ಬುಧವಾರ, ನವೆಂಬರ್ 12, 2025

ಅವ್ಯವಹಾರಕ್ಕೆ ಬೇಸತ್ತು ಗ್ರಾ.ಪಂ. ಸದಸ್ಯನಿಂದಲೇ ಹಗಲು-ರಾತ್ರಿ ಧರಣಿ ಸತ್ಯಾಗ್ರಹ..!



ಭದ್ರಾವತಿ ತಾಲೂಕಿನ ಅತಿದೊಡ್ಡ ಪಂಚಾಯಿತಿ ಸಿಂಗನಮನೆ ಗ್ರಾಮ ಪಂಚಾಯಿತಿ ಅವ್ಯವಹಾರ ಖಂಡಿಸಿ ಸದಸ್ಯ ಮಂಜುನಾಥ್ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಮಂಗಳವಾರದಿಂದ ಹಗಲು-ರಾತ್ರಿ ಧರಣಿ ನಡೆಸುತ್ತಿದ್ದು, ಆದರೆ ಇದುವರೆಗೂ ಯಾರು ಸಹ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಲು ಮುಂದಾಗಿಲ್ಲ. 
    ಭದ್ರಾವತಿ : ತಾಲೂಕಿನ ಅತಿದೊಡ್ಡ ಪಂಚಾಯಿತಿ ಸಿಂಗನಮನೆ ಗ್ರಾಮ ಪಂಚಾಯಿತಿ ಅವ್ಯವಹಾರ ಖಂಡಿಸಿ ಸದಸ್ಯ ಮಂಜುನಾಥ್ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಮಂಗಳವಾರದಿಂದ ಹಗಲು-ರಾತ್ರಿ ಧರಣಿ ನಡೆಸುತ್ತಿದ್ದು, ಆದರೆ ಇದುವರೆಗೂ ಯಾರು ಸಹ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಲು ಮುಂದಾಗಿಲ್ಲ. 
    ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಜಾಗ ಹಾಗು ಬಡಾವಣೆಗಳಲ್ಲಿ ಸಿಎ ನಿವೇಶಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಬೀದಿ ದೀಪಗಳ ಖರೀದಿಯಲ್ಲಿ ಹಾಗು ಕುಡಿಯುವ ನೀರಿನ ಕೊಳವೆಗಳ ದುರಸ್ತಿ ಕಾರ್ಯದಲ್ಲಿ ಅಕ್ರಮವೆಸಗಲಾಗಿದೆ ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಾಗು ೧೫ನೇ ಹಣಕಾಸು ವಾರ್ಷಿಕ ಲೆಕ್ಕ ಪರಿಶೋಧನೆಯಲ್ಲಿ ಅಕ್ರಮವೆಸಗಿದ್ದಾರೆಂದು  ಆರೋಪಿಸಿದ್ದಾರೆ.


    ಅಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿನಗರ ಗ್ರಾಮದಲ್ಲಿ ಕೆಲವು ದಿನಗಳಿಂದ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ. ಪಂಚಾಯಿತಿ ಅಧ್ಯಕ್ಷೆ ಮಂಜುಳಾರವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ವಾರ್ಡ್ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಸರಿಯಾಗಿ ಬಿಲ್ ಪಾವತಿಸಿಲ್ಲ. ಅಲ್ಲದೆ ಹೊಸದಾಗಿ ಯಾವುದೇ ಕಾಮಗಾರಿಗಳನ್ನು ಹಾಗು ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ ಎಂದು ದೂರಿದ್ದಾರೆ. 
    ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗದಕಾರಣ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಮಂಜುನಾಥ್ ಅಳಲು ತೋರ್ಪಡಿಸಿಕೊಂಡಿದ್ದಾರೆ.  

ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ವಿಜೃಂಭಣೆಯಿಂದ ಜರುಗಿದ ಆಶ್ಲೇಷ ಬಲಿ ಪೂಜೆ

ಪ್ರತಿ ವರ್ಷದಂತೆ ಈ ವರ್ಷ ಸಹ ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಆಶ್ಲೇಷ ಬಲಿ ಪೂಜೆ ಬುಧವಾರ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ: ಪ್ರತಿ ವರ್ಷದಂತೆ ಈ ವರ್ಷ ಸಹ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಆಶ್ಲೇಷ ಬಲಿ ಪೂಜೆ ಬುಧವಾರ ವಿಜೃಂಭಣೆಯಿಂದ ಜರುಗಿತು.
    ಬೆಳಗ್ಗೆ ನಿರ್ಮಾಲ್ಯ, ಪಂಚಾಮೃತ ಅಭಿಷೇಕ, ನಂತರ ಹೋಮ ಸೇರಿದಂತೆ ಇನ್ನಿತರ ಆಚರಣೆಗಳು ಜರುಗಿದವು. ಮಧ್ಯಾಹ್ನ ೧೨ ಗಂಟೆಗೆ ಆಶ್ಲೇಷ ಬಲಿ ಪೂಜೆ ನಡೆಯಿತು. ಪಂಡಿತರಾದ ಗೋಪಾಲಕೃಷ್ಣ ಆಚಾರ್ ಮತ್ತು ಅರ್ಚಕ ಪ್ರಮೋದ್ ಕುಮಾರ್ ನೇತೃತ್ವದ ತಂಡ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿತು. 
     ಗುರುರಾಜ ಸೇವಾ ಸಮಿತಿಯ ಅಧ್ಯಕ್ಷ ಮುರುಳಿಧರ್ ತಂತ್ರಿ, ಉಪಾಧ್ಯಕ್ಷರಾದ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಕೆ. ರಮಾಕಾಂತ, ನಿರಂಜನಾಚಾರ್ಯ ಹಾಗೂ ಪ್ರಧಾನ ಅರ್ಚಕ ಮಾಧುರಾವ್, ಸಮೀರಾಚಾರ್, ಸುಧೀಂದ್ರ ಮತ್ತು ಜಯತೀರ್ಥ ಸೇರಿದಂತೆ ಸಿದ್ದಾರೂಢನಗರ, ಕನಕನಗರ, ಹಳೇನಗರ, ಭೂತನಗುಡಿ, ಹೊಸಮನೆ, ಜನ್ನಾಪುರ, ನ್ಯೂಟೌನ್, ಹುತ್ತಾಕಾಲೋನಿ ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು.  

