ಡಿ.೨೮ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಚುನಾವಣೆ : ೧೫ ಸ್ಥಾನಗಳಿಗೆ ೩೨ ಮಂದಿ ಸ್ಪರ್ಧೆ
ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ.
ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ೫ ವರ್ಷಗಳ ಅವಧಿಗೆ ಡಿ೨೮ರ ಭಾನುವಾರ ಸಿಲ್ವರ್ ಜ್ಯೂಬಿಲಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ.
ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ೧೫ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು ೩೨ ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಲಿ ಅಧ್ಯಕ್ಷ ಬಿ.ಜೆ ರಾಮಲಿಂಗಯ್ಯ ನೇತೃತ್ವದಲ್ಲಿ ಹಾಲಿ ನಿರ್ದೇಶಕರಾದ ಅಡವೀಶಯ್ಯ, ಕೆಂಪಯ್ಯ, ಎಸ್. ಗಜೇಂದ್ರ, ಎಲ್. ಬಸವರಾಜಪ್ಪ, ಎಸ್.ಎಸ್ ಭೈರಪ್ಪ, ಬಿ. ಮಂಜುನಾಥ್, ಮಹೇಶ್ವರಪ್ಪ, ಬಿ.ಕೆ ರವೀಂದ್ರ ರೆಡ್ಡಿ, ಬಿ.ಜೆ ರಾಮಲಿಂಗಯ್ಯ, ಲಾಜರ್, ಜಿ. ಶಂಕರ್ ಮತ್ತು ಎಸ್.ಎಚ್ ಹನುಮಂತರಾವ್ ಹಾಗು ಹೊಸದಾಗಿ ರಾಮಪ್ಪ ವಿ. ಮುನೇನಕೊಪ್ಪ, ಎನ್.ಆರ್ ಜಯರಾಜ್ ಮತ್ತು ಪಿ. ಮಂಜುನಾಥ ರಾವ್ ಸೇರಿ ಒಟ್ಟು ೧೫ ಮಂದಿ ಕಣಕ್ಕಿಳಿದಿದ್ದು, ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಒಕ್ಕೂಟದ ಹೆಸರಿನಲ್ಲಿ ಎ. ಈಶ್ವರಪ್ಪ, ಕರೀಂ ಫಿರಾನ್, ಕೆ.ಎನ್ ಗಂಗಾಧರ ಸ್ವಾಮಿ, ಚಂದ್ರಮೋಹನ್, ಎಸ್. ನರಸಿಂಹಚಾರ್, ನಾಗರಾಜ, ಎಸ್.ಈ ನಂಜುಂಡೇಗೌಡ, ಎಸ್. ನಾಗರಾಜ, ಕೆ. ಮುರಳಿಧರ, ರಾಜ, ಕೆ. ರಾಜಪ್ಪ, ಬಿ. ರಾಮಚಂದ್ರ, ಬಿ.ಎನ್ ಶ್ರೀನಿವಾಸ ಮತ್ತು ಬಿ.ಎಸ್ ಶ್ರೀನಿವಾಸಯ್ಯ ಸೇರಿ ಒಟ್ಟು ೧೫ ಮಂದಿ ಕಣಕ್ಕಿಳಿದಿದ್ದಾರೆ. ಉಳಿದಂತೆ ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ.
ಹಾಲಿ ನಿರ್ದೇಶಕರಲ್ಲಿ ಈಗಾಗಲೇ ೨-೩ ಬಾರಿ ಆಯ್ಕೆಯಾದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಲಿ ಅಧ್ಯಕ್ಷ ಬಿ.ಜೆ ರಾಮಲಿಂಗಯ್ಯ ೩ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಒಂದು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಜೆ.ಎಸ್ ನಾಗಭೂಷಣ್ ೩ ಬಾರಿ ಆಯ್ಕೆಯಾಗಿ ೩ ಅವಧಿ ಅಧ್ಯಕ್ಷರಾಗಿದ್ದರು. ಮಲ್ಲಿಕಾರ್ಜುನ್ ಒಂದು ಬಾರಿ ಆಯ್ಕೆಯಾಗಿ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ವಿಐಎಸ್‌ಎಲ್ ಕಾರ್ಖಾನೆ ಕಳೆದ ೩ ದಶಕಗಳಿಂದ ಅವನತಿ ದಾರಿಯಲ್ಲಿ ಸಾಗುತ್ತಿದೆ. ಪ್ರಸ್ತುತ ಕಾಯಂ ಕಾರ್ಮಿಕರ ಸಂಖ್ಯೆ ಅತಿ ಕಡಿಮೆ ಇದ್ದು, ಹೊಸ ಕಾರ್ಮಿಕರ ನೇಮಕಾತಿ ನಡೆಯುತ್ತಿಲ್ಲ. ಈ ಹಿನ್ನಲೆಯಲ್ಲಿ ಕಾಯಂ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಡುವೆ ನಿವೃತ್ತ ಕಾರ್ಮಿಕರ ಸಂಖ್ಯೆ ಅಧಿಕವಾಗಿದ್ದು, ಬಹುತೇಕ ಒಂದು ದಶಕದ ಹಿಂದೆಯೇ ನಿವೃತ್ತಿ ಹೊಂದಿರುವ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿವೃತ್ತಿ ಹೊಂದಿದ ನಂತರ ಬಹುತೇಕ ಕಾರ್ಮಿಕರು ಇಲ್ಲಿಯೇ ನೆಲೆ ನಿಂತಿದ್ದಾರೆ. ತಮ್ಮ ನಿವೃತ್ತ ಬದುಕನ್ನು ಸಂಕಷ್ಟದಲ್ಲಿ ಸಾಗಿಸುತ್ತಿದ್ದು, ಇವರ ಹಲವು ಬೇಡಿಕೆಗಳು ಈಡೇರಬೇಕಾಗಿದೆ. ಬಹುಮುಖ್ಯವಾಗಿ ವಸತಿ ಗೃಹಗಳಿಗೆ ಸಂಬಂಧಿಸಿದ ಸಮಸ್ಯೆ ದೀರ್ಘ ಕಾಲದಿಂದ ಉಳಿದು ಬಂದಿದ್ದು, ಆರೋಗ್ಯ ಸೇವೆ ಸೇರಿದಂತೆ ಇತರೆ ಸೌಲಭ್ಯಗಳು ನಿವೃತ್ತ ಕಾರ್ಮಿಕರಿಗೆ ಸಮಪರ್ಕವಾಗಿ ತಲುಪಬೇಕಾಗಿದೆ. ಈ ಹಿನ್ನಲೆಯಲ್ಲಿ ನಿವೃತ್ತ ಕಾರ್ಮಿಕರು ಸಮರ್ಥ ನಾಯಕನನ್ನು ಆರಿಸಿಕೊಳ್ಳುವುದು ಅನಿವಾರ್ಯವಾಗಿದೆ. ಈ ಬಾರಿ ಚುನಾವಣೆ ತೀವ್ರ ಪೈಪೋಟಿ ಕಂಡು ಬರುತ್ತಿದ್ದು, ಕಾರ್ಮಿಕ ವಲಯದಲ್ಲಿ ಗಮನ ಸೆಳೆಯುತ್ತಿದೆ.
ಚುನಾವಣೆ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆವರೆಗೆ ನಡೆಯಲಿದ್ದು, ೨,೯೦೨ ಮಂದಿ ನಿವೃತ್ತ ನೌಕರರು ಮತಚಲಾಯಿಸಲಿದ್ದಾರೆ. ಇದೆ ದಿನ ಫಲಿತಾಂಶ ಸಹ ಹೊರಬೇಳಲಿದೆ.