ಮೆಸ್ಕಾಂ ನೌಕರರ ಹೋರಾಟ ಅಂತ್ಯ : ವರ್ಷದ ಮೊದಲ ದಿನ ವೇತನ
ಕಾಯ್ದೆ ಉಲ್ಲಂಘನೆ ಆರೋಪ : ನೌಕರರ ಅಧ್ಯಕ್ಷ ಆತ್ಮಹತ್ಯೆಗೆ ಯತ್ನ
ಭದ್ರಾವತಿಯಲ್ಲಿ ಮೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಸಿ. ಆನಂದ್ ವಿರುದ್ಧ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಮನನೊಂದು ಗುರುವಾರ ಬೆಳಗಿನ ಜಾವ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಇವರನ್ನು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ
ಭದ್ರಾವತಿ : ನಗರದ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ(ಮೆಸ್ಕಾಂ)ದ ನಿರ್ವಹಣೆ ಹಾಗು ಇತರೆ ವಿಭಾಗದ ನೌಕರರು ನಿಗದಿತ ಸಮಯಕ್ಕೆ ವೇತನ ನೀಡುವಂತೆ ಆಗ್ರಹಿಸಿ ಕಳೆದ ೨ ದಿನಗಳಿಂದ ನಡೆಸುತ್ತಿದ್ದ ಹೋರಾಟ ಗುರುವಾರ ಅಂತ್ಯ ಕಂಡಿದೆ.
ಪ್ರತಿ ತಿಂಗಳು ೩೦ರಂದು ವೇತನವಾಗುತ್ತಿದ್ದು, ಆದರೆ ಈ ತಿಂಗಳು ವೇತನವಾಗಿಲ್ಲ. ನೌಕರರಿಗೆ ವೇತನ ಮಂಜೂರಾಗಿದ್ದರು ಸಹ ನೌಕರರ ಖಾತೆಗೆ ಜಮಾ ಮಾಡದೆ ತಡೆ ಹಿಡಿಯಲಾಗಿದೆ ಎಂದು ಆರೋಪಿಸಿ ಜೆಪಿಎಸ್ ಕಾಲೋನಿ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿಗೆ ಮುಂಭಾಗ ನಡೆಸುತ್ತಿದ್ದ ಹೋರಾಟ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾದ ಹಿನ್ನಲೆಯಲ್ಲಿ ಅಂತ್ಯ ಕಂಡಿದೆ. ಎಂದು ತಿಳಿದು ಬಂದಿದೆ.
ಈ ನಡುವೆ ಬುಧವಾರ ಏಕಾಏಕಿ ನೌಕರರು ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ ಆನಂದ್ ವಿರುದ್ಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆತ್ಮಹತ್ಯೆಗೆ ಯತ್ನ :
ನೌಕರರ ಸಂಘದ ಅಧ್ಯಕ್ಷ ಸಿ. ಆನಂದ್ ವಿರುದ್ಧ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಮನನೊಂದು ಗುರುವಾರ ಬೆಳಗಿನ ಜಾವ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಇವರನ್ನು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗುಣಮುಖರಾಗುತ್ತಿದ್ದು, ಮಾಹಿತಿ ತಿಳಿದ ತಕ್ಷಣ ನೌಕರರು ಆಸ್ಪತ್ರೆಗೆ ಭೇಟಿ ಆರೋಗ್ಯ ವಿಚಾರಿಸಿದರು.
ಸಿ. ಆನಂದ್ ವಿರುದ್ಧ ಈ ಹಿಂದೆ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕೆಲವು ತಿಂಗಳುಗಳ ಹಿಂದೆ ಹೋರಾಟ ನಡೆಸಲಾಗಿತ್ತು.
ವರ್ಷದ ಮೊದಲ ದಿನ ವೇತನ:
ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ನಿರಂತರವಾಗಿ ಅಧಿಕಾರಿಗಳೊಂದಿಗೆ ಮಾತಕತೆ ನಡೆಸಿದ ಹಿನ್ನಲೆಯಲ್ಲಿ ಗುರುವಾರ ಮಧ್ಯಾಹ್ನದ ವೇಳೆಗೆ ನೌಕರರ ವೇತನ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ವರ್ಷದ ಮೊದಲ ದಿನ ವೇತನ ಲಭಿಸಿದಂತಾಗಿದೆ.