ಕಳೆದ ೮ ವರ್ಷಗಳಿಂದ ತೆರವುಗೊಳಿಸದಿರುವ ಒತ್ತುವರಿ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಿ

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಸದಸ್ಯ ಎಚ್. ರವಿಕುಮಾರ್ ಆಗ್ರಹ 

ಭದ್ರಾವತಿಯಲ್ಲಿ ಕಳೆದ ೮ ವರ್ಷಗಳಿಂದ ಡಾ. ರಾಜಕುಮಾರ್ ರಸ್ತೆ (ಬಿ.ಎಚ್. ರಸ್ತೆ) ಅಗಲೀಕರಣ ಕಾರ್ಯಕ್ಕೆ ತೊಡಕಾಗಿರುವ ಒತ್ತುವರಿ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಂಗಳವಾರ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಸದಸ್ಯ ಎಚ್. ರವಿಕುಮಾರ್ ಆಗ್ರಹಿಸಿ ತಹಸೀಲ್ದಾರ್ ಪರುಸಪ್ಪ ಕುರುಬರ ಅವರಿಗೆ ಮನವಿ ಸಲ್ಲಿಸಿದ್ದಾರೆ. 
    ಭದ್ರಾವತಿ: ನಗರದಲ್ಲಿ ಕಳೆದ ೮ ವರ್ಷಗಳಿಂದ ಡಾ. ರಾಜಕುಮಾರ್ ರಸ್ತೆ (ಬಿ.ಎಚ್. ರಸ್ತೆ) ಅಗಲೀಕರಣ ಕಾರ್ಯಕ್ಕೆ ತೊಡಕಾಗಿರುವ ೯ ಕಟ್ಟಡಗಳನ್ನು ಇದುವರೆಗೂ ತೆರವುಗೊಳಿಸಿಲ್ಲ. ಇದರಿಂದಾಗಿ ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ಅಲ್ಲದೆ ಭವಿಷ್ಯದ ದೃಷ್ಟಿಯಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಕಟ್ಟಡಗಳನ್ನು ತೆರವುಗೊಳಿಸಬೇಕೆಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್. ರವಿಕುಮಾರ್ ಮಂಗಳವಾರ ತಹಸೀಲ್ದಾರ್ ಪರುಸಪ್ಪ ಕುರುಬರ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. 
    ೧೧.೧೦.೨೦೧೭ ರಂದು ತಾಲ್ಲೂಕು ಕಛೇರಿ ಸಭಾಂಗಾಣದಲ್ಲಿ ನಗರಸಭೆ, ಲೋಕೋಪಯೋಗಿ ಹಾಗು ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪದ್ಮ ನಿಲಯ ಹೋಟೇಲ್ ಸೇರಿದಂತೆ ಇತರೆ ಒತ್ತುವರೆಯಾಗಿರುವ ೯ ಕಟ್ಟಡಗಳನ್ನು ತೆರವುಗೊಳಿಸುವಂತೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಇದುವರೆಗೂ ತೆರವಾಗದೆ ಉಳಿದಿದ್ದು ತಕ್ಷಣ ತೆರುವು ಕಾರ್ಯ ಕೈಗೊಳ್ಳಬೇಕು.  ಪದ್ಮನಿಲಯ ಹೋಟೇಲ್ ಮುಂಭಾಗದಲ್ಲಿ ನಿಲುಗಡೆಗೊಳ್ಳುವ ವಾಹನಗಳಿಂದ ಪಾದಚಾರಿಗಳಿಗೆ, ವಾಹನ ಸವಾರರಿಗೆ ಮತ್ತು ಅದರಲ್ಲೂ ವಿಶೇಷವಾಗಿ ಹಿರಿಯ ನಾಗರೀಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ಅಳಲು ತೋರ್ಪಡಿಸಿದ್ದಾರೆ. 
  ಲೋಕೋಪಯೋಗಿ ಇಲಾಖೆಯಿಂದ ತೆರುವು ಕಾರ್ಯಕ್ಕೆ ದೃಢೀಕೃತವಾಗಿರುವ  ಪದ್ಮನಿಲಯ ಸೇರಿದಂತೆ ೯ ಕಟ್ಟಗಳನ್ನು ತಕ್ಷಣ ತೆರವುಗೊಳಿಸುವ ಮೂಲಕ ಎದುರಾಗಿರುವ ಸಮಸ್ಯೆಗಳನ್ನು ಬಗೆಹಿಸುವಂತೆ ಈ ಹಿಂದೆ ತಹಸೀಲ್ದಾರ್ ಸಮ್ಮುಖದಲ್ಲಿ ನಡೆದಿರುವ ಸಭೆ ಹಾಗು ಕೈಗೊಂಡಿರುವ ಕ್ರಮಗಳ ಕುರಿತ ದಾಖಲೆಗಳ ಸಮೇತ ರವಿಕುಮಾರ್ ಕೋರಿದ್ದಾರೆ.