ದರೋಡೆಗೆ ಸಂಚು ರೂಪಿಸಿದ್ದ ೫ ಮಂದಿಗೆ ೧೦ ವರ್ಷ ಜೈಲು ಶಿಕ್ಷೆ
ಎರಡು ಪ್ರತ್ಯೇಕ ಕಾಯ್ದೆಯಡಿ ತಲಾ ೮೦ ಸಾವಿರ ರು. ದಂಡ
ಭದ್ರಾವತಿ ಗೊಂದಿ ಕೈಮರದ ಬಳಿ ದರೋಡೆಗೆ ಸಂಚು ರೂಪಿಸಿ ಸಿಕ್ಕಿ ಬಿದ್ದು ೧೦ ವರ್ಷ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿರುವ ೫ ಮಂದಿ.
ಭದ್ರಾವತಿ: ಸುಮಾರು ೭ ವರ್ಷಗಳ ಹಿಂದೆ ತಾಲೂಕಿನ ಗೊಂದಿ ಕೈಮರದ ಬಳಿ ದರೋಡೆಗೆ ಸಂಚು ರೂಪಿಸಿದ್ದ ಐದು ಮಂದಿಗೆ ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೧೦ ವರ್ಷ ಕಠಿಣ ಜೈಲು ಶಿಕ್ಷೆ ಹಾಗು ದಂಡ ವಿಧಿಸಿ ತೀರ್ಪು ನೀಡಿದೆ.
ಶಿವಮೊಗ್ಗ ಟಿಪ್ಪುನಗರದ ಇಮ್ರಾನ್ ಷರೀಫ್(೩೩), ಹನೀಫುಲ್ಲಾ ಖಾನ್(೨೨) ಹಾಗೂ ಕಡೇಕಲ್ಲಿನ ಅಬೀದ್ ಖಾನ್(೩೫), ಮುಜಾಹಿದ್(೪೦) ಮತ್ತು ನಸ್ರುಲ್ಲಾ (೨೯) ಶಿಕ್ಷೆಗೊಳಗಾದವರು.
ಈ ಐದು ಮಂದಿ ಫೆ.೧, ೨೦೧೯ರ ರಾತ್ರಿ ಮರದ ದೊಣ್ಣೆ, ಚಾಕು, ಖಾರದ ಪುಡಿ ಮತ್ತು ಕಬ್ಬಿಣದ ರಾಡ್‌ಗಳನ್ನು ಬಳಸಿ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನಲೆಯಲ್ಲಿ ದಾಳಿ ನಡೆಸಿದ ವೇಳೆ ಓರ್ವ ತಪ್ಪಿಸಿಕೊಂಡಿದ್ದನು. ಉಳಿದವರನ್ನು ಬಂಧಿಸಿದ್ದ ಪೊಲೀಸರು ಗ್ರಾಮಾಂತರು ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ ೩೯೯ ಮತ್ತು ೪೦೨ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಅಂದಿನ ತನಿಖಾಧಿಕಾರಿಯಾಗಿದ್ದ ಠಾಣಾ ಸಹಾಯಕ ನಿರೀಕ್ಷಕ ಹುಚ್ಚಪ್ಪ ನ್ಯಾಯಾಲಯಕ್ಕೆ ೫ ಮಂದಿ ವಿರುದ್ದ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ೫ ಮಂದಿಗೆ ಐಪಿಸಿ ಕಲಂ ೩೯೯ರ ಅಡಿಯಲ್ಲಿ ೧೦ ವರ್ಷ ಕಠಿಣ ಸಜೆ ಮತ್ತು ತಲಾ ೫೦,೦೦೦ ರು. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದ್ದಲ್ಲಿ ೫ ತಿಂಗಳು ಸಾದಾ ಸೆರೆವಾಸ ಹಾಗೆಯೇ ಐಪಿಸಿ ಕಲಂ ೪೦೨ರ ಅಡಿಯಲ್ಲಿ ೭ ವರ್ಷ ಕಠಿಣ ಸಜೆ ಮತ್ತು ತಲಾ ೩೦,೦೦೦ ರು. ದಂಡ ಒಂದು ವೇಳೆ ದಂಡ ಪಾವತಿಸಲು ವಿಫಲರಾದರೆ ೩ ತಿಂಗಳು ಸಾದಾ ಸಜೆ ಅನುಭವಿಸತಕ್ಕದ್ದು ಎಂದು ಜ.೩ರಂದು ತೀರ್ಪು ನೀಡಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಪಿ. ರತ್ನಮ್ಮ ವಾದ ಮಂಡಿಸಿದ್ದರು.