ಭಾನುವಾರ, ನವೆಂಬರ್ 9, 2025

ಭದ್ರಾವತಿಯಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪರಿಪೂರ್ಣ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ತಾಲೂಕಿನ ಬಿ.ಆರ್.ಪಿ ಕರಾವಳಿ ಆಸ್ಪತ್ರೆ ಸಮೀಪದ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಸರ್ಕಾರದ ಪಂಚ ಗ್ಯಾರಂಟಿ ಪ್ರಾಧಿಕಾರದ ಸಮಿತಿ ಸಭಾ ಕಾರ್ಯಕ್ರಮ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
    ಭದ್ರಾವತಿ: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು. 
    ಅವರು ಭಾನುವಾರ ತಾಲೂಕಿನ ಬಿ.ಆರ್.ಪಿ ಕರಾವಳಿ ಆಸ್ಪತ್ರೆ ಸಮೀಪದ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಸರ್ಕಾರದ ಪಂಚ ಗ್ಯಾರಂಟಿ ಪ್ರಾಧಿಕಾರದ ಸಮಿತಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  
    ಭಾಗ್ಯಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಯಾವುದೇ ಬಾಕಿ ಉಳಿಸಿಕೊಳ್ಳದೆ ಸಮರ್ಪಕವಾಗಿ ಅವರ ಖಾತೆಗಳಿಗೆ ಹಣ ಜಮಾ ಮಾಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಗುರಿ ಸಾಧಿಸಲಾಗುವುದು. ಉಳಿದಂತೆ ಶಕ್ತಿ ಯೋಜನೆಯನ್ನು ಬಹುತೇಕ ಮಹಿಳೆಯರು ಸದ್ಬಳಕೆ ಮಾಡಿಕೊಂಡಿದ್ದು, ಈ ಯೋಜನೆಯಲ್ಲೂ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ. ಅಲ್ಲದೆ ಯೋಜನೆಗೆ ವ್ಯಯವಾಗಿರುವ ಸುಮಾರು ೩೦೦ ಕೋ.ರು. ಅನುದಾನ ಸಹ ಸರ್ಕಾರದಿಂದ ಬಿಡುಗಡೆ ಮಾಡಿಸಲಾಗಿದೆ ಎಂದರು. 
    ಸುಮಾರು ೫೭ ಕೋ.ರು. ವೆಚ್ಚದಲ್ಲಿ ಈ ವ್ಯಾಪ್ತಿಯಲ್ಲಿ ಬರುವ ಸಿಂಗನಮನೆ, ನೆಲ್ಲಿಸರ, ಮಾಳೇನಹಳ್ಳಿ, ಗೋಣಿಬೀಡು, ಹುಣಸೇಕಟ್ಟೆ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕೆರೆಗಳನ್ನು ನಿರ್ಮಾಣಮಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದರು.
    ಕಾರ್ಯಕ್ರಮದಲ್ಲಿ ಪ್ರಮುಖರಾದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್. ಮಣೆಶೇಖರ್, ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಸಿಂಗನಮನೆ ಗ್ರಾಮ ಪಂಚಾಯಿತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳು, ಪ್ರಿಯಾಂಕ ಗಣೇಶ್, ಮಾಲಾಗೌಡ ಹಾಗು ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು. 

