ನಗರಸಭೆ ಉಳಿದ ಅವಧಿಗೆ ಉಪಾಧ್ಯಕ್ಷರಾಗಿ ಬಷೀರ್ ಅಹಮದ್ ಅವಿರೋಧ ಆಯ್ಕೆ
ಭದ್ರಾವತಿ ನಗರಸಭೆ ಮೀಸಲಾತಿ ೨ನೇ ಅವಧಿಯ ಉಳಿದ ಅವಧಿಗೆ ಉಪಾಧ್ಯಕ್ಷರಾಗಿ ೮ನೇ ವಾರ್ಡ್ ಸದಸ್ಯ ಬಷೀರ್ ಅಹಮದ್ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್ ಸೇರಿದಂತೆ ಇನ್ನಿತರರು ಅಭಿನಂದಿಸಿದರು.
ಭದ್ರಾವತಿ : ನಗರಸಭೆ ಮೀಸಲಾತಿ ೨ನೇ ಅವಧಿಯ ಉಳಿದ ಅವಧಿಗೆ ಉಪಾಧ್ಯಕ್ಷರಾಗಿ ೮ನೇ ವಾರ್ಡ್ ಸದಸ್ಯ ಬಷೀರ್ ಅಹಮದ್ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
೩೫ ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಅತಿ ಹೆಚ್ಚು ೧೮ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಮೀಸಲಾತಿಗೆ ಅನುಗುಣವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗು ಸ್ಥಾಯಿ ಸಮಿತಿ ಸ್ಥಾನಗಳಿಗೆ ಅಧಿಕಾರ ಹಂಚಿಕೆ ಸೂತ್ರ ರೂಪಿಸಿಕೊಂಡಿದೆ. ಮೀಸಲಾತಿ ೨ನೇ ಅವಧಿಯಲ್ಲಿ ಸಾಮಾನ್ಯ ಮೀಸಲಾತಿ ಹೊಂದಿರುವ ಉಪಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ವಾರ್ಡ್ ನಂ.೧೧ರ ಸದಸ್ಯ ಎಂ. ಮಣಿ ಎಎನ್‌ಎಸ್ ಆಯ್ಕೆಯಾಗಿ ೧೬ ತಿಂಗಳು ಅಧಿಕಾರ ನಿರ್ವಹಿಸಿದ್ದಾರೆ. ಇದೀಗ ಉಳಿದ ಅವಧಿಗೆ ಬಷೀರ್ ಅಹಮದ್ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಸತ್ಯನಾರಾಯಣ ಹಾಗು ಸಹಾಯಕ ಚುನಾವಣಾಧಿಕಾರಿಯಾಗಿ ಪೌರಾಯುಕ್ತ ಕೆ.ಎನ್ ಹೇಮಂತ್ ಕಾರ್ಯನಿರ್ವಹಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಷೀರ್ ಅಹಮದ್ ಹೊರತುಪಡಿಸಿ ಬೇರೆ ಯಾರು ಸಹ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಅವಿರೋಧ ಆಯ್ಕೆ ಘೋಷಿಸಲಾಯಿತು.
ಬಷೀರ್ ಅಹಮದ್ ಮೊದಲ ಬಾರಿಗೆ ಉಪಾಧ್ಯಕ್ಷ :
ಅಲ್ಪಸಂಖ್ಯಾತ ಮುಸ್ಲಿ ಸಮುದಾಯದವರು ಹೆಚ್ಚಾಗಿರುವ ವಾರ್ಡ್.ನಂ.೮ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾಗಿರುವ ಬಷೀರ್ ಅಹಮದ್ ಇದೀಗ ಮೊದಲ ಬಾರಿಗೆ ನಗರಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಾಗಿದ್ದು, ಈ ಹಿಂದೆ ಬಹಳಷ್ಟು ಮಂದಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಉಪಾಧ್ಯಕ್ಷ ಸ್ಥಾನ ನೀಡಿರುವುದು ಮುಂಬರುವ ನಗರಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದವರನ್ನು ಸೆಳೆಯಲು ಸಹಕಾರಿಯಾಗಲಿದೆ ಎನ್ನಲಾಗಿದೆ.
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಸದಸ್ಯರಾದ ಬಿ.ಕೆ ಮೋಹನ್, ವಿ. ಕದಿರೇಶ್ ಸೇರಿದಂತೆ ಇನ್ನಿತರ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಗಣ್ಯರು ನೂತನ ಉಪಾಧ್ಯಕ್ಷ ಬಷೀರ್ ಅಹಮದ್‌ರನ್ನು ಅಭಿನಂದಿಸಿದರು.
ನಗರಸಭೆ ಆವರಣದಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಕಂಡು ಬಂದಿತು. ಬಷೀರ್ ಅಹಮದ್ ಉಪಾಧ್ಯಕ್ಷರಾಗುವುದು ಬಹುತೇಕ ಖಚಿತವಾದ ಹಿನ್ನಲೆಯಲ್ಲಿ ನಗರಸಭೆ ಆವರಣ ಹಾಗು ಉಪಾಧ್ಯಕ್ಷರ ಕೊಠಡಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ನೂತನ ಉಪಾಧ್ಯಕ್ಷ ಬಷೀರ್ ಅಹಮದ್‌ರನ್ನು ಕಲಾತಂಡಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.