ಕಾನೂನು ರೂಪಿಸಿದ್ದರೂ ಆದೇಶವಿಲ್ಲದೆ ಪೊಲೀಸರು ಅಧಿಕಾರ ಮೀರಿ ಏನು ಮಾಡಲು ಸಾಧ್ಯವಿಲ್ಲ : ಪ್ರಕಾಶ್ ರಾಥೋಡ್ 

ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸಭೆಯಲ್ಲಿ ಸೂಕ್ತ ಮಾಹಿತಿ ಹೊಂದಲು ಮನವಿ 

ಭದ್ರಾವತಿ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಉಪವಿಭಾಗ ವ್ಯಾಪ್ತಿಯ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸಭೆಯ ನೇತೃತ್ವವಹಿಸಿ ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಮಾತನಾಡಿದರು. 
    ಭದ್ರಾವತಿ: ಕಾನೂನು ರೂಪಿಸಿಲಾಗಿದೆ ಎಂದು ಪೊಲೀಸರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಏನು ಮಾಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಸಿವಿಲ್ ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೆಚ್ಚಿನದ್ದನ್ನು ಇಲಾಖೆಯಿಂದ ನಿರೀಕ್ಷಿಸುವುದು ತಪ್ಪು ಎಂದು ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಮನವರಿಕೆ ಮಾಡಿದರು. 
    ಅವರು ಭಾನುವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಉಪವಿಭಾಗ ವ್ಯಾಪ್ತಿಯ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸಭೆಯ ನೇತೃತ್ವವಹಿಸಿ ಮಾತನಾಡಿದರು. 
    ಜಮೀನು ವಿವಾದ ಪ್ರಕರಣಗಳಲ್ಲಿ ತಾಲೂಕು ದಂಡಾಧಿಕಾರಿ ಅಥವಾ ನ್ಯಾಯಾಲಯ ನೀಡುವ ಆದೇಶದಂತೆ ಇಲಾಖೆ ನಡೆದುಕೊಳ್ಳಬೇಕಾಗುತ್ತದೆ. ಇಲಾಖೆಗೆ ಭೂಮಿ ಗುರುತಿಸುವ ಅಥವಾ ಯಾವುದೇ ಹೆಚ್ಚಿನ ಅಧಿಕಾರವಿಲ್ಲ. ಪ್ರಕರಣಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಶಾಂತಿ ಸುವ್ಯವಸ್ಥೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಅದು ಚಿಕ್ಕ ಪ್ರಮಾಣದಲ್ಲಿರಲಿ ಅಥವಾ ದೊಡ್ಡ ಪ್ರಮಾಣದಲ್ಲಿರಲಿ ಭದ್ರತೆ ಕೊಡುತ್ತೇವೆ. ಇದರ ಹೊರತಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಇಲಾಖೆಯಿಂದ ಹೆಚ್ಚಿನದ್ದನ್ನು ನಿರೀಕ್ಷಿಸುವುದು ಸರಿಯಲ್ಲ. ಈ ಹಿನ್ನಲೆಯಲ್ಲಿ ಈ ಕುರಿತು ಸರಿಯಾದ ಮಾಹಿತಿ ತಾವುಗಳು ತಿಳಿದುಕೊಳ್ಳುವ ಅಗತ್ಯವಿದೆ ಎಂದರು. 