ಎಲ್. ಸಂದೀಪರಿಗೆ ಡಾಕ್ಟರೇಟ್ ಪದವಿ

ಎಲ್. ಸಂದೀಪ 
    ಭದ್ರಾವತಿ : ಚಿತ್ರದುರ್ಗ ತಾಲೂಕಿನ ಚೌಲಿಹಳ್ಳಿ ಗ್ರಾಮದ ಎಲ್. ಸಂದೀಪರವರು ಮಂಡಿಸಿದ್ದ `ಶಿಕ್ಷಕರ ಶಿಕ್ಷಣ ಸಂಸ್ಥೆಗಳ ಸಾಂಸ್ಥಿಕ ವಾತಾವರಣ, ಪ್ರಶಿಕ್ಷಕರ ವೃತ್ತಿ ನೈತಿಕತೆ ಮತ್ತು ಪ್ರಶಿಕ್ಷಕರ-ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಸಂಬಂಧಗಳ ಅಧ್ಯಯನ' ವಿಷಯ ಕುರಿತ ಸಂಶೋಧನಾ ವರದಿಗೆ ಕುವೆಂಪು ವಿಶ್ವ ವಿದ್ಯಾಲಯದ ಡಾಕ್ಟರೇಟ್(ಪಿಎಚ್‌ಡಿ) ಪದವಿ ಲಭಿಸಿದೆ. 
    ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ತಜ್ಞರಾದ ಪ್ರೊ. ಜಗನ್ನಾಥ್ ಕೆ. ಡಾಂಗೆ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ವರದಿ ಮಂಡಿಸಿದ್ದರು. ಸಂದೀಪರವರು  ಕೂಲಿ ಕಾರ್ಮಿಕರಾದ ಲೋಕೇಶ್ವರಪ್ಪ-ತಿಪ್ಪಮ್ಮ ದಂಪತಿ ಪುತ್ರರಾಗಿದ್ದಾರೆ. ಇವರು ಬಡತನದ ನಡುವೆಯೂ ಗಟ್ಟಿಯಾದ ಕನಸು, ದುಡಿಮೆ ಮತ್ತು ಅಧ್ಯಯನಶೀಲತೆಯನ್ನು ಜೀವವೈಖರಿಯಾಗಿಸಿಕೊಂಡಿದ್ದರು.
    ಇವರ ಈ ಸಾಧನೆಗೆ ಸ್ನಾತಕೋತ್ತರ ಶಿಕ್ಷಣಶಾಸ್ತ್ರ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರು, ಪ್ರಾಧ್ಯಾಪಕರು, ಸಿಬ್ಬಂದಿವರ್ಗ, ಕುಟುಂಬದವರು ಮತ್ತು ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.

ಶನಿವಾರ, ನವೆಂಬರ್ 8, 2025

ಮಾಜಿ ಶಾಸಕರ ಪುತ್ರನ ನೇತೃತ್ವದಲ್ಲಿ ಪೊಲೀಸ್ ಠಾಣೆ ಮುಂಭಾಗ ಹಗಲು-ರಾತ್ರಿ ಪ್ರತಿಭಟನೆ

 ಗಣಪತಿ ಮೂರ್ತಿ ವಿಸರ್ಜನೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಪ್ರಕರಣ ದಾಖಲಿಸಿ ಅಮಾಯಕ ಯುವಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಪೇಪರ್‌ಟೌನ್ ಠಾಣೆ ಮುಂಭಾಗ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್ ನೇತೃತ್ವದಲ್ಲಿ ಹಗಲು ರಾತ್ರಿ ಪ್ರತಿಭಟನೆ ನಡೆಸಲಾಯಿತು. 

- ಗಣಪತಿ ಮೂರ್ತಿ ವಿಸರ್ಜನೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಪ್ರಕರಣ 
- ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂಬ ಆರೋಪ
- ವಿಡಿಯೋ ಚಿತ್ರೀಕರಣ ಪರಿಶೀಲಿಸಿ ಪ್ರಕರಣ ದಾಖಲಿಸಲು ಆಗ್ರಹ
- ಮಾರಣಾಂತಿಕ ಹಲ್ಲೆ ಸೆಕ್ಷನ್ ದುರ್ಬಳಕೆ
- ಎರಡು ಗುಂಪಿನವರ ವಿರುದ್ಧ ಪ್ರಕರಣ ದಾಖಲಿಸಿ 
- ಅಮಾಯಕರ ವಿರುದ್ಧದ ಪ್ರಕರಣ ದಾಖಲು ಪುನರ್ ಪರಿಶೀಲನೆ ಮಾಡುವ ಭರವಸೆ 

