ವಿದ್ಯಾರ್ಥಿನಿಲಯಕ್ಕೆ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸಿ. ಮಂಜುಳಾ ಭೇಟಿ

ವಿದ್ಯಾರ್ಥಿನಿಯರಿಂದ ಹಲವು ಸಮಸ್ಯೆ ಬಗೆಹರಿಸಲು ಮನವಿ 

ಭದ್ರಾವತಿ ರಂಗಪ್ಪ ವೃತ್ತದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ಭೇಟಿ ನೀಡಿ ಕುಂದು ಕೊರತೆ ವಿಚಾರಿಸಿದರು. 
    ಭದ್ರಾವತಿ: ವಿದ್ಯಾರ್ಥಿನಿಯರ ಆರೋಗ್ಯದ ದೃಷ್ಟಿಯಿಂದ ವಿದ್ಯಾರ್ಥಿ ನಿಲಯದಲ್ಲಿ ಬಿಸಿ ನೀರು ಹಾಗು ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ನಗರದ ರಂಗಪ್ಪ ವೃತ್ತದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾರವರಿಗೆ ಮನವಿ ಮಾಡಿದರು. 
    ಮಂಜುಳಾರವರು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಕುಂದು ಕೊರತೆಗಳನ್ನು ವಿಚಾರಿಸಿದ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯರು ಹಲವು ಸಮಸ್ಯೆಗಳನ್ನು ತೋರ್ಪಡಿಸಿಕೊಂಡರು. 
    ಶೌಚಾಲಯ ಸಮಸ್ಯೆ ಇದ್ದು, ವಿದ್ಯಾರ್ಥಿನಿಯರು ಇದರಿಂದ ತೊಂದರೆ ಎದುರಿಸುವಂತಾಗಿದೆ.  ಹಾಸಿಗೆಗಳ ಕೊರತೆ ಇದ್ದು, ಹಲವು ವಿದ್ಯಾರ್ಥಿನಿಯರು ಚಾಪೆ ಹಾಕಿಕೊಂಡು  ನೆಲದ ಮೇಲೆ ಮಲಗುವಂತಾಗಿದೆ. ಬಿಸಿ ನೀರಿನ ಕೊರತೆಯಿಂದ ಆರೋಗ್ಯದ ಸಮಸ್ಯೆ ಎದುರಿಸುವಂತಾಗಿದೆ.  ಸ್ಟಡಿ ಟೇಬಲ್‌ಗಳ ಅವಶ್ಯಕತೆ ಇದ್ದು, ಇನ್ನೂ ಹಲವಾರು ಸಮಸ್ಯೆಗಳಿವೆ ಎಂದು ತಮ್ಮ ಅಳಲು ವ್ಯಕ್ತಪಡಿಸಿದರು. 
    ವಿದ್ಯಾರ್ಥಿನಿಯರ ಸುರಕ್ಷತೆಗೆ ಹಾಗೂ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಚಂದ್ರಕಲಾರವರಿಗೆ ಮಂಜುಳಾರವರು ಮನವಿ ಮಾಡಿದರು. 
    ಎಲ್ಲೆಂದರಲ್ಲಿ ಕಸ ಎಸೆಯದಿರಿ,  ನೀವು ಇರುವ ಜಾಗದಲ್ಲಿ ಒಂದೊಂದು ಕಸದ ಬುಟ್ಟಿಗಳನ್ನು ಇಟ್ಟುಕೊಂಡು ಕಸವನ್ನು ಅಲ್ಲಿಗೆ ಹಾಕಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ಹಾಗು ಸೊಳ್ಳೆಗಳಿಂದ ಮುಕ್ತರಾಗಿ ಅರೋಗ್ಯ ರಕ್ಷಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಮಂಜುಳಾರವರು ಸಲಹೆ ನೀಡಿದರು.  ಅಲ್ಲದೆ ವಿದ್ಯಾಭ್ಯಾಸದ ಕಡೆ ಗಮನಹರಿಸಿ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
    ಮೇಲ್ವಿಚಾರಕಿ ಚಂದ್ರಕಲಾ ವಿದ್ಯಾರ್ಥಿನಿಯರಿಗೆ ರಾತ್ರಿ ವೇಳೆ ಮೇಲೆ ಹೋಗಿ ಶೌಚ ಮಾಡಿ ಬರುವುದು ಕಷ್ಟವಾಗಿದೆ.  ಹಾಗಾಗಿ ಕಟ್ಟಡದ ರೂಮಿನ ಪಕ್ಕದಲ್ಲಿ ಕೆಳಗಡೆ  ಶೌಚಾಲಯದ ಅಗತ್ಯವಿದೆ. ವ್ಯವಸ್ಥೆ ಕಲ್ಪಿಸಿ ಕೊಡಬೇಕಾಗಿ ಮನವಿ ಮಾಡಿದರು. 
  ಬಿಜೆಪಿ ಮಹಿಳಾ ಪ್ರಮುಖರಾದ ಆರ್.ಎಸ್ ಶೋಭಾ, ಅನ್ನಪೂರ್ಣ,  ಕವಿತಾ ರಾವ್,  ಉಷಾ, ಪ್ರೇಮ, ಜಯಲಕ್ಷ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.