ಶ್ರೀಘದಲ್ಲೇ ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನ : ಎಚ್. ಡಿ ಕುಮಾರಸ್ವಾಮಿ

ಭದ್ರಾವತಿ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್ ಆವರಣದಲ್ಲಿ ಶನಿವಾರದಿಂದ ಆರಂಭಗೊಂಡಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ  ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿ ಪಾಲ್ಗೊಂಡಿದ್ದರು. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಶ್ರೀಘದಲ್ಲೇ ಪುನಶ್ಚೇತನಗೊಳ್ಳಲಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದರು.
    ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್ ಆವರಣದಲ್ಲಿ ಶನಿವಾರದಿಂದ ಆರಂಭಗೊಂಡಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
    ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಮತ್ತು ಮೈಸೂರು ಮಹಾರಾಜರ ಪರಿಶ್ರಮದ ಫಲವಾಗಿ ಸ್ಥಾಪನೆಗೊಂಡಿರುವ ವಿಐಎಸ್‌ಎಲ್ ಕಾರ್ಖಾನ ಪುನಶ್ಚೇತನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಈ ಸಂಬಂಧ ಮೂರು ಬಾರಿ ಕಾರ್ಖಾನೆಗೆ ಭೇಟಿ ನೀಡಿ ಚರ್ಚಿಸಲಾಗಿದೆ. ಕಾರ್ಖಾನೆಗೆ ಮೊದಲ ಹಂತದಲ್ಲಿ ೫ ಸಾವಿರ ರು. ಕೋಟಿ ಬಂಡವಾಳ ತೊಡಗಿಸಲಾಗುವುದು. ಮುಂದಿನ ಎರಡುವರೆ ತಿಂಗಳೊಳಗೆ ಪುನಶ್ಚೇತನ ಕಾರ್ಯ ಆರಂಭಗೊಳ್ಳಲಿದೆ ಎಂದರು.
    ಕೇಂದ್ರ ಸರ್ಕಾರದ ಆರ್ಥಿಕ ಯೋಜನೆಗಳಲ್ಲಿ ಭದ್ರಾವತಿಗೆ ಅನುಕೂಲವಾಗುವ ರೀತಿಯಲ್ಲಿ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು. ಗ್ಯಾರಂಟಿಗಳ ಬಗ್ಗೆ ಮಾತ್ರ ಮಾತನಾಡದೆ, ರೈತರು ಬೆಳೆದ ಬೆಳೆಗಳಿಗೆ ಉತ್ತಮ ಆರ್ಥಿಕ ಬೆಂಬಲ ನೀಡಬೇಕಾದ ಅಗತ್ಯವಿದೆ. ಮೆಕ್ಕೆಜೋಳಕ್ಕೆ ಬೆಂಬಲ ಇಲ್ಲ, ರಾಜ್ಯ ಸರ್ಕಾರ ಹೆಚ್ಚು ಖರೀದಿಕೇಂದ್ರಗಳನ್ನು ಸಹ ಆರಂಭಿಸಿಲ್ಲ. ಉದ್ಯಮಗಳಿಗೆ ನೀಡುವ ಭೂಮಿಯಲ್ಲಿ ರೈತನೇ ಒಡೆಯನಾಗಬೇಕು ಎಂಬ ವಿಚಾರವನ್ನು ತರಳಬಾಳು ಶ್ರೀಗಳು ತಮ್ಮ `ಬಿಸಿಲು ಬೆಳದಿಂಗಳು' ಕಾಲಂನಲ್ಲಿ ಉಲ್ಲೇಖಿಸಿರುವುದನ್ನು ಸ್ಮರಿಸಿದರು.
    ನಮ್ಮ ಮೂಲ ಸಂಸ್ಕೃತಿ ನಿಧಾನವಾಗಿ ನಶಿಸುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಜನರಿಗೆ ಸುಖ, ಶಾಂತಿ ಮತ್ತು ನೆಮ್ಮದಿ ದೊರೆಯಲಿ ಎಂದರು.