    ಭದ್ರಾವತಿ : ನಗರಸಭೆ ವ್ಯಾಪ್ತಿಯ ಸುರಗಿತೋಪಿನ ೪ನೇ ತಿರುವಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಗಲಾಟೆ ಬಿಡಿಸಲು ಹೋದ ಸಹಾಯಕ ಉಪ ಠಾಣಾಧಿಕಾರಿ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆಗೆ ಸಂಬಂಧಿಸಿದಂತೆ ವಿನಾಃ ಕಾರಣ ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿ ಶುಕ್ರವಾರ ರಾತ್ರಿ ಪೇಪರ್‌ಟೌನ್ ಠಾಣೆ ಮುಂಭಾಗ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್ ನೇತೃತ್ವದಲ್ಲಿ ಆರಂಭಗೊಂಡಿದ್ದ ಪ್ರತಿಭಟನೆ ಶನಿವಾರ ಸಂಜೆವರೆಗೂ ನಡೆಯಿತು. 
    ಎಂ.ಎ ಅಜಿತ್ ಮಾತನಾಡಿ, ಗುಂಪಿನ ಮಧ್ಯದಲ್ಲಿ ಏಕಾಏಕಿ ಸಹಾಯಕ ಉಪ ಠಾಣಾಧಿಕಾರಿ ಬಂದಿದ್ದಾರೆ. ಇದು ಗುಂಪಿನಲ್ಲಿದ್ದವರ ಅರಿವಿಗೆ ಬಂದಿಲ್ಲ. ತಳ್ಳಾಟ ನಡೆಸಲಾಗಿದ್ದು, ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ವಿನಾಃಕಾರಣ ಯಾರನ್ನೋ ಕರೆತಂದು ಅವರಿಂದ ೩ ಜನ ಅಮಾಯಕ ಯುವಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿದರು. 
    ವಿಡಿಯೋ ಚಿತ್ರೀಕರಣ ಪರಿಶೀಲನೆ ನಡೆಸಿದರೆ ಯಾರು ಎಂಬುದು ನಿಮಗೆ ತಿಳಿದು ಬರಲಿದೆ. ಯಾರು ನಮಗೆ ಗೊತ್ತಿದ್ದು, ಅವರ ವಿರುದ್ಧ ನಾವು ದೂರು ನೀಡುತ್ತೇವೆ. ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕೆಂದು ಆಗ್ರಹಿಸಿದರು. 
  ಯಾರ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆದಿಲ್ಲ. ಆದರೆ ಪೊಲೀಸರು ಮಾರಣಾಂತಿಕ ಹಲ್ಲೆ ಸೆಕ್ಷನ್ ದುರ್ಬಳಕೆ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಇದರಿಂದಾಗಿ ಅಮಾಯಕ ಯುವಕರು ಬಲಿಪಶುಗಳಾಗಿದ್ದಾರೆಂದು ದೂರಿದರು. 
    ರಾತ್ರಿ ಆರಂಭಗೊಂಡ ಪ್ರತಿಭಟನೆ ಶನಿವಾರ ಸಂಜೆ  ೪ ಗಂಟೆವರೆಗೆ ನಡೆಯಿತು. ಈ ನಡುವೆ  ಪ್ರತಿಭಟನಾನಿರತರೊಂದಿಗೆ ಸಂಧಾನ ನಡೆಸಿದ ಪೊಲೀಸರು. ತಪ್ಪು ಮಾಡಿರುವ ಎಲ್ಲರ ವಿರುದ್ಧ ಸಹ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ಮಾರಣಾಂತಿಕ ಹಲ್ಲೆ ಸೆಕ್ಷನ್ ಪುನರ್ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು. 
    ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಶಿಮುಲ್ ಮಾಜಿ ಅಧ್ಯಕ್ಷ ಡಿ. ಆನಂದ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಧರ್ಮೇಗೌಡ, ಮೋಹನ್ ನಾಯ್ಡು, ಗುಣಶೇಖರ್, ಉಮೇಶ್, ಶಿವರಾಜ್, ಜೆಡಿಎಸ್ ನಗರಸಭೆ ಸದಸ್ಯರು ಹಾಗು ಸ್ಥಳೀಯರು ಪಾಲ್ಗೊಂಡಿದ್ದರು. 

