ಕಾಮ್ರೇಡ್ ಡಿ.ಸಿ ಮಾಯಣ್ಣರಿಗೆ ಪದ್ಮಶ್ರೀ, ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಆಗ್ರಹ
ಪ್ರಧಾನಿ, ಮುಖ್ಯಮಂತ್ರಿಗೆ ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಸರ್ಕಾರಕ್ಕೆ ಮನವಿ
ಭದ್ರಾವತಿ ನಗರದ ಹಿರಿಯ ರಾಜಕೀಯ ಮುತ್ಸದ್ಧಿ, ಕಾರ್ಮಿಕ ಮುಖಂಡ ಹಾಗು ಪ್ರಜ್ಞಾವಂತ ಮತ್ತು ಪ್ರಬುದ್ಧ ಹೋರಾಟಗಾರ ದಿವಂಗತ ಕಾಮ್ರೇಡ್ ಡಿ.ಸಿ ಮಾಯಣ್ಣನವರ ಸಮಾಜ ಸೇವೆಯನ್ನು ಗೌರವಿಸಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ಮತ್ತು ಕೇಂದ್ರ ಸರ್ಕಾರ ಪ್ರದ್ಮಶ್ರೀ ಅತ್ಯುನ್ನತ ನಾಗರೀಕ ಪ್ರಶಸ್ತಿಗಳನ್ನು ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಉಪ ತಹಸೀಲ್ದಾರ್ ಮಂಜಾನಾಯ್ಕರವರ ಮೂಲಕ ಪ್ರಧಾನ ಮಂತ್ರಿ ಹಾಗು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ನಗರದ ಹಿರಿಯ ರಾಜಕೀಯ ಮುತ್ಸದ್ಧಿ, ಕಾರ್ಮಿಕ ಮುಖಂಡ ಹಾಗು ಪ್ರಜ್ಞಾವಂತ ಮತ್ತು ಪ್ರಬುದ್ಧ ಹೋರಾಟಗಾರ ದಿವಂಗತ ಕಾಮ್ರೇಡ್ ಡಿ.ಸಿ ಮಾಯಣ್ಣನವರ ಸಮಾಜ ಸೇವೆಯನ್ನು ಗೌರವಿಸಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ಮತ್ತು ಕೇಂದ್ರ ಸರ್ಕಾರ ಪ್ರದ್ಮಶ್ರೀ ಅತ್ಯುನ್ನತ ನಾಗರೀಕ ಪ್ರಶಸ್ತಿಗಳನ್ನು ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಉಪ ತಹಸೀಲ್ದಾರ್ ಮಂಜಾನಾಯ್ಕರವರ ಮೂಲಕ ಪ್ರಧಾನ ಮಂತ್ರಿ ಹಾಗು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಹಾಗು ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮುರ್ತಿ ಮಾತನಾಡಿ, ೯೩ ವರ್ಷಗಳ ಹಿರಿಯ ಮತ್ತು ಸರಳ ಸಜ್ಜನ ರಾಜಕಾರಣಿ, ವಿಐಎಸ್‌ಎಲ್ ಮತ್ತು ಎಂ.ಪಿ.ಎಂ ಕಾರ್ಖಾನೆಗಳ ಕಾಯಂ ಕಾರ್ಮಿಕ ಹಾಗೂ ಗುತ್ತಿಗೆ ಕಾರ್ಮಿಕರ ಪರವಾಗಿ ನಿರಂತರ ಹೋರಾಟಗಳನ್ನು ನಡೆಸುವ ಜೊತೆಗೆ ಬಿಸಿಯೂಟ ಕಾರ್ಮಿಕರ, ಬೀದಿ ವ್ಯಾಪಾರಿಗಳ, ಅಸಂಘಟಿತ ಕೂಲಿ ಕಾರ್ಮಿಕರ ಪರವಾಗಿ ಹಾಗು ಪ್ರಗತಿಪರ ಸಂಘಟನೆಗಳ ಬಹುತೇಕ ಹೋರಾಟಗಳಲ್ಲೂ ಕಾಮ್ರೇಡ್ ಡಿ.ಸಿ ಮಾಯಣ್ಣನವರು ತೊಡಗಿಸಿಕೊಂಡಿದ್ದರು ಎಂದರು.
ಕಳೆದ ೬೦ ವರ್ಷಗಳಿಂದಲೂ ಯಾವುದೇ ಫಲಾಪೇಕ್ಷೆ ಇಲ್ಲದೆ ಅತ್ಯಂತ ಗೌರವದಿಂದ ಹೋರಾಟಗಳನ್ನು ನಡೆಸಿ ಕ್ಷೇತ್ರಕ್ಕೆ ಹಿರಿಯಣ್ಣನಾಗಿ ಜ.೧೦ರಂದು ನಿಧನ ಹೊಂದಿದರು. ಇವರ ಸೇವೆಯನ್ನು ಯಾರು ಸಹ ಮರೆಯುವಂತದ್ದಲ್ಲ. ಈ ಹಿನ್ನಲೆಯಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಇವರನ್ನು ಅತ್ಯಂತ ಘನತೆ ಗೌರವದಿಂದ ಗೌರವಿಸಬೇಕೆಂದು ಮನವಿ ಮಾಡಿದರು.
ನಗರಸಭೆ ಆಡಳಿತ ಬೊಮ್ಮಕಟ್ಟೆಯಲ್ಲಿ ಆಶ್ರಯ ಯೋಜನೆಯಡಿ ನಿರ್ಮಾಣವಾಗುತ್ತಿರುವ ಜಿ+೩ ಗುಂಪು ಮನೆಗಳಿಗೆ `ಡಿ.ಸಿ ಮಾಯಣ್ಣ ಬಡಾವಣೆ' ಎಂದು ಹಾಗೂ ನಗರದ ಮುಖ್ಯ ರಸ್ತೆ ಮತ್ತು ಮುಖ್ಯ ವೃತ್ತಗಳಿಗೆ ಡಿ ಸಿ ಮಾಯಣ್ಣರವರ ಹೆಸರನ್ನು ನಾಮಕರಣಗೊಳಿಸುವ ಮೂಲಕ ಕ್ಷೇತ್ರದಲ್ಲಿ ಶಾಶ್ವತವಾಗಿ ಅವರ ಹೆಸರು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಬೇಕೆಂದು ವಿನಂತಿಸಿದರು.
ಕಾಮ್ರೇಡ್ ಡಿ.ಸಿ ಮಾಯಣ್ಣನವರು ತಮ್ಮ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿ, ಕಾಮ್ರೇಡ್ ಎಚ್.ವಿ ಅನಂತಸುಬ್ಬರಾವ್ ರವರು ತಮ್ಮ ದೇಹ ದಾನಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಕಾಮ್ರೇಡ್ ಎಚ್.ವಿ ಅನಂತ ಸುಬ್ಬರಾವ್, ಕಾಮ್ರೇಡ್ ಡಿ.ಸಿ ಮಾಯಣ್ಯ, ಕಾಮ್ರೇಡ್ ಕಾಳೇಗೌಡ, ಕಾಮ್ರೇಡ್ ಎಸ್. ಆಂಜನೇಯ ಹಾಗೂ ಕಾರ್ಮಿಕ ಮುಖಂಡರು ಹಾಗೂ ನಗರಸಭೆ ಮಾಜಿ ಸದಸ್ಯ ಕೆ.ಎನ್ ಭೈರಪ್ಪಗೌಡ ಇವರೆಲ್ಲರೂ ಸಹ ಇತ್ತೀಚೆಗೆ ನಿಧನರಾಗಿದ್ದಾರೆ. ಕಾರ್ಮಿಕರ ಪರವಾಗಿ ತಮ್ಮ ಜೀವನ ಪರ್ಯಂತ ಪ್ರಾಮಾಣಿಕ ಹೋರಾಟ ನಡೆಸಿದ ಇವರುಗಳನ್ನು ಗೌರವಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯರವರು `ಕಾರ್ಮಿಕ ರತ್ನ' ಎಂಬ ಪ್ರಶಸ್ತಿಯನ್ನು ಜಾರಿಗೆ ತಂದು ನಿಧನರಾದ ಕಾರ್ಮಿಕ ಮುಖಂಡರಿಗೆ ನೀಡಿ ಗೌರವಿಸಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಸಿದ್ದಲಿಂಗಯ್ಯ, ಟಿ.ಜಿ ಬಸವರಾಜಯ್ಯ ಉಕ್ಕುಂದ ಶಿವಕುಮಾರ್, ದೊರೈ, ಯಲ್ಲೋಜಿರಾವ್, ಹನುಮಮ್ಮ, ಡಿ. ರಾಜು, ವೈ. ಶಶಿಕುಮಾರ್, ಮಾನವ ಹಕ್ಕು ಹೋರಾಟ ಸಮಿತಿಯ ಐ.ಎಲ್ ಅರುಣ್‌ಕುಮಾರ್, ಸೋಮಣ್ಣ, ಎಂ.ವಿ ಚಂದ್ರಶೇಖರ್, ಬ್ರಹ್ಮಲಿಂಗಯ್ಯ, ಅಕ್ರಮ್ ಖಾನ್, ಶ್ರೀನಿವಾಸ್, ಆರ್. ಬಸವರಾಜ್, ಈರೇಶ್, ಲಕ್ಷ್ಮೀದೇವಿ, ನೀಲಮ್ಮ, ಜಯಮ್ಮ, ವಿನ್ನಿ ಡಿಸೋಜಾ, ಮೇರಿ, ಆರ್. ಚಿಕ್ಕಹನುಮಂತಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.