ಮತ್ತಷ್ಟು ಜನಸ್ನೇಹಿಯಾಗುತ್ತಿರುವ ಪೊಲೀಸ್ ಉಪವಿಭಾಗ : ಯೋಗ ಶಿಬಿರ, ಹೆಲ್ಮೆಟ್ ಜಾಗೃತಿಗಾಗಿ ವಿನೂತನ ಅಭಿಯಾನ

ಭದ್ರಾವತಿ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಆವರಣದಲ್ಲಿ ಬುಧವಾರ ಪೊಲೀಸ್ ಸಿಬ್ಬಂದಿಗಳಿಗಾಗಿ ಯೋಗ ಶಿಬಿರ ಆಯೋಜನೆ ಮಾಡುವ ಮೂಲಕ ಪೊಲೀಸ್ ಉಪ ವಿಭಾಗ ಗಮನ ಸೆಳೆದಿದೆ. 
    ಭದ್ರಾವತಿ : ಇತ್ತೀಚಿನ ಕೆಲವು ವರ್ಷಗಳಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಜನಸ್ನೇಹಿಯಾಗಿ ಪರಿವರ್ತನೆಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಸಮುದಾಯದೊಂದಿಗೆ ಹಲವು ವಿಭಿನ್ನ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಗಮನ ಸೆಳೆಯುತ್ತಿದೆ. ಅದರಲ್ಲೂ ಇಲ್ಲಿನ ಉಪವಿಭಾಗ ಸಾಕಷ್ಟು ಹೆಚ್ಚಿನ ಶ್ರಮವಹಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗುತ್ತಿದೆ. 
    ಸಸಿಗಳನ್ನು ನೆಡುವ ಮೂಲಕ ಪರಿಸರ ಸ್ನೇಹಿಯಾಗಿ, ಶಾಲೆಯಂಗಳದಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವ ಮೂಲಕ ವಿದ್ಯಾರ್ಥಿ ಸ್ನೇಹಿಯಾಗಿ, ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಜೀವ ಸಂಜೀವಿನಿಯಾಗಿ, ಮಕ್ಕಳನ್ನು ಠಾಣೆಯಂಗಳಕ್ಕೆ ಬರಮಾಡಿಕೊಂಡು ಮಕ್ಕಳ ಸ್ನೇಹಿಯಾಗಿ, ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಸುರಕ್ಷತಾ ಸ್ನೇಹಿಯಾಗಿ ಹೀಗೆ ಹಲವು ರೀತಿಯಲ್ಲಿ ಜಿಲ್ಲಾ ಪೊಲೀಸ್ ಸಮುದಾಯಕ್ಕೆ ಹತ್ತಿರವಾಗುತ್ತಿದೆ. 
    ಕೆಲವು ದಿನಗಳ ಹಿಂದೆ ಉಪವಿಭಾಗದ ಉಪಾಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಕಾಶ್ ರಾಥೋಡ್‌ರವರು ಉಪ ವಿಭಾಗದಲ್ಲಿ ಹಲವು ವಿಭಿನ್ನ ಕಾರ್ಯಗಳನ್ನು ಅನುಷ್ಠಾನಕ್ಕೆ ತರುತ್ತಿದ್ದು, ಪ್ರಮುಖವಾಗಿ ನಗರದಲ್ಲಿ ಉಂಟಾಗುತ್ತಿದ್ದ ಸಂಚಾರಿ ದಟ್ಟಣೆಯನ್ನು ಒಂದು ಹಂತದಲ್ಲಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಲು ಪ್ರತಿಯೊಬ್ಬ ಸಹಕಾರ ಅಗತ್ಯವಾಗಿದೆ. 


ಭದ್ರಾವತಿ ಪೊಲೀಸ್ ಉಪವಿಭಾಗದ ಉಪಾಧೀಕ್ಷಕ ಪ್ರಕಾಶ್ ರಾಥೋಡ್‌ರವರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವ ಚಾಲಕರಿಗೆ ಸ್ಥಳದಲ್ಲಿಯೇ ಕಡ್ಡಾಯವಾಗಿ ಹೆಲ್ಮೆಟ್ ಖರೀದಿಸುವಂತೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. 
    ಪೊಲೀಸ್ ಸಿಬ್ಬಂದಿಗಳ ದೈಹಿಕ ಹಾಗು ಮಾನಸಿಕ ಆರೋಗ್ಯ ಉತ್ತಮಗೊಳಿಸುವ ನಿಟ್ಟಿನಲ್ಲಿ ಕ್ರೀಡೆ, ವ್ಯಾಯಾಮ, ಯೋಗ, ಧ್ಯಾನದಂತಹ ಚಟುವಟಿಕೆಗಳಿಗೂ ಪ್ರಕಾಶ್ ರಾಥೋಡ್‌ರವರು ಹೆಚ್ಚಿನ ಗಮನ ನೀಡಿದ್ದು, ಈ ನಿಟ್ಟಿನಲ್ಲಿ ಬುಧವಾರ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಆವರಣದಲ್ಲಿ ಪೊಲೀಸ್ ಸಿಬ್ಬಂದಿಗಳಿಗಾಗಿ ಯೋಗ ಶಿಬಿರ ಆಯೋಜನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. 
    ಈ ನಡುವೆ ವಾಹನ ಚಾಲಕರಿಗೆ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಲು ಗುರುವಾರದಿಂದ ಹೊಸ ಅಭಿಯಾನ ಕೈಗೊಂಡಿದ್ದು, ಸಿಬ್ಬಂದಿಗಳೊಂದಿಗೆ ಅಭಿಯಾನದಲ್ಲಿ ಪಾಲ್ಗೊಂಡಿರುವ ಪ್ರಕಾಶ್ ರಾಥೋಡ್‌ರವರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವ ಚಾಲಕರಿಗೆ ಸ್ಥಳದಲ್ಲಿಯೇ ಕಡ್ಡಾಯವಾಗಿ ಹೆಲ್ಮೆಟ್ ಖರೀದಿಸುವಂತೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಬಹುತೇಕ ಚಾಲಕರು ಸ್ಥಳದಲ್ಲಿಯೇ  ಹೊಸ ಹೆಲ್ಮೆಟ್ ಖರೀದಿಸಿ ಇಲಾಖೆಯ ಅಭಿಯಾನಕ್ಕೆ ಪೂರಕವಾಗಿ ಸ್ಪಂದಿಸಿದರು. 
    ಶಿವಮೊಗ್ಗ ಜಿಲ್ಲಾ ಪೊಲೀಸ್ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನಸ್ನೇಹಿಯಾಗುವ ವಿಶ್ವಾಸ ಸಾರ್ವಜನಿಕರಲ್ಲಿ ಮೂಡುತ್ತಿದ್ದು, ಈ ಮೂಲಕ ಸಮುದಾಯದಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿ ಅಪಘಾತ ಪ್ರಕರಣಗಳು, ಕಾನೂನು ಬಾಹಿರ ಕೃತ್ಯಗಳು ನಿಯಂತ್ರಣಕ್ಕೆ ಬರುವ ನಿರೀಕ್ಷೆ ಎದುರು ನೋಡಲಾಗುತ್ತಿದೆ.