ಸಿರಿಗೆರೆ ಮಠದಿಂದ ಧಾರ್ಮಿಕ, ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ : ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ

ಭದ್ರಾವತಿ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್ ಆವರಣದಲ್ಲಿ ಶನಿವಾರದಿಂದ ಆರಂಭಗೊಂಡಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ಮೊದಲ ದಿನದ ಕಾರ್ಯಕ್ರಮ ನಾಡಗೀತೆಯೊಂದಿಗೆ ಆರಂಭಿಸಲಾಯಿತು. 
    ಭದ್ರಾವತಿ: ಸಿರಿಗೆರೆ ಮಠವು ಧಾರ್ಮಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ನಾಡಿಗೆ ತನ್ನದೇ ಆದ ಮಹತ್ವದ ಕೊಡುಗೆ ನೀಡಿದೆ. ಅಲ್ಲದೆ ರೈತರ ನೆರವಿಗೆ ಮುಂದಾಗಿ ಹಲವು ಯೋಜನೆ ಜಾರಿಗೊಳಿಸಿದೆ ಎಂದು ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹೇಳಿದರು.
    ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್ ಆವರಣದಲ್ಲಿ ಶನಿವಾರದಿಂದ ಆರಂಭಗೊಂಡಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ಮೊದಲ ದಿನದ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
    ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಹಲವು ಯೋಜನೆಗಳನ್ನು ಶ್ರೀಮಠದಿಂದ ಕೈಗೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿಗಳು ಬಜೆಟ್ ಮಂಡನೆ ವೇಳೆ ಮಠಮಾನ್ಯಗಳಿಗೆ ಅನುದಾನ ನೀಡುವ ಬದಲು ಸಿರಿಗೆರೆ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ಅದರ ಫಲವಾಗಿ ೨೫ ಕೋಟಿ ರೂ. ಅನುದಾನ ಮಂಜೂರಾಗಿದ್ದು, ಭರಮಸಾಗರ, ಹಳೇಬೀಡು ಹಾಗೂ ಜಗಳೂರು ಏತನೀರಾವರಿ ಯೋಜನೆಗಳಿಗೆ ಹಣ ಮಂಜೂರು ಮಾಡಿರುವುದಕ್ಕಾಗಿ ಶ್ರೀಗಳು ಕೃತಜ್ಞತೆ ಸಲ್ಲಿಸಿದರು.
    ಹುಣ್ಣಿಮೆ ಮಹೋತ್ಸವದ ಖರ್ಚಿನ ಉಳಿತಾಯ ಹಾಗೂ ಶ್ರೀಮಠದಿಂದ ಒಟ್ಟು ೫ ಕೋಟಿ ರೂ. ನೆರವು ನೀಡುವ ಭರವಸೆ ನೀಡಿದ ಶ್ರೀಗಳು, ಫೆಬ್ರವರಿ ೧ರಂದು ನಡೆಯುವ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಪುನರ್‌ಸ್ಥಾಪನೆಗೆ ಕುಮಾರಸ್ವಾಮಿ ಅವರು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.
    ಸಿರಿಗೆರೆಯಿಂದ ಭದ್ರಾವತಿಗೆ ಆಗಮಿಸುವ ವೇಳೆ ಯಾವುದೇ ಆಯಾಸವಾಗಿಲ್ಲವೆಂದು ಹೇಳಿದ ಶ್ರೀಗಳು, ಯುವಕರು ಬೈಕ್ ರ್‍ಯಾಲಿ ನಡೆಸುವಾಗ ಶಿಸ್ತು ಪಾಲಿಸಬೇಕು, ಮದ್ಯಪಾನದಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು. ಹಿಂದಿನ ದಿನಗಳಲ್ಲಿ ಹುಣ್ಣಿಮೆ ನಡೆಯುವ ಸ್ಥಳದಲ್ಲಿ ಕಸ ಹೆಚ್ಚಾಗಿದ್ದರೂ, ಈ ಬಾರಿ ಮಹೋತ್ಸವದ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡಿ ಮನಸೆಳೆಯುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.