ಗೃಹರಕ್ಷಕದಳದವರು ತಮಗೆ ವಹಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ವಿಶ್ವಾಸ ಉಳಿಸಿಕೊಳ್ಳಿ : ಪ್ರಕಾಶ್ ರಾಥೋಡ್
ಘಟಕಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಗೃಹರಕ್ಷಕದಳ ಕಛೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ
ಭದ್ರಾವತಿ ನ್ಯೂಟೌನ್ ಗೃಹರಕ್ಷಕ ದಳ ಕಛೇರಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ : ಗೃಹರಕ್ಷಕ ದಳದವರು ತಮಗೆ ವಹಿಸುವ ಜವಾಬ್ದಾರಿಯನ್ನು ಇನ್ನೂ ಹೆಚ್ಚಿನ ಶಿಸ್ತು, ಬದ್ಧತೆಯಿಂದ ನಿರ್ವಹಿಸುವ ಮೂಲಕ ತಮ್ಮ ಮೇಲೆ ಹೊಂದಿರುವ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕೆಂದು ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಕರೆ ನೀಡಿದರು.
ಅವರು ನ್ಯೂಟೌನ್ ಗೃಹರಕ್ಷಕ ದಳ ಕಛೇರಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪೊಲೀಸರು ಮತ್ತು ಗೃಹರಕ್ಷಕ ದಳ ಇಬ್ಬರ ನಡುವೆ ಸ್ವಲ್ಪ ವ್ಯತ್ಯಾಸವಿರಬಹುದು. ಪೊಲೀಸರಿಗೆ ಸದಾ ಗೃಹರಕ್ಷಕ ದಳದ ನೆರವಿನ ಅಗತ್ಯವಿದೆ ಎಂಬುದನ್ನು ನನ್ನ ವೃತ್ತಿ ಬದುಕಿನಲ್ಲಿ ಕಂಡು ಕೊಂಡಿದ್ದೇನೆ. ಈ ಹಿನ್ನಲೆಯಲ್ಲಿ ಉಪಾಧೀಕ್ಷಕನಾಗಿ ಕರ್ತವ್ಯ ವಹಿಸಿಕೊಂಡ ನಂತರ ಪೊಲೀಸರ ಕರ್ತವ್ಯದಲ್ಲಿ ಹೆಚ್ಚಿನ ಪಾಲು ಗೃಹರಕ್ಷಕ ದಳದವರಿಗೆ ನೀಡುತ್ತಿದ್ದೇನೆ. ಕೆಲವು ಸಂದರ್ಭದಲ್ಲಿ ಗೃಹರಕ್ಷಕ ದಳದವರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಇದು ಅನಿವಾರ್ಯವಾಗಿದ್ದು, ಯಾವುದೇ ಕಾರಣಕ್ಕೂ ಹಿಂದೆ ಸರಿಯದೆ ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸಬೇಕೆಂದರು.
ಗಣ ರಾಜ್ಯೋತ್ಸವದ ಮಹತ್ವ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಭಾಷೆ, ಜಾತಿ, ಮತ, ಪಂಥಗಳನ್ನು ಮೀರಿ ಎಲ್ಲರನ್ನು ಒಗ್ಗೂಡಿಸಿ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ನಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಮುನ್ನಡೆಯಬೇಕೆಂದರು.
ಘಟಕಾಧಿಕಾರಿ ಜಗದೀಶ್ ಮಾತನಾಡಿ, ಇದುವರೆಗೂ ಯಾವುದೇ ಪೊಲೀಸ್ ಉಪಾಧೀಕ್ಷಕರು ನಮ್ಮ ಕಛೇರಿ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಮೊದಲ ಬಾರಿಗೆ ಉಪಾಧೀಕ್ಷಕರು ಬಂದಿರುವುದು ಗೃಹರಕ್ಷಕ ದಳದವರಿಗೆ ಹೆಚ್ಚಿನ ಸಂತೋಷವನ್ನುಂಟು ಮಾಡಿದೆ. ಉಪಾಧೀಕ್ಷಕರು ಗೃಹರಕ್ಷಕ ದಳದವರ ಮೇಲೆ ಹೊಂದಿರುವ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇವೆ ಎಂದರು.
ಮಾಜಿ ಪ್ಲಟೂನ್ ಕಮಾಂಡರ್ ರಾಜಣ್ಣ, ಹಿರಿಯ ಅಧಿಕಾರಿ ವೈದ್ಯ ಡಾ. ರವೀಂದ್ರನಾಥ ಕೋಠಿ, ನಾಗೇಂದ್ರನಾಯ್ಕ, ಕೃಷ್ಣೋಜಿ ಮತ್ತು ಲಕ್ಷ್ಮಣಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.