ಎನ್.ವಿಜಯ್-ಡಿ. ದೀಕ್ಷಾ ವಿವಾಹ ಮಹೋತ್ಸವ

ಭದ್ರಾವತಿ ಹೊಸಮನೆ ನಿವಾಸಿ ಎನ್. ವಿಜಯ್-ಮಂಡ್ಯ ನಿವಾಸಿ ಡಿ.ದೀಕ್ಷಾ ಶುಭಾ ವಿವಾಹ ನೆರವೇರಿತು. 
    ಭದ್ರಾವತಿ : ನಗರದ ಹೊಸಮನೆ ನಿವಾಸಿ, ಮೆಸ್ಕಾಂ ಉದ್ಯೋಗಿ ಕೀರ್ತಿಲಕ್ಷ್ಮೀಯವರ ಸಹೋದರ, ದಿವಂಗತ ನೀಲಾಮಣಿ-ದಿವಂಗತ ಎಸ್. ನಾಗರಾಜ್‌ರವರ ಪುತ್ರ ಎನ್. ವಿಜಯ್‌ರವರ ವಿವಾಹ ಮಂಡ್ಯ ನಿವಾಸಿ ಅನಸೂಯ-ದಿವಂಗತ ದಾಸಯ್ಯರವರ ಪುತ್ರಿ ಡಿ. ದೀಕ್ಷಾರವರ ಜೊತೆ ಮಂಡ್ಯ ಕ್ಯಾತಂಗೆರೆ ಬನ್ನೂರು ಮುಖ್ಯರಸ್ತೆ ಶ್ರೀ ಗೌರಿಶಂಕರ ಕಲ್ಯಾಣ ಮಂಟದಲ್ಲಿ ನೆರವೇರಿತು. 
    ಕೀರ್ತಿಲಕ್ಷ್ಮೀ ಬಿಜೆಪಿ ಮುಖಂಡ ಛಲವಾದಿ ಕೃಷ್ಣರವರ ಪತ್ನಿಯಾಗಿದ್ದಾರೆ. ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್, ಧರ್ಮರಾಜ್, ಮಹೇಶ್(ಜೆಪಿಎಸ್) ಹಾಗು ಸ್ಥಳೀಯ ಬಿಜೆಪಿ ಮುಖಂಡರು, ಮೆಸ್ಕಾಂ ನೌಕರರು, ಸಿಬ್ಬಂದಿಗಳು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದ್ದಾರೆ. 