    ಗಣಪತಿ ಮೂರ್ತಿ ವಿಸರ್ಜನೆಗೆ ಸಂಬಂಧಿಸಿದಂತೆ ಇಲಾಖೆಯಿಂದ ಯಾವುದೇ ಪರವಾನಗಿ ನೀಡಿರುವುದಿಲ್ಲ. ನಗರಸಭೆಯಿಂದ ಪರವಾನಗಿ ನೀಡಲಾಗಿದ್ದು, ಉಳಿದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗು ಡಿಜೆ ಬಳಕೆ ಸೇರಿದಂತೆ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದ ಮಾರ್ಗ ಸೂಚಿಗಳನ್ನು ಸಂಘಟನೆಗಳಿಗೆ ತಿಳಿಸಲಾಗಿರುತ್ತದೆ. ಇದರ ಹೊರತಾಗಿ ಇಲಾಖೆ ಏನನ್ನು ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರ ಮೇಲಿನ ನಂಬಿಕೆ ಉಳಿಸಿಕೊಳ್ಳುವುದು ಸಹ ಇಲಾಖೆ ಜವಾಬ್ದಾರಿಯಾಗಿರುತ್ತದೆ. ಈ ಹಿನ್ನಲೆಯಲ್ಲಿ ಅನಗತ್ಯವಾಗಿ ಯಾವುದೇ ವಿಚಾರಗಳಿಗೆ ಇಲಾಖೆ ಮುಂದಾಗುವುದಿಲ್ಲ. ಭದ್ರತೆ ನೀಡುವುದು ಇಲಾಖೆ ಜವಾಬ್ದಾರಿಯಾಗಿರುತ್ತದೆ. ಅಗತ್ಯವಿರುವ ಸಂದರ್ಭದಲ್ಲಿ ಸೂಕ್ತ ಭದ್ರತೆ ನೀಡಲಾಗುವುದು ಎಂದರು. 
    ಉಳಿದಂತೆ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳ ಕುರಿತು ಹಾಗು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಈ ನಡುವೆ ನಗರದಲ್ಲಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಭವನ ಉದ್ಘಾಟನೆಗೆ ಮುಖ್ಯಮಂತ್ರಿ ಆಹ್ವಾನಿಸುವ ಕುರಿತು ಮಾತನಾಡಿ, ಈ ವಿಚಾರ ದೊಡ್ಡವರಿಗೆ ಸಂಬಂಧಿಸಿದಾಗಿದೆ. ಒಂದು ವೇಳೆ ಮುಖ್ಯಮಂತ್ರಿಗಳು ಆಗಮಿಸಿದರೆ ಇಲಾಖೆ ಸಹ ನಿಮ್ಮೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಿದೆ ಎಂದರು. 
    ಉಪವಿಭಾಗ ವ್ಯಾಪ್ತಿಯಲ್ಲಿ ಜ.೧ ರಿಂದ ಡಿ.೨೦ರವರೆಗೆ ದಾಖಲಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪ್ರಕರಣಗಳ ಕುರಿತು ಮಾಹಿತಿ ನೀಡಿದರು. ಒಟ್ಟು ೩೬ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೨೦ ಪ್ರಕರಣಗಳಿಗೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದ್ದು, ೪ ಪ್ರಕರಣಗಳನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಯ್ದೆಯಿಂದ ಕೈಬಿಟ್ಟು ದಾಖಲಿಸಿಕೊಳ್ಳಲಾಗಿದೆ. ೨ ಪ್ರಕರಣಗಳಿಗೆ ಸರ್ವೋಚ್ಛ ನ್ಯಾಯಾಲಯ ತಡಯಾಜ್ಞೆ ನೀಡಿದೆ. ಉಳಿದಂತೆ ೭ ಪ್ರಕರಣಗಳು ತನಿಖೆ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು. 
