ಫೆ.೧೭ರಂದು ದಿವಂಗತ ಕಾಮ್ರೇಡ್ ಡಿ.ಸಿ ಮಾಯಣ್ಣರಿಗೆ ನುಡಿನಮನ
ಡಿ.ಸಿ ಮಾಯಣ್ಣ
ಭದ್ರಾವತಿ : ಹಿರಿಯ ರಾಜಕೀಯ ಮುತ್ಸದಿ, ಕಾರ್ಮಿಕರ ಧ್ವನಿಯಾಗಿ ಅವರ ಹಕ್ಕುಗಳಿಗಾಗಿ, ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನ ವಿರೋಧಿ ನಿಲುವುಗಳ ವಿರುದ್ಧ ಮತ್ತು ಕೋಮು ಸಂಘರ್ಷಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುವ ಮೂಲಕ ಹೋರಾಟದ ಬಹು ದೊಡ್ಡ ಶಕ್ತಿಯಾಗಿದ್ದ ಕಾಮ್ರೇಡ್ ಡಿ.ಸಿ ಮಾಯಣ್ಣನವರಿಗೆ ಗೌರವ ಪೂರ್ವಕ ನುಡಿನಮನಗಳನ್ನು ಸಲ್ಲಿಸಲು ನಗರದ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮುಂದಾಗಿದೆ.
ಸತತ ಸುಮಾರು ೬-೭ ದಶಕಗಳ ಕಾಲ ಹೋರಾಟ ಶಕ್ತಿಯಾಗಿದ್ದ ಡಿ.ಸಿ ಮಾಯಣ್ಣನವರು ಇತ್ತೀಚೆಗೆ ತಮ್ಮ ೯೩ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಪ್ರಗತಿಪರ ಸಂಘಟನೆಗಳ ಒಕ್ಕೂಟ ಇವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸುವ ಮೂಲಕ ಫೆ. ೧೭ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ `ನುಡಿ ನಮನ' ಕಾರ್ಯಕ್ರಮ ಆಯೋಜಿಸಿದೆ.
ಕಾರ್ಯಕ್ರಮವನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಒಕ್ಕೂಟದ ಅಧ್ಯಕ್ಷ ಪ್ರೊ. ಎಂ. ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಬಿ.ವೈ ರಾಘವೇಂದ್ರ, ಸಾಮಾಜಿಕ ಚಿಂತಕ, ಅಂಕಣಕಾರ ಶಿವಸುಂದರ್. ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಎಚ್.ಆರ್ ಬಸವರಾಜಪ್ಪ, ಚಲನಚಿತ್ರ ನಟ, ವಿಚಾರವಾದಿ ಚೇತನ್ ಅಹಿಂಸಾ, ಡಿಎಸ್‌ಎಸ್ ರಾಜ್ಯ ಮುಖಂಡ ಸತ್ಯ,, ಎಐಟಿಯುಸಿ ರಾಜ್ಯ ಮುಖಂಡ ಸಿದ್ದನಗೌಡ ಪಾಟೀಲ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಒಕ್ಕೂಟದ ಅಧ್ಯಕ್ಷ ಪ್ರೊ. ಎಂ. ಚಂದ್ರಶೇಖರಯ್ಯ ಕೋರಿದ್ದಾರೆ.