ತ್ಯಾಜ್ಯ ಎಸೆಯದಂತೆ ಸಗಣಿ ಸಾರಿಸಿ, ರಂಗೋಲಿ ಬಿಡಿಸಿ ಜಾಗೃತಿ
ಗಮನ ಸೆಳೆದ ನಗರಸಭೆ ಸಿಬ್ಬಂದಿಗಳು, ಪೌರಕಾರ್ಮಿಕರು
ಆಸ್ಪತ್ರೆ ಮುಂಭಾಗದ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳಲು ಭದ್ರಾವತಿ ನಗರಸಭೆ ಸಿಬ್ಬಂದಿಗಳು ಹಾಗು ಪೌರಕಾರ್ಮಿಕರು ತಮ್ಮದೇ ಆದ ವಿಶಿಷ್ಟ ರೀತಿಯ ಪ್ರಯೋಗದ ಮೂಲಕ ಗಮನ ಸೆಳೆದಿದ್ದಾರೆ.
ಭದ್ರಾವತಿ: ಆಸ್ಪತ್ರೆ ಮುಂಭಾಗದ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳಲು ನಗರಸಭೆ ಸಿಬ್ಬಂದಿಗಳು ಹಾಗು ಪೌರಕಾರ್ಮಿಕರು ತಮ್ಮದೇ ಆದ ವಿಶಿಷ್ಟ ರೀತಿಯ ಪ್ರಯೋಗದ ಮೂಲಕ ಗಮನ ಸೆಳೆದಿದ್ದಾರೆ.
ನಗರಸಭೆ ವಾರ್ಡ್ ನಂ.೨೨ರ ಉಜ್ಜನಿಪುರ ಮುಖ್ಯ ರಸ್ತೆಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಹಲವು ಬಾರಿ ತ್ಯಾಜ್ಯ ಎಸೆಯದಂತೆ ಸಾರ್ವಜನಿಕರಿಗೆ ನಗರಸಭೆ ವತಿಯಿಂದ ಸೂಚಿಸಿದ್ದರೂ ಸಹ ತ್ಯಾಜ್ಯ ಎಸೆಯುವುದು ಮುಂದುವರೆದಿತ್ತು. ಈ ಹಿನ್ನಲೆಯಲ್ಲಿ ನಗರಸಭೆ ಸಿಬ್ಬಂದಿಗಳು ಹಾಗು ಪೌರಕಾರ್ಮಿಕರು ತ್ಯಾಜ್ಯ ಎಸೆಯುವ ಸ್ಥಳವನ್ನು ಸ್ವಚ್ಛಗೊಳಿಸಿ ಸಗಣಿ ಸಾರಿಸಿ, ರಂಗೋಲಿ ಬಿಡಿಸುವ ಮೂಲಕ ಸಾರ್ವಜನಿಕರಲ್ಲಿ ತ್ಯಾಜ್ಯ ಎಸೆಯದಂತೆ ಅರಿವು ಮೂಡಿಸಿ ಸ್ವಚ್ಛತೆ ಕಾಪಾಡಿಕೊಳ್ಳಲು ಮನವಿ ಮಾಡಿದರು. ಒಂದು ವೇಳೆ ಮುಂದಿನ ದಿನಗಳಲ್ಲಿ ತ್ಯಾಜ್ಯ ಎಸೆಯುವುದು ಕಂಡು ಬಂದಲ್ಲಿ ನಗರಸಭೆ ವತಿಯಿಂದ ದಂಡ ವಿಧಿಸುವುದಾಗಿ ಎಚ್ಚರಿಸಿದರು. ಅಲ್ಲದೆ ತ್ಯಾಜ್ಯ ಎಸೆಯದಂತೆ ಫಲಕ ಸಹ ಅಳವಡಿಸಿದರು.
ನಗರಸಭೆ ಸೂಪರ್‌ವೈಸರ್ ಎನ್. ಗೋವಿಂದ, ಸಿಬ್ಬಂದಿಗಳಾದ ಎಸ್. ಉಮಾಬಾಯಿ ಹಾಗು ನಂದಿನಿ ಮತ್ತು ಪೌರಕಾರ್ಮಿಕರು, ಗಂಟೆ ಗಾಡಿಯ ಚಾಲಕರಾದ ವಿಜಯ್, ಅತಿಕ್, ಸಹಾಯಕರಾದ ಸೌಮ್ಯ ಮತ್ತು ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.