ಗಣಪತಿ ಮೂರ್ತಿ ವಿಸರ್ಜನೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಪ್ರಕರಣ ದಾಖಲಿಸಿ ಅಮಾಯಕ ಯುವಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಪೇಪರ್‌ಟೌನ್ ಠಾಣೆ ಮುಂಭಾಗ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್ ನೇತೃತ್ವದಲ್ಲಿ ಹಗಲು ರಾತ್ರಿ ಪ್ರತಿಭಟನೆ ನಡೆಸಲಾಯಿತು.
- ಗಣಪತಿ ಮೂರ್ತಿ ವಿಸರ್ಜನೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಪ್ರಕರಣ
- ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂಬ ಆರೋಪ
- ವಿಡಿಯೋ ಚಿತ್ರೀಕರಣ ಪರಿಶೀಲಿಸಿ ಪ್ರಕರಣ ದಾಖಲಿಸಲು ಆಗ್ರಹ
- ಮಾರಣಾಂತಿಕ ಹಲ್ಲೆ ಸೆಕ್ಷನ್ ದುರ್ಬಳಕೆ
- ಎರಡು ಗುಂಪಿನವರ ವಿರುದ್ಧ ಪ್ರಕರಣ ದಾಖಲಿಸಿ
- ಅಮಾಯಕರ ವಿರುದ್ಧದ ಪ್ರಕರಣ ದಾಖಲು ಪುನರ್ ಪರಿಶೀಲನೆ ಮಾಡುವ ಭರವಸೆ
ಭದ್ರಾವತಿ : ನಗರಸಭೆ ವ್ಯಾಪ್ತಿಯ ಸುರಗಿತೋಪಿನ ೪ನೇ ತಿರುವಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಗಲಾಟೆ ಬಿಡಿಸಲು ಹೋದ ಸಹಾಯಕ ಉಪ ಠಾಣಾಧಿಕಾರಿ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆಗೆ ಸಂಬಂಧಿಸಿದಂತೆ ವಿನಾಃ ಕಾರಣ ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿ ಶುಕ್ರವಾರ ರಾತ್ರಿ ಪೇಪರ್‌ಟೌನ್ ಠಾಣೆ ಮುಂಭಾಗ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್ ನೇತೃತ್ವದಲ್ಲಿ ಆರಂಭಗೊಂಡಿದ್ದ ಪ್ರತಿಭಟನೆ ಶನಿವಾರ ಸಂಜೆವರೆಗೂ ನಡೆಯಿತು.
ಎಂ.ಎ ಅಜಿತ್ ಮಾತನಾಡಿ, ಗುಂಪಿನ ಮಧ್ಯದಲ್ಲಿ ಏಕಾಏಕಿ ಸಹಾಯಕ ಉಪ ಠಾಣಾಧಿಕಾರಿ ಬಂದಿದ್ದಾರೆ. ಇದು ಗುಂಪಿನಲ್ಲಿದ್ದವರ ಅರಿವಿಗೆ ಬಂದಿಲ್ಲ. ತಳ್ಳಾಟ ನಡೆಸಲಾಗಿದ್ದು, ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ವಿನಾಃಕಾರಣ ಯಾರನ್ನೋ ಕರೆತಂದು ಅವರಿಂದ ೩ ಜನ ಅಮಾಯಕ ಯುವಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿದರು.
ವಿಡಿಯೋ ಚಿತ್ರೀಕರಣ ಪರಿಶೀಲನೆ ನಡೆಸಿದರೆ ಯಾರು ಎಂಬುದು ನಿಮಗೆ ತಿಳಿದು ಬರಲಿದೆ. ಯಾರು ನಮಗೆ ಗೊತ್ತಿದ್ದು, ಅವರ ವಿರುದ್ಧ ನಾವು ದೂರು ನೀಡುತ್ತೇವೆ. ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕೆಂದು ಆಗ್ರಹಿಸಿದರು.
ಯಾರ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆದಿಲ್ಲ. ಆದರೆ ಪೊಲೀಸರು ಮಾರಣಾಂತಿಕ ಹಲ್ಲೆ ಸೆಕ್ಷನ್ ದುರ್ಬಳಕೆ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಇದರಿಂದಾಗಿ ಅಮಾಯಕ ಯುವಕರು ಬಲಿಪಶುಗಳಾಗಿದ್ದಾರೆಂದು ದೂರಿದರು.
ರಾತ್ರಿ ಆರಂಭಗೊಂಡ ಪ್ರತಿಭಟನೆ ಶನಿವಾರ ಸಂಜೆ ೪ ಗಂಟೆವರೆಗೆ ನಡೆಯಿತು. ಈ ನಡುವೆ ಪ್ರತಿಭಟನಾನಿರತರೊಂದಿಗೆ ಸಂಧಾನ ನಡೆಸಿದ ಪೊಲೀಸರು. ತಪ್ಪು ಮಾಡಿರುವ ಎಲ್ಲರ ವಿರುದ್ಧ ಸಹ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ಮಾರಣಾಂತಿಕ ಹಲ್ಲೆ ಸೆಕ್ಷನ್ ಪುನರ್ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು.
ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಶಿಮುಲ್ ಮಾಜಿ ಅಧ್ಯಕ್ಷ ಡಿ. ಆನಂದ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಧರ್ಮೇಗೌಡ, ಮೋಹನ್ ನಾಯ್ಡು, ಗುಣಶೇಖರ್, ಉಮೇಶ್, ಶಿವರಾಜ್, ಜೆಡಿಎಸ್ ನಗರಸಭೆ ಸದಸ್ಯರು ಹಾಗು ಸ್ಥಳೀಯರು ಪಾಲ್ಗೊಂಡಿದ್ದರು.