ಕೆಂಪು ಕೋಟೆ ಸಮೀಪ ಉಗ್ರರ ಬಾಂಬ್ ಸ್ಪೋಟಕ್ಕೆ ಯುವ ಕಾಂಗ್ರೆಸ್ ಖಂಡನೆ : ಪ್ರತಿಭಟನೆ

ಅಸಮರ್ಥ ಕೇಂದ್ರ ಗೃಹ ಸಚಿವ ವಜಾಗೊಳಿಸಿ, ದೇಶದ ಭದ್ರತೆ ಹೆಚ್ಚಿಸಿ ರಾಷ್ಟ್ರಪತಿಗೆ ಮನವಿ

ದೇಶದ ರಾಜಧಾನಿ ನವದೆಹಲಿಯ ಕೆಂಪು ಕೋಟೆ ಸಮೀಪ ಉಗ್ರರ ಬಾಂಬ್ ಸ್ಪೋಟ ಘಟನೆಯನ್ನು ಖಂಡಿಸಿ ಭದ್ರಾವತಿಯಲ್ಲಿ ಬುಧವಾರ ಯುವ ಕಾಂಗ್ರೆಸ್ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ : ದೇಶದ ಶಕ್ತಿಕೇಂದ್ರವಾಗಿರುವ ರಾಜಧಾನಿ ನವದೆಹಲಿಯ ಐತಿಹಾಸಿಕ ಸ್ಥಳ ಕೆಂಪು ಕೋಟೆ ಸಮೀಪ ಉಗ್ರರ ಬಾಂಬ್ ಸ್ಪೋಟಕ್ಕೆ ಅಮಾಯಕರು ಪ್ರಾಣ ಕಳೆದುಕೊಂಡಿದ್ದು, ಈ ಘಟನೆಯನ್ನು ಜಿಲ್ಲಾ ಯುವ ಕಾಂಗ್ರೆಸ್ ಖಂಡಿಸುತ್ತದೆ. ಅಲ್ಲದೆ ತಕ್ಷಣ ಅಸಮರ್ಥ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವ ಮೂಲಕ ದೇಶದೊಳಗೆ ಉಗ್ರರು ಪ್ರವೇಶಿಸದಂತೆ ರಕ್ಷಣಾ ವ್ಯವಸ್ಥೆ ಬಲಪಡಿಸಬೇಕೆಂದು ಆಗ್ರಹಿಸುತ್ತದೆ ಎಂದು ಯುವ ಕಾಂಗ್ರೆಸ್ ಮುಖಂಡರು ಹೇಳಿದರು. 
    ಕೆಂಪು ಕೋಟೆ ಸಮೀಪ ಉಗ್ರರ ಬಾಂಬ್ ಸ್ಪೋಟ ಘಟನೆ ಖಂಡಿಸಿ ಬುಧವಾರ ಯುವ ಕಾಂಗ್ರೆಸ್ ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಮುಖರಾದ ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮೊಹಮ್ಮದ್ ಶಫಿ, ನಗರ ಅಧ್ಯಕ್ಷ ಅಭಿಷೇಕ, ನಗರಸಭೆ ಸದಸ್ಯ ಚನ್ನಪ್ಪ, ಮುಖಂಡರಾದ ಎಸ್. ಮಂಜುನಾಥ್, ನದೀಮ್ ಬಾಷಾ, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಮುರುಗೇಶ್ ಸೇರಿದಂತೆ ಇನ್ನಿತರರು,  ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಉಗ್ರರ ಕೃತ್ಯಗಳು ಹೆಚ್ಚಾಗುತ್ತಿದ್ದು, ೧೪ ಫೆಬ್ರವರಿ ೨೦೧೯ರಂದು ಅತ್ಯಂತ ಬಿಗಿಭದ್ರತೆ ಇರುವ ಪ್ರದೇಶಕ್ಕೆ ಸುಮಾರು ೮೦೦ ಕೆ.ಜಿಗೂ ಅಧಿಕ ತೂಕದ ಗ್ರಾನೇಟ್‌ಗಳನ್ನು ತಂದು ಸೈನಿಕರ ವಾಹನ ಗುರಿಯಾಸಿ ದಾಳಿ ಮಾಡಲಾಗಿತ್ತು. ಈ ಘಟನೆಯಲ್ಲಿ ಸೈನಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಅಲ್ಲದೆ ೨೨ ಏಪ್ರಿಲ್ ೨೦೨೫ರಂದು ಕಾಶ್ಮೀರದ ಪಹಲ್ಗಾಮ್ ಉದ್ಯಾನವನದಲ್ಲಿ ಸುಮಾರು ೨೬ ಅಮಾಯಕ ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದರು. ಆದರೂ ಸಹ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರು. 
    ಈ ಕೃತ್ಯಗಳಿಗೆ ದೇಶದ ಭದ್ರತಾ ವೈಫಲ್ಯಗಳೇ ಕಾರಣಗಳಾಗಿವೆ. ಕೇಂದ್ರ ಸರ್ಕಾರ ದೇಶದ ನಾಗರಿಕರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗೃಹ ಸಚಿವ ಅಮಿತ್ ಶಾರವರು ಸಚಿವರಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆಂದು ದೂರಿದರು. 
    ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದು  ತಮ್ಮ ತಪ್ಪನ್ನು ಮರೆಮಾಚಲು ಯತ್ನಿಸುತ್ತಿದೆ. ಚುನಾವಣೆ ಸಂದರ್ಭದಲ್ಲಿಯೇ ಈ ರೀತಿ ಕೃತ್ಯಗಳು ನಡೆಯುತ್ತಿರುವುದು ಕೌತುಕವಾಗಿದ್ದು, ಕೆಂಪು ಕೋಟೆ ಸಮೀಪ ಉಗ್ರರ ಬಾಂಬ್ ಸ್ಪೋಟ ಘಟನೆಯನ್ನು ಪಾರದರ್ಶಕವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ರಾಷ್ಟ್ರಪತಿಗೆ ತಹಸೀಲ್ದಾರ್ ಮೂಲಕ ಮನವಿಸಲ್ಲಿಸಲಾಯಿತು. 
    ಯುವ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಮಸೂದ್, ಮಂಜುನಾಥ್ ಕೊಯ್ಲಿ, ರವಿ, ಇರ್ಫಾನ್, ಸನಾನ್, ಬಿ. ಗಂಗಾಧರ್, ಪ್ರಕಾಶ್ ರಾವ್, ಪಾರ್ವತಿ, ಕೆ. ರುಕ್ಮಿಣಿ, ಬೇಬಿ ಚಂದ್ರಶೇಖರ್, ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು. 