    ಸಭೆಯಲ್ಲಿ ಪಾಲ್ಗೊಂಡಿದ್ದ ಡಿಎಸ್‌ಎಸ್ ಮುಖಂಡ ಭದ್ರಾವತಿ ಸತ್ಯ ಮಾತನಾಡಿ, ೪೦ ವರ್ಷಗಳ ನಮ್ಮ ಹೋರಾಟದ ಬದುಕಿನಲ್ಲಿ ಕೆಲವು ಉತ್ತಮ ಪೊಲೀಸ್ ಉಪಾಧೀಕ್ಷಕರನ್ನು ನೋಡಿದ್ದೇನೆ. ಪ್ರಸ್ತುತ ತಾವು ಸಹ ಆ ನಿಟ್ಟಿನಲ್ಲಿಯೇ ಕಾರ್ಯನಿರ್ವಹಿಸುತ್ತಿರುವುದು ಇದೀಗ ನನ್ನ ಭಾವನೆಗೆ ಬರುತ್ತಿದೆ. ಪ್ರಸ್ತುತ ಉಪವಿಭಾಗ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಭೆಯನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿರುವುದು ಇಲಾಖೆಗೆ ಕಾನೂನಿನ ಅರಿವಿದೆ ಎಂಬುದು ನಮಗೆ ತಿಳಿದು ಬರುತ್ತಿದೆ. ಪೊಲೀಸ್ ಉಪಾಧೀಕ್ಷಕರ ಕಾರ್ಯ ವೈಖರಿಗೆ ಪ್ರಶಂಸೆ ವ್ಯಕ್ತಪಡಿಸುತ್ತೇನೆ ಎಂದರು. 
    ಕ್ಷೇತ್ರದಲ್ಲಿ ಬಹುತೇಕ ಜಾತಿನಿಂದನೆ ಪ್ರಕರಣಗಳು ಹಣದಾಸೆ ಹಾಗು ರಾಜಕೀಯ ಪ್ರೇರಿತವಾಗಿ ದಾಖಲಾಗುತ್ತಿವೆ. ಇವುಗಳನ್ನು ಸೂಕ್ಷ್ಮ ಪರಿಶೀಲಿಸಿ ಇಲಾಖೆ ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ನಗರದಲ್ಲಿ ನಡೆದಿರುವ ಇಬ್ಬರು ಅಮಾಯಕ ಪೌರಕಾರ್ಮಿಕರ ಹತ್ಯೆ ಪ್ರಕರಣದಲ್ಲಿ ಯಾವುದೇ ರೀತಿ ಒತ್ತಡಕ್ಕೆ ಒಳಗಾಗದೆ ಸರಿಯಾದ ರೀತಿಯಲ್ಲಿ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅಲ್ಲದೆ ಕ್ಷೇತ್ರದಲ್ಲಿ ಗಾಂಜಾ ಸೇವನೆ ಹೆಚ್ಚಾಗಿದ್ದು, ಅದರಲ್ಲೂ ಪರಿಶಿಷ್ಟ ಜಾತಿ, ಪಂಗಡದವರು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಗಾಂಜಾ ಪ್ರಕರಣಗಳನ್ನು ಸರಿಯಾಗಿ ತನಿಖೆ ನಡೆಸಿದಾಗ ಮೂಲ ಯಾರು ಎಂಬುದು ಪತ್ತೆಯಾಗಲಿದೆ. ಈ ಹಿನ್ನಲೆಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. 
    ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪ್ರಮುಖರಾದ ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ ನಾಗರಾಜ್, ವಿ. ವಿನೋದ್, ಇ.ಪಿ ಬಸವರಾಜ, ಚಿನ್ನಯ್ಯ, ಮುಕುಂದ, ಎಸ್. ಉಮಾ, ಜುಂಜ್ಯಾನಾಯ್ಕ, ಸಿ. ಜಯಪ್ಪ, ಚೌಡಪ್ಪ, ಪ್ರೇಮ್ ಕುಮಾರ್, ತೀರ್ಥ, ಹುಚ್ಚಯ್ಯ, ಚಂದ್ರಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.  
    ವೇದಿಕೆಯಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಚಿದಾನಂದ, ವಿವಿಧ ಪೊಲೀಸ್ ಠಾಣೆಗಳ ನಿರೀಕ್ಷಕರು ಹಾಗು ಉಪ ನಿರೀಕ್ಷಕರುಗಳಾದ ನಾಗಮ್ಮ, ಸುನಿಲ್‌ಕುಮಾರ್ ತೇಲಿ, ಕೃಷ್ಣಕುಮಾರ್ ಮಾನೆ, ಕವಿತಾ, ಶಿಲ್ಪಾನಾಯನೇಗಲಿ, ಚಂದ್ರಶೇಖರ್ ನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.