲಗ್ರಂಥಗಳ ಭವ್ಯ ಶೋಭಾಯಾತ್ರೆ ಜರುಗಲಿದೆ. 


ಸುಧಾ-ಸರ್ವಮೂಲಗ್ರಂಥಗಳ ಭವ್ಯ ಶೋಭಾಯಾತ್ರೆ
    ೯ರಂದು ಶ್ರೀಮನ್ನ್ಯಾಯಸುಧಾಮಂಗಳ ಮಹೋತ್ಸವ ಜರುಗಲಿದೆ. ಅಂದು ಬೆಳಿಗ್ಗೆ ೬ರಿಂದ ೮ರವರೆಗೆ ಶ್ರೀ ಮೂಲರಾಮದೇವರ ಸಂಸ್ಥಾನ ಪೂಜೆ, ೯ರಿಂದ ಶ್ರೀಗಳಿಂದ ಶ್ರೀಮನ್ನ್ಯಾಯಸುಧಾಮಂಗಳಾನುವಾದ ನಡೆಯಲಿದೆ. 
    ಮಹಾ ಸಮಾರಾಧನಾ ಸಂಪೂರ್ಣ ಸೇವೆ, ಉದಯಾಸ್ತಮಾನ ಸೇವೆ, ವಿಶೇಷ ಅನ್ನದಾನ ಸೇವೆ, ಸಾಮೂಹಿಕ ಬಿಕ್ಷಾ ಸೇವೆ, ಋಗ್ವದ ಸಂಹಿತ ಯಾಗ ಸೇವೆ, ಸಾಮೂಹಿಕ ಅನ್ನದಾನ ಸೇವೆ, ಸಾಮೂಹಿಕ ತೊಟ್ಟಿಲ ಪೂಜೆ  ಮತ್ತು ಶ್ರೀ ಗುರುಪಾದುಕಾ ಪೂಜೆ ಸೇರಿದಂತೆ ವಿವಿಧ ಸೇವೆಗಳು ಜರುಗಲಿವೆ. 
    ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಶ್ರೀಮನ್ನ್ಯಾಯಸುಧಾ ಮಂಗಳ ಮಹೋತ್ಸವ ಹಾಗೂ ಶ್ರೀ ೧೦೦೮ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೮ನೇ ಪಾದುಕಾ ಮಹಾಸಮಾರಾಧನಾ ಸಮಿತಿ ಕೋರಿದೆ.