ಮಂಗಳವಾರ, ನವೆಂಬರ್ 11, 2025

ಶತಾಯುಷಿ ಕರಿಯಮ್ಮ ನಿಧನ

ಶತಾಯುಷಿ ಕರಿಯಮ್ಮ
    ಭದ್ರಾವತಿ: ಹಳೇನಗರ ಉಪ್ಪಾರ ಬೀದಿ ನಿವಾಸಿ ದಿವಂಗತ ದುರ್ಗಪ್ಪರವರ ಪತ್ನಿ ಶತಾಯುಷಿ ಕರಿಯಮ್ಮ(೧೦೭) ಭಾನುವಾರ ಸಂಜೆ ನಿಧನ ಹೊಂದಿದರು. 
    ಇವರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ೧೦ ಮೊಮ್ಮಕ್ಕಳು, ೧೧ ಮರಿಮೊಮ್ಮಕ್ಕಳು ಇದ್ದಾರೆ. ವಿವಿಧ ಸಂಘಸಂಸ್ಥೆಗಳ ಮುಖಂಡರು, ಸಮಾಜದ ಪ್ರಮುಖರು ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. ನಗರದ ಹಿಂದೂ ರುದ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು.

ಪೌರಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುವುದು ಸಮಾಜದ ಕರ್ತವ್ಯ: ಡಾ:ಟಿ.ನರೇಂದ್ರಭಟ್

