ಸೂಡಾ ನೂತನ ಸದಸ್ಯರಾಗಿ ಪ್ರಾನ್ಸಿಸ್, ಅರುಣಕುಮಾರಿ : ಉತ್ತಮವಾಗಿ ಕಾರ್ಯನಿರ್ವಹಿಸಿ
ಗೃಹ ಕಛೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದ ಶಾಸಕ ಬಿ.ಕೆ ಸಂಗಮೇಶ್ವರ್
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಸದಸ್ಯರಾಗಿ ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಪ್ರಾನ್ಸಿಸ್ ಮತ್ತು ಅರುಣಕುಮಾರಿ ಅವರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ತಮ್ಮ ಗೃಹ ಕಛೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ಭದ್ರಾವತಿ : ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಇಬ್ಬರು ನೂತನ ಸದಸ್ಯರನ್ನು ವಿಧಾನಸಭಾ ಕ್ಷೇತ್ರದಿಂದ ನಾಮನಿರ್ದೇಶನಗೊಳಿಸಿದ್ದು, ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಲತಾ ಅಧಿಸೂಚನೆ ಹೊರಡಿಸಿದ್ದಾರೆ.
ನಗರಸಭೆ ವ್ಯಾಪ್ತಿಯ ನ್ಯೂಕಾಲೋನಿ, ಬೆಣ್ಣೆ ಸರ್ಕಲ್, ಶ್ರೀ ರಾಮೇಶ್ವರ ದೇವಸ್ಥಾನ ಸಮೀಪದ ನಿವಾಸಿ, ನಗರಸಭೆ ಮಾಜಿ ಸದಸ್ಯ ಪ್ರಾನ್ಸಿಸ್ ಹಾಗು ಹಳೇನಗರದ ದೊಡ್ಡ ಕುರುಬರ ಬೀದಿ ನಿವಾಸಿ ಕೇಸರಿಪಡೆ ಬಿ.ಆರ್ ಗಿರೀಶ್‌ರವರ ಪತ್ನಿ ಅರುಣಕುಮಾರಿ ಅವರನ್ನು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಲಾಗಿದೆ.
ನೂತನ ನಾಮನಿರ್ದೇಶನ ಸದಸ್ಯರನ್ನು ತಮ್ಮ ಗೃಹ ಕಛೇರಿಯಲ್ಲಿ ಸನ್ಮಾನಿಸಿ ಅಭಿನಂದಿಸುವ ಜೊತೆಗೆ ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಮೂಲಕ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕೆಂದರು.
ನೂತನ ಸದಸ್ಯರಾದ ಪ್ರಾನ್ಸಿಸ್ ಮತ್ತು ಅರುಣಕುಮಾರಿ ಸದಸ್ಯರಾಗಿ ಆಯ್ಕೆಯಾಗಲು ಕಾರಣಕರ್ತರಾದ ಶಾಸಕರಿಗೆ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.
ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ನಗರಸಭೆ ಸದಸ್ಯ ಸುದೀಪ್ ಕುಮಾರ್, ಮುಖಂಡರಾದ ಕೇಸರಿಪಡೆ ಗಿರೀಶ್, ಎಸ್. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.