ಗಣರಾಜ್ಯೋತ್ಸವ ನಮ್ಮ ಕರ್ತವ್ಯಗಳನ್ನು ನೆನಪಿಸುವ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ದಿನ : ಬಿ.ಕೆ ಸಂಗಮೇಶ್ವರ

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ೭೭ನೇ ಗಣ ರಾಜ್ಯೋತ್ಸವದಲ್ಲಿ ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ಪರುಸಪ್ಪ ಕುರುಬರ ಧ್ವಜಾರೋಹಣ ನೆರವೇರಿಸಿದರು. 
    ಭದ್ರಾವತಿ: ಗಣರಾಜ್ಯೋತ್ಸವ ಎಂಬುದು ಕೇವಲ ಹಬ್ಬವಲ್ಲ. ನಮ್ಮ ಕರ್ತವ್ಯಗಳನ್ನು ನೆನಪಿಸುವ ದಿನ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ದಿನ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ ಹೇಳಿದರು. 
    ಅವರು ಸೋಮವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ೭೭ನೇ ಗಣ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. 
೧೯೫೦ ಜನವರಿ ೨೬ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರು ರಚಿಸಿದ ದೇಶದ ಸಂವಿಧಾನ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಮತ್ತು ನ್ಯಾಯ ಎಂಬ ಮಹಾನ್ ಮೌಲ್ಯಗಳನ್ನು ನೀಡಿದೆ. ಈ ಮೂಲಕ ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು, ವಿಚಾರವನ್ನು ಸಾರ್ವಜನಿಕರಲ್ಲಿ ಅಭಿವ್ಯಕ್ತಿಗೊಳಿಸಿದ್ದೇವೆ ಎಂದರು. 
    ನಮ್ಮ ದೇಶದ ಸಂವಿಧಾನ ವಿಶ್ವದ ಬೃಹತ್ ಗ್ರಂಥಗಳಲ್ಲಿ ಮೊಟ್ಟ ಮೊದಲನೆಯದ್ದಾಗಿದೆ. ದೇಶದ ಪ್ರಜೆಗಳಾದ ನಾವುಗಳು ಒಬ್ಬರಿಗೊಬ್ಬರು ಗೌರವ ಮತ್ತು ಸಮಾನತೆಯಿಂದ ಕಾಣುವ ಮೂಲಕ ದೇಶದ ಏಕತೆಯನ್ನು ಎತ್ತಿಹಿಡಿಯಬೇಕು. ಭ್ರಾತೃತ್ವ ಭಾವನೆಯನ್ನು ಬೆಳೆಸಿಕೊಂಡು ದೇಶವನ್ನು ಉನ್ನತ ಪ್ರಗತಿಯ ಕಡೆಗೆ ಕೊಂಡೊಯ್ಯಬೇಕು ಎಂದರು. 


ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ೭೭ನೇ ಗಣ ರಾಜ್ಯೋತ್ಸವದಲ್ಲಿ ಪ್ರಕರಣದ ತನಿಖೆಯೊಂದರಲ್ಲಿ ಉತ್ತಮ ಕಾರ್ಯಸಾಧನೆಯೊಂದಿಗೆ ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸೆಗೆ ಒಳಗಾಗಿರುವ ಉಪವಿಭಾಗದ ಉಪಾಧೀಕ್ಷಕ ಪ್ರಕಾಶ್ ರಾಥೋಡ್, ನಗರ ವೃತ್ತ ನಿರೀಕ್ಷಕಿ ನಾಗಮ್ಮ ಮತ್ತು ಹಳೇನಗರ ಪೊಲೀಸ್ ಠಾಣೆ ಉಪ ನಿರೀಕ್ಷಕ ಸುನೀಲ್ ತೇಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಧ್ವಜಾರೋಹಣ ನೆರವೇರಿಸಿ ಸಂದೇಶ ವಾಚಿಸಿದ ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಪರುಸಪ್ಪ ಕುರುಬರ, ಈಗಾಗಲೇ ನಾವುಗಳು ೭೫ಕ್ಕೂ ಹೆಚ್ಚು ವರ್ಷಗಳ ಗಣರಾಜ್ಯೋತ್ಸವ ಸಂಭ್ರಮವನ್ನು ಆಚರಿಸಿದ್ದೇವೆ. ಸಂವಿಧಾನ ಎಂಬುದು ಆಡಳಿತ ವ್ಯವಸ್ಥೆಯಲ್ಲ ಒಂದು ಮಹತ್ವದ ದೃಷ್ಟಿಕೋನವಾಗಿದೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ನೀಡಿದ ಮಹಾನ್ ಗ್ರಂಥವಾಗಿದೆ ಎಂದರು. 
    ನಮ್ಮ ದೇಶದ ಸಂವಿಧಾನ ಪ್ರಜೆಗಳು ಎಂಬ ಪದಗಳಿಂದ ಆರಂಭಗೊಳ್ಳುತ್ತದೆ. ಅಂದರೆ ಈ ದೇಶವನ್ನು ನಿರ್ಮಿಸುವವರು ಆಡಳಿತಗಾರರು ಮಾತ್ರವಲ್ಲ, ಜವಾಬ್ದಾರಿಯುತ ನಾಗರಿಕರು ಎಂಬುದಾಗಿದೆ. ನಮ್ಮ ರೈತರು ದೇಶವನ್ನು ಪೋಷಿಸುತ್ತಾರೆ, ಸೈನಿಕರು ಗಡಿಗಳನ್ನು ಕಾಪಾಡುತ್ತಾರೆ. ನಮ್ಮ ಶಿಕ್ಷಕರು ಭವಿಷವನ್ನು ರೂಪಿಸುತ್ತಾರೆ, ನಮ್ಮ ಕಾರ್ಮಿಕರು ಮತ್ತು ಅಧಿಕಾರಿಗಳು ವ್ಯವಸ್ಥೆಯನ್ನು ಮುನ್ನಡೆಸುತ್ತಾರೆ ಹಾಗು ನಮ್ಮ ಯುವಕರು ನಾಳೆಯ ಕನಸುಗಳನ್ನು ಹೊತ್ತಿರುತ್ತಾರೆ. ಈ ಹಿನ್ನಲೆಯಲ್ಲಿ ನಮ್ಮ ದೇಶದ ಗಣರಾಜ್ಯ ವ್ಯವಸ್ಥೆ ಬಲವಾಗಿದೆ ಎಂದರು. 
    ಇಂದು ದೇಶವು ತಂತ್ರಜ್ಞಾನ, ಮೂಲ ಸೌಕರ್ಯ, ಡಿಜಿಟಲ್ ಆಡಳಿತ, ಅಂತರಿಕ್ಷ ಸಂಶೋಧನೆ ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣ, ಡಿಜಿಟಲ್ ಭೂ ದಾಖಲೆಗಳು, ನೇರ ಲಾಭ ವರ್ಗಾವಣೆ ಯೋಜನೆಗಳು ಪಾರದರ್ಶಕತೆ ಹೆಚ್ಚಿಸಿ ಭ್ರಷ್ಟಾಚಾರ  ಕಡಿಮೆ ಮಾಡಲು ಸಹಾಯ ಮಾಡುತ್ತಿವೆ. ಇದೇ ಗಣರಾಜ್ಯದ ನಿಜವಾದ ಆತ್ಮ-ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಎಂದರು. 


ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ೭೭ನೇ ಗಣ ರಾಜ್ಯೋತ್ಸವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. 
 ವಿವಿಧ ಶಾಲಾ-ಕಾಲೇಜುಗಳ ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ತಂಡಗಳು, ಆರಕ್ಷಕ ದಳ, ಗೃಹರಕ್ಷಕ ದಳ, ಬ್ಯಾಂಡ್‌ಸೆಟ್ ತಂಡಗಳಿಂದ ಪಥ ಸಂಚಲನ ನಡೆಯಿತು. ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಎಂ.ಪಿ ಸಿದ್ದಪ್ಪ ಪಥ ಸಂಚಲನದ ನೇತೃತ್ವವಹಿಸಿದ್ದರು. 
    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು ಹಾಗು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಕೆ.ಎನ್ ಹೇಮಂತ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್, ವೃತ್ತ ನಿರೀಕ್ಷಕರಾದ ನಾಗಮ್ಮ, ಚಿದಾನಂದ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಸೇರಿದಂತೆ ಕಂದಾಯ ಇಲಾಖೆ ಹಾಗು ನಗರಸಭೆ ಅಧಿಕಾರಿಗಳು, ನಗರಸಭೆ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು. 
    ನಗರಸಭೆ ಸದಸ್ಯ ಚನ್ನಪ್ಪ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ಶಿವಲಿಂಗೇಗೌಡ ನೇತೃತ್ವದ ತಂಡ ಪಥ ಸಂಚಲನದ ಉಸ್ತುವಾರಿ ವಹಿಸಿತ್ತು.