ಚಾಕುವಿನಿಂದ ಬೆದರಿಸಿ ಚಿನ್ನದ ಮಾಂಗಲ್ಯ ಸರ ದೋಚಿದ್ದ ಪ್ರಕರಣ
ನ್ಯೂಟೌನ್ ಪೊಲೀಸರ ಯಶಸ್ವಿ ಕಾರ್ಯಾಚರಣೆ, ಓರ್ವನ ಸೆರೆ
ಭದ್ರಾವತಿ ನಗರದ ಜೇಡಿಕಟ್ಟೆಯಲ್ಲಿ ಗೃಹಿಣಿಯೊಬ್ಬರನ್ನು ಚಾಕುವಿನಿಂದ ಬೆದರಿಸಿ ಚಿನ್ನದ ಮಾಂಗಲ್ಯ ಸರ ದೋಚಿದ್ದ ಪ್ರಕರಣವನ್ನು ನ್ಯೂಟೌನ್ ಪೊಲೀಸ್ ಠಾಣೆ ಸಿಬ್ಬಂದಿಗಳು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಓರ್ವನನ್ನು ಬಂಧಿಸಿ ಸುಮಾರು ೧.೫೦ ಲಕ್ಷ ರು. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಭದ್ರಾವತಿ : ನಗರದ ಜೇಡಿಕಟ್ಟೆಯಲ್ಲಿ ಗೃಹಿಣಿಯೊಬ್ಬರನ್ನು ಚಾಕುವಿನಿಂದ ಬೆದರಿಸಿ ಚಿನ್ನದ ಮಾಂಗಲ್ಯ ಸರ ದೋಚಿದ್ದ ಪ್ರಕರಣವನ್ನು ನ್ಯೂಟೌನ್ ಪೊಲೀಸ್ ಠಾಣೆ ಸಿಬ್ಬಂದಿಗಳು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜ.೫ ರಂದು ಬೆಳಿಗ್ಗೆ ಜೇಡಿಕಟ್ಟೆಯಲ್ಲಿ ಸುಮಾರು ೨೩ ವರ್ಷ ವಯಸ್ಸಿನ ಭಾಗ್ಯ ಎಂಬ ಗೃಹಿಣಿ ಮನೆಯ ಬಾಗಿಲನ್ನು ತೊಳೆಯಲು ಮನೆಯ ಪಕ್ಕದಲ್ಲಿರುವ ಡ್ರಮ್ ನಿಂದ ನೀರನ್ನು ತೆಗೆದುಕೊಳ್ಳಲು ಹೋದಾಗ ಯಾರೋ ಒಬ್ಬ ವ್ಯಕ್ತಿ ತನ್ನ ಕೈಯಲ್ಲಿ ಚಾಕುವನ್ನು ಹಿಡಿದುಕೊಂಡು ಬಂದು ಬೆದರಿಸಿ ಸುಮಾರು ೫೦,೦೦೦ ರು. ಮೌಲ್ಯದ ಬಂಗಾರದ ಎರಡು ತಾಳಿ ಮತ್ತು ಒಂದು ಲಕ್ಷ್ಮೀ ತಾಳಿ ಇರುವ ಮತ್ತು ಬಂಗಾರದ ೪ ಗುಂಡುಗಳಿರುವ ಕರಿಮಣಿ ಮಾಂಗಲ್ಯ ಸರ ದೋಚಿಕೊಂಡು ಪರಾರಿಯಾಗಿದ್ದನು. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ನೂತನ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ. ನಿಖಿಲ್ ಹಾಗು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ.ಜಿ ಕಾರಿಯಪ್ಪ ಮತ್ತು ರಮೇಶ್ ಮಾರ್ಗದರ್ಶನದಲ್ಲಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್, ಪೊಲೀಸ್ ವೃತ್ತ ನಿರೀಕ್ಷಕರಾದ ಕೆ. ನಾಗಮ್ಮ.ರವರ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಟಿ. ರಮೇಶ್ ರವರ ನೇತೃತ್ವದಲ್ಲಿ ಉಪ ನಿರೀಕ್ಷಕಿ ಕವಿತಾ, ಸಹಾಯಕ ನಿರೀಕ್ಷಕ ಟಿ.ಪಿ.ಮಂಜಪ್ಪ, ಸಿಬ್ಬಂದಿಗಳಾದ ಆದರ್ಶ, ಬಿ.ಪಿ ರವಿಕಿರಣ್, ಪ್ರಸನ್ನ ಮತ್ತು ಜಿ.ಕೆ ಪ್ರಕಾಶ ಅವರನ್ನೊಳಗೊಂಡ ತನಿಖಾ ತಂಡ ರಚಸಿಲಾಗಿತ್ತು.
ತನಿಖಾ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಸಪಾಳ್ಯ ಗ್ರಾಮದ ಬಿ. ಪ್ರತಾಪ್(೨೫)ನನ್ನು ಬಂಧಿಸಲಾಗಿದ್ದು, ಈತನಿಂದ ಕೃತ್ಯಕ್ಕೆ ಬಳಸಿದ ಒಂದು ಸಣ್ಣ ಚಾಕು, ೭೫೦೦೦ ರು. ಬೆಲೆಯ ಹೀರೋ ಸ್ಪಲೆಂಡರ್ ಪ್ಲಸ್ ಬೈಕ್ ಹಾಗು ೭೫೦೦೦ ರು. ಬೆಲೆಯ ಬಂಗಾರದ ಎರೆಡು ತಾಳಿ ಮತ್ತು ಒಂದು ಲಕ್ಷ್ಮಿ ತಾಳಿ ಇರುವ ಮತ್ತು ಬಂಗಾರದ ೪ ಗುಂಡುಗಳಿರುವ ಕರಿಮಣಿ ಮಾಂಗಲ್ಯಸರ ಸೇರಿ ಒಟ್ಟು ಅಂದಾಜು ಮೌಲ್ಯ ೧,೫೦,೦೦೦ ರು. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ತನಿಖಾ ತಂಡದ ಉತ್ತಮ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ. ನಿಖಿಲ್ ಪ್ರಶಂಸಿಸಿ ಅಭಿನಂದಿಸಿದ್ದಾರೆ.