ಹಿರಿಯ ರಾಜಕೀಯ ಮುತ್ಸದ್ದಿ, ಹೋರಾಟಗಾರ ಡಿ.ಸಿ ಮಾಯಣ್ಣರಿಗೆ ಉನ್ನತ ನಾಗರೀಕ ಪ್ರಶಸ್ತಿ ನೀಡಿ
ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಅಭಿಮಾನಿಗಳಿಂದ ಆಗ್ರಹ
ಭದ್ರಾವತಿಯಲ್ಲಿ ಕಾಮ್ರೇಡ್ ಡಿ.ಸಿ ಮಾಯಣ್ಣ ಅಭಿಮಾನಿಗಳ ಸಂಘದಿಂದ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅಭಿಮಾನಿಗಳು ಡಿ.ಸಿ ಮಾಯಣ್ಣ ಭಾವಚಿತ್ರ ಹಿಡಿದು ಉನ್ನತ ನಾಗರೀಕ ಪ್ರಶಸ್ತಿ ನೀಡಲು ಆಗ್ರಹಿಸಿದರು.
ಭದ್ರಾವತಿ: ಕ್ಷೇತ್ರದ ದಕ್ಷ ಮತ್ತು ಪ್ರಾಮಾಣಿಕ ಹೋರಾಟಗಾರರು, ಹಿರಿಯ ರಾಜಕೀಯ ಮುತ್ಸದ್ದಿ ಹಾಗು ಕಾರ್ಮಿಕ ಮುಖಂಡರಾದ ಕಾಮ್ರೇಡ್ ಡಿ.ಸಿ ಮಾಯಣ್ಣನವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉನ್ನತ ನಾಗರೀಕ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಮೂಲಕ ಸೂಕ್ತ ಗೌರವ ನೀಡಬೇಕೆಂದು ಕಾಮ್ರೇಡ್ ಡಿ.ಸಿ ಮಾಯಣ್ಣ ಅಭಿಮಾನಿಗಳ ಸಂಘದ ಪ್ರಧಾನ ಸಂಚಾಲಕ ಬಿ.ಎನ್ ರಾಜು ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಪಿಐ ರಾಜ್ಯ ಮಂಡಳಿ ಸದಸ್ಯರಾದ ಮಾಯಣ್ಣನವರ ಆರೋಗ್ಯದಲ್ಲಿ ಇತ್ತೀಚೆಗೆ ಏರುಪೇರಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಇವರು ಬದುಕುಳಿಯುವುದೇ ಕಷ್ಟವಾಗಿತ್ತು. ಅಲ್ಲಿಂದ ಇವರನ್ನು ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆತಂದು ತೀವ್ರ ನಿಗಾ ಘಟಕದಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಕ್ಷೇತ್ರದ ನಾಗರೀಕರ ಪ್ರೀತಿಯ ಹಾರೈಕೆ, ಪ್ರಾರ್ಥನೆಯಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
ತಾಲೂಕು ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಶಂಕರಪ್ಪ, ತಜ್ಞ ವೈದ್ಯ ಡಾ. ಮಂಜುನಾಥ್, ಸ್ಟಾಫ್ ನರ್ಸ್ ಎಲಿಜಬೆತ್ ಸಾಂಡ್ರರವರು ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂಧಿ ವರ್ಗದವರು ಮಾಯಣ್ಣನವರ ಆರೋಗ್ಯದ ಬಗ್ಗೆ, ಹೆಚ್ಚಿನ ಕಾಳಜಿವಹಿಸಿ ಹಗಲು-ರಾತ್ರಿ ಪ್ರೀತಿ, ಗೌರವದಿಂದ ಚಿಕಿತ್ಸೆ ನೀಡುತ್ತಿರುವುದರಿಂದ ವಿಐಎಸ್‌ಎಲ್ ಕಾರ್ಮಿಕರ, ನಿವೃತ್ತ ಕಾರ್ಮಿಕರ, ಗುತ್ತಿಗೆ ಕಾರ್ಮಿಕರ ಹಾಗು ಕ್ಷೇತ್ರದ ಸಮಸ್ತ ನಾಗರೀಕರ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಅಲ್ಲದೆ ಮಾಯಣ್ಣನವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಆಗಮಿಸುತ್ತಿರುವ ಜನಪ್ರತಿನಿಧಿಗಳಿಗೆ, ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಮುಖಂಡರಿಗೆ, ಗಣ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮಾಯಣ್ಣನವರು ಕಳೆದ ೬೦ ವರ್ಷಗಳಿಂದಲೂ ನಿರಂತರವಾಗಿ ಕಾರ್ಮಿಕರ ಮತ್ತು ದೀನ-ದಲಿತರ ಪರವಾಗಿ ಪ್ರಾಮಾಣಿಕವಾಗಿ ಹೋರಾಟ ನಡೆಸುತ್ತಾ ಬಂದಿದ್ದು, ಯಾವುದೇ ಫಲಾಪೇಕ್ಷೆ ಪಡೆಯದೆ ನಿರಂತರವಾಗಿ ಸಾರ್ವಜನಿಕರಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಇದು ಕ್ಷೇತ್ರದ ಎಲ್ಲಾ ನಾಗರೀಕರಿಗೂ ತಿಳಿದ ವಿಚಾರವಾಗಿದೆ. ಇವರ ಸೇವೆಯನ್ನು ಗೌರವಿಸಿ ಇಷ್ಟರಲ್ಲಾಗಲೇ ಕೇಂದ್ರ ಸರ್ಕಾರ ಪದ್ಮ ಶ್ರೀ, ಪದ್ಮ ಭೂಷಣ ಪ್ರಶಸ್ತಿಗಳನ್ನು ನೀಡಬೇಕಾಗಿತ್ತು. ಅಲ್ಲದೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಹಾಗೂ ವಿಶ್ವವಿದ್ಯಾನಿಲಯಗಳು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಬೇಕಾಗಿತ್ತು. ಆದರೆ ಇವರ ಸೇವೆಯನ್ನು ಇದುವರೆಗೂ ಗುರುತಿಸಿ ಗೌರವಿಸದಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಈ ಸಂಬಂಧ ತಕ್ಷಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನಹರಿಸಬೇಕೆಂದು ಆಗ್ರಹಿಸಿದರು.
ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದ್ದು, ಜ.೯ರ ಸಂಜೆ ೪ ಗಂಟೆಗೆ ಹಳೇನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಸಭೆಯನ್ನು ಕರೆಯಲಾಗಿದ್ದು, ಎಲ್ಲಾ ಸಂಘ ಸಂಸ್ಥೆಗಳ, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಡಿ.ಸಿ ಮಾಯಣ್ಣನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸೀತಾರಾಮು, ಪಿ. ದೊರೈ, ಟಿ.ಜಿ ಬಸವರಾಜಯ್ಯ, ಲಿಂಗೋಜಿರಾವ್, ಚಂದ್ರಶೇಖರ್, ಸೋಮಣ್ಣ, ವೆಂಕಟೇಶ್ ಮೂರ್ತಿ, ಬಸವರಾಜ ಮತ್ತು ಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.