ಮಹಾಶಿವರಾತ್ರಿ : ಹೊಸಮನೆ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಭದ್ರಾವತಿ : ಹೊಸಮನೆ, ಎನ್.ಎಂ.ಸಿ ಎಡಭಾಗದ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಫೆ.೧೪ ರಿಂದ ಫೆ.೧೭ರವರೆಗೆ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶನಿವಾರ ಬೆಳಿಗ್ಗೆ ರುದ್ರಪಾರಾಯಣದೊಂದಿಗೆ ರುದ್ರಹೋಮ, ಮಧ್ಯಾಹ್ನ ಪೂರ್ಣಾಹುತಿಯೊಂದಿಗೆ ಮಹಾಮಂಗಳಾರತಿ ನಡೆಯಿತು. ಫೆ.೧೫ರ ರಾತ್ರಿ ಚಿಕ್ಕಮಗಳೂರು ಹಿಂದೂ ಸಾಮಾಜಿಕ ಕಾರ್ಯಕರ್ತ ಪುಣ್ಯಪಾಲ್ ಅವರಿಂದ ಮುಖ್ಯ ಭಾಷಣ ನಡೆಯಲಿದ್ದು, ನಂತರ ಕೇಶವಪುರ ಬಡಾವಣೆಯ ಕದಳಿ ವೇದಿಕೆ, ಶ್ರೀ ಕೃಷ್ಣ ಸತ್ಸಂಗ, ಜ್ಞಾನ ವಾಹಿನಿ, ಧರ್ಮಶಾಸ್ತ್ರ ಭಜನ ಮಂಡಳಿ ಹಾಗು ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗು ಶಿವಡ್ಯಾನ್ಸ್‌ರವರಿಂದ ನೃತ್ಯ ಹಾಗು ಶಿವಮೊಗ್ಗ `ಪ್ರೀತಮ್ ಮತ್ತು ತಂಡ'ದವರಿಂದ ಭಕ್ತಿಗೀತೆ ಕಾರ್ಯಕ್ರಮಗಳು ಜರುಗಲಿವೆ.
ಸಂಜೆ ೬.೧೫ ರಿಂದ ೯.೧೫ರವರೆಗೆ ಪ್ರಥಮಯಾಮ ಪೂಜೆ, ರುದ್ರಪಾರಾಯಣದೊಂದಿಗೆ ಹೂವಿನ ಅಲಂಕಾರ. ರಾತ್ರಿ ೯.೩೦ ರಿಂದ ೧೨.೩೦ರವರೆಗೆ ದ್ವಿತೀಯಯಾಮ ಪೂಜೆ, ಹಾಲಿನ ಅಭಿಷೇಕದೊಂದಿಗೆ ರುದ್ರಾಕ್ಷಿ ಅಲಂಕಾರ'. ರಾತ್ರಿ ೧೨.೪೫ ರಿಂದ ೩.೪೫ರವರೆಗೆ ತೃತೀಯಯಾಮ ಪೂಜೆ, ಗಂಧದ ಅಭಿಷೇಕದೊಂದಿಗೆ ರುದ್ರಾಕ್ಷಿ ಅಲಂಕಾರ ಹಾಗು ಬೆಳಿಗ್ಗೆ ೪ ರಿಂದ ೬ರವರೆಗೆ ಚತುರ್ಥಯಾಮ ಪೂಜೆ, ಎಳನೀರು ಅಭಿಷೇಕದೊಂದಿಗೆ ಪುಷ್ಪ ಅಲಂಕಾರ ನಡೆಯಲಿದೆ. ಫೆ.೧೬ರ ಮಧ್ಯಾಹ್ನ ೧೨.೩೦ ಮಹಾಪ್ರಸಾದ ವಿನಿಯೋಗ(ಅನ್ನಸಂತರ್ಪಣೆ) ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.