ಜ.೬ರಂದು ಪಡಿತರ ವಿತರಕರ ಕಾರ್ಯಕ್ರಮ ಆಯೋಜನೆ : ವಿವಿಧ ಬೇಡಿಕೆಗಳನ್ನು ಈಡೇರಿಸಿ
ಸಿದ್ದಲಿಂಗಯ್ಯ
ಭದ್ರಾವತಿ : ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವಿವಿಧ ಬೇಡಿಕೆಗಳನ್ನು ಜ.೬ರೊಳಗೆ ಈಡೇರಿಸುವ ಮೂಲಕ ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.
ರಾಜ್ಯದಲ್ಲಿ ಸುಮಾರು ೨೦ ಸಾವಿರ ಪಡಿತರ ವಿತರಕರಿದ್ದು, ಇವರಿಗೆ ಕಮೀಷನ್ ಹಣ ಡಿಬಿಟಿ ಮುಖಾಂತರ ನೀಡುವುದು. ಪಡಿತರ ವಿತರಣೆಗೆ ಏಕರೂಪ ತಂತ್ರಜ್ಞಾನ ಒದಗಿಸಿ ಸರ್ವರ್ ಸಮಸ್ಯೆ ಬಗೆಹರಿಸುವುದು. ಉಚಿತವಾಗಿ ಕಂಪ್ಯೂಟರ್, ಬಯೋಮೆಟ್ರಿಕ್ ಯಂತ್ರ ಹಾಗು ಪ್ರಿಂಟರ್ ಮಿಷನ್ ನೀಡುವುದು. ಉಪ್ಪು, ಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಬೆಲ್ಲ ಹಾಗು ವಿವಿಧ ಬಗೆಯ ಧಾನ್ಯಗಳನ್ನು ಪಡಿತರ ಚೀಟಿದಾರರಿಗೆ ನೀಡುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದ ಅಪೌಷ್ಠಿಕತೆ ತೊಡೆದು ಹಾಕಬಹುದಾಗಿದ್ದು, ಉಳಿದಂತೆ ೧೦ ಕೆ.ಜಿ ಅಕ್ಕಿ ನೀಡುವುದನ್ನು ಮುಂದುವರೆಸುವುದು. ಬೆಂಗಳೂರು ಟೌನ್ ಹಾಲ್‌ನಲ್ಲಿ ಜ.೬ರಂದು ಬೆಳಿಗ್ಗೆ ೧೦ ಗಂಟೆಗೆ ಈ ಸಂಬಂಧ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು ಹಾಗು ರಾಜ್ಯ ಆಹಾರ ಸಚಿವರು ಭಾಗವಹಿಸುವ ಹಿನ್ನಲೆಯಲ್ಲಿ ಬೇಡಿಕೆಗಳನ್ನು ತಕ್ಷಣ ಈಡೇರಿಸುವುದು.
ಜಿಲ್ಲೆಯ ಪಡಿತರ ವಿತರಕರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಮನವಿ ಮಾಡಿದ್ದಾರೆ.
