ಮೂಲ ಸೌಕರ್ಯ ಕಲ್ಪಿಸಿ, ಹೊಸದಾಗಿ ೧೮ ಮಕ್ಕಳನ್ನು ದಾಖಲಿಸಿ ಸರ್ಕಾರಿ ಶಾಲೆ ಉಳಿಸಿಕೊಳ್ಳಲಾಯಿತು : ಸೈಯದ್ ಆಸಿಫ್

ಭದ್ರಾವತಿ ಜಟ್‌ಪಟ್ ನಗರ ಆಶ್ರಯ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸೈಯದ್ ಆಸಿಫ್ ಮತ್ತು ಶಿಕ್ಷಕ ಜೆ. ಮಂಜುನಾಥ್ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. 
    ಭದ್ರಾವತಿ : ಕೇವಲ ೬ ಮಕ್ಕಳ ದಾಖಲಾತಿ ಹೊಂದುವ ಮೂಲಕ ಮುಚ್ಚುವ ಸ್ಥಿತಿ ತಲುಪಿದ್ದ ಜಟ್‌ಪಟ್ ನಗರ ಆಶ್ರಯ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಸಹಕಾರ ಹಾಗು ಪರಿಶ್ರಮದಿಂದ ಉಳಿಸಿಕೊಳ್ಳಲಾಯಿತು. ಭವಿಷ್ಯದಲ್ಲಿ ಈ ಶಾಲೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದುವ ಮೂಲಕ ಮಾದರಿಯಾಗಬೇಕೆಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೈಯದ್ ಆಸಿಫ್ ಹೇಳಿದರು. 
    ಅವರು ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿ,  ಈ ಶಾಲೆಯಲ್ಲಿ ೨೦೨೪-೨೫ರ ಸಾಲಿನಲ್ಲಿ ಕೇವಲ ೬ ಮಕ್ಕಳು ದಾಖಲಾಗಿದ್ದರು. ಈ ಸಂದರ್ಭದಲ್ಲಿ ಶಾಲೆಯನ್ನು ಮುಚ್ಚಲು ಆಶ್ರಯ ಬಡಾವಣೆಯಲ್ಲಿ ಗುಸು ಗುಸು ಚರ್ಚೆ ನಡೆಯುತ್ತಿತ್ತು. ಇಂತಹ ಸಂಕಷ್ಟದ ಸಮಯದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಶಾಲೆಗೆ ಅನುದಾನ ಬಿಡುಗಡೆಗೊಳಿಸಿದರು. ಅಲ್ಲದೆ ಈ ಭಾಗದ ನಗರಸಭಾ ಸದಸ್ಯ ಬಿ.ಎಂ ಮಂಜುನಾಥ್( ಟೀಕು) ಹೆಚ್ಚಿನ ಸಹಕಾರ ನೀಡಿದ ಹಿನ್ನಲೆಯಲ್ಲಿ ಶಾಲೆಯ ಮೂಲಬೋತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ಮೇಲ್ಛಾವಣಿ, ಟೈಲ್ಸ್ ಅಳವಡಿಕೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಯಿತು. ಈ ನಡುವೆ ಸಹ ಶಿಕ್ಷಕ ಮಂಜುನಾಥ್ ಹಾಗು ಸ್ನೇಹಿತರ ಸಹಕಾರದಿಂದ ಮನೆ ಮನೆಗೆ ಭೇಟಿ ನೀಡಿ ಒಟ್ಟು ೧೮ ಮಕ್ಕಳನ್ನು ಹೊಸದಾಗಿ ದಾಖಲಾತಿ ಮಾಡಿಕೊಳ್ಳಲಾಯಿತು. ಈ ಮೂಲಕ ಮುಚ್ಚುವ ಸ್ಥಿತಿಗೆ ತಲುಪಿದ್ದ ಶಾಲೆಯನ್ನು ಉಳಿಸಿಕೊಳ್ಳಲಾಯಿತು. ಭವಿಷ್ಯದಲ್ಲಿ ಈ ಶಾಲೆ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದುವ ವಿಶ್ವಾಸವಿದೆ. ಈ ಮೂಲಕ ಇತರೆ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.  
    ಇದೆ ಸಂದರ್ಭದಲ್ಲಿ ಶಿಕ್ಷಕ ಜೆ. ಮಂಜುನಾಥ್‌ರವರಿಗೂ ಬೀಳ್ಕೊಡುಗೆ ನೀಡಲಾಯಿತು. ಸೈಯದ್ ಆಸಿಫ್ ಪ್ರಸ್ತುತ ಹಳೇನಗರದ ಪಿಎಂಶ್ರೀ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಎಸ್ ಸೈಯದ್ ಆಸಿಫ್ ಮಾತನಾಡಿ 
ಪಿಎಂಶ್ರೀ ಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷೆ ಸುನೀತಾ, ಗುಡಮಗಟ್ಟೆ ಶಾಲೆ ಮುಖ್ಯ ಶಿಕ್ಷಕ ಶಿವಕುಮಾರ ರಾವ್, ಅನಿಲ್ ಕುಮಾರ ಹಕ್ಕೆ ಮತ್ತು ಮುಖ್ಯ ಅಡಿಗೆಯವರಾದ ನೇತ್ರಮ್ಮ ಹಾಗು ಪೋಷಕರು, ಮಕ್ಕಳು ಉಪಸ್ಥಿತರಿದ್ದರು. 
    ಶಿಕ್ಷಕ ಚಂದ್ರಶೇಖರಪ್ಪ ಚಕ್ರಸಾಲಿ ಪ್ರಾರ್ಥಿಸಿ, ಶಾಲೆಯ ಮುಖ್ಯ ಶಿಕ್ಷಕ ಡಿ.ಎಸ್ ಬಸವಂತರಾವ್ ದಾಳೆ ಸ್ವಾಗತಿಸಿ, ಶೋಭಾಫ್ಲೋರಿನ್ ನಿರೂಪಿಸಿ, ಪ್ರಮೀಳಾ ಸೆರಾವು ವಂದಿಸಿದರು.