ಕನಕದಾಸರ ಆದರ್ಶಗಳಿಂದ ಸಾರ್ಥಕ ಜೀವನ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಪಂಚಾಯಿತಿ ಕಛೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ  ಹರಿದಾಸ ಸಂತ, ದಾರ್ಶನಿಕ, ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮ ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ : ಕನಕದಾಸರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು. 
    ಅವರು ಶನಿವಾರ  ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಪಂಚಾಯಿತಿ ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ  ಹರಿದಾಸ ಸಂತ, ದಾರ್ಶನಿಕ, ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಕನಕದಾಸರ ಬದುಕು ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಬೇಕು. ಅವರ ಆದರ್ಶನಗಳು ನಮ್ಮ ಜೀವನಕ್ಕೆ ದಾರಿದೀಪವಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಮುನ್ನಡೆಯಬೇಕೆಂದರು. 
    ಕುರುಬ ಸಮುದಾಯದವರ ಬೇಡಿಕೆಯಂತೆ ನಗರಸಭೆ ವ್ಯಾಪ್ತಿಯಲ್ಲಿ ಕನಕದಾಸರು ಅಥವಾ ಸಂಗೊಳ್ಳಿ ರಾಯಣ್ಣರವರ ಪ್ರತಿಮೆ ನಿರ್ಮಿಸಿಕೊಡಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು. 
    ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕ ಎಸ್.ವಿ ಶಶಿಕುಮಾರ್ ಉಪನ್ಯಾಸ ನೀಡಿ, ಕನಕದಾಸರ ಕುರಿತು ನಾವೆಲ್ಲರು ಅವರ ಬದುಕಿನಲ್ಲಿ ತಿಮ್ಮಪ್ಪ ತಿಮ್ಮಪ್ಪನಾಯಕನಾದ ಬಗೆ, ಕನಕನಾಯಕ ಕನಕದಾಸನಾದ ಬಗೆ ಅರ್ಥಮಾಡಿಕೊಂಡರೆ ಸಾಕು. ಕನಕದಾಸರು ಯಾರು, ಸಮಾಜಕ್ಕೆ ಅವರ ಕೊಡುಗೆಗಳು ಏನು ಎಂಬುದು ನಮಗೆ ಅರ್ಥವಾಗುತ್ತದೆ ಎಂದರು. 
    ಡಾ. ಬಿ.ಆರ್ ಅಂಬೇಡ್ಕರ್‌ರವರು, ಕನಕದಾಸರು ಮತ್ತು ಮಹರ್ಷಿ ವಾಲ್ಮೀಕಿಯವರು,  ಸಮಾಜಕ್ಕೆ ನೀಡಿರುವ ಕೊಡುಗೆಗಳು ಅನನ್ಯವಾಗಿವೆ. ಆದರೆ ಹಿಂದುಳಿದ ಹಾಗು ತಳಸಮುದಾಯದವರು ಸಮಾಜಕ್ಕೆ ನೀಡಿರುವ ಕೊಡುಗೆಗಳು ಸಮಾಜದ ಮುಖ್ಯ ವಾಹಿನಿಗೆ ಬರುವುದೇ ಇಲ್ಲ. ಮೇಲ್ವರ್ಗದವರ ಕೊಡುಗೆಗಳು ಮಾತ್ರ ಪ್ರಜ್ವಲಿಸುತ್ತವೆ. ಇದು ವಿಷಾದನೀಯ ಸಂಗತಿಯಾಗಿದೆ. ಕನಕದಾಸರು ಕೇವಲ ನಮ್ಮ ಕನಕದಾಸರು ಮಾತ್ರವಲ್ಲ. ನಮ್ಮೆಲ್ಲರ ಕನಕದಾಸರು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.   
    ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಉಪಾಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಕೆ.ಎನ್ ಹೇಮಂತ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಪರುಸಪ್ಪ ಕುರುಬರ,  ನಗರಸಭೆ ಸದಸ್ಯರಾದ ಮಂಜುಳಾ ಸುಬ್ಬಣ್ಣ, ಅನಿತಾ ಮಲ್ಲೇಶ್, ಕಾಂತರಾಜ್, ಕೆ. ಸುದೀಪ್ ಕುಮಾರ್, ಹನುಮಂತಪ್ಪ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಹಿರಿಯ ಪತ್ರಕರ್ತ ಕಣ್ಣಪ್ಪ, ಸಮಾಜದ ಪ್ರಮುಖರಾದ ಹಾ. ರಾಮಪ್ಪ, ಕರಿಯಪ್ಪ, ಗ್ಯಾಮಣ್ಣ, ಹೇಮಾವತಿ ಶಿವಾನಂದ್, ಉಮೇಶ್, ಕೇಸರಿಪಡೆ ಗಿರೀಶ್, ಮಹಾದೇವಣ್ಣ, ಎಸ್. ಮಂಜುನಾಥ್, ಮಾಲಾ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ ನಿರೂಪಿಸಿ, ಅಭಿಲಾಷ್ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. 
    ಸಮಾಜದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ನಗರದ ಲೋಯರ್ ಹುತ್ತಾದಿಂದ ಶ್ರೀ ಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. 

