ಹಿರಿಯ ಕಾರ್ಮಿಕ ಮುಖಂಡ, ಶಿಕ್ಷಣ ತಜ್ಞ ಕಾಮ್ರೇಡ್ ಕಾಳೇಗೌಡ ನಿಧನ
ಕಾಮ್ರೇಡ್ ಕಾಳೇಗೌಡ
ಭದ್ರಾವತಿ : ನಗರದ ಹಿರಿಯ ಕಾರ್ಮಿಕ ಮುಖಂಡ, ಶಿಕ್ಷಣ ತಜ್ಞ ಕಾಮ್ರೇಡ್ ಕಾಳೇಗೌಡ(೭೮)ರವರು ಮಂಗಳವಾರ ರಾತ್ರಿ ನಿಧನ ಹೊಂದಿದರು.
ಇವರಿಗೆ ಪತ್ನಿ, ೪ ಗಂಡು ಮತ್ತು ೩ ಹೆಣ್ಣು ಮಕ್ಕಳಿದ್ದಾರೆ. ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಇವರು ಆರಂಭದಿಂದಲೂ ಎಐಟಿಯುಸಿ ಸಂಘಟನೆ ಮೂಲಕ ಕಾರ್ಮಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಾರ್ಮಿಕರ ಯಾವುದೇ ಹೋರಾಟವಿರಲಿ ಪಾಲ್ಗೊಂಡು ನ್ಯಾಯ ಒದಗಿಸಿಕೊಡಲು ಉತ್ಸುಕರಾಗಿದ್ದರು.
ಕಾಳೇಗೌಡರವರು ಹೋರಾಟದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು, ಹುತ್ತಾಕಾಲೋನಿಯಲ್ಲಿ ಸಹ್ಯಾದ್ರಿ ಎಜ್ಯುಕೇಷನ್ ಟ್ರಸ್ಟ್ ಸ್ಥಾಪಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದ್ದರು.
ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಸಂಜೆ ನೆರವೇರಲಿದೆ.
ಇವರ ನಿಧನಕ್ಕೆ ಸಹ್ಯಾದ್ರಿ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ದೊರೈ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಪದಾಧಿಕಾರಿಗಳು, ಮುಖಂಡರು, ಕಾರ್ಮಿಕ ಸಂಘಟನೆಗಳು, ಕಾರ್ಮಿಕ ಹೋರಾಟಗಾರರ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಗಣ್ಯರು, ಶಾಸಕರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.
