ಕಾಮ್ರೇಡ್ ಡಿ.ಸಿ ಮಾಯಣ್ಣ ನಿಧನ
ಕಾಮ್ರೇಡ್ ಡಿ.ಸಿ
ಭದ್ರಾವತಿ : ನಗರದ ಹಿರಿಯ ಹೋರಾಟಗಾರ, ಸಿಪಿಐ ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ಡಿ.ಸಿ ಮಾಯಣ್ಣ(೯೨) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.
ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಕರ್ತವ್ಯ ನಿವೃತ್ತಿ ಹೊಂದಿದ್ದರು. ಆರಂಭದಿಂದಲೂ ಕಾರ್ಮಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದು, ಪ್ರಸ್ತುತ ಸಿಪಿಐ ರಾಜ್ಯ ಸಮಿತಿ ಸದಸ್ಯರಾಗಿದ್ದರು. ಕಾರ್ಮಿಕ ಹೋರಾಟಗಳಲ್ಲಿ ಮಾತ್ರವಲ್ಲದೆ ಪ್ರಗತಿಪರ ಸಂಘಟನೆಗಳ ಬಹುತೇಕ ಹೋರಾಟಗಳಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.
ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಗರದ ವಿವಿಧ ರಾಜಕೀಯ ಪಕ್ಷಗಳ, ಪ್ರಗತಿಪರ ಹಾಗು ದಲಿತ ಮತ್ತು ಕಾರ್ಮಿಕ ಸಂಘಟನೆಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಕಾರ್ಮಿಕ ಹೋರಾಟಗಾರು, ಕಾರ್ಮಿಕ ವರ್ಗದವರು, ಡಿ.ಸಿ ಮಾಯಣ್ಣ ಅಭಿಮಾನಿ ಬಳಗದವರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಗಣ್ಯರು ಜಾತಿ-ಬೇಧ, ಪಕ್ಷ ಬೇಧ ಮರೆತು ಸಂತಾಪ ಸೂಚಿಸಿದ್ದಾರೆ.
ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಿಂದ ಡಿ.ಸಿ ಮಾಯಣ್ಣನವರ ಹಿರಿಯೂರಿನ ನಿವಾಸದವರೆಗೂ ಡಿ.ಸಿ ಮಾಯಣ್ಣನವರ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಡಿ.ಸಿ ಮಾಯಣ್ಣನವರ ಅಂತ್ಯ ಸಂಸ್ಕಾರ ಶನಿವಾರ ಸಂಜೆ ಹಿರಿಯೂರಿನ ಅವರ ತೋಟದಲ್ಲಿ ನೆರವೇರಲಿದೆ.