ಪತ್ನಿಯಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಕಿರುಕುಳ
ಪೊಲೀಸರಿಗೆ ದೂರು, ಯಾರು ಈ ರೀತಿ ಮೋಸ ಹೋಗದಿರಿ
ಬಿ. ವಿನಯ್-ಪ್ರಿಯತಾ ದಂಪತಿ
ಭದ್ರಾವತಿ: ನನ್ನ ಪತ್ನಿ ತನ್ನಷ್ಟಕ್ಕೆ ತಾನು ಇರದೆ ನನಗೆ ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳಿಗೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಸಿದ್ದು, ಸಮಾಜದಲ್ಲಿ ಇಂತಹ ಮಹಿಳೆಯರಿಂದ ಎಚ್ಚರಿಕೆವಹಿಸುವಂತೆ ಬಿ. ವಿನಯ್ ಎಂಬುವರು ಮನವಿ ಮಾಡಿದ್ದಾರೆ.
ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ನಿವಾಸಿ ಬಿ. ವಿನಯ್ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೧೧ರಲ್ಲಿ ನಾನು ಮತ್ತು ಹಾಸನ ಜಿಲ್ಲೆಯ ಆರ್. ಪ್ರಿಯತಾ ಬೇಲೂರು ತಾಲೂಕಿನ ಹಳೇಬೀಡು ಬನಶಂಕರಿ ಕಲ್ಯಾಣ ಮಂಟಪದಲ್ಲಿ ಲಿಂಗಾಯತ ಕುಂಬಾರ ಪದ್ಧತಿಯಂತೆ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದೇವೆ. ನಮಗೆ ಯೋಜ್ಞಾ (೧೪) ಮತ್ತು ಮನೋಜ್ಞಾ (೮) ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ೨೦೧೫ರಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಪೋದಾರ್ ಖಾಸಗಿ ಶಾಲೆಯಲ್ಲಿ ಪ್ರಿಯತಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ದರು. ಅಂದಿನಿಂದ ನಮ್ಮ ಹಿಂದೂ ಸಂಪ್ರದಾಯ ಬಿಟ್ಟು ಕ್ರಿಶ್ಚಿಯನ್ ಧರ್ಮದ ಕಡೆ ಆಸಕ್ತಿ ಹೊಂದಿದ್ದಾರೆ. ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಮರಿಯಾ ಪ್ರಿಯದರ್ಶಿನಿ ಸಹಾಯದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಗೊಂಡಿದ್ದಾರೆಂದು ವಿನಯ್ ಆರೋಪಿಸಿದ್ದಾರೆ.
ಮತಾಂತರಗೊಂಡ ಪ್ರಿಯತಾ ಚರ್ಚ್‌ಗೆ ಹೋಗುವುದು ಬರುವುದು ಮಾಡುತ್ತಿದ್ದರು. ಮನೆಗೆ ಬೈಬಲ್ ಗ್ರಂಥ ತಂದು ಇಟ್ಟುಕೊಂಡು ಓದುತ್ತಿದ್ದರು. ಜೊತೆಗೆ ಏಸುಕ್ರಿಸ್ತನನ್ನು ಆರಾಧಿಸುತ್ತಿದ್ದರು. ಈ ಬಗ್ಗೆ ಹಲವಾರು ಬಾರಿ ಈ ರೀತಿ ಮಾಡದಂತೆ ಹೇಳಿದ್ದರೂ ಸಹ ಕ್ರಿಶ್ಚಿಯನ್ ಧರ್ಮ ಪಾಲಿಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ನೀವು ಸಹ ಇದೆ ಧರ್ಮವನ್ನು ಪಾಲಿಸಿ ಎಂದು ಹೇಳುತ್ತಿದ್ದರು. ನಾನು ಇದಕ್ಕೆ ಒಪುತ್ತಿರಲಿಲ್ಲ. ನನ್ನ ಹಿರಿಯ ಮಗಳಿಗೂ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುವಂತೆ ಒತ್ತಾಯಿಸುತ್ತಿದ್ದರು. ಈ ಬಗ್ಗೆ ಮನೆಯಲ್ಲಿ ದಿನವೂ ಜಗಳವಾಗುತ್ತಿತ್ತು. ೨೦೧೯ರಲ್ಲಿ ನನ್ನನ್ನು ಬಿಟ್ಟು ಪ್ರಿಯತಾ ತವರಿಗೆ ಹೋಗಿದ್ದರು. ಮಕ್ಕಳಿರುವ ಕಾರಣ ಅವರ ಜೀವನ ಹಾಳಾಗಬಾರದೆಂದು ಮನೆಗೆ ಬರುವಂತೆ ವಿನಂತಿಸಿದ್ದರಿಂದ ೨೦೨೦ರಲ್ಲಿ ವಾಪಸ್ ಮನೆಗೆ ಬಂದಿದ್ದರು ಎಂದು ದೂರಿದರು.
