ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ವರ್ತನೆಗೆ ಬಿಜೆಪಿ ಯುವ ಮೋರ್ಚಾ ಖಂಡನೆ
ಪ್ರತಿಭಟನೆ, ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ
ವಿಧಾನಮಂಡಲದ ವಿಶೇಷ ಅಧಿವೇಶನ ಸಂದರ್ಭದಲ್ಲಿ ರಾಜ್ಯಪಾಲರ ಕಡೆಗೆ ಕೈ ತೋರಿಸಿ ಅವಮಾನಕಾರಿ ವರ್ತನೆ ತೋರಿರುವ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಮಂಗಳವಾರ ಭದ್ರಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ತಹಶೀಲ್ದಾರ್ ಪರುಸಪ್ಪ ಕುರುಬರರವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ವಿಧಾನಮಂಡಲದ ವಿಶೇಷ ಅಧಿವೇಶನ ಸಂದರ್ಭದಲ್ಲಿ ರಾಜ್ಯಪಾಲರ ಕಡೆಗೆ ಕೈ ತೋರಿಸಿ ಅವಮಾನಕಾರಿ ವರ್ತನೆ ತೋರಿರುವ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಮಂಗಳವಾರ ಬಿಜೆಪಿ ಯುವ ಮೋರ್ಚಾ ವತಿಯಿಂದ ತಹಶೀಲ್ದಾರ್ ಪರುಸಪ್ಪ ಕುರುಬರರವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ ಮತ್ತು ಹೊಳೆಹೊನ್ನೂರು ಯುವ ಮೋರ್ಚಾ ಮಂಡಲ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಬಿ.ಕೆ ಹರಿಪ್ರಸಾದ್ ವರ್ತನೆಯಿಂದ ರಾಜ್ಯದ ಜನರು ತಲೆತಗ್ಗಿಸುವಂತಾಗಿದೆ. ಹಿರಿಯ ಮುಖಂಡರಾದ ಹರಿಪ್ರಸಾದ್‌ರವರು ಇತರರಿಗೆ ಮಾದರಿಯಾಗಬೇಕು. ಪರಿಷತ್ ಗೌರವಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳಬಾರದು. ಇವರ ವರ್ತನೆಯನ್ನು ಯುವ ಮೋರ್ಚಾ ಖಂಡಿಸುವ ಜೊತೆಗೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸುತ್ತದೆ ಎಂದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಬಿ ಅಶೋಕ್ ನಾಯ್ಕ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಹೊಳೆಹೊನ್ನೂರು ಮಂಡಲ ಅಧ್ಯಕ್ಷ ಮಲ್ಲೇಶ್ ಹಾಗೂ ಯುವ ಮೋರ್ಚಾರಾದ ಅಧ್ಯಕ್ಷರಾದ ಧನುಷ್ ಬೋಸ್ಲೆ ಹಾಗೂ ಕಿರಣ್ ಪಟೇಲ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಶ್ರೀನಿವಾಸ, ಪ್ರದೀಪ್, ಹನುಮಂತ, ಪಟೇಲ್, ರಮೇಶ್ ಮತ್ತು ಲಿಖಿತ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.