ಶುಕ್ರವಾರ, ನವೆಂಬರ್ 7, 2025

ಗಣಪತಿ ಮೂರ್ತಿ ವಿಸರ್ಜನೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಪ್ರಕರಣ : ಅಮಾಯಕ ಯುವಕ ಬಂಧನ

ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ 


ಗಣಪತಿ ಮೂರ್ತಿ ವಿಸರ್ಜನೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಪ್ರಕರಣ ದಾಖಲಿಸಿ ಅಮಾಯಕ ಯುವಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಪೇಪರ್‌ಟೌನ್ ಠಾಣೆ ಮುಂಭಾಗ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಸುರಗಿತೋಪಿನ ೪ನೇ ತಿರುವಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಗಲಾಟೆ ಬಿಡಿಸಲು ಸಹಾಯಕ ಉಪ ಠಾಣಾಧಿಕಾರಿ ಮೇಲೆ ಹಲ್ಲೆ ಯತ್ನಿಸಿರುವ ಘಟನೆಗೆ ಸಂಬಂಧಿಸಿದಂತೆ ವಿನಾಃ ಕಾರಣ ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿ ಶುಕ್ರವಾರ ರಾತ್ರಿ ಪೇಪರ್‌ಟೌನ್ ಠಾಣೆ ಮುಂಭಾಗ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. 
    ಎಂ.ಎ ಅಜಿತ್ ಮಾತನಾಡಿ, ಗುಂಪಿನ ಮಧ್ಯದಲ್ಲಿ ಏಕಾಏಕಿ ಸಹಾಯಕ ಉಪ ಠಾಣಾಧಿಕಾರಿ ಬಂದಿದ್ದಾರೆ. ಇದು ಗುಂಪಿನಲ್ಲಿದ್ದವರ ಅರಿವಿಗೆ ಬಂದಿಲ್ಲ. ತಳ್ಳಾಟ ನಡೆಸಲಾಗಿದ್ದು, ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ವಿನಾಃಕಾರಣ ಯಾರನ್ನೋ ಕರೆತಂದು ಅವರಿಂದ ೩ ಜನ ಅಮಾಯಕ ಯುವಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿ,  ಈ ಹಿನ್ನಲೆಯಲ್ಲಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. 
    ಪ್ರತಿಭಟನೆಯಲ್ಲಿ ಸ್ಥಳೀಯರು ಪಾಲ್ಗೊಂಡು ಪೊಲೀಸರ ಕ್ರಮದ ವಿರುದ್ಧ ಧಿಕ್ಕಾರ ಹಾಕಿದರು. 

