ಸೌಲಭ್ಯ ಸದ್ಬಳಕೆ ಮಾಡಿಕೊಂಡು ಕಲಿಕೆಯಲ್ಲಿ ಪ್ರಗತಿ ಸಾಧಿಸಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಹುತ್ತಾ ಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ "ವಾರ್ಷಿಕ ಪರ್ವ 2025-26" ಶಾಲಾ ವಾರ್ಷಿಕೋತ್ಸವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ : ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಕಲಿಕೆಯಲ್ಲಿ ಪ್ರಗತಿ ಸಾಧಿಸಬೇಕೆಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು. 
    ಅವರು ನಗರದ ಹುತ್ತಾ ಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ "ವಾರ್ಷಿಕ ಪರ್ವ 2025-26" ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. 
    2024-25 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಗೆ ಶೇಕಡ ನೂರರಷ್ಟು ಫಲಿತಾಂಶ ಲಭಿಸಿರುವುದು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಮತ್ತು ಶಾಲಾಭಿವೃದ್ಧಿ ಸಮಿತಿಯವರ ಶ್ರಮ ಹೆಚ್ಚಿನದ್ದಾಗಿದೆ. ಅಲ್ಲದೆ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. 
    ಕಾರ್ಯಕ್ರಮದ ಅಧ್ಯಕ್ಷತೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಸದಸ್ಯರಾದ ಕಾಂತರಾಜ್, ಆರ್. ಮೋಹನ್ ಕುಮಾರ್, ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಶಿವಮೊಗ್ಗ, ಅಧ್ಯಕ್ಷ ರಾಘವೇಂದ್ರ, ನಿವೃತ್ತ ಮುಖ್ಯ ಶಿಕ್ಷಕಿ ಗೀತಾಂಜಲಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಸಿ. ಪರಮೇಶ್ವರಪ್ಪ ಮತ್ತು ಶಾಲೆಯ ಮುಖ್ಯ ಶಿಕ್ಷಕ ಯು. ಪರಶುರಾಮ್ ರಾವ್, ಶಾಲೆಯ ಎಸ್ ಡಿ ಎಂ ಸಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ ನೂರರಷ್ಟು ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಿಸ್ಕಸ್ ಥ್ರೋ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆಯೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಶಾಲೆಯ 10ನೇ ತರಗತಿ ವಿದ್ಯಾರ್ಥಿ ವಿಜಯ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಶಾಲೆಯಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ ಏಕಪಾತ್ರ ಅಭಿನಯ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು. ನಡೆಸಿಕೊಟ್ಟರು. 
    ಶಿಕ್ಷಕರಾದ ವೀಣಾ ಕಾರ್ಯಕ್ರಮವನ್ನು ನಿರೂಪಿಸಿ, ನವೀನ್ ಕುಮಾರ್ ಶಾಲಾ ವಾರ್ಷಿಕ ವರದಿ ವಾಚಿಸಿ, ದೇವರಾಜ್ ವಂದಿಸಿದರು.