ಅವರು ಬಂದಾಗಿನಿಂದ ಬೇರೆ ಬೇರೆ ರೀತಿಯೇ ವರ್ತಿಸುತ್ತಿದ್ದರು. ೨೦೨೪ರಲ್ಲಿ ಪುನಃ ಹೆಚ್ಚಾಗಿ ಕ್ರಿಶ್ಚಿಯನ್ ಧರ್ಮದ ವಿಧಿವಿಧಾನ ಅನುಸರಿಸುತ್ತಿದ್ದರು. ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ವೆಬ್‌ಸೈಟ್ ಫಾಲೋ ಮಾಡಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥನೆ ಮಾಡುತ್ತಿದ್ದರು. ನನಗೂ ಸಹ ಫಾಲೋ ಮಾಡಲು ಒತ್ತಾಯಿಸುತ್ತಿದ್ದು, ಪ್ರತಿ ತಿಂಗಳು ೪೦೦ ರು. ಪಾವತಿಸುತ್ತಿದ್ದರು. ಕ್ರಿಶ್ಚಿಯನ್ ಧರ್ಮ ಆಚರಣೆ ಹೆಚ್ಚಾಗಿ ನನಗೆ ಮತ್ತು ನನ್ನ ಮಕ್ಕಳಿಗೆ ಮತಾಂತರಗೊಳ್ಳಲು ಪೀಡಿಸಲು ಆರಂಭಿಸಿದ್ದರು. ನಾನು ಒಪ್ಪದೆ ಇದಿದ್ದರಿಂದ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. ಅವರ ಮಾತನ್ನು ಕೇಳದ ಕಾರಣ ೨೦೨೫ರಲ್ಲಿ ನನ್ನನ್ನು ಮತ್ತು ಮಕ್ಕಳನ್ನು ಬಿಟ್ಟು ತವರು ಮನೆಗೆ ಹೋದರು. ಪ್ರಿಯತಾ ಅವರ ಸ್ನೇಹಿತೆಯೊಬ್ಬರು ತಿಳುವಳಿಕೆ ಹೇಳಿದಕ್ಕೆ ನಾನು ಮತ್ತು ಮಕ್ಕಳು ಮತಾಂತರಗೊಂಡರೆ ಮಾತ್ರ ನಾನು ಪುನಃ ಬರುತ್ತೇನೆ ಎಂದು ಹೇಳಿದ್ದಾರೆ. ಆದರೂ ಮನೆಗೆ ಬಂದಿಲ್ಲ. ಆದ್ದರಿಂದ ಪತ್ನಿ ಪ್ರಿಯತಾ ವಿರುದ್ಧ ಕಾನೂನು ಜರುಗಿಸುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಪ್ರಿಯತಾ ಹಾಗೂ ಮರಿಯಾ ಅವರನ್ನು ಪೋದಾರ್ ಶಾಲೆಯಿಂದ ಕೆಲಸ ಬಿಡಿಸಲಾಗಿದೆ. ಈ ರೀತಿಯಾಗಿ ಬೇರೆ ಯಾರು ಸಹ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಕೊಳ್ಳಬಾರದು. ಈ ಕಳಕಳಿಯಿಂದ ನನ್ನ ಕಷ್ಟವನ್ನು ಸಮಾಜದ ಮುಂದೆ ಇಡುತ್ತಿದ್ದೇನೆಂದು ವಿನಯ್ ಹೇಳಿದ್ದಾರೆ.