ವಿಜಯಪುರ ಗರ್ಭಿಣಿ ಮಾನ್ಯ ಹತ್ಯೆ ಪ್ರಕರಣ : ಅಂಬೇಡ್ಕರ್ ವೈಚಾರಿಕ ವೇದಿಕೆ ಖಂಡನೆ
ಧಾರವಾಡ ಜಿಲ್ಲೆ ಇನಾಂ ವೀರಾಪುರದ ಮಾನ್ಯ
ಭದ್ರಾವತಿ: ಧಾರವಾಡ ಜಿಲ್ಲೆ ಇನಾಂ ವೀರಾಪುರದಲ್ಲಿ ಮಾನ್ಯ ಎಂಬ ಹೆಣ್ಣು ಮಗಳು ದಲಿತ ಹುಡುಗನನ್ನು ಮದುವೆ ಆದಳು ಎಂಬ ಕಾರಣಕ್ಕಾಗಿ ತಂದೆಯೇ ಗರ್ಭಿಣಿ ಮಗಳನ್ನು ಬರ್ಬರವಾಗಿ ಹತ್ಯೆಗೈದಿರುವುದನ್ನು ನಗರದ ಅಂಬೇಡ್ಕರ್ ವೈಚಾರಿಕ ವೇದಿಕೆ ತೀವ್ರವಾಗಿ ಖಂಡಿಸಿದೆ.
ಈ ಸಂಬಂಧ ವೇದಿಕೆ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಲಿಂಗಾಯತ ಜಾತಿಗೆ ಸೇರಿದ ಯುವತಿ ದಲಿತ ಜಾತಿಯ ಯುವಕನನ್ನು ವಿವಾಹವಾಗಿದ್ದು, ೭ ತಿಂಗಳ ಗರ್ಭಿಣಿಯನ್ನು ಹೆತ್ತ ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆಮಾಡಿರುವುದು ತುಂಬಾ ನೋವಿನ ವಿಚಾರವಾಗಿದೆ. ಇದೆ ರೀತಿ ವಿಜಯಪುರದಲ್ಲಿ ದೇವಸ್ಥಾನ ಕಟ್ಟೆಯ ಮೇಲೆ ಮೇಲ್ಜಾತಿಯವರ ಸಮನಾಗಿ ಒಬ್ಬ ದಲಿತ ಯುವಕ ಕುಳಿತ ಎಂದು ಆತನನ್ನು ಕೊಲೆ ಮಾಡಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದ್ದು, ಈ ಕೃತ್ಯವನ್ನು ಸಹ ವೇದಿಕೆ ಖಂಡಿಸಿದ್ದಾರೆ ಎಂದು ತಿಳಿಸಲಾಗಿದೆ.
ಈ ಎರಡೂ ಘಟನೆಗಳು ಇಂದಿಗೂ ವರ್ಣಾಶ್ರಮ ಜಾತಿ ವ್ಯವಸ್ಥೆ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿವೆ. ಇನಾಂ ವೀರಾಪುರದ ಮೇಲ್ಮಾತಿಗೆ ಸೇರಿದ ಮಾನ್ಯ ಹಾಗು ಇದೇ ಗ್ರಾಮದ ದಲಿತ ಹುಡುಗ ವಿವೇಕಾನಂದ ದೊಡ್ಮನಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದರು. ದಲಿತ ಹುಡುಗನನ್ನು ಮಗಳು ಮದುವೆಯಾದ ಕಾರಣಕ್ಕಾಗಿ ಮರ್ಯಾದೆ ಹೋಯಿತೆಂದು ಮೇಲ್ಜಾತಿಯ ದುರಹಂಕಾರದಿಂದ ಪ್ರಕಾಶ್ ಪಾಟೀಲ್ ಮತ್ತವರ ಗುಂಪು ಮಾನ್ಯಳನ್ನು ಕೊಚ್ಚಿ ಕೊಲೆಗೈದಿದೆ. ಮಾನ್ಯಳ ಪತಿ ವಿವೇಕಾನಂದ ದೊಡ್ಮನಿ, ತಂದೆ, ತಾಯಿ, ಸಂಬಂಧಿಕರ ಮೇಲೆಯು ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಮಾನ್ಯಳ ವಿವಾಹದ ನಂತರ ಗದ್ದಲವಾಗಬಹುದೆಂಬ ಕಾರಣಕ್ಕಾಗಿ ಪೊಲೀಸ್ ಠಾಣೆಯಲ್ಲಿ ಸಂಧಾನದ ಚರ್ಚೆ ನಡೆದಿತ್ತು ಎನ್ನಲಾಗುತ್ತಿದೆ. ಜಾತಿವಾದಿಗಳು ಹೆತ್ತಮಗಳೆಂಬ ಕರುಣೆ ಇಲ್ಲದೆ ಪೊಲೀಸ್, ಕಾನೂನು ಎಂಬ ಭಯ ಭೀತಿ ಇಲ್ಲದೆ. ಗುಂಡಾಗಳಂತೆ ವರ್ತಿಸಿದ್ದಾರೆ. ಸಮಾಜದಲ್ಲಿ ಜಾತಿ ತಾರತಮ್ಮ, ಇನ್ನೂ ಗಾಢವಾಗಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಕಿಡಿಕಾರಲಾಗಿದೆ.
ಈ ದುರ್ಘಟನೆ ಕರ್ನಾಟಕದ ಮಾನವಂತರ ಮನ ಕಲುಕಿದೆ. 'ಹಿಂದೂ ನಾವೆಲ್ಲ ಒಂದು' ಎನ್ನುವ ಹಿಂದತ್ವವಾದಿಗಳು ಈ ಘಟನೆಗೂ ತಮಗೂ ಸಂಬಂಧವಿಲ್ಲ ಎನ್ನುವಂತಿದ್ದಾರೆ. ಆದರೆ ಬುದ್ಧ, ಬಸವ, ಅಂಬೇಡ್ಕರ್ ವಾದಿಗಳು ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟ ಮತ್ತಷ್ಟು ಚುರುಕುಗೊಳ್ಳಬೇಕು. ಮರ್ಯಾದೆ ಹತ್ಯೆ ನಡೆಸಿದ ಅರೋಪಿಗಳಿಗೆ ಶಿಕ್ಷೆ ನೀಡಬೇಕೆಂದು ವೇದಿಕೆಯ ಸಂಚಾಲಕರುಗಳಾದ ಪಿ. ಮೂರ್ತಿ ಮತ್ತು ಜಯರಾಮ್ ಒತ್ತಾಯಿಸಿದ್ದಾರೆ.