ಶ್ರೀಉತ್ತರಾದಿಮಠದಿಂದ ಉಕ್ಕಿನ ನಗರದಲ್ಲಿ ಶ್ರೀಮನ್ನ್ಯಾಯಸುಧಾಮಂಗಳ ಮಹೋತ್ಸವ

ಜಗದ್ಗುರು ಶ್ರೀಮನ್ಮದ್ವಾಚಾರ್ಯಮೂಲಮಹಾಸಂಸ್ಥಾನ ಶ್ರೀಉತ್ತರಾದಿಮಠದಿಂದ ನ.೯ರವರೆಗೆ ಒಟ್ಟು ೭ ದಿನಗಳ ಕಾಲ ಅನೇಕ ಮಾಧ್ವಪೀಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ ಭದ್ರಾವತಿ ನಗರದಲ್ಲಿ ಆಯೋಜಿಸಲಾಗಿರುವ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರಿಂದ ೧೩ನೇ ಶ್ರೀಮನ್ನ್ಯಾಯಸುಧಾಮಂಗಳಮಹೋತ್ಸವ ಹಾಗೂ ಸುಧಾಮಂಡನಾಚಾರ್ಯರಾದ ಶ್ರೀ ೧೦೦೮ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೮ನೇ ಪಾದುಕಾಮಹಾಸಮಾರಾಧನಾ ಮಹೋತ್ಸವ ಅಂಗವಾಗಿ ಶುಕ್ರವಾರ ಸುಧಾ-ಸರ್ವಮೂಲಗ್ರಂಥಗಳ ಭವ್ಯ ಶೋಭಾಯಾತ್ರೆ ನಡೆಯಿತು. 
    ಭದ್ರಾವತಿ:  ಜಗದ್ಗುರು ಶ್ರೀಮನ್ಮದ್ವಾಚಾರ್ಯಮೂಲಮಹಾಸಂಸ್ಥಾನ ಶ್ರೀಉತ್ತರಾದಿಮಠದಿಂದ ನ.೯ರವರೆಗೆ ಒಟ್ಟು ೭ ದಿನಗಳ ಕಾಲ ಅನೇಕ ಮಾಧ್ವಪೀಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ ನಗರದಲ್ಲಿ ಆಯೋಜಿಸಲಾಗಿರುವ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರಿಂದ ೧೩ನೇ ಶ್ರೀಮನ್ನ್ಯಾಯಸುಧಾಮಂಗಳಮಹೋತ್ಸವ ಹಾಗೂ ಸುಧಾಮಂಡನಾಚಾರ್ಯರಾದ ಶ್ರೀ ೧೦೦೮ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೮ನೇ ಪಾದುಕಾಮಹಾಸಮಾರಾಧನಾ ಮಹೋತ್ಸವ ಅಂಗವಾಗಿ ಶುಕ್ರವಾರ ಸುಧಾ-ಸರ್ವಮೂಲಗ್ರಂಥಗಳ ಭವ್ಯ ಶೋಭಾಯಾತ್ರೆ ನಡೆಯಿತು. 
    ಜನ್ನಾಪುರ ಶ್ರೀಮಜ್ಜಯತೀರ್ಥ ಗುರುಸಾರ್ವಭೌಮರ ಹಾಗು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಮತ್ತು ಜಯಶ್ರೀ ವೃತ್ತದ ಮಹಿಳಾ ಸಮಾಜದ ಆವರಣದಲ್ಲಿ ಕಾರ್ಯಕ್ರಮಗಳು ಜರುಗುತ್ತಿದ್ದು, ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರಿಂದ ಪಾದುಕಾ ಮಹಾಸಮರಾಧನೆ ನೆರವೇರಿತು. 
    ಬೆಳಿಗ್ಗೆ ಶ್ರೀ ಮೂಲರಾಮದೇವರ ಸಂಸ್ಥಾನ ಪೂಜೆ ಹಾಗು ಉಪಸ್ಥಿತ ಪೀಠಾಧಿಪತಿಗಳಿಂದ ಸಂಸ್ಥಾನ ಪೂಜೆ, ಪರೀಕ್ಷಾ ಹಾಗು ಅನುವಾದ ಮತ್ತು ಮಧ್ಯಾಹ್ನ ತೀರ್ಥಪ್ರಸಾದ ವಿನಿಯೋಗ ನಡೆಯಿತು. 
    ಶ್ರೀಸತ್ಯಪ್ರಮೋದತೀರ್ಥರು-ಜೀವನ ಮತ್ತು ಸಾಧನೆ, ಶ್ರೀಸತ್ಯಪ್ರಮೋದತೀರ್ಥರ ಶಿಷ್ಯವಾತ್ಸಲ್ಯ ವಿಶೇಷ ಉಪನ್ಯಾಸಗಳು ಜರುಗಿದವು.  ಶಿರೂರು ಮಠದ ಶ್ರೀ ವೇದವರ್ಧನತೀರ್ಥರು ಮತ್ತು ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥರು ಹಾಗು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು ದಿವ್ಯ ಸಾನಿಧ್ಯವಹಿಸಿ ಅನುಗ್ರಹಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.