ಜನವಸತಿ ಪ್ರದೇಶಕ್ಕೆ ನುಗ್ಗಿ ಸಾಕುನಾಯಿ ಬಲಿ ಪಡೆದ ಚಿರತೆ
ಜನವಸತಿ ಪ್ರದೇಶಕ್ಕೆ ನುಗ್ಗಿದ್ದ ಚಿರತೆ ಮನೆಯ ಅಂಗಳದಲ್ಲಿ ಮಲಗಿದ್ದ ಸಾಕುನಾಯಿ ಕೊಂದು ಹಾಕಿರುವ ಘಟನೆ ಸೋಮವಾರ ರಾತ್ರಿ ಭದ್ರಾವತಿ ತಾಲೂಕಿನ ಗೊಂದಿ ಗ್ರಾಮದಲ್ಲಿ ನಡೆದಿದೆ.
ಭದ್ರಾವತಿ: ಜನವಸತಿ ಪ್ರದೇಶಕ್ಕೆ ನುಗ್ಗಿದ್ದ ಚಿರತೆ ಮನೆಯ ಅಂಗಳದಲ್ಲಿ ಮಲಗಿದ್ದ ಸಾಕುನಾಯಿ ಕೊಂದು ಹಾಕಿರುವ ಘಟನೆ ಸೋಮವಾರ ರಾತ್ರಿ ತಾಲೂಕಿನ ಗೊಂದಿ ಗ್ರಾಮದಲ್ಲಿ ನಡೆದಿದೆ.
ಗೊಂದಿ ಗ್ರಾಮದಲ್ಲಿ ವಾಸವಾಗಿರುವ ಪತ್ರಕರ್ತರಾದ ಗಂಗಾನಾಯ್ಕ ಗೊಂದಿರವರ ತೋಟದ ಮನೆಯ ಅಂಗಳದಲ್ಲಿ ಮಲಗಿದ್ದ ಜರ್ಮನ್ ಶಫರ್ಡ್ ತಳಿಯ ಸಾಕುನಾಯಿ ಮೇಲೆ ರಾತ್ರಿ ಚಿರತೆ ದಾಳಿ ನಡೆಸಿ ಕೊಂದು ಹಾಕಿದ್ದು, ಅಲ್ಲದೆ ನಾಯಿ ಮೃತದೇಹ ತೋಟದಲ್ಲಿ ದೂರಕ್ಕೆ ಎಳೆದುಕೊಂಡು ಹೋಗಿ ತಿಂದು ಹಾಕಿದೆ.
ಈ ಸಂಬಂಧ ಗಂಗಾನಾಯ್ಕರವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಉಪವಲಯ ಅರಣ್ಯಾಧಿಕಾರಿ ಹನುಮಂತನಾಯ್ಕ, ಬೀಟ್ ಫಾರೆಸ್ಟರ್ ಪಿ. ರಾಬರ್ಟ್ ಮತ್ತು ಅರಣ್ಯ ರಕ್ಷಕ(ಗಾರ್ಡ್) ಸಚಿನ್ ಮಾಹಿತಿ ಸಂಗ್ರಹಿಸಿ ತೆರಳಿದ್ದಾರೆ.
ಇತ್ತೀಚೆಗೆ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಅದರಲ್ಲೂ ಜನವಸತಿ ಪ್ರದೇಶಕ್ಕೆ ಚಿರತೆ ನುಗ್ಗಿರುವ ಹಿನ್ನಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ರಾತ್ರಿ ವೇಳೆ ಗ್ರಾಮದಲ್ಲಿ ಸಂಚರಿಸಲು ಗ್ರಾಮಸ್ಥರು ಭಯಪಡುವಂತಾಗಿದೆ. ಅರಣ್ಯ ಇಲಾಖೆ ಈ ವ್ಯಾಪ್ತಿಯಲ್ಲಿ ಚಿರತೆ ಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ಗಂಗಾನಾಯ್ಕ ಗೊಂದಿರವರು ಆಗ್ರಹಿಸಿದ್ದಾರೆ.