ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮ್ಯಾಪಿಂಗ್-ಪ್ರೋಜಿನಿ ಕಾರ್ಯ ಪ್ರಾರಂಭ

ಕಡ್ಡಾಯವಾಗಿ ಮ್ಯಾಪಿಂಗ್ ಮಾಡಿಸಲು ತಹಸೀಲ್ದಾರ್ ಮನವಿ 

ಭದ್ರಾವತಿ ತಾಲೂಕು ದಂಡಾಧಿಕಾರಿಗಳ ಕಛೇರಿಯಲ್ಲಿ ತಹಸೀಲ್ದಾರ್ ಪರುಸಪ್ಪ ಕುರುಬರ ೨೦೦೨ ಮತ್ತು ೨೦೨೫ರ ಮತದಾರರ ಪಟ್ಟಿಯ ಮ್ಯಾಪಿಂಗ್ ಮತ್ತು ಪ್ರೋಜಿನಿ ಕಾರ್ಯ ಕುರಿತು ಮಾಹಿತಿ ನೀಡಿದರು. 
    ಭದ್ರಾವತಿ : ಕೇಂದ್ರ ಚುನಾವಣಾ ಆಯೋಗ ಮುಖ್ಯ ಆಯುಕ್ತರು ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ೧೧೨-ಭದ್ರಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ೨೦೦೨ ಮತ್ತು ೨೦೨೫ರ ಮತದಾರರ ಪಟ್ಟಿಯ ಮ್ಯಾಪಿಂಗ್ ಮತ್ತು ಪ್ರೋಜಿನಿ ಕಾರ್ಯ ಪ್ರಾರಂಭವಾಗಲಿದ್ದು, ಮತದಾರರು ತಮ್ಮ ವ್ಯಾಪ್ತಿಯ ಬಿಎಲ್‌ಓ ಅವರನ್ನು ಸಂಪರ್ಕಿಸಿ ಕಡ್ಡಾಯವಾಗಿ ಮ್ಯಾಪಿಂಗ್ ಮಾಡಿಸಿಕೊಳ್ಳುವಂತೆ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿರುವ ತಹಸೀಲ್ದಾರ್ ಪರುಸಪ್ಪ ಕುರುಬರ ಮನವಿ ಮಾಡಿದರು.
    ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಅವರು,  ಮುಂಬರುವ ದಿನಗಳಲ್ಲಿ (SIಖ-Sಠಿeಛಿiಚಿಟ Iಟಿಣeಟಿsive ಖevisioಟಿ) ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕಾರ್ಯ ಪ್ರಾರಂಭವಾಗಲಿದೆ.  ಇದಕ್ಕೆ ಪೂರಕವಾಗಿ ೧೧೨-ಭದ್ರಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ೨೦೦೨  ಮತ್ತು ೨೦೨೫ರ ಮತದಾರರ ಪಟ್ಟಿಯ ಮ್ಯಾಪಿಂಗ್ ಮತ್ತು ಪ್ರೋಜಿನಿ (ಸಂತತಿ ಸೇರ್ಪಡೆ-೧೮ ವರ್ಷ ಮೇಲ್ಪಟ್ಟ ೪೦ ವರ್ಷದೊಳಗಿನ ಮತದಾರರನ್ನು) ಕಾರ್ಯ ನಡೆಯುತ್ತಿದ್ದು, ೨೦೦೨ರಲ್ಲಿ ಮತದಾರರಪಟ್ಟಿಯಲ್ಲಿರುವ ಮತದಾರರನ್ನು ೨೦೨೫ರ ಮತದಾರರಲ್ಲಿರುವ ಪಟ್ಟಿಯೊಂದಿಗೆ ಗುರುತಿಸಿ ಮ್ಯಾಪಿಂಗ್ ಮತ್ತು ಪ್ರೊಜಿನಿ ಕಾರ್ಯ ನಡೆಸಬೇಕಾಗಿರುತ್ತದೆ ಎಂದರು. 
    ೧೧೨-ಭದ್ರಾವತಿ ವಿಧಾನ ಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ಮತದಾರರು ತಾವು ಮತದಾನ ಮಾಡುವ ಕೇಂದ್ರದಲ್ಲಿ ಬಿ.ಎಲ್.ಓ ಅವರನ್ನು ಭೇಟಿಯಾಗಿ ಪ್ರಸ್ತುತ ತಮ್ಮ ಮತದಾರರ ಗುರುತಿನ ಚೀಟಿಯೊಂದಿಗೆ ೨೦೦೨ರಲ್ಲಿ ನೀವು ಮತದಾನ ಮಾಡಿದ ಗುರುತಿನ ಚೀಟಿ, ಮತದಾನ ಮಾಡಿದ ಮತಕ್ಷೇತ್ರ, ಮತದಾನ ಕೇಂದ್ರ, ಕ್ರಮ ಸಂಖ್ಯೆಯನ್ನು ಸಂಬಂಧಪಟ್ಟ ಬಿ.ಎಲ್.ಓ ಅವರಿಗೆ ತಿಳಿಸಿ ಅಥವಾ ಹಾಜರುಪಡಿಸಿ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕೆಂದು ಕೋರಿದರು.