ಜಾನಪದ ಕಲಾವಿದ ಜಿ. ದಿವಾಕರ್‌ಗೆ `ಶ್ರೀ ಕರ್ನಾಟಕ ಕಲಾ ಸೇವಾ ರತ್ನ'

ಜಿ. ದಿವಾಕರ
    ಭದ್ರಾವತಿ : ಬೆಂಗಳೂರಿನ ಅಖಿಲ ಕರ್ನಾಟಕ ಅಂಗವಿಕಲರ ಸೇವಾ ಟ್ರಸ್ಟ್ ವತಿಯಿಂದ ೨೦೨೬ನೇ ಹೊಸ ವರ್ಷದ ಅಂಗವಾಗಿ ನಗರದ ಜಾನಪದ ಕಲಾವಿದ ಜಿ. ದಿವಾಕರ ಅವರಿಗೆ ಶ್ರೀ ಕರ್ನಾಟಕ ಕಲಾ ಸೇವಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. 
   ನೂತನ ವರ್ಷದ ಸಂಭ್ರಮ ಸಡಗರದೊಂದಿಗೆ ಜ.೧ರಂದು ಬೆಂಗಳೂರು, ನಾಗರಭಾವಿ, ಮಲ್ಲತ್ತಹಳ್ಳಿ ಕಲಾ ಗ್ರಾಮದಲ್ಲಿ ಮಧ್ಯಾಹ್ನ ೨.೩೦ ರಿಂದ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಪ್ರಶಸ್ತಿ ಪುರಸ್ಕಾರ ನಡೆಯಲಿದ್ದು, ಸುಮಾರು ೩೦೦ ಅಂಗವಿಕಲರಿಗೆ ಆಹಾರ ಪದಾರ್ಥ ಕಿಟ್‌ಗಳ ವಿತರಣೆ ನಡೆಯಲಿದೆ. 
    ದಿವಾಕರ ಅವರಿಗೆ ಶ್ರೀ ಕರ್ನಾಟಕ ಕಲಾ ಸೇವಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಿದೆ. ಈ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು, ಚಲನಚಿತ್ರ ಕಲಾವಿದರು ಹಾಗು ಸಮಾಜ ಸೇವಕರು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಟ್ರಸ್ಟ್ ಸಂಸ್ಥಾಪಕ ಹಾಗು ಕಾರ್ಯಕ್ರಮ ಆಯೋಜಕ ಡಾ. ಎಸ್. ಪ್ರಸಾದ್ ಕಾರ್ಯಕ್ರಮದ ನೇತೃತ್ವವಹಿಸಲಿದ್ದಾರೆ. 
      ದಿವಾಕರ ಅವರು ಹಲವಾರು ವರ್ಷಗಳಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಆಶ್ರಿತದ ನಗರದ ಹೊಸಸೇತುವೆ ರಸ್ತೆಯ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ನಡುವೆ ಜಾನಪದ ಕಲೆಯಲ್ಲಿ ತೊಡಗಿಸಿಕೊಂಡು ಹಲವಾರು ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ. 
       ಇವರನ್ನು ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆಡಳಿತ ಮಂಡಳಿ, ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾತಂಡ ಸೇರಿದಂತೆ ಜಾನಪದ ಕಲಾವಿದರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಅಭಿನಂದಿಸಿದ್ದಾರೆ.