ಭದ್ರಾವತಿಯಲ್ಲಿ ಲಯನ್ಸ್ ಕ್ಲಬ್ ಶುಗರ್‌ಟೌನ್ ಹಾಗು ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ಶುಗರ್‌ಟೌನ್ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ನಗರಸಭೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಲಯನ್ಸ್ ಕ್ಲಬ್ ಶುಗರ್‌ಟೌನ್ ಸಂಸ್ಥಾಪಕ ಅಧ್ಯಕ್ಷ, ಹಿರಿಯ ವೈದ್ಯ ಡಾ.ಟಿ ನರೇಂದ್ರಭಟ್ ಉದ್ಘಾಟಿಸಿದರು.
    ಭದ್ರಾವತಿ: ಊರನ್ನು ಸ್ವಚ್ಚಗೊಳಿಸಿ ನಮ್ಮೆಲ್ಲರ ಆರೋಗ್ಯ ಕಾಪಾಡುತ್ತಿರುವ ಪೌರಕಾರ್ಮಿಕರಿಗೆ ನಾವೆಲ್ಲರೂ ಎಂದೆಂದಿಗೂ ಚಿರಋಣಿಗಳಾಗಿರಬೇಕು. ಅವರ ಸಂಕಷ್ಟಗಳಿಗೆ ಸ್ಪಂದಿಸುವುದು ಸಮಾಜದ ಕರ್ತವ್ಯ ಎಂದು ನಗರದ ಲಯನ್ಸ್ ಕ್ಲಬ್ ಶುಗರ್‌ಟೌನ್ ಸಂಸ್ಥಾಪಕ ಅಧ್ಯಕ್ಷ, ಹಿರಿಯ ವೈದ್ಯ ಡಾ.ಟಿ ನರೇಂದ್ರಭಟ್ ಹೇಳಿದರು.
    ಅವರು ಮಂಗಳವಾರ ನಗರದ ಲಯನ್ಸ್ ಕ್ಲಬ್ ಶುಗರ್‌ಟೌನ್ ಹಾಗು ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ಶುಗರ್‌ಟೌನ್ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ನಗರಸಭೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ಪೌರಕಾರ್ಮಿಕರು ಕೇವಲ ಒಂದೇ ಒಂದು ದಿನ ಸ್ವಚ್ಛತಾ ಕಾರ್ಯ ಮಾಡದಿದ್ದರೆ ಊರು ಗಬ್ಬು ನಾರುತ್ತದೆ. ಸಮಾಜದಲ್ಲಿ ಇಂತಹವರ ಆರೋಗ್ಯ ಕಾಪಾಡುವುದು ಅತಿಮುಖ್ಯವಾಗಿದೆ.  ಅಲ್ಲದೆ ಪೌರಕಾರ್ಮಿಕರಿಗೆ ಹೆಚ್ಚಿನ ಆರೋಗ್ಯ ಸಮಸ್ಯೆಗಳಿದ್ದು, ಹೆಚ್ಚಿನ ಆರೋಗ್ಯ ಸೇವೆ ಲಭಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ ಅವರು ನಮ್ಮೊಂದಿಗೆ ಚರ್ಚಿಸಿ "ಸ್ಪಂದನ" ಹೆಸರಿನಲ್ಲಿ ಆರಂಭಿಸಿದ ಆರೋಗ್ಯ ಶಿಬಿರ ಇಂದಿಗೂ ಮುಂದುವರೆಯುತ್ತಿರುವುದು ಸಂತಸ ತಂದಿದೆ ಎಂದರು.  
    ಪೌರಕಾರ್ಮಿಕರು ತಮ್ಮ ಕುಟುಂಬ ಹಾಗೂ ಮಕ್ಕಳ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಮುಂದಿನ ದಿನಗಳಲ್ಲಿ ನಗರದಲ್ಲಿರುವ ಕೊಳಚೆ ಪ್ರದೇಶಗಳನ್ನು ದತ್ತು ತೆಗೆದುಕೊಂಡು ಸಮಾಜಮುಖಿ ಆರೋಗ್ಯ ಸೇವಾ ಕಾರ್ಯ ನಡೆಸಬೇಕಾಗಿದೆ ಎಂದರು.
    ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್ ಮಾತನಾಡಿ, ಪೌರಕಾರ್ಮಿಕರಿಂದ ನಾವೆಲ್ಲರೂ ಆರೋಗ್ಯವಂತರಾಗಿದ್ದೇವೆ. ಅವರೇ ನಮ್ಮೆಲ್ಲರ ವೈದ್ಯರು. ಅವರನ್ನು ನಾವು ಪ್ರೀತಿಯಿಂದ ಗೌರವಿಸಬೇಕು. ಸಮಾಜದ ಎಲ್ಲರೂ ಅವರ ನೆರವಿಗೆ ಮುಂದಾಗಬೇಕೆಂದರು.
    ಕ್ಲಬ್ ಅಧ್ಯಕ್ಷ, ದಂತ ವೈದ್ಯ ಅಧ್ಯಕ್ಷ ಡಾ. ಗುರುರಾಜ್ ಮಾತನಾಡಿ, ಪೌರಕಾರ್ಮಿಕರು ಆರೋಗ್ಯ ಹದಗೆಟ್ಟಾಗ ಎಷ್ಟೇ ಒತ್ತಡವಿದ್ದರೂ ತಕ್ಷಣ ತಾತ್ಸಾರ ಮಾಡದೆ ಚಿಕಿತ್ಸೆ ಪಡೆದುಕೊಳ್ಳಬೇಕು. ಹಲ್ಲುಗಳಿಗೆ ಹೆಚ್ಚು ಗಮನಹರಿಸಿ ಆಹಾರವನ್ನು ಜಗಿದು ತನ್ನಬೇಕೆಂದರು.
     ಪೌರಾಯುಕ್ತ ಕೆ.ಎನ್ ಹೇಮಂತ್ ಅವರು ಮಾತನಾಡಿ, ಶೇರು ಮಾರುಕಟ್ಟೆಯ ದೊರೆ ಪ್ರಪಂಚವನ್ನೇ ಬೆರಗಾಗಿಸಿದ್ದ ರಾಕೇಶ್ ಜುಂಜನ್ ವಾಲಾ ೫ ಸಾವಿರ ಕೋಟಿ ರು. ಆಸ್ತಿಯ ಒಡೆಯನಾಗಿದ್ದರೂ ಆರೋಗ್ಯದೆಡೆ ನಿರ್ಲಕ್ಷ ತಾಳಿದ್ದರಿಂದ ತನ್ನ ಕಾಲುಗಳನ್ನು ಕಳೆದುಕೊಂಡ. ವ್ಯಾಪಾರದ ಜೊತೆಗೆ ಆರೋಗ್ಯಕ್ಕೆ ಒತ್ತು ನೀಡಿದ್ದರೆ ನನ್ನ ಆರೋಗ್ಯ ಹದಗೆಡುತ್ತಿರಲಿಲ್ಲ. ಇನ್ನು ೨೦ ವರ್ಷ ಚೆನ್ನಾಗಿ ಬಾಳಬಹುದಿತ್ತೆಂದು ಆತನೇ ಹೇಳಿದ್ದಾನೆ. ಇದು ಪೌರ ಕಾರ್ಮಿಕರು ಮತ್ತು ಸಮಾಜದ ಎಲ್ಲರೂ ಅರಿತು ದುಶ್ಚಟಗಳಿಂದ ದೂರವಾದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.
     ವೇದಿಕೆಯಲ್ಲಿ ನಗರಸಭೆ ಸದಸ್ಯ ಆನೆಕೊಪ್ಪ ಬಿ. ಬಸವರಾಜ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಲಯನ್ಸ್ ಕ್ಲಬ್ ಶುಗರ್‌ಟೌನ್ ಪ್ರಮುಖರಾದ ಅನಂತ ಕೃಷ್ಣಾ ನಾಯಕ್, ಡಾ. ಪರಿಮಳ, ಡಾ.ಪವಿತ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಚನ್ನಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪರಿಸರ ಅಭಿಯಂತರ ಪ್ರಭಾಕರ್ ನಿರೂಪಿಸಿ, ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ ವಂದಿಸಿದರು.  

ವಿಜೃಂಭಣೆಯಿಂದ ಜರುಗಿದ ಶ್ರೀ ಚಿದಂಬರ ಜಯಂತ್ಯುತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಮತ್ತು ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ಚಿದಂಬರ ಸೇವಾ ಸಮಿತಿಯಿಂದ ೨೯ನೇ ವರ್ಷದ ಶ್ರೀ ಚಿದಂಬರ ಜಯಂತ್ಯುತ್ಸವ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ: ಹಳೇನಗರದ ಶ್ರೀ ರಾಮೇಶ್ವರ ಮತ್ತು ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ಚಿದಂಬರ ಸೇವಾ ಸಮಿತಿಯಿಂದ ೨೯ನೇ ವರ್ಷದ ಶ್ರೀ ಚಿದಂಬರ ಜಯಂತ್ಯುತ್ಸವ ವಿಜೃಂಭಣೆಯಿಂದ ಜರುಗಿತು. 
    ಬೆಳಿಗ್ಗೆ ಕಾಕಡಾರತಿ, ಪಂಚಾಮೃತ ಅಭಿಷೇಕ, ಏಕಾದಶವಾರ, ರುದ್ರಾಭಿಷೇಕ, ಪಠನಪೂರ್ವಕ ಸಹಸ್ರನಾಮ ಹಾಗು ಶ್ರೀ ಶಿಚಚಿದಂಬರ ಮೂಲಮಂತ್ರದ ಹೋಮ ಮತ್ತು ಶ್ರೀ ಸತ್ಯಚಿದಂಬರ ವ್ರತ ಜರುಗಿದವು. ನಂತರ ರಾಜಬೀದಿ ಉತ್ಸವ, ಶ್ರೀ ಚಿದಂಬರರ ಬಗ್ಗೆ ಪ್ರವಚನ ಮತ್ತು ಚಿದಂಬರ ನಾಮಜಪ ನೆರವೇರಿದವು. 
    ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸಂಜೆ ಶ್ರೀ ರಾಮೇಶ್ವರ ದೇವಸ್ಥಾನ ಶ್ರೀ ಲಲಿತಾ ಮಹಿಳಾ ಮಂಡಳಿಯಿಂದ ಭಜನೆ, ನಂತರ ದೀಪೋತ್ಸವ, ಮಹಾಮಂಗಳಾರತಿ ಹಾಗು ತೀರ್ಥಪ್ರಸಾದ ವಿನಿಯೋಗ ಜರುಗಿದವು. 
    ಸಮಿತಿ ಅಧ್ಯಕ್ಷ ಎಸ್.ಜಿ ದೇಶಪಾಂಡೆ, ಉಪಾಧ್ಯಕ್ಷ ಪಿ.ಕೆ ಮಂಜುನಾಥರಾವ್, ಕಾರ್ಯದರ್ಶಿ ಬಿ.ಆರ್ ಇಂದ್ರಸೇನರಾವ್ ಮತ್ತು ಖಜಾಂಚಿ ಬಾಲಚಂದ್ರಗುತ್ತಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಿದ್ದಾರೂಢನಗರ, ಕನಕನಗರ, ಹಳೇನಗರ, ಭೂತನಗುಡಿ, ಹೊಸಮನೆ ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು. 

ಸೋಮವಾರ, ನವೆಂಬರ್ 10, 2025

ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಆದ್ಯತೆ : ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ ನಗರಸಭೆ ಕಚೇರಿ ಮುಂಭಾಗದ ವಿನೋಬಾಭಾವೆ ಉದ್ಯಾನವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆ (ಹಂತ-೪)ರ ಶೇ.೨೪.೧೦ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಶೇ.೭.೨೫ ಇತರೆ ಬಡವರ್ಗದವರ ಮತ್ತು ಶೇ.೫ ವಿಕಲಚೇತನರ ಕಲ್ಯಾಣ ಯೋಜನೆಗಳಡಿ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಚೆಕ್ ವಿತರಣೆ ಕಾರ್ಯಕ್ರಮ ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
    ಭದ್ರಾವತಿ: ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅದರಲ್ಲೂ ವಿಶೇಷವಾಗಿ ಹಿಂದುಳಿದವರು, ದಲಿತರು, ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದವರು ಮತ್ತು ವಿಕಲಚೇತನರಿಗೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕೋರಿದರು. 
    ಅವರು ಸೋಮವಾರ ನಗರಸಭೆ ಕಚೇರಿ ಮುಂಭಾಗದ ವಿನೋಬಾಭಾವೆ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆ (ಹಂತ-೪)ರ ಶೇ.೨೪.೧೦ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಶೇ.೭.೨೫ ಇತರೆ ಬಡವರ್ಗದವರ ಮತ್ತು ಶೇ.೫ ವಿಕಲಚೇತನರ ಕಲ್ಯಾಣ ಯೋಜನೆಗಳಡಿ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಚೆಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಬಡವರು, ದಲಿತರು, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಲಾ ಶಿಕ್ಷಣ ಹಾಗು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ಸರ್ಕಾರಿ ಶಾಲೆಗಳಲ್ಲಿ ಅನೇಕ ಉಪಯುಕ್ತ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಉಚಿತ ಪಠ್ಯ ಪುಸ್ತಕ ವಿತರಣೆ ಸೇರಿದಂತೆ ಹಲವು ಯೋಜನೆಗಳು ಸೇರಿವೆ ಎಂದರು. 
    ನಗರಸಭೆಯಿಂದ ಆಶ್ರಯ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಜಿ+೩ ಗುಂಪು ಮನೆಗಳ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಆಯ್ಕೆಯಾದ ಹಾಗು ಮುಂಗಡ ೧೦ ಸಾವಿರ ರು. ಪಾವತಿಸಿರುವ ೨೦೫೦ ಫಲಾನುಭವಿಗಳಿಗೆ ಮುಂದಿನ ಒಂದೂವರೆ ವರ್ಷದಲ್ಲಿ ಮನೆಗಳನ್ನು ವಿತರಿಸಲಾಗುವುದು. ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು. 
ಸದಸ್ಯ ಚೆನ್ನಪ್ಪ ಮಾತನಾಡಿ, ಶಾಸಕರು ಕ್ಷೇತ್ರದ ಅಭಿವೃದ್ದಿಯನ್ನೇ ಜೀವಾಳ ಮಾಡಿಕೊಂಡಿದ್ದಾರೆ. ಅವರಿಗೆ ಕುಟುಂಬ ಸದಸ್ಯರೆಲ್ಲರೂ ಕೈಜೋಡಿಸಿದಂತೆ ನಗರಸಭೆ ಎಲ್ಲಾ ಸದಸ್ಯರೂ ಅವರೊಂದಿಗೆ ಶ್ರಮಿಸುತ್ತಿದ್ದೇವೆ. ಸರ್ಕಾರದ ವಿವಿಧ ಇಲಾಖೆಗಳಿಂದ ಸಾವಿರಾರು ಕೋಟಿ ರು. ಅನುದಾನ ಮಂಜೂರಾತಿ ಮಾಡಿಸಿರುವ ರಾಜ್ಯದ ಏಕೈಕ ಶಾಸಕ ಬಿ.ಕೆ ಸಂಗಮೇಶ್ವರ್ ಎಂದು  ಬಣ್ಣಿಸಿದರು. 
    ಪೌರಾಯುಕ್ತ ಕೆ.ಎನ್ ಹೇಮಂತ್ ಪ್ರಾಸ್ತಾವಿಕ ನುಡಿಗಳನ್ನಾಡಿ, ನಗರಸಭೆ ೨೦೨೨-೨೩ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆ (ಹಂತ-೪)ರ ಶೇ.೨೪.೧೦ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಶೇ.೭.೨೫ ಇತರೆ ಬಡವರ್ಗದವರ ಮತ್ತು ಶೇ.೫ ವಿಕಲಚೇತನರ ಕಲ್ಯಾಣ ಯೋಜನೆಗಳಡಿ ೨೯ ಶಾಲಾ ಕಾಲೇಜುಗಳ ಒಟ್ಟು ೫೬೩ ವಿದ್ಯಾರ್ಥಿಗಳಿಗೆ ಒಟ್ಟು ೨೭.೪೧ ಲಕ್ಷ ರು.ಗಳ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು.
      ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಉಪಾಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಸದಸ್ಯರಾದ ಅನುಸುಧಾ ಮೋಹನ್ ಪಳನಿ,  ಶೃತಿ ವಸಂತ್, ಸರ್ವಮಂಗಳ ಭೈರಪ್ಪ, ಕೆ. ಸುದೀಪ್‌ಕುಮಾರ್, ಬಸವರಾಜ್ ಬಿ. ಆನೇಕೊಪ್ಪ, ಬಿ.ಎಂ ಮಂಜುನಾಥ್, ಮಂಜುಳ ಸುಬ್ಬಣ್ಣ, ಪರ್ವೀಜ್, ಐ.ವಿ ಸಂತೋಷ್‌ಕುಮಾರ್, ಅಧಿಕಾರಿಗಳಾದ ಶಿವಪ್ರಸಾದ್, ಗಿರಿಧರ್, ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು, ಎಸ್.ಡಿ.ಎಂ.ಸಿ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
    ಮಹಮ್ಮದ್ ಗೌಸ್ ಕಾರ್ಯಕ್ರಮ ನಿರೂಪಿಸಿ, ಸಮುದಾಯ ಸಂಘಟನಾಧಿಕಾರಿ ಎಂ.ಸುಹಾಸಿನಿ ಸ್ವಾಗತಿಸಿದರು.