ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನದ ಸರ ಕಳವು

    ಭದ್ರಾವತಿ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಫೆ. ೧೨ರಂದು ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ಕೈಚೀಲದಲ್ಲಿದ್ದ ೨೮ ಗ್ರಾಂ ತೂಕದ ಬಂಗಾರದ ಸರ ಕಳ್ಳತನವಾಗಿರುವ ಘಟನೆ ನಡೆದಿದೆ 
    ಶಿವಮೊಗ್ಗ ತಾಲೂಕಿನ ಮುದುವಾಲ ಗ್ರಾಮದ ಶಾಂತಮ್ಮ ಎಂಬುವವರು ತಮ್ಮ ೩,೦೦,೦೦೦ ರು. ಮೌಲ್ಯದ ಸರ ಕಳುವಾಗಿದೆ ಎಂದು ದೂರು ನೀಡಿದ್ದಾರೆ. ಶಾಂತಮ್ಮ ಅವರು ಅಂತರಘಟ್ಟಮ್ಮ ದೇವಸ್ಥಾನದ ಹಬ್ಬದ ಪ್ರಯುಕ್ತ ಭದ್ರಾ ಕಾಲೋನಿಯಲ್ಲಿರುವ ತಮ್ಮ ತಂಗಿಯ ಮಗನ ಮನೆಗೆ ಬಂದಿದ್ದರು. ಹಬ್ಬ ಮುಗಿಸಿಕೊಂಡು ಶಿವಮೊಗ್ಗಕ್ಕೆ ಹೋಗುವ ಸರ್ಕಾರಿ ಬಸ್ ಹತ್ತಿದ್ದರು. ಬಸ್ಸು ಹೊರಟು ಜಯಶ್ರೀ ಸರ್ಕಲ್ ಬಳಿ ತಲುಪಿದಾಗ, ಟಿಕೆಟ್ ಪಡೆಯಲು ಆಧಾರ ಕಾರ್ಡ್ ತೆಗೆಯಲೆಂದು ತಮ್ಮ ಕೈಚೀಲದಲ್ಲಿದ್ದ ಪರ್ಸ್ ಅನ್ನು ಪರಿಶೀಲಿಸಿದ್ದಾರೆ. ಈ ವೇಳೆ ಪರ್ಸ್‌ನಲ್ಲಿ ಇಟ್ಟಿದ್ದ ೨೮ ಗ್ರಾಂ ತೂಕದ ಬಂಗಾರದ ಸರ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಬಸ್ ಹತ್ತುವ ಸಮಯ ಜನಸಂದಣಿ ಹೆಚ್ಚಿತ್ತು. ಈ ವೇಳೆ